ಭಾರಿ ಮಳೆ: ಮಾಜಿ ಕೇಂದ್ರ ಸಚಿವ ಜನಾರ್ಧನ ಪೂಜಾರಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ

ಡೆಬಿಡದೆ ಸುರಿಯುತ್ತಿರುವ ವ್ಯಾಪಕ ಮಳೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಅನೇಕ ಪ್ರದೇಶಗಳು ಜಲಾವೃತಗೊಂಡಿದ್ದು, ನೇತ್ರಾವತಿ ನದಿಯು ಅಪಾಯ ಮಟ್ಟ  ಮೀರಿ ಹರಿಯುತ್ತಿದೆ
ಭಾರಿ ಮಳೆ: ಮಾಜಿ ಕೇಂದ್ರ ಸಚಿವ ಜನಾರ್ಧನ ಪೂಜಾರಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ

ಮಂಗಳೂರು: ಎಡೆಬಿಡದೆ ಸುರಿಯುತ್ತಿರುವ ವ್ಯಾಪಕ ಮಳೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಅನೇಕ ಪ್ರದೇಶಗಳು ಜಲಾವೃತಗೊಂಡಿದ್ದು, ನೇತ್ರಾವತಿ ನದಿಯು ಅಪಾಯ ಮಟ್ಟ  ಮೀರಿ ಹರಿಯುತ್ತಿದೆ. ಇದರಿಂದಾಗಿ ಬಂಟ್ವಾಳ ಪಟ್ಟಣವು ನಡುಗಡ್ಡೆಯಂತಾಗಿದೆ.

ನೇತ್ರಾವತಿ ನದಿ ನೀರು ಬಂಟ್ವಾಳ ಪಟ್ಟಣದ ಕೆಲವು ಭಾಗಗಳನ್ನು ಆವರಿಸಿದ್ದು, ಇಂದು ಬೆಳಿಗ್ಗೆ ಕೇಂದ್ರ ಸಚಿವ ಬಿ.ಜನಾರ್ಧನ ಪೂಜಾರಿ ಮತ್ತು ಅವರ ಕುಟುಂಬ ಸದಸ್ಯರು ಸೇರಿದಂತೆ ಸಾವಿರಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಪ್ರದೇಶಗಳಿಗೆ  ಸ್ಥಳಾಂತರಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

  
ಪಟ್ಟಣದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಹಲವಾರು ಮನೆಗಳು ಮುಳುಗಿದ್ದು ಸಾವಿರಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ. ಬಂಟ್ವಾಳದ ಎರಡು ಸ್ಥಳಗಳಲ್ಲಿ ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ.
  

ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್, ತಹಶೀಲ್ದಾರ್ ರಶ್ಮಿ ಮತ್ತು ಎನ್‌ಡಿಆರ್‌ಎಫ್, ಹೋಮ್ ಗಾರ್ಡ್ ಮತ್ತು ಕೋಸ್ಟ್ ಗಾರ್ಡ್‌ನ ಇತರ ರಕ್ಷಣಾ ತಂಡದ ಸಿಬ್ಬಂದಿಗಳು ಇಡೀರಾತ್ರಿ ಪರಿಹಾರ ಕಾರ್ಯಾಚರಣೆಯಲ್ಲಿ ಸಹಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
  
ಘಾಟಿ ರಸ್ತೆಯಲ್ಲಿ ಅನೇಕ ಕಡೆ ಭೂ ಕುಸಿತವಾಗಿರುವುದರಿಂದ ಚಾರ್ಮಾಡಿ ಘಾಟ್ ರಸ್ತೆ ಸಂಪರ್ಕ ಸ್ಥಗಿತಗೊಂಡಿದೆ.  ಇನ್ನೂ ರಸ್ತೆಯಲ್ಲಿ ನೀರು ಹರಿಯುತ್ತಿರುವುದರಿಂದ ಮೈಸೂರು - ಮಂಗಳೂರು ರಸ್ತೆ ಸಂಪರ್ಕವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.

 ಘಾಟಿ ಪ್ರದೇಶದಲ್ಲಿ ಹಳಿಯ ಮೇಲೆ ಮಣ್ಣು ಕುಸಿಯುತ್ತಿರುವುದರಿಂದ ಬೆಂಗಳೂರು - ಮಂಗಳೂರು ರೈಲು ಸಂಚಾರ ಕೂಡ ಸ್ಥಗಿತಗೊಂಡಿದೆ.
 1974 ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಹುದೊಡ್ಡ ನೆರೆ ಬಂದಿತ್ತು , ಆ ಸಂದರ್ಭದಲ್ಲಿ ನೂರಾರು ಮನೆಗಳು, ಸಾವಿರಾರು ಜಾನುವಾರುಗಳು ನೀರಲ್ಲಿ ಕೊಚ್ಚಿಹೋಗಿದ್ದವು . ಆ ಬಳಿಕ ಇದೇ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಪ್ರಮಾಣದ ಮಳೆ ಜಿಲ್ಲೆಯ ಉಂಟಾಗಿದೆ. ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಒಂದು ವಾರದಿಂದ ರಜೆ ಘೋಷಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com