ಕೊಡಗಿನಲ್ಲಿ ಪ್ರಕೃತಿ ವಿಕೋಪ, ಭೂಕುಸಿತ: ಕಾಫಿ ಉದ್ಯಮ ಕಂಗಾಲು

ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಧಾರಾಕಾರ ಮಳೆ, ಪ್ರವಾಹ ಮತ್ತು ಭೂಕುಸಿತದಿಂದ ಲಕ್ಷಾಂತರ ಎಕರೆ ಕಾಫಿ ಬೆಳೆ, ಕಾಫಿ ತೋಟಗಳು ನೆಲಕಚ್ಚಿವೆ.

Published: 18th August 2019 09:32 AM  |   Last Updated: 18th August 2019 09:32 AM   |  A+A-


Karnataka Floods; Huge Loss For Coffee growers

ಮಳೆಗಾಹುತಿಯಾದ ಕಾಫೆ ತೋಟ

Posted By : Srinivasamurthy VN
Source : UNI

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಧಾರಾಕಾರ ಮಳೆ, ಪ್ರವಾಹ ಮತ್ತು ಭೂಕುಸಿತದಿಂದ ಲಕ್ಷಾಂತರ ಎಕರೆ ಕಾಫಿ ಬೆಳೆ, ಕಾಫಿ ತೋಟಗಳು ನೆಲಕಚ್ಚಿವೆ.


ಭೂಕುಸಿತ ಒಂದು ಕಡೆ ಹಲವು ಮುಗ್ಧ ಜೀವಿಗಳನ್ನು ಬಲಿ ತೆಗೆದುಕೊಂಡರೆ, ಇನ್ನೊಂದು ಕಡೆ ಕಾಫಿ ತೋಟಗಳನ್ನೂ ಅಪೋಶನ ಮಾಡಿಬಿಟ್ಟಿದೆ.! ಕಾಫಿ ಬೆಳೆಗಾರರು ಮುಂದೇನಪ್ಪಾ ಎಂದು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ಪ್ರಾಥಮಿಕ ಅಂದಾಜಿನಂತೆ ಕೊಡಗು ಜಿಲ್ಲೆಯಲ್ಲಿ ಮಳೆ, ಪ್ರವಾಹ, ಭೂಕುಸಿತದಿಂದ 1 ಲಕ್ಷ ಹೆಕ್ಟೇರ್ ಗೂ ಹೆಚ್ಚಿನ ಕಾಫಿ ತೋಟಗಳಿಗೆ ಹಾನಿಯಾಗಿದೆ.

ಇದರ ಒಟ್ಟು ಅಂದಾಜು ಮೌಲ್ಯ 50 ಕೋಟಿ ರೂ ಆಗಿದೆ ಎಂದು ತೋಟಗಾರಿಕೆ ಮತ್ತು ಕಾಫಿ ಮಂಡಳಿಯ ಮೂಲಗಳು ತಿಳಿಸಿವೆ. ಕಾಫಿ ಉತ್ಪಾದನೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದು, ರಾಜ್ಯದ ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಗಳು ದೇಶದ ಒಟ್ಟಾರೆ ಉತ್ಪಾದನೆಯಲ್ಲಿ ಶೇ 35 – 40 ರಷ್ಟು ಕೊಡುಗೆ ನೀಡುತ್ತಿವೆ. ಇದು ತಾತ್ಕಾಲಿಕ ಅಂದಾಜು ಮಾತ್ರ, ಇನ್ನೂ ಕೆಲವು ದಿನಗಳ ಕಾಲ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಈ ಹಿನ್ನೆಲೆಯಲ್ಲಿ ನಷ್ಟದ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಕಳೆದ ವರ್ಷ ಕೊಡಗು ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆ ಮತ್ತು ಭೂಕುಸಿತದಿಂದ ಕಾಫಿ ತೋಟಗಳು ಹಾನಿಗೀಡಾಗಿ ಕಾಫಿ ಉದ್ಯಮ ಚೇತರಿಕೆಯಾಗದಷ್ಟು ತೊಂದರೆಗೊಳಗಾಗಿತ್ತು. ಅದು ಜನರ ಮನಸ್ಸಿನಿಂದ ಮಾಸುವ ಮುನ್ನವೇ ಈ ವರ್ಷವೂ ಪ್ರಕೃತಿ ವಿಕೋಪ ಮತ್ತೆ ಕೊಡಗಿನ ಕಾಫಿ ಬೆಳೆಗಾರರನ್ನು ತೀವ್ರ ಸಂಕಷ್ಟಕ್ಕೆ ದೂಡಿದೆ. ಕಳೆದ ವರ್ಷ ಮತ್ತು ಈ ವರ್ಷ ಸಂಭವಿಸಿದ ನೈಸರ್ಗಿಕ ವಿಕೋಪದಿಂದ ಕಾಫಿ ಉದ್ಯಮ ನೆಲಕಚ್ಚಿದ್ದು ಬೆಳೆಗಾರರು ಆತಂಕಕ್ಕೀಡಾಗಿದ್ದಾರೆ, ಅದೇ ರೀತಿ ತೋಟದ ಕಾರ್ಮಿಕರೂ ಸಹ ಮುಂದಿನ ಭವಿಷ್ಯದ ಬಗ್ಗೆ ಚಿಂತಾಕ್ರಾಂತರಾಗಿದ್ದಾರೆ.

ಒಟ್ಟಾರೆ ಜಿಲ್ಲೆಯಲ್ಲಿ ಕಾಫಿ ಉದ್ಯಮ ಚೇತರಿಕೆ ಕಂಡು ಮತ್ತೆ ಗತವೈಭವಕ್ಕೆ ಮರಳಬೇಕಾದರೆ ಇನ್ನೂ ಹತ್ತಾರು ವರ್ಷಗಳ ಸಮಯ ಬೇಕಾಗುತ್ತದೆ ಎಂದು ಜಿಲ್ಲೆಯ ಕಾಫಿ ತೋಟಗಾರರು ಹೇಳುತ್ತಿದ್ದಾರೆ. ಕಳೆದ ವರ್ಷ ಸಹ ಕಾಫಿ ಉತ್ಪಾದನೆ ಮಾಡುವ ಈ ಮೂರು ಜಿಲ್ಲೆಗಳಲ್ಲಿ ಲಕ್ಷಾಂತರ ಎಕರೆ ಕಾಫಿ ಬೆಳೆ ನಷ್ಟವಾಗಿ ಉದ್ಯಮ ನೆಲಕಚ್ಚಿತ್ತು. ಕಳೆದ ವರ್ಷ ಈ ಮೂರು ಜಿಲ್ಲೆಗಳ ನಷ್ಟ ಸುಮಾರು 1 ಸಾವಿರ ಕೋಟಿ ರೂ ದಾಟಿತ್ತು. ಕೊಡಗು ಜಿಲ್ಲೆಯಂತೆ ಕಾಫಿಗೆ ಹೆಸರಾದ ಚಿಕ್ಕಮಗಳೂರು ಜಿಲ್ಲೆಯಲ್ಲೂ ಮಳೆ, ಪ್ರವಾಹ ಮತ್ತು ನೈಸರ್ಗಿಕ ವಿಕೋಪಗಳಿಂದ ಸಾಕಷ್ಟು ಪ್ರಮಾಣದ ಕಾಫಿ ಬೆಳೆಗೆ ಹಾನಿಯಾಗಿದೆ.

ಇಲ್ಲಿಯೂ ಕೂಡ ಕಾಫಿ ಬೆಳೆಗಾರರು ಈ ಸಂಕಷ್ಟದಿಂದ ಹೊರಬರಲು ಹಲವು ವರ್ಷಗಳೇ ಬೇಕಾಗಬಹುದು. ರಾಜ್ಯದಲ್ಲಿನ ಮಳೆ, ಭೂಕುಸಿತ, ಪ್ರಕೃತಿ ವಿಕೋಪದಿಂದ ಉದ್ಯಮ ಕಂಗಾಲಾಗಿದೆ.

Stay up to date on all the latest ರಾಜ್ಯ news with The Kannadaprabha App. Download now
facebook twitter whatsapp