ಕಳಪೆ ಔಷಧಿ ಖರೀದಿ ಆರೋಪ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಲೋಕಾಯುಕ್ತಕ್ಕೆ ದೂರು
ಕಳಪೆ ಔಷಧ ಖರೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸ್ಪೀಕರ್ ಕೆ ಆರ್ ರಮೇಶ್ ಕುಮಾರ್ ಹಾಗೂ ಮಾಜಿ ಸಚಿವ ಯು ಟಿ ಖಾದರ್ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿದೆ.
Published: 13th August 2019 08:39 PM | Last Updated: 13th August 2019 08:39 PM | A+A A-

ರಮೇಶ್ ಕುಮಾರ್
ಬೆಂಗಳೂರು: ಕಳಪೆ ಔಷಧ ಖರೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸ್ಪೀಕರ್ ಕೆ ಆರ್ ರಮೇಶ್ ಕುಮಾರ್ ಹಾಗೂ ಮಾಜಿ ಸಚಿವ ಯು ಟಿ ಖಾದರ್ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿದೆ.
ವಕೀಲ ಕೆ ವಿ ಶಿವಾರೆಡ್ಡಿ ಎಂಬುವವರು ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದು, ದೂರಿನಲ್ಲಿ ರಮೇಶ್ ಕುಮಾರ್ ಮತ್ತು ಯು.ಟಿ.ಖಾದರ್ ಆರೋಗ್ಯ ಸಚಿವರಾಗಿದ್ದ ಸಮಯದಲ್ಲಿ ಔಷಧ ಖರೀದಿಯಲ್ಲಿ 535 ಕೋಟಿ ರೂ. ಅಕ್ರಮ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಪರೀಕ್ಷೆಗೆ ಒಳಪಡಿಸದ ಔಷಧಿಗಳನ್ನು ಖರೀದಿಸಿ ಸಾರ್ವಜನಿಕರಿಗೆ ವಿತರಣೆ ಮಾಡಲಾಗಿದೆ. ಇದು ಮಹಾಲೇಖಪಾಲಕರ ವರದಿಯಲ್ಲೂ ಸಹ ಉಲ್ಲೇಖವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಅಲ್ಲದೆ 2018ರ ಜುಲೈ 6 ರಂದು ಸರ್ಕಾರಕ್ಕೆ ಸಿಎಜಿ ವರದಿ ಸಲ್ಲಿಸಿದೆ. ವರದಿ ಸಲ್ಲಿಕೆಯಾಗಿ 14 ತಿಂಗಳು ಕಳೆದರೂ ಪ್ರಕರಣ ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಶಿಫಾರಸ್ಸು ಮಾಡಿಲ್ಲ. ಮೈತ್ರಿ ಸರ್ಕಾರದಲ್ಲಿ ಸ್ಪೀಕರ್ ಆಗಿ ತಮ್ಮ ಅಧಿಕಾರ ಮತ್ತು ಪ್ರಭಾವ ಬಳಸಿ ಪ್ರಕರಣದಿಂದ ತಪ್ಪಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಸುಮಾರು 100 ಕೋಟಿ ರೂ. ಮೌಲ್ಯದ ಕಳಪೆ ಔಷಧವನ್ನು ತಾವೇ ಮುಂದೆ ನಿಂತು ಸುಟ್ಟು ಹಾಕಿಸಿರುವುದಾಗಿ ರಮೇಶ್ ಕುಮಾರ್ ಸಚಿವರಾಗಿದ್ದ ವೇಳೆ ಹೇಳಿಕೆ ನೀಡಿದ್ದರು. ಅಷ್ಟೊಂದು ಪ್ರಮಾಣದ ಔಷಧ ಖರೀದಿಸಿದ್ದಾದರೂ ಏಕೆ? ಜನರಿಗೆ ಗುಣಮಟ್ಟದ ಔಷಧ ನೀಡಲಿಲ್ಲ ಏಕೆ? ಔಷಧಿಗಳನ್ನು ಸುಡಲು ಅನುಮತಿ ನೀಡಿದ್ದು ಯಾಕೆ ಎಂಬ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಶಿವಾರೆಡ್ಡಿ ದೂರಿನಲ್ಲಿ ಕೋರಿದ್ದಾರೆ.