ಹತ್ತು ದಿನಗಳಲ್ಲಿ 13 ಜಲಾಶಯಗಳಿಂದ ಹರಿದ 1200 ಟಿಎಂಸಿ ನೀರು : ಎಚ್ ಕೆ ಪಾಟೀಲ್ ಸಮಿತಿ ವರದಿ

ನೆರೆಯಿಂದಾಗಿ ಬದುಕು ಕಳೆದುಕೊಂಡಿರುವ ಲಕ್ಷಾಂತರ ಜನರಿಗೆ ಬದುಕು ಕಟ್ಟಿಕೊಳ್ಳಲು ಸರ್ಕಾರ ನೆರವಾಗಬೇಕು ಎಂದು ಪ್ರವಾಹ ಸಂತ್ರಸ್ತ ಪ್ರದೇಶಗಳ ಅಧ್ಯಯನ ಸಮಿತಿ ಅಧ್ಯಕ್ಷ ಎಚ್ ಕೆ ಪಾಟೀಲ್ ಹೇಳಿದರು.
ಎಚ್ ಕೆ ಪಾಟೀಲ್
ಎಚ್ ಕೆ ಪಾಟೀಲ್

ಬೆಂಗಳೂರು: ನೆರೆಯಿಂದಾಗಿ ಉತ್ತರ ಕರ್ನಾಟಕದ 3 ಸಾವಿರ ಗ್ರಾಮಗಳು ಮುಳುಗಡೆಯಾಗಿದ್ದು, 1 ಸಾವಿರ ಗ್ರಾಮಗಳನ್ನು ಪುನರ್ ನಿರ್ಮಾಣ ಮಾಡಬೇಕಿದೆ ಅಂದಾಜು 2 ಲಕ್ಷ ಎಕರೆ ಫಸಲು, ಅಪಾರ ಪ್ರಮಾಣದ ಕಬ್ಬಿನ ಬೆಳೆ, 1 ಲಕ್ಷ ಎಕರೆ ಕೃಷಿಯೋಗ್ಯ ಭೂಮಿ ಹಾನಿಯಾಗಿದ್ದು, ಬದುಕು ಕಳೆದುಕೊಂಡಿರುವ ಲಕ್ಷಾಂತರ ಜನರಿಗೆ ಬದುಕು ಕಟ್ಟಿಕೊಳ್ಳಲು ಸರ್ಕಾರ ನೆರವಾಗಬೇಕು ಎಂದು ಪ್ರವಾಹ ಸಂತ್ರಸ್ತ ಪ್ರದೇಶಗಳ ಅಧ್ಯಯನ ಸಮಿತಿ ಅಧ್ಯಕ್ಷ ಎಚ್ ಕೆ ಪಾಟೀಲ್ ಹೇಳಿದರು.

ಮುಂಬೈ ಕರ್ನಾಟಕ ಪ್ರದೇಶದಲ್ಲಿ ಸಂಭವಿಸಿದ ಪ್ರವಾಹ ಪರಿಸ್ಥಿತಿ ಅಧ್ಯಯನಕ್ಕೆ ರಚಿಸಲಾಗಿದ್ದ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್ ಕೆ ಪಾಟೀಲ್ ನೇತೃತ್ವದ ಸಮಿತಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ಮಧ್ಯಂತರ ವರದಿ ಸಲ್ಲಿಸಿದೆ. ಬಳಿಕ ಕೆಪಿಸಿಸಿ ಕಚೇರಿಯಲ್ಲಿ ಸಮಿತಿ ಸದಸ್ಯರಾದ ಮಾಜಿ ಸಚಿವರಾದ ಉಮಾಶ್ರೀ, ಶಿವಾನಂದ ಪಾಟೀಲ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಚ್.ಕೆ. ಪಾಟೀಲ್, ಕೃಷ್ಣಾಕೊಳ್ಳದ ನದಿಗಳಷ್ಟೇ ಅಲ್ಲದೇ ತುಂಗಾ, ಭದ್ರಾ ಮಲಪ್ರಭಾ, ಘಟಪ್ರಭಾ, ದೂದ್ ಗಂಗಾ, ವೇದಗಂಗಾ, ಮಾರ್ಕಂಡೇಯ, ಹಿರಣ್ಯಕೇಶಿ ಮುಂತಾದ ನದಿಗಳ ಪ್ರವಾಹದಿಂದಾಗಿ 17 ಜಿಲ್ಲೆಗಳ 80 ತಾಲೂಕು ಪೂರ್ಣ ಪ್ರಮಾಣದಲ್ಲಿ ಹಾನಿಗೀಡಾಗಿದೆ ಎಂದು ಅವರು ಹೇಳಿದರು.

ನೆರೆಯಿಂದಾಗಿ ಅಂದಾಜು 3 ಸಾವಿರ ಗ್ರಾಮಗಳು ಭಾಗಶಃ ಮುಳುಗಡೆಯಾಗಿದ್ದು, ಅಂದಾಜು 100ಕ್ಕೂ ಹೆಚ್ಚು ಜೀವ ಹಾನಿಯಾಗಿದ್ದು, ಸಾವಿರಾರು ಜಾನುವಾರುಗಳು, ಸಾಕು ಪ್ರಾಣಿಗಳು ನೀರು ಪಾಲಾಗಿವೆ. ಜನ ಉಪ ಜೀವನ ಹಾಗೂ ನಿತ್ಯ ಜೀವನಕ್ಕ ಬಳಸುತ್ತಿದ್ದ ಕೃಷಿ ಉಪಕರಣ, ಗೃಹವಸ್ತುಗಳು, ವಿದ್ಯಾರ್ಥಿಗಳ ಪಠ್ಯಪುಸ್ತಕಗಳು, ದಾಖಲೆಗಳು, ಮೇವು, ಚಕ್ಕಡಿ, ಟ್ರಾಕ್ಟರ್ ಇತ್ಯಾದಿ ಭಾರಿ ಹಾನಿಗೀಡಾಗಿದ್ದು, ಸಾರ್ವಜನಿಕ ಆಸ್ತಿ, ಶಾಲಾಕಟ್ಟಡ, ರಸ್ತೆಗಳು, ಸೇತುವೆಗಳು, ವಿದ್ಯುತ್ ಕಂಬಗಳು, ವಿದ್ಯುತ್ ಪರಿವರ್ತಕಗಳು ಸರ್ಕಾರಿ ಹಾಗೂ ಸಂಸ್ಥೆಗಳ ಆಸ್ತಿಪಾಸ್ತಿ ಹಾನಿಯಿಂದಾಗಿ ಜನರ ಬದುಕೇ ದುಸ್ತರವಾಗಿದೆ. ಸರ್ಕಾರ ಅವರ ಬದಕು ಕಟ್ಟಿಕೊಡಲು ನೆರವು ನೀಡಬೇಕೆಂದು ಅವರು ತಿಳಿಸಿದರು.

ಪಕ್ಷದ ನಿರ್ದೇಶನದ ಮೇರೆಗೆ ಮುಂಬೈ ಕರ್ನಾಟಕ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ಅಧ್ಯಯನ ಮಾಡಲು ತೆರಳಿದ ತಂಡಕ್ಕೆ ಉತ್ತರ ಕರ್ನಾಟಕದ ಜಿಲ್ಲೆಗಳಾದ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಗದಗ, ಹಾವೇರಿ, ಕೊಪ್ಪಳ, ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಪ್ರವಾಹದ ಪರಿಸ್ಥಿತಿ ಅಧ್ಯಯನ ಮಾಡಿದ್ದರೂ ಪೂರ್ಣಪ್ರಮಾಣದಲ್ಲಿ ಪರಿಸ್ಥಿತಿ ಅವಲೋಕನ ಮಾಡಲು ಸಾಧ್ಯವಾಗಿಲ್ಲ ಎಂದರು. ಬೆಳಗಾವಿ ಜಿಲ್ಲೆಯಲ್ಲೇ ಸುಮಾರು 341 ಗ್ರಾಮಗಳು, ಎಲ್ಲಾ ತಾಲ್ಲೂಕುಗಳು ಪ್ರವಾಹದ ಹೊಡೆತಕ್ಕೆ ಸಲುಕಿದ್ದವು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಉಪವಿಭಾಗದ 37 ಗ್ರಾಮಗಳು ತೀವ್ರ ಬಾಧಿತವಾಗಿವೆ. ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ, ಯಡೂರ, ಇಂಗಳಿ, ಚಂದೂರ, ಮಾಂಜರಿ, ಬಾರವಾಡ ಹಾಗೂ ಹನ್ನರಗಿ, ರಾಯಭಾಗ ತಾಲ್ಲೂಕು, ಹಳೇದಿಗ್ಗೇವಾಡಿ, ಗುಂಡವಾಡ, ಶಿರಗುರ, ಖೇಮಲಾಪುರ, ಸಿದ್ದಾಪುರ, ಅಥಣಿ ತಾಲ್ಲೂಕು, ಮೊಳವಾಡ, ಕುಸನಾಳ, ಕೃಷ್ಣಾ ಕಿತ್ತೂರ, ಬಣಜವಾಡ, ತೀರ್ಥ, ನದಿ ಇಂಗಳವಾಂವ್, ದರೂರ, ಕವಟಕೊಪ್ಪ, ಶೇಗುಣಶಿ, ಹುಲವಾಳಿ, ಅವರಖೋಡ, ನಾಗನೂರ, ಪಿ.ಕೆ, ಸತ್ತಿ, ಮಹಿಷವಾಡಗಿ, ಜನವಾಡ, ಸವದಿದುರ್ಗಾ, ಶಿರಹಟ್ಟಿ, ಕಾತ್ರಾಳ, ಝಂಜರವಾಡ, ನಂದೇಶ್ವರ, ಸಪ್ತಸಾಗರ, ಮಂಗಾವತಿ, ಜುಗೂಳ, ಶಹಾಪೂರ ಗ್ರಾಮಗಳು ಗಂಭೀರ ಪರಿಸ್ಥಿತಿ ನಿರ್ಮಾಣವಾಗಿದ್ದು ಅಕ್ಷರಶಃ ನರಕಸದೃಶ್ಯ ವಾತಾವರಣ ನಿರ್ಮಾಣಗೊಂಡಿದೆ ಎಂದು ಎಚ್ ಕೆ ಪಾಟೀಲ್ ವಿವರಿಸಿದರು.

ರಾಜ್ಯದ 22 ಜಿಲ್ಲೆಗಳ 103 ತಾಲ್ಲೂಕುಗಳಲ್ಲಿ ಸುಮಾರು 2 ಕೋಟಿಯಷ್ಟು ಜನ ಪ್ರವಾಹ ಹಾಗೂ ಅತಿವೃಷ್ಟಿಯಿಂದ ಸಂತ್ರಸ್ಥರಾಗಿದ್ದಾರೆ. 10 ದಿನಗಳಲ್ಲಿ ಪ್ರವಾಹ ಸಂತ್ರಸ್ತ ಪ್ರದೇಶಗಳ 13 ಜಲಾಶಯಗಳಲ್ಲಿ 1200 ಟಿಎಂಸಿ ಅಡಿಯಷ್ಟು ನೀರು ಹರಿದು ಜನರ ಬದುಕನ್ನು ಛಿದ್ರಗೊಳಿಸಿದೆ. ಪ್ರವಾಹ ಪರಿಸ್ಥಿತಿ ನಡುವೆಯೂ ರಾಜ್ಯ ಸರ್ಕಾರ ಕೈಗೊಂಡಿರುವ ಪರಿಹಾರ ಕಾರ್ಯಗಳು ತೃಪ್ತಿಕರವಾಗಿಲ್ಲ. ಪ್ರವಾಹ ಪೀಡಿತ ಪ್ರದೇಶಗಳಿಗೆ ರಾಜ್ಯದ ಜನರಿಂದ ನೆರವು ಸಹ ಹರಿದುಬರುತ್ತಿದ್ದು, ಇದರಿಂದ ಸರ್ಕಾರಕ್ಕೆ ಪರಿಹಾರ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶವಾಗಿದೆ ಎಂದರು. ಮುಖ್ಯಮಂತ್ರಿಗಳ ಪ್ರವಾಹ ಪ್ರದೇಶ ಭೇಟಿ ಪರಿಣಾಮ ಬೀರಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯ ಎಲ್ಲಡೆ ಎದ್ದು ಕಾಣುತ್ತಿತ್ತು. ಸರ್ಕಾರಿ ಯಂತ್ರ ತೋರಿಕೆಗೆ ಮಾತ್ರ ಕಾರ್ಯನಿರ್ವಹಿಸಿದ್ದು, ಪ್ರಾಮಾಣಿಕ ಪ್ರಯತ್ನ ಕಂಡು ಬಂದಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದಿಂದ ಇಬ್ಬರು ಸಚಿವರು ಪ್ರವಾಹ ಪೀಡಿತ ಪ್ರದೇಶಗಳ ವೀಕ್ಷಣೆ ಮಾಡಿದರೂ ಸಹಿತ ಕಾಟಾಚಾರಕ್ಕೆ ಈ ಪ್ರವಾಸ ಕೈಗೊಂಡಂತೆ ಭಾಸವಾಗುತ್ತಿದೆ. ಪರಿಸ್ಥಿತಿಯನ್ನು ಕಣ್ಣಾರೆ ವೀಕ್ಷಿಸಿದರೂ ಕೇಂದ್ರದಿಂದ ಯಾವುದೇ ನೆರವು ನೀಡದೇ ಹೋಗಿರುವುದು ರಾಜ್ಯಕ್ಕೆ ಎಸಗಿದ ಪರಮ ಅನ್ಯಾಯವಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪ್ರತಿಪಕ್ಷಗಳ ಟೀಕೆಯ ಭೀತಿಯಿಂದ ಪ್ರವಾಸ ಕೈಗೊಂಡಿದ್ದು, ಬಿಟ್ಟರೆ ಅವರ ಪ್ರವಾಸದಲ್ಲಿ ಒಂದೂ ಪ್ರಾಮಾಣಿಕ ಪ್ರಯತ್ನ ನಡೆದಿಲ್ಲ ಎಂದು ಆರೋಪಿಸಿದರು. 

1. ನೆರೆ ಹಾಗೂ ಅತಿವೃಷ್ಟಿಯನ್ನು ರಾಷ್ಟ್ರೀಯ ವಿಪತ್ತು ಎಂದು ತಕ್ಷಣವೇ ಘೋಷಿಸಬೇಕು.ಅನುದಾನ, ಸಹಾಯ, ಸೌಲಭ್ಯ, ಸೌಕರ್ಯ ಒದಗಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಬೇಕು. 
2. ಸಾವಿರಾರು ಗ್ರಾಮಗಳನ್ನು ಪುನರ್ ನಿರ್ಮಾಣ ಮಾಡಬೇಕು. ಗ್ರಾಮಗಳ ಪುನರ್ವಸತಿ ಮತ್ತು ಪುನರ್ ನಿರ್ಮಾಣಕ್ಕಾಗಿ ತಕ್ಷಣ ಉನ್ನತ ಮಟ್ಟದ ಪ್ರಾಧಿಕಾರ ರಚಸಬೇಕು. ಪ್ರತಿ ಜಿಲ್ಲೆಗಳಿಗೆ ಅಪರ ಮುಖ್ಯ ಕಾರ್ಯದರ್ಶಿ ಮಟ್ಟದ ಅಧಿಕಾರಿ ನೇಮಿಸಿ ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು.
3.ಪ್ರಧಾನಿ ನರೇಂದ್ರ ಮೋದಿ ನೆರೆ ಸಂತ್ರಸ್ತ ಪ್ರದೇಶಗಳ ಸಮೀಕ್ಷೆ ನಡೆಸಬೇಕು, ತಕ್ಷಣ ಕೇಂದ್ರ ಸರ್ಕಾರ 5 ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡಬೇಕು.
4. ಪ್ರವಾಹ ಪ್ರದೇಶದ ಗ್ರಾಮಗಳಲ್ಲಿ ಮುಂದಿನ ಒಂದು ವರ್ಷದವರೆಗೆ ತಾತ್ಕಾಲಿಕವಾಗಿ ಇಂದಿರಾ ಕ್ಯಾಂಟೀನ್ ಮಾದರಿಯಲ್ಲಿ ರಿಯಾಯಿತಿ ದರದಲ್ಲಿ ಆಹಾರ ಪೂರೈಕೆ ಮಾಡಲುವ್ಯವಸ್ಥೆ ಕಲ್ಪಿಸಬೇಕು.
7. ಭೂಕೊರೆತ ಹಾಳಾಗಿರುವ ಕೃಷಿ ಭೂಮಿಯನ್ನು ಹದಗೊಳಿಸಲು ಉದ್ಯೋಗ ಖಾತರಿ ಯೋಜನೆ (ನರೇಗಾ) ಅಡಿಯಲ್ಲಿ ಅನುದಾನ ನೀಡಬೇಕು.
8. ಈ ಪ್ರದೇಶಗಳ ಜನರಿಗೆ ಉದ್ಯೋಗ ಭರವಸೆ ನೀಡುವ ತಾತ್ಕಾಲಿಕ ಯೋಜನೆಯೊಂದನ್ನು ಪ್ರಾರಂಭಿಸಬೇಕು.
9.ಇಂದಿನಿಂದ ಕನಿಷ್ಠ 4 ತಿಂಗಳು ಪ್ರವಾಹ ಪೀಡಿತ, ಉದ್ಯೋಗ ನಷ್ಟ ಹೊಂದಿದ ಜನರಿಗೆ ಒಂದು ಕುಟುಂಬಕ್ಕೆ ಕನಿಷ್ಠ 25 ಸಾವಿರ ರೂಪಾಯಿಗಳ ಪರಿಹಾರ ಹಣ ನೀಡಬೇಕು.
10. ನೆರೆ ಜಿಲ್ಲೆಗಳ ವಿದ್ಯಾರ್ಥಿಗಳ ಸಿಇಟಿ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಬೇಕು. ಶಾಲಾ-ಕಾಲೇಜು, ವಿಶ್ವವಿದ್ಯಾಲಯ ಶುಲ್ಕಗಳನ್ನು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಸಂಗ್ರಹಿಸುವುದರಿಂದ ವಿನಾಯಿತಿ ನೀಡಬೇಕು.
11. ಸರ್ಕಾರಿ ನೇಮಕಾತಿ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ದಿನಾಂಕಗಳನ್ನು ಮುಂದೂಡಿ, ಹೊಸದಾಗಿ ಅರ್ಜಿ ಕರೆಯುವ ಪ್ರಕ್ರಿಯೆಯನ್ನು ಎರಡು ತಿಂಗಳ ನಂತರ ಆರಂಭಿಸಬೇಕು.
12. ಪ್ರವಾಹದಲ್ಲಿ ಕೊಚ್ಚಿಹೋಗಿರುವ ಶೈಕ್ಷಣಿಕ ದಾಖಲೆಗಳನ್ನು ತಕ್ಷಣ ಒದಗಿಸಲು ಎಸ್ಎಸ್ಎಲ್ ಸಿ ಮಂಡಲಿ, ಪಿಯುಸಿ ಮಂಡಳಿ ಮತ್ತು ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ ಉಚಿತವಾಗಿ ದಾಖಲೆಗಳ ಪ್ರತಿ ಒದಗಿಸಲು ಕ್ರಮ ಕೈಗೊಳ್ಳಬೇಕು.
13. ಪ್ರಸಕ್ತ ಶೈಕ್ಷಣಿಕ ವರ್ಷವನ್ನು ಜೂನ್ ಬದಲಿಗೆ ಸೆಪ್ಟೆಂಬರ್ ನಿಂದ ಮೇ ತಿಂಗಳವರೆಗೆ ಎಂದು ಘೋಷಿಸಬೇಕು. ಇದಕ್ಕಾಗಿ ಸೂಕ್ತ ಮಾರ್ಪಾಡುಗಳನ್ನು ಮಾಡಿಕೊಳ್ಳಬೇಕು.
14. ಪ್ರವಾಹ ಪೀಡಿತ ವಿದ್ಯಾರ್ಥಿಗಳ ಶಿಕ್ಷಣ ಶುಲ್ಕಕ್ಕೆ ವಿನಾಯಿತಿ ನೀಡಬೇಕು. ಪ್ರವಾಹದಲ್ಲಿ ಕೊಚ್ಚಿಹೋದ ಪುಸ್ತಕಗಳ ಮರುಮುದ್ರಣ ಮತ್ತು ವಿತರಣೆಗೆ ಸೂಕ್ತ ವ್ಯವಸ್ಥೆ ರೂಪಿಸಬೇಕು. ಜಿಲ್ಲಾವಾರು ಪುಸ್ತಕಗಳ ಹಂಚಿಕೆಗೆ ನೋಡಲ್ ಏಜೆನ್ಸಿ ರಚನೆಯಾಗಬೇಕು.
15. ಪ್ರವಾಹ ಪೀಡಿತರಿಗೆ ಸಾಂಕ್ರಾಮಿಕ ರೋಗಗಳು ಹರಡದಂತೆ ಆರೋಗ್ಯ ಇಲಾಖೆಯಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ವಿಶೇಷ ಆರೋಗ್ಯ ಶಿಬಿರಗಳನ್ನು ನಡೆಸಬೇಕು.
16. ಕೃಷಿಕನ ಆದಾಯ ನಷ್ಟವಾಗಿರುವ ಹಿನ್ನೆಲೆ ಆದಾಯಕ್ಕೆ ಪರ್ಯಾಯ ಮಾರ್ಗ ಸೃಷ್ಟಿಸಬೇಕು.
17. ಪ್ರವಾಹಪೀಡಿತ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಪ್ರಸಕ್ತ ಸಾಲಿಗೆ ಸೀಮಿತವಾಗಿ ಸರಕು ಮತ್ತು ಸೇವಾ ತೆರಿಗೆ - ಜಿಎಸ್ಟಿಯಿಂದ ವಿನಾಯಿತಿ ನೀಡಬೇಕು.
18.ಈ ಪ್ರದೇಶಗಳಲ್ಲಿ ದೇವಸ್ಥಾನ, ಗುಡಿಗಳು, ಮಸೀದಿಗಳು, ಚರ್ಚ್ ಗಳ ಪುನರ್ ನಿರ್ಮಾಣಕ್ಕೆ ಸಂಬಂಧಪಟ್ಟ ಇಲಾಖೆಯಿಂದ ಪುನರ್ ನಿರ್ಮಾಣ ಅಥವಾ ದುರಸ್ಥಿ ಮಾಡಬೇಕು.
19. ಸಂತ್ರಸ್ಥರ ಅನುಕೂಲಕ್ಕೆ ತಾತ್ಕಾಲಿಕವಾಗಿ ಶೆಡ್ ಗಳನ್ನು ನಿರ್ಮಿಸಬೇಕು.
20. ಮನೆ, ಬೆಳೆ ಹಾನಿ, ಮೃತರ ಕುಟುಂಬಗಳಿಗೆ, ತಾತ್ಕಾಲಿನ ಪರಿಹಾರಗಳನ್ನು ಶೀಘ್ರವಾಗಿ ತಲುಪಿಸಬೇಕೆಂದು ಸರ್ಕಾರಕ್ಕೆ ಸಮಿತಿ ಶಿಫಾರಸ್ಸು ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com