ಐಎಂಎ ಹಗರಣ ಸಿಬಿಐ ತನಿಖೆಗೆ ವಹಿಸಿದ ರಾಜ್ಯ ಸರ್ಕಾರ, ವರದಿ ಸಲ್ಲಿಸಲು ಹೈಕೋರ್ಟ್ ಸೂಚನೆ

ಬಹುಕೋಟಿ ಐಎಂಎ(ಐ-ಮಾನಿಟರಿ ಅಡ್ವೈಸರಿ) ಹಗರಣವನ್ನು ಸಿಬಿಐ ತನಿಖೆಗೆ ವಹಿಸಿ ಆದೇಶ ಹೊರಡಿಸಲಾಗಿದೆ ಎಂದು ರಾಜ್ಯ ಸರ್ಕಾರ ಮಂಗಳವಾರ ಹೈಕೋರ್ಟ್ ಗೆ ಮಾಹಿತಿ ನೀಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬಹುಕೋಟಿ ಐಎಂಎ(ಐ-ಮಾನಿಟರಿ ಅಡ್ವೈಸರಿ) ಹಗರಣವನ್ನು ಸಿಬಿಐ ತನಿಖೆಗೆ ವಹಿಸಿ ಆದೇಶ ಹೊರಡಿಸಲಾಗಿದೆ ಎಂದು ರಾಜ್ಯ ಸರ್ಕಾರ ಮಂಗಳವಾರ ಹೈಕೋರ್ಟ್ ಗೆ ಮಾಹಿತಿ ನೀಡಿದೆ.

ಐಎಂಎ ಹಗರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ವಕೀಲ ಮುಯೀಜ್ ಅಹಮದ್ ಖಾನ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವಡಗಿ ಅವರು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ನ್ಯಾಯಪೀಠಕ್ಕೆ ಈ ಮಾಹಿತಿ ನೀಡಿದರು.

ಸದ್ಯ ಎಸ್​ಐಟಿ ಪ್ರಕರಣದ ತನಿಖೆ ನಡೆಸುತ್ತಿದ್ದು, ಈಗ ಅದನ್ನು ಸಿಬಿಐಗೆ ವಹಿಸಲಾಗಿದೆ ಎಂದು ನಾವಡಗಿ ಹೈಕೋರ್ಟ್​ಗೆ ತಿಳಿಸಿದರು. ಅಲ್ಲದೆ ಎಸ್​ಐಟಿ ತನಿಖಾ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಐಎಂಎ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನೂ ಸಿಬಿಐಗೆ ಸಲ್ಲಿಸಬೇಕು. ಸಿಬಿಐ ಈ ಕೂಡಲೇ ತನಿಖೆ ಆರಂಭಿಸಿ ಸೆ.12ರಂದು ಪ್ರಾಥಮಿಕ ವರದಿ ಸಲ್ಲಿಸಬೇಕು ಎಂದು ಹೈಕೋರ್ಟ್​ ಸೂಚನೆ ನೀಡಿದೆ.

ಅಧಿಕ ಬಡ್ಡಿ ನೀಡುವುದಾಗಿ ಹಣ ಪಡೆದು ಸಾವಿರಾರು ಗ್ರಾಹಕರನ್ನು ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಂಎ ಸಂಸ್ಥೆ ವಿರುದ್ಧ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಈ ಸಂಬಂಧ ತನಿಖೆಗೆ ವಿಶೇಷ ತನಿಖಾ ತಂಡ(ಎಸ್ ಐಟಿ) ರಚಿಸಲಾಗಿತ್ತು. ಇದೀಗ ಪ್ರಕರಣವನ್ನು ಎಸ್ಐಟಿಯಿಂದ ಸಿಬಿಐಗೆ ವರ್ಗಾಯಿಸಲಾಗಿದೆ.

ಈಗಾಗಲೇ ಜಾರಿ ನಿರ್ದೇಶನಾಲಯ, ಐಎಂಎಗೆ ಸಂಬಂಧಿಸಿದ ಆಸ್ತಿಯನ್ನು ಜಪ್ತಿ ಮಾಡಿಕೊಂಡು ತನಿಖೆ ನಡೆಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com