ಮೊಣಕಾಲುದ್ದದ ನೀರಿನಲ್ಲಿ ತೆಪ್ಪ ಚಾಲನೆ: ಫೋಟೋಗೆ ಪೋಸ್ ನೀಡಿದ್ದಲ್ಲ; ಮಾಧ್ಯಮಗಳ ವಿರುದ್ಧ ರೇಣುಕಾಚಾರ್ಯ ಕಿಡಿ

ಮೊಣಕಾಲುದ್ದದ ನೀರಿನಲ್ಲಿ ತೆಪ್ಪ ಚಾಲನೆ ಮಾಡಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ಹೊನ್ನಾಳಿಯ ಬಿಜೆಪಿ ಶಾಸಕ ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಾರೆ.
ಮೊಣಕಾಲುದ್ದದ ನೀರಿನಲ್ಲಿ ತೆಪ್ಪ ಚಾಲನೆ: ಫೋಟೋಗೆ ಪೋಸ್ ನೀಡಿದ್ದಲ್ಲ; ಮಾಧ್ಯಮಗಳ ವಿರುದ್ಧ ರೇಣುಕಾಚಾರ್ಯ ಕಿಡಿ

ದಾವಣಗೆರೆ: ಮೊಣಕಾಲುದ್ದದ ನೀರಿನಲ್ಲಿ ತೆಪ್ಪ ಚಾಲನೆ ಮಾಡಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ಹೊನ್ನಾಳಿಯ ಬಿಜೆಪಿ ಶಾಸಕ ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಾರೆ.

ಹೊನ್ನಾಳಿಯ ಸಾಸ್ವೇಹಳ್ಳಿ ಹಳ್ಳಿಯಲ್ಲಿ ಮಾತನಾಡಿದ ರೇಣುಕಾಚಾರ್ಯ, 'ತೆಪ್ಪಕ್ಕೆ ಹುಟ್ಟು ಹಾಕಿದನ್ನು ದೊಡ್ಡ ವಿಷಯ ಮಾಡಿದರು. ನಾನು ಪ್ರಚಾರಕ್ಕಾಗಿ ತೆಪ್ಪಕ್ಕೆ ಹುಟ್ಟು ಹಾಕಿಲ್ಲ. ಶನಿವಾರ ಕ್ಷೇತ್ರದ ವಿವಿಧ ಭಾಗಗಳಿಗೆ ಭೇಟಿ ನೀಡಿದ್ದರಿಂದ ಆಯಾಸವಾಗಿತ್ತು. ಜನರು ತೆಪ್ಪದಲ್ಲಿ ಕುಳಿತುಕೊಳ್ಳುವಂತೆ ತಿಳಿಸಿದರು. ಈ ವೇಳೆ ಇಳಿ ವಯಸ್ಸಿನ ಯಜಮಾನರೊಬ್ಬರು ಹುಟ್ಟು ಹಾಕುತ್ತಿದ್ದರು. ಅದನ್ನು ನೋಡಿ ಅವರಿಂದ ಹುಟ್ಟು ಪಡೆದು ಎರಡು ನಿಮಿಷ ತೆಪ್ಪವನ್ನು ನಡೆಸಿದೆ. ಅದನ್ನೇ ಮಾಧ್ಯಮಗಳು ಟ್ರೋಲ್ ಮಾಡಿದರು. ಈ ಘಟನೆಯನ್ನು ಯಾರು ಹೇಗೆ ಬಿಂಬಿಸಿದರೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಕ್ಷೇತ್ರದ ಜನತೆಗೆ ನನ್ನ ಬಗ್ಗೆ ಗೊತ್ತಿದೆ ಎಂದು ಅಸಮಾಧಾನ ಹೊರ ಹಾಕಿದರು.

ಅಂತೆಯೇ ಪ್ರವಾಹ ಪೀಡಿತ ಪ್ರದೇಶಗಳ ಜನರಿಗೆ ಮೂಲ ಸೌಕರ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಈ ಭಾಗದ ಜನರು ನನ್ನನ್ನು ಮೂರು ಬಾರಿ ಶಾಸಕರನ್ನಾಗಿ ಆಯ್ಕೆ ಮಾಡಿದ್ದಾರೆ. ಒಂದು ಬಾರಿ ಪ್ರೀತಿಯಿಂದ ಸೋಲಿಸಿದ್ದಾರೆ. ಆದರೆ ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ನನ್ನ ಬಗ್ಗೆ ಕೆಟ್ಟದಾಗಿ ಬಿಂಬಿಸುವ ಕೆಲಸವಾಗಿದೆ. ಮಾತು ಸಾಧನೆಯಲ್ಲ. ನಾನು ಕ್ಷೇತ್ರದ ಜನರಿಗಾಗಿ ಶ್ರಮಿಸುತ್ತಿದ್ದೇನೆಯೇ ಹೊರತು ಪ್ರಚಾರಕ್ಕಾಗಿ ಅಲ್ಲ. ಟೀಕೆ-ಟಿಪ್ಪಣಿ, ತೆಗಳಿಕೆ-ಹೊಗಳಿಕೆ ಎಲ್ಲವನ್ನೂ ನಾನು ಸ್ವೀಕರಿಸುತ್ತೇನೆ. ಯಾವುದಕ್ಕೂ ಜಗ್ಗಲ್ಲ-ಕುಗ್ಗಲ್ಲ ಎಂದು ಕಿಡಿಕಾರಿದರು.
ಕುಮಾರಸ್ವಾಮಿ ಎಲ್ಲಿದ್ದಾರೆ ತಿಳಿಯುತ್ತಿಲ್ಲ.

ಇದೇ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ ರೇಣುಕಾಚಾರ್ಯ, ಯಡಿಯೂರಪ್ಪ ಎಲ್ಲಿದೀಯಾಪ್ಪ ಎಂದು ಜೆಡಿಎಸ್ ಮುಖ್ಯಸ್ಥ ಕುಮಾರಸ್ವಾಮಿ ವ್ಯಂಗ್ಯವಾಡುತ್ತಾರೆ. ಆದರೆ ಅವರು ಎಲ್ಲಿ ಇದೀರಾ ಅಂತ ಯಾರಿಗೂ ಗೊತ್ತಾಗುತ್ತಿಲ್ಲ. ಯಡಿಯೂರಪ್ಪನವರು ಪ್ರತಿಯೊಬ್ಬರ ಮನೆ, ಕೇರಿ, ಗಲ್ಲಿಗಳಲ್ಲಿ ಇರುತ್ತಾರೆ ಎಂದು ಟಾಂಗ್ ಕೊಟ್ಟರು. ಅಂತೆಯೇ ಕಾಂಗ್ರೆಸ್ ನಾಯಕರ ವಿರುದ್ಧವೂ ಕಿಡಿಕಾರಿದ ರೇಣುಕಾಚಾರ್ಯ, 'ಪ್ರವಾಹ ಪೀಡಿತ ಪ್ರದೇಶಕ್ಕೆ ವಿಪಕ್ಷದ ಯಾವುದೇ ನಾಯಕರು ಭೇಟಿ ನೀಡಿಲ್ಲ. 

ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಪುನರ್ಜನ್ಮ ನೀಡಿದ ಬದಾಮಿ ಕ್ಷೇತ್ರದಲ್ಲಿ ಸಾಕಷ್ಟು ಪ್ರವಾಹವಿದೆ. ಆದರೂ ಸಹ ಅವರು ಕ್ಷೇತ್ರಕ್ಕೆ ಭೇಟಿ ನೀಡಿ, ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ಅಂತವರು ಬಿ.ಎಸ್.ಯಡಿಯೂರಪ್ಪ ಅವರ ಬಗ್ಗೆ ಮಾತನಾಡುತ್ತಿದ್ದಾರೆ. ವಿಪಕ್ಷದವರು ಯಡಿಯೂರಪ್ಪ ಒಂಟಿ ಸಲಗ, ಒನ್ ಮ್ಯಾನ್ ಆರ್ಮಿ ಎಂದು ಹೀಯಾಳಿಸುತ್ತಿದ್ದಾರೆ. ಯಡಿಯೂರಪ್ಪನವರು ಒಬ್ಬರೇ ಅಲ್ಲ ಅವರ ಜೊತೆ ನಾವು ಕೂಡ ಇದ್ದೇವೆ. ಪ್ರವಾಹ ಪರಿಸ್ಥಿತಿಯನ್ನು ಎಲ್ಲರೂ ಎದುರಿಸುತ್ತಿದ್ದೇವೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com