ರಾಜ್ಯದಲ್ಲಿ ಹೆಚ್ಚಲಿರುವ ಮಳೆ; ಪ್ರವಾಹ ಪರಿಸ್ಥಿತಿ ಇನ್ನಷ್ಟು ತೀವ್ರ

ಕರ್ನಾಟಕದಲ್ಲಿ ಸುರಿಯುತ್ತಿರುವ ಮಳೆ ಮತ್ತೆ ಎರಡು ದಿನಗಳ ಕಾಲ ಮುಂದುವರೆಯಲಿದ್ದು, ಮುಂದಿನ ಎರಡು ದಿನಗಾಲ ಮಳೆ ತೀವ್ರವಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಕರ್ನಾಟಕದಲ್ಲಿ ಸುರಿಯುತ್ತಿರುವ ಮಳೆ ಮತ್ತೆ ಎರಡು ದಿನಗಳ ಕಾಲ ಮುಂದುವರೆಯಲಿದ್ದು, ಮುಂದಿನ ಎರಡು ದಿನಗಾಲ ಮಳೆ ತೀವ್ರವಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಈಗಾಗಲೇ ಕರಾವಳಿ ಮತ್ತು ಮಲೆನಾಡು, ಉತ್ತರ ಕರ್ನಾಟಕದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಜನತೆ ತತ್ತರಿಸಿ  ಹೋಗಿದ್ದು, ಇದೀಗ ಮತ್ತಷ್ಟು ತೀವ್ರತೆಯ ಮಳೆ ಮತ್ತಷ್ಟು ಅವಾಂತರ ಸೃಷ್ಟಿ ಮಾಡುವ ಸಾಧ್ಯತೆ ಇದೆ. ಕರಾವಳಿ ಹಾಗೂ ಮಲೆನಾಡು ಜಿಲ್ಲೆಯಲ್ಲಿ ಮುಂದಿನ ಎರಡು ದಿನಗಳ ಕಾಲ ಭಾರಿ ಮಳೆಯಾಗಲಿರುವುದರಿಂದ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನಲ್ಲಿ ಸಂಭವಿಸಿದ ಭೂ ಕುಸಿತದಿಂದ ಶುಕ್ರವಾರ 5 ಜನರು ಮೃತಪಟ್ಟಿದ್ದು, ರಾಜ್ಯಾದ್ಯಂತ ಬರ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ. 
ಮಲೆನಾಡಿನ ಚಿಕ್ಕಮಗಳೂರು, ಕೊಡಗು ಹಾಗೂ ಅರೆ ಮಲೆನಾಡಿನ ಹಾಸನ ಜಿಲ್ಲೆಗಳಲ್ಲಿ ಭಾರಿ ವರ್ಷಧಾರೆಯಾಗುತ್ತಿದ್ದು, ಅಪಾರ ಹಾನಿ ಸಂಭವಿಸಿದೆ. ಕೊಡಗು ಜಿಲ್ಲೆಯಲ್ಲಿ ಮಳೆಯ  ಆರ್ಭಟ ಮುಂದುವರಿದಿದ್ದು, ಕಾವೇರಿ, ಲಕ್ಷ್ಮಣ ತೀರ್ಥ ನದಿಗಳ ಪ್ರವಾಹದಿಂದ ಸಾವಿರಾರು  ಎಕರೆ ಜಮೀನಿಗೆ ನೀರು ನುಗ್ಗಿದೆ. ಕುಶಾಲನಗರ ಮತ್ತು ಮೈಸೂರು ನಡುವಿನ ಸಂಪರ್ಕ ಕಡಿತಗೊಂಡಿದೆ. ಭಾಗಮಂಡಲದ ಭಗಂಡೇಶ್ವರ  ದೇವಾಲಯದ ಒಳಕ್ಕೆ ಕಾವೇರಿ ನದಿ ನೀರು ನುಗ್ಗಿದು ದೇವಾಲಯದ ಗರ್ಭಗೃಹ ಜಲಾವೃತವಾಗಿದೆ. 
ಕೊಡಗು ಜಿಲ್ಲಾಡಳಿತ ಈಗಾಗಲೇ ಜಿಲ್ಲೆಯಾದ್ಯಂತ 21 ಪರಿಹಾರ  ಕೇಂದ್ರಗಳನ್ನು ತೆರೆದಿದ್ದು ಪ್ರಸ್ತುತ 350 ಸಂತ್ರಸ್ತರಿಗೆ ಪರಿಹಾರ ಕೇಂದ್ರಗಳಲ್ಲಿ  ಆಶ್ರಯ ನೀಡಲಾಗಿದೆ. ಪರಿಹಾರ ಕೇಂದ್ರಗಳ ಉಸ್ತುವಾರಿಗೆ ಜಿಲ್ಲಾಡಳಿತದಿಂದ ಅಧಿಕಾರಿ,  ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಹಾರಂಗಿ ಜಲಾಶಯಕ್ಕೆ 20 ಸಾವಿರ ಕ್ಯೂಸೆಕ್ ನೀರಿನ ಒಳಹರಿವಿದ್ದು  ಪ್ರಸ್ತುತ ಹಾರಂಗಿಯಿಂದ 10 ಸಾವಿರ ಕ್ಯುಸೆಕ್ ನೀರನ್ನು ನಾಲೆಗಳಿಗೆ ಜಲಾಶಯದಿಂದ  ಹೊರಬಿಡಲಾಗುತ್ತಿದೆ. ಕಬಿನಿ ಜಲಾಶಯದಿಂದ 1 ಲಕ್ಷ ಕ್ಯೂಸೆಕ್ ನೀರು ಬಿಟ್ಟಿರುವ  ಹಿನ್ನಲೆಯಲ್ಲಿ ಮೈಸೂರು ಜಿಲ್ಲೆಯ ಸುತ್ತೂರು ಸಂಪರ್ಕಿಸುವ ಸೇತುವೆ ಮೇಲೆ ನೀರು  ಹರಿಯುತ್ತಿದ್ದು, ಮೈಸೂರು ಊಟಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಾಗಿದೆ. ತಗ್ಗು  ಪ್ರದೇಶಗಳಿಗೆ ಬಾರಿ ಪ್ರಮಾಣದ ನೀರು ನುಗ್ಗಿ ರೈತರ ಬೆಳೆ ನಷ್ಟ ಉಂಟಾಗಿದೆ.ಕಳೆದ  ಮೂರ್ನಾಲ್ಕು ದಿನಗಳಿಂದ ಮೈಸೂರು ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದ  ಹೆಚ್.ಡಿ.ಕೋಟೆ ತಾಲೂಕಿನ ಬಹುತೇಕ ಸೇತುವೆಗಳು ಮುಳುಗಡೆಯಾಗಿವೆ. ತಾರಕ ಜಲಾಶಯದಿಂದ 15 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಿದ್ದರಿಂದ ಭಾರಿ ಪ್ರವಾಹ ಉಂಟಾಗಿದೆ. ತಾಲೂಕಿನ  ಅನೇಕ ಗ್ರಾಮಗಳು ನೀರಿನಲ್ಲಿ ಮುಳುಗಿವೆ.
ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಅತಿಯಾದ  ಮಳೆಯಾಗುತ್ತಿದ್ದು, ಅತಿವೃಷ್ಠಿಯಾಗುವ ಸಾಧ್ಯತೆಗಳಿವೆ. ಇವುಗಳ ನಿರ್ವಹಣೆಗೆ ಕಂದಾಯ  ಇಲಾಖೆಯ ಕಚೇರಿಗಳು 24 ಗಂಟೆ ಕಾರ್ಯ ನಿರ್ವಹಿಸುವ ಕಂಟ್ರೋಲ್ ರೂಂ ಸ್ಥಾಪಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಸಿಡ್ಲಗುಂಡಿ  ಪ್ರದೇಶದಲ್ಲಿ ಬೇಡ್ತಿ ನದಿ ಉಕ್ಕಿ ಹರಿಯುತ್ತಿದ್ದು, ಯಲ್ಲಾಪುರ ಮುಂಡಗೋಡ ಸಂಚಾರ ಬಂದ್  ಮಾಡಲಾಗಿದೆ. ಯಲ್ಲಾಪುರ, ಶಿರಸಿ, ಅಂಕೋಲಾ ನಡುವಿನ ಸಂಪರ್ಕ ಬಂದ್ ಮಾಡಲಾಗಿದೆ. ಬೇಡ್ತಿ  ಸೇತುವೆ ಕುಸಿದಿದ್ದು, ಡೋಗ್ರಿ ಹಾಗೂ ರಾಮನಗುಳಿ ತೂಗು ಸೇತುವೆ ಕೊಚ್ಚಿ ಹೋಗಿದೆ.
ಹಾಸನ ಜಿಲ್ಲೆಯಲ್ಲೂ ಮಳೆ ಸುರಿಯುತ್ತಿದ್ದು, 522 ಶಾಲೆ, 324 ಅಂಗನವಾಡಿಗೆ  ಹಾನಿಯಾಗಿದೆ, 10 ಕೋಟಿಗೂ ಹೆಚ್ಚು  ತೋಟಗಾರಿಕೆ ಬೆಳೆ ನಷ್ಟವಾಗಿದೆ, 1820 ಕಿ.ಮೀ ರಸ್ತೆ ಹಾಳಾಗಿದೆ .ಮಳೆಯಿಂದ 6 ತಾಲ್ಲೂಕುಗಳಿಂದ 42 ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ ಸಕಲೇಶಪುರದಲ್ಲಿ ಅತಿ  ಹೆಚ್ಚು 49.30 ಕೋಟಿ ನಷ್ಟವಾಗಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com