ಮೈಸೂರು ದಸರಾ ಪ್ರಚಾರಕ್ಕಾಗಿ 24/7 ಕಾಲ್ ಸೆಂಟರ್: ವಿ. ಸೋಮಣ್ಣ

ದಸರಾ ಹಬ್ಬದ ಆಚರಣೆಯಲ್ಲಿ ಆಧುನಿಕ ತಂತ್ರಜ್ಞಾನ ಬಳಕೆಗೆ  ಆದ್ಯತೆ ನೀಡಲಾಗುತ್ತಿದ್ದು, 24/7 ಕಾಲ್  ಸೆಂಟರ್ ತೆರೆದು ಕೇವಲ ರಾಜ್ಯ ಮಾತ್ರವಲ್ಲದೆ ಹೊರ ರಾಜ್ಯ ಹಾಗೂ  ದೇಶಗಳಲ್ಲೂ ದಸರಾ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಸಚಿವ ಸೋಮಣ್ಣ ತಿಳಿಸಿದ್ದಾರೆ. 
ಸೋಮಣ್ಣ
ಸೋಮಣ್ಣ

ಮೈಸೂರು: ದಸರಾ ಹಬ್ಬದ ಆಚರಣೆಯಲ್ಲಿ ಆಧುನಿಕ ತಂತ್ರಜ್ಞಾನ ಬಳಕೆಗೆ  ಆದ್ಯತೆ ನೀಡಲಾಗುತ್ತಿದ್ದು, 24/7 ಕಾಲ್  ಸೆಂಟರ್ ತೆರೆದು ಕೇವಲ ರಾಜ್ಯ ಮಾತ್ರವಲ್ಲದೆ ಹೊರ ರಾಜ್ಯ ಹಾಗೂ  ದೇಶಗಳಲ್ಲೂ ದಸರಾ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಸಚಿವ ಸೋಮಣ್ಣ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಸಂಪ್ರದಾಯ ಬದ್ಧವಾಗಿ ಮೊದಲಿನಂತೆ ದಸರಾ ಹಬ್ಬ ನಡೆಯಲಿದೆ. ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ತೊಂದರೆ ಆಗದಂತೆ ಜನನಿಬಿಡ ಪ್ರದೇಶದಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಪಾಸ್ ವಿತರಣೆಯಲ್ಲಿ ಸಮಸ್ಯೆಯಾಗದಂತೆ ತಾವೇ ಖುದ್ದಾಗಿ ಫಲತಾಂಬೂಲದ ಮೂಲಕ ಶಾಸಕರು ಹಾಗೂ ಸಂಸದರಿಗೆ ಪಾಸ್ ನೀಡುತ್ತೇನೆ. ಸೆಪ್ಟೆಂಬರ್ 29ರಂದು ದಸರಾ ಮಹೋತ್ಸವಕ್ಕೆ ಚಾಲನೆ ದೊರೆಯಲಿದೆ. ಅಂದು ಚಾಮುಂಡಿ ಬೆಟ್ಟದಲ್ಲಿ ವೃಶ್ಚಿಕ ಲಗ್ನದಲ್ಲಿ ನಾಡಿನ ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪನವರು ಈ ಬಾರಿಯ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಅಕ್ಟೊಬರ್‌ 8 ರಂದು ಮಧ್ಯಾಹ್ನ 2:15 ರಿಂದ 2:58 ರೊಳಗೆ ಶುಭಲಗ್ನದಲ್ಲಿ ಅರಮನೆಯಲ್ಲಿ ಪೂಜೆ ಸಲ್ಲಿಸಲಾಗುತ್ತದೆ. ನಂತರ ಸಂಜೆ 4:30 ರಿಂದ 4:58 ರಲ್ಲಿ  ಮಕರ ಶುಭಲಗ್ನದಲ್ಲಿ ಎಸ್ ಎಲ್ ಬೈರಪ್ಪ ಹಾಗೂ ಮುಖ್ಯಮಂತ್ರಿಗಳು ದಸರಾ ಜಂಬೂ ಸವಾರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.

ಈ ಬಾರಿಯ ದಸರಾದಲ್ಲಿ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಸೋಮವಾರ ಜಿಲ್ಲೆಯ ಜನ ಪ್ರತಿನಿಧಿಗಳೊಂದಿಗೆ ಮತ್ತೊಂದು ಸಭೆ ನಡೆಸುತ್ತೇನೆ. ಸ್ಥಳೀಯ ಶಾಸಕರು, ಪಾಲಿಕೆ , ಜಿಲ್ಲಾ ಪಂಚಾಯಿತಿ ಸದಸ್ಯರ ಸಭೆ ನಡೆಸಿ ಚರ್ಚಿಸುತ್ತೇನೆ ಎಂದರು.

ಗಜಪಡೆ ಸೋಮವಾರ ಅರಮನೆ ಪ್ರವೇಶ ಮಾಡಲಿದೆ. ಹೀಗಾಗಿ ಆನೆಗಳ ಜತೆ ಬಂದಿರುವ ಮಾವುತರು, ಕವಾಡಿಗಳಿಗೆ ಉತ್ತಮ ಮೂಲ ಸೌಕರ್ಯ ಒದಗಿಸಲಾಗುತ್ತದೆ. ಒಂದು ದಿನ ಮೈಸೂರು ಪೌರ ಕಾರ್ಮಿಕರಿಗೆ ಔತಣ ಕೂಟ ಏರ್ಪಡಿಸುತ್ತೇವೆ ಎಂದು ತಿಳಿಸಿದರು.

ದಸರಾ ಸಂಬಂಧ ಎಲ್ಲರೂ ಕೊಡುವ ಸಲಹೆಗಳನ್ನು ಸ್ವೀಕರಿಸಿ, ರಾಜವಂಶಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುವುದು. ಅದೇ ಅವಧಿಯಲ್ಲಿ ಜಯಚಾಮರಾಜೇಂದ್ರ ಒಡೆಯರ್ ಜನ್ಮಶತಾಬ್ದಿಯೂ ಬಂದಿರುವುದರಿಂದ ಅದಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಇದು ಸರ್ಕಾರಿ ಕಾರ್ಯಕ್ರಮವಲ್ಲ. ಆದ್ದರಿಂದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ದಸರಾ ಆಚರಣೆ ಮಾಡಲಾಗುವುದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com