ನಾಳೆ ಸರಳ ಸ್ವಾತಂತ್ರ್ಯೋತ್ಸವಕ್ಕೆ ಸಿದ್ಧತೆ: ಭಾರೀ ಪೊಲೀಸ್ ಬಂದೋಬಸ್ತ್‌

ರಾಜ್ಯದಲ್ಲಿ ಭಾರೀ ಪ್ರವಾಹ ಉಂಟಾಗಿರುವ ಮಧ್ಯೆಯೇ ಸ್ವಾತಂತ್ರ್ಯೋತ್ಸವ ಆಚರಣೆಗೆ ಬೆಂಗಳೂರು ಸೇರಿದಂತೆ ರಾಜ್ಯದ ಜಿಲ್ಲೆಗಳು ಸಿದ್ಧಗೊಂಡಿದ್ದು, ಎಲ್ಲಾ ಅಗತ್ಯ ಪೂರ್ವ ತಯಾರಿಗಳನ್ನು ಕೈಗೊಳ್ಳಲಾಗಿದೆ.

Published: 14th August 2019 02:41 PM  |   Last Updated: 14th August 2019 02:41 PM   |  A+A-


Representational image

ಸಾಂದರ್ಭಿಕ ಚಿತ್ರ

Posted By : Sumana Upadhyaya
Source : UNI

ಬೆಂಗಳೂರು: ರಾಜ್ಯದಲ್ಲಿ ಭಾರೀ ಪ್ರವಾಹ ಉಂಟಾಗಿರುವ ಮಧ್ಯೆಯೇ ಸ್ವಾತಂತ್ರ್ಯೋತ್ಸವ ಆಚರಣೆಗೆ ಬೆಂಗಳೂರು ಸೇರಿದಂತೆ ರಾಜ್ಯದ ಜಿಲ್ಲೆಗಳು ಸಿದ್ಧಗೊಂಡಿದ್ದು, ಎಲ್ಲಾ ಅಗತ್ಯ ಪೂರ್ವ ತಯಾರಿಗಳನ್ನು ಕೈಗೊಳ್ಳಲಾಗಿದೆ.


ರಾಜ್ಯ 17ಕ್ಕೂ ಅಧಿಕ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿರುವ ಹಿನ್ನೆಲೆಯಲ್ಲಿ ಈ ಬಾರಿಯ ಸ್ವಾತಂತ್ರ್ಯೋತ್ಸವವನ್ನು ಸರಳವಾಗಿ ಆಚರಿಸಲು ಸರ್ಕಾರ ಆದೇಶ ಹೊರಡಿಸಿದೆ. ಸಚಿವ ಸಂಪುಟ ವಿಸ್ತರಣೆಯಾಗದ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ನೇಮಕವಾಗದ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರಗಳಲ್ಲಿ ಆಯಾ ಜಿಲ್ಲಾಧಿಕಾರಿಗಳೇ ಧ್ವಜಾರೋಹಣ ನೆರವೇರಿಸುವಂತೆ ಆದೇಶದಲ್ಲಿ ಸರ್ಕಾರ ತಿಳಿಸಿದೆ.


ಸ್ವಾತಂತ್ರ್ಯೋತ್ಸವದ ಪ್ರಧಾನ ಸಮಾರಂಭ ನಡೆಯುವ ಬೆಂಗಳೂರಿನ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಸಕಲ ಸಿದ್ಧತೆ ಕೈಗೊಳ್ಳಲಾಗಿದ್ದು, ಬೃಹತ್ ವೇದಿಕೆ ನಿರ್ಮಿಸಲಾಗಿದೆ.


ಶಾಮಿಯಾನ, ವೇದಿಕೆಯ ನಿರ್ಮಾಣ, ಬ್ಯಾರಿಕೇಡಿಂಗ್, ಆಸನಗಳ ವ್ಯವಸ್ಥೆ ಮಾಡಲಾಗಿದೆ. ವೇದಿಕೆಗೆ ಅಲಂಕಾರಿಕ ಬ್ರಾಸ್ ಪರಿಕರಗಳನ್ನು ಅಳವಡಿಸಲಾಗಿದೆ, ಮಳೆ ಬಂದರೂ ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ಕಲ್ಪಿಸಲಾಗಿದೆ.
ನಾಳೆ ಬೆಳಗ್ಗೆ 8.58ಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕ್ರೀಡಾಂಗಣಕ್ಕೆ ಆಗಮಿಸಲಿದ್ದು, ಆಗ ರಕ್ಷಣಾ ಸೇವೆಯ ಮೂವರು ಹಿರಿಯ ಅಧಿಕಾರಿಗಳನ್ನು ಮುಖ್ಯಮಂತ್ರಿಗಳಿಗೆ ಪರಿಚಯಿಸಲಾಗುತ್ತದೆ. ಬೆಳಗ್ಗೆ 9 ಗಂಟೆಗೆ ಮುಖ್ಯಮಂತ್ರಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಲಿದ್ದು, ಈ ಸಂದರ್ಭದಲ್ಲಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ನಲ್ಲಿ ಪುಷ್ಪವೃಷ್ಟಿ ಮಾಡಲಾಗುತ್ತದೆ.

ಬಳಿಕ ಮುಖ್ಯಮಂತ್ರಿ ಪರೇಡ್ ವೀಕ್ಷಿಸಿ, ಗೌರವ ರಕ್ಷೆ ಸ್ವೀಕರಿಸುತ್ತಾರೆ. ಸ್ವಾತಂತ್ರ್ಯೋತ್ಸವದ ಸಂದೇಶ ನೀಡುತ್ತಾರೆ. ನಂತರ ಜವಾಹರ್ ನವೋದಯ ಶಾಲಾ ಮಕ್ಕಳಿಂದ ರಾಷ್ಟ್ರಗೀತೆ ಮೊಳಗಲಿದೆ. ಪಥಸಂಚಲನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಪೂರ್ವಭಾವಿ ತಾಲೀಮು ಮೂರು ದಿನಗಳ ಕಾಲ ನಡೆದಿದೆ. ಪಥಸಂಚಲನದಲ್ಲಿ ಕೆಎಸ್‍ಆರ್ ಪಿ, ಸ್ಕೌಟ್ಸ್, ಗೈಡ್ಸ್, ಎನ್‍ಸಿಸಿ, ಸೇವಾದಳ ಹಾಗೂ ವಿವಿಧ ಶಾಲೆಗಳ ಮಕ್ಕಳನ್ನು ಒಳಗೊಂಡ ಕವಾಯತು ಮತ್ತು ಬ್ಯಾಂಡ್‍ನ ಒಟ್ಟು 34 ತುಕಡಿಗಳಲ್ಲಿ ಸುಮಾರು 1130 ಮಂದಿ ಭಾಗವಹಿಸಲಿದ್ದಾರೆ. ಶಾಲಾ ಮಕ್ಕಳ ಒಟ್ಟು 2 ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸುಮಾರು 1250 ಮಕ್ಕಳು ಭಾಗವಹಿಸಲಿದ್ದಾರೆ.


ಈ ಬಾರಿಯ ಪರೇಡ್‍ನಲ್ಲಿ ಗೋವಾ ಪೊಲೀಸ್, ಬಿಎಸ್‍ಎಫ್, ಸಿಆರ್ ಪಿಎಫ್, ಕೆಸ್‍ಆರ್ ಪಿ ಮತ್ತು ಇತರ ತಂಡಗಳು ಭಾಗವಹಿಸಲಿವೆ. ಶ್ವಾಸ ದಳ ಕೂಡ ಹೆಜ್ಜೆ ಹಾಕಲಿದೆ, ಮೈದಾನದ ಹೊರಗೆ ಮತ್ತು ಒಳಭಾಗದಲ್ಲಿ ಎಲ್ಲಾ ರೀತಿಯ ಭದ್ರತೆ ಒದಗಿಸಲಾಗಿದೆ. ಈ ವರ್ಷ ಎಲ್ಲಾ ರೈಲು ನಿಲ್ದಾಣ, ವಿಮಾನ ನಿಲ್ದಾಣ, ಬೃಹತ್ ಕಟ್ಟಡಗಳು, ಪಿಜಿ ಕಟ್ಟಡಗಳಿಗೂ ರಕ್ಷಣೆ ಒದಗಿಸಲಾಗಿದೆ. ಮೈದಾನಕ್ಕೆ ಒಳಪ್ರವೇಶಿಸುವ ಪ್ರತಿಯೊಬ್ಬರನ್ನೂ ತಪಾಸಣೆಗೆ ಒಳಪಡಿಸಲಾಗುವುದು. ಒಟ್ಟು 1906 ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.


ಮೈದಾನಕ್ಕೆ ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಮೈದಾನದಲ್ಲಿ ಭದ್ರತೆ ಮತ್ತು ಸುರಕ್ಷತೆಗಾಗಿ 50 ಸಿಸಿ ಕ್ಯಾಮೆರಾ, 4 ಬ್ಯಾಗೇಜ್ ಸ್ಕ್ಯಾನರ್ ಮತ್ತು ವ್ಯವಸ್ಥಿತ ಸಂಚಾರ ನಿಯಂತ್ರಣ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಯಾವುದೇ ಆಕಸ್ಮಿಕ ವಿಪತ್ತು ಸಂಭವಿಸಿದಲ್ಲಿ ತಕ್ಷಣ ಪ್ರತಿಕ್ರಿಯಿಸಲು ಅಗತ್ಯವಿರು ವಷ್ಟು ಆಂಬುಲೆನ್ಸ್, ವೈದ್ಯಕೀಯ ಮತ್ತು ವೈದ್ಯಕೀಯೇತರ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ನಗರದ ಹಲವು ಆಸ್ಪತ್ರೆಗಳನ್ನು ಗುರುತಿಸಿ ಸಾಕಷ್ಟು ಸಂಖ್ಯೆಯಲ್ಲಿ ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ.

Stay up to date on all the latest ರಾಜ್ಯ news with The Kannadaprabha App. Download now
facebook twitter whatsapp