ಐಎಂಎ ಹಗರಣ; ಹೇಮಂತ್ ನಿಂಬಾಳ್ಕರ್ ಕೈವಾಡ ಕುರಿತು ತನಿಖಾಧಿಕಾರಿಗಳಿಗೆ ದಾಖಲೆ ಸಲ್ಲಿಸಿ: ಹೈಕೋರ್ಟ್

ಪ್ರಕರಣದ ಕಿಂಗ್ ಪಿನ್ ಮನ್ಸೂರ್ ಖಾನ್ ದುಬೈಗೆ ಪರಾರಿಯಾಗಲು ಹೇಮಂತ್ ಬೆಂಬಲ ನೀಡಿದ್ದರು ಎಂಬ ಆರೋಪ
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಹೂಡಿಕೆದಾರರಿಗೆ ಬಹುಕೋಟಿ ಹಣ ವಂಚನೆ ಮಾಡಿದ ಐಎಂಎ ವಂಚನೆ ಪ್ರಕರಣದ ಕಿಂಗ್ ಪಿನ್ ಮನ್ಸೂರ್ ಖಾನ್ ದುಬೈಗೆ ಪರಾರಿಯಾಗಲು ಹೇಮಂತ್ ಬೆಂಬಲ ನೀಡಿದ್ದರು ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಾಧಾರ ನೀಡುವಂತೆ ಕರ್ನಾಟಕ ಹೈಕೋರ್ಟ್ ಪೊಲೀಸರಿಗೆ ಸೂಚನೆ ನೀಡಿದೆ.

ಐಎಂಎ (ಐ ಮಾನಿಟರಿ ಅಡ್ವೈಸರಿ) ಸಮೂಹ ಕಂಪನಿ ಸಂಸ್ಥಾಪಕ ಮೊಹಮದ್‌ ಮನ್ಸೂರ್ ಖಾನ್‌ ವಿದೇಶಕ್ಕೆ ಪರಾರಿಯಾಗಲು ಸಿಐಡಿ ಐಜಿಪಿ ಆಗಿದ್ದ ಹೇಮಂತ್‌ ನಿಂಬಾಳ್ಕರ್‌ ಬೆಂಬಲ ನೀಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ದಾಖಲೆಗಳಿದ್ದಲ್ಲಿ ವಿಶೇಷ ತನಿಖಾ ದಳದ (ಎಸ್‌ಐಟಿ) ಮುಂದೆ ಹಾಜರುಪಡಿಸಿ ಎಂದು ಅರ್ಜಿದಾರರಿಗೆ ಹೈಕೋರ್ಟ್‌ ಸೂಚಿಸಿದೆ.

ಮನ್ಸೂರ್ ಅಲಿ ಖಾನ್ ಪರಾರಿ ಹಿಂದೆ ಹೇಮಂತ್ ನಿಂಬಾಳ್ಕರ್ ಕೈವಾಡವಿದೆ. ಆದ್ದರಿಂದ ಅವರನ್ನು ಕೂಡ ತನಿಖೆಗೆ ಒಳಪಡಿಸುವಂತೆ ಎಸ್ ಐಟಿ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕೋರಿ ಜನಾಗ್ರಹ ಸಂಘರ್ಷ ಪರಿಷತ್ ಆದರ್ಶ್ ಆರ್. ಅಯ್ಯರ್ ಹಾಗೂ ಇತರರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಮಂಗಳವಾರ ಅರ್ಜಿಯನ್ನು ವಿಲೇವಾರಿ ಮಾಡಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಹಾಗೂ ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರಿದ್ದ ವಿಭಾಗೀಯ ಪೀಠ, ಈ ಸಂಬಂಧ ದಾಖಲೆಗಳಿದ್ದರೆ ಸೂಕ್ತ ತನಿಖಾ ಸಂಸ್ಥೆಯ ಮುಂದೆ ಹಾಜರುಪಡಿಸುವಂತೆ ಸೂಚನೆ ನೀಡಿತು.

ಐಎಂಎ ಹಗರಣದ ಪ್ರಮುಖ ರೂವಾರಿಯಾಗಿರುವ ಮನ್ಸೂರ್​ ಖಾನ್​ ಸಾರ್ವಜನಿಕರಿಗೆ ಸಾವಿರಾರು ಕೋಟಿ ವಂಚಿಸಿ, ದೇಶ ಬಿಟ್ಟು ಹೋಗಲು ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಅವರು ಕಾನೂನು ಸುವ್ಯವಸ್ಥೆಯನ್ನು ಗಾಳಿಗೆ ತೂರಿ ಸಹಾಯ ಮಾಡಿದ್ದಾರೆ. ನಿಂಬಾಳ್ಕರ್​ ವಿರುದ್ಧದ ಆರೋಪ ಸಂಬಂಧ ನಿಷ್ಪಕ್ಷಪಾತ ತನಿಖೆ ನಡೆದರೆ ಸಾರ್ವಜನಿಕರ ಸಾವಿರಾರು ಕೋಟಿ ಹಣ ವಾಪಸ್​ ಸಿಗಲಿದೆ. ಆದ್ದರಿಂದ ಐಎಂಎ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷಾ ತನಿಖಾ ತಂಡ ನಿಂಬಾಳ್ಕರ್ ವಿರುದ್ಧ ತನಿಖೆ ನಡೆಸುವಂತೆ ನ್ಯಾಯಾಲಯ ಎಸ್​ಐಟಿಗೆ ನಿರ್ದೇಶನ ನೀಡಬೇಕು ಎಂದು ಜನಾಧಿಕಾರ ಸಂಘರ್ಷ ಪರಿಷತ್​ನ ಸಹ - ಅಧ್ಯಕ್ಷರಾದ ಆದರ್ಶ್​ ಆರ್​ ಐಯ್ಯರ್ ಮತ್ತು ಬಿಕೆ ಪ್ರಕಾಶ್ ಬಾಬು ನ್ಯಾಯಾಲಯದಲ್ಲಿ ಪಿಐಎಲ್​ ಸಲ್ಲಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com