ವೈಟ್ ಟಾಪಿಂಗ್ ಅವ್ಯವಹಾರ: ದೊಡ್ಡಿಹಾಳ್ ನೇತೃತ್ವದ ಸಮಿತಿಯಿಂದ ತನಿಖೆ-ಸರ್ಕಾರದ ಆದೇಶ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ನಡೆದಿದ್ದ ಟೆಂಡರ್ ಶ್ಯೂರ್ ಹಾಗೂ ವೈಟ್ ಟಾಪಿಂಗ್ ಯೋಜನೆಗಳಲ್ಲಿ ನಡೆದಿರುವ ಅವ್ಯವಹಾರ ಆರೋಪಗಳ ತನಿಖೆಗೆ ಕೆಯುಐಡಿಎಫ್ ಸಿ ಮುಖ್ಯ ಅಭಿಯಂತರರಾದ ಕ್ಯಾಪ್ಟನ್ ಆರ್.ಆರ್. ದೊಡ್ಡಿಹಾಳ್ ನೇತೃತ್ವದ ವಿಶೇಷ ಸಮಿತಿ ರಚಿಸಿ ಸರ್ಕಾರ ಆದೇಶ ಹೊರಡಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ನಡೆದಿದ್ದ ಟೆಂಡರ್ ಶ್ಯೂರ್ ಹಾಗೂ ವೈಟ್ ಟಾಪಿಂಗ್ ಯೋಜನೆಗಳಲ್ಲಿ ನಡೆದಿರುವ ಅವ್ಯವಹಾರ ಆರೋಪಗಳ ತನಿಖೆಗೆ ಕೆಯುಐಡಿಎಫ್ ಸಿ ಮುಖ್ಯ ಅಭಿಯಂತರರಾದ ಕ್ಯಾಪ್ಟನ್ ಆರ್.ಆರ್. ದೊಡ್ಡಿಹಾಳ್ ನೇತೃತ್ವದ ವಿಶೇಷ ಸಮಿತಿ ರಚಿಸಿ ಸರ್ಕಾರ ಆದೇಶ ಹೊರಡಿಸಿದೆ. 

ಬಿಬಿಎಂಪಿ ವ್ಯಾಪ್ತಿಯಲ್ಲಿ ಸರ್ಕಾರದ ಅನುದಾನದಲ್ಲಿ 2016-17ನೇ ಸಾಲಿನಲ್ಲಿ 800 ಕೋಟಿ ರೂ. ಅನುದಾನದಲ್ಲಿ ಟೆಂಡರ್ ಶ್ಯೂರ್ ಮಾದರಿಯಲ್ಲಿ ಅಭಿವೃದ್ಧಿಪಡಿಸಿದ್ದ  ಮೊದಲ ಹಂತದ 12 ಹಾಗೂ ಎರಡನೇ ಹಂತದ 13 ರಸ್ತೆಗಳ ಕಾಮಗಾರಿ ಹಾಗೂ 690 ಕೋಟಿ ರೂ. ವೆಚ್ಚದ ವೈಟ್ ಟಾಪಿಂಗ್ ಯೋಜನೆಗಳು ಹಾಗೂ 3ನೇ ಹಂತದ ವೈಟ್ ಟಾಪಿಂಗ್ ಯೋಜನೆಗಳ ಬಗ್ಗೆ ತನಿಖೆ ನಡೆಸಲು ಮುಂದಾಗಿದೆ. 

ಸಮಿತಿಯಲ್ಲಿ ಬಿಐಟಿ ಪ್ರಾಂಶುಪಾಲ ಹಾಗೂ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಇಂಜಿನಿಯರ್ಸ್ ಅಧ್ಯಕ್ಷ ಡಾ.ಅಶ್ವತ್ ಎಂ.ಯು, ಬಿಎಂಎಸ್ ಕಾಲೇಜ್ ಆಫ್ ಇಂಜಿನಿಯರಿಂಗ್ ಪ್ರೊಫೆಸರ್ ಡಾ.ಎಚ್.ಎಸ್.ಜಗದೀಶ್, ಲೋಕೋಪಯೋಗಿ ಇಲಾಖೆಯ ನಿವೃತ್ತ ಕಾರ್ಯಪಾಲಕ ಅಭಿಯಂತರರಾದ ಬಸವರಾಜ್ ಎನ್.ಸಂಶಿಮಠ, ಇಲಾಖೆಯ ನಿವೃತ್ತ ಅಧೀಕ್ಷಕ ಅಭಿಯಂತರರಾದ ಎ.ನಾಗೇಂದ್ರ ಸಮಿತಿಯ ಸದಸ್ಯರಾಗಿದ್ದಾರೆ. 

ಈ ಸಮಿತಿ ಟೆಂಡರ್ ಶ್ಯೂರ್ ಹಾಗೂ ವೈಟ್ ಟಾಪಿಂಗ್ ಯೋಜನೆಗಳ ವಿನ್ಯಾಸ ಮತ್ತು ಅಂದಾಜುಗಳನ್ನು ಪರಿಶೀಲಿಸಿ, ಅನುದಾನದ ದುರುಪಯೋಗವಾಗಿದೆಯೇ ಎಂಬುದರ ಕುರಿತು ವರದಿ ಸಲ್ಲಿಸಬೇಕು. ಯೋಜನೆಗಳ ಅನುಷ್ಠಾನದ ಗುಣಮಟ್ಟದ ಪರಿಶೀಲನೆ, ಬೆಂಗಳೂರು ನಗರಕ್ಕೆ ಟೆಂಡರ್ ಶ್ಯೂರ್ ಮತ್ತು ವೈಟ್ ಟಾಪಿಂಗ್ ಯೋಜನೆಗಳ ನಿರ್ಮಾಣದ ಪ್ರಸ್ತುತತೆಯ ಕುರಿತು ವರದಿ ನೀಡುವುದು, ಯೋಜನೆಗಳ ವೆಚ್ಚವನ್ನು ಕಡಿಮೆ ಮಾಡಲು ಮಾರ್ಗೋಪಾಯಗಳನ್ನು ಸೂಚಿಸುವುದು, ಕಾಮಗಾರಿ ಗುಣನಿಯಂತ್ರಣಕ್ಕೆ ಮಾರ್ಗೋಪಾಯಗಳನ್ನು ಸೂಚಿಸುವುದು ಮುಂತಾದ ವಿಷಯಗಳ ಬಗ್ಗೆ 15 ದಿನಗಳಲ್ಲಿ ವರದಿ ಸಲ್ಲಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಅಧ್ಯಕ್ಷರು, ಸದಸ್ಯರಿಗೆ ಕಚೇರಿ ವ್ಯವಸ್ಥೆ , ಪ್ರಯಾಣ ಮತ್ತು ವಸತಿಗೆ ವ್ಯವಸ್ಥೆ ಕಲ್ಪಿಸುವಂತೆ ಬಿಬಿಎಂಪಿ ಆಯುಕ್ತರಿಗೆ ಸರ್ಕಾರ ಸೂಚಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com