ಅನುದಾನ ಕೊರತೆ; ತೂಗುಯ್ಯಾಲೆಯಲ್ಲಿ ಇಂದಿರಾ ಕ್ಯಾಂಟೀನ್ ಭವಿಷ್ಯ

ಅನುದಾನ ಮೀಸಲಿರಿಸುವಲ್ಲಿ ನಿರ್ಲಕ್ಷ್ಯ ಹಾಗೂ ಅವ್ಯವಹಾರದ ವಾಸನೆಯಿಂದ ನಲುಗುತ್ತಿರುವ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ‘ಇಂದಿರಾ ಕ್ಯಾಂಟೀನ್ ’ ಮುಚ್ಚುವ ಪರಿಸ್ಥಿತಿ ತಲುಪಿದೆ. 
ಇಂದಿರಾ
ಇಂದಿರಾ

ಬೆಂಗಳೂರು: ಅನುದಾನ ಮೀಸಲಿರಿಸುವಲ್ಲಿ ನಿರ್ಲಕ್ಷ್ಯ ಹಾಗೂ ಅವ್ಯವಹಾರದ ವಾಸನೆಯಿಂದ ನಲುಗುತ್ತಿರುವ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ‘ಇಂದಿರಾ ಕ್ಯಾಂಟೀನ್ ’ ಮುಚ್ಚುವ ಪರಿಸ್ಥಿತಿ ತಲುಪಿದೆ. 
  
ಆರಂಭದ ಎರಡು ವರ್ಷಗಳಲ್ಲಿ ಕ್ಯಾಂಟೀನ್ ಗೆ ಅನುದಾನ ಮೀಸಲಿರಿಸಿದ್ದ ಸರ್ಕಾರ, 2019-20 ನೇ ಸಾಲಿನ ಬಜೆಟ್ ನಲ್ಲಿ ಯಾವುದೇ ಅನುದಾನ ನೀಡಿಲ್ಲ. ಇತ್ತ ಬಿಬಿಎಂಪಿ ಕೂಡ, ಅದು ಸರ್ಕಾರಿ ಯೋಜನೆಯಾದ್ದರಿಂದ ಬಜೆಟ್ ನಲ್ಲಿ ಅನುದಾನ ಘೋಷಿಸಿಲ್ಲ. ಇದರಿಂದ ಕ್ಯಾಂಟೀನ್‌ ನಿರ್ವಹಣೆಗೆ ಈ ಹಿಂದಿನ ಗುತ್ತಿಗೆ ಅವಧಿ ಆ.15ಕ್ಕೆ ಕೊನೆಗೊಂಡಿದೆ. 15 ದಿನಗಳ ಮಟ್ಟಿಗೆ ಈ ಹಿಂದಿನ ಗುತ್ತಿಗೆದಾರರ ಮೂಲಕವೇ ತಾತ್ಕಾಲಿಕವಾಗಿ ಇವುಗಳನ್ನು ನಿರ್ವಹಿಸಲು ಪಾಲಿಕೆ ಕ್ರಮ ಕೈಗೊಂಡಿತ್ತು.
  
ಪಾಲಿಕೆ ಸಭೆಯಲ್ಲಿ ಈ ವಿವರ ನೀಡಿದ ಆಯುಕ್ತ ಮಂಜುನಾಥ್ ಪ್ರಸಾದ್, ನಗರದಲ್ಲಿ 173 ಇಂದಿರಾ ಕ್ಯಾಂಟೀನ್ ಹಾಗೂ 18 ಮೊಬೈಲ್ ಕ್ಯಾಂಟೀನ್ ಗಳಿವೆ. ಇದರಲ್ಲಿ 2017-18ರಲ್ಲಿ 4.6 ಕೋಟಿ, 2018-19ರಲ್ಲಿ 7.70 ಕೋಟಿ ಹಾಗೂ 2019-20ರಲ್ಲಿ 2.70  ಕೋಟಿ ಸೇರಿ ಒಟ್ಟು 14.47 ಕೋಟಿ ಜನರು ಆಹಾರ ಸೇವಿಸಿದ್ದಾರೆ. 
  
2018-19ರಲ್ಲಿ ಸರ್ಕಾರ ನೂರು ಕೋಟಿ ರೂ. ಅನುದಾನ ನೀಡಿತ್ತಾದರೂ, ಅದರಲ್ಲಿ 124.37 ಕೋಟಿ ರೂ. ವೆಚ್ಚವಾಗಿತ್ತು. ಎರಡನೇ ವರ್ಷ ಕೂಡ ಬಿಬಿಎಂಪಿಯೇ ಅನುದಾನಕ್ಕಿಂತ ಹೆಚ್ಚು 22 ಕೋಟಿ ರೂ. ವೆಚ್ಚ ಮಾಡಿತ್ತು. 2019-20ರಲ್ಲಿ ಕ್ಯಾಂಟೀನ್ ಗೆ ಸೂಕ್ತ ಅನುದಾನ ಬಿಡುಗಡೆ ಮಾಡುವಂತೆ ಮೂರು ಪತ್ರಗಳನ್ನು ಬರೆಯಲಾಗಿದೆಯಾದರೂ, ಅದನ್ನು ಸರ್ಕಾರ ಪರಿಗಣಿಸಿಲ್ಲ. ಹೀಗೆ ಮುಂದುವರಿದಲ್ಲಿ ಅನಿವಾರ್ಯವಾಗಿ ಇಂದಿರಾ ಕ್ಯಾಂಟೀನ್ ಅನ್ನು ಮುಚ್ಚುವ ಪರಿಸ್ಥಿತಿ ಬರಲಿದೆ ಎಂದರು. 
  
ಇದಕ್ಕೂ ಮುನ್ನ ಆಡಳಿತ ಪಕ್ಷದ ನಾಯಕ ಅಬ್ದುಲ್‌ ವಾಜೀದ್‌ , ಸರ್ಕಾರ ಇಂದಿರಾ ಕ್ಯಾಂಟೀನ್‌ ಕುರಿತು ತನಿಖೆಗೆ ಆದೇಶಿಸುವ ಮೂಲಕ ಅವುಗಳನ್ನು ಮುಚ್ಚಲು  ಹುನ್ನಾರ ನಡೆಸಿದೆ. ಲಕ್ಷಾಂತರ ಮಂದಿಗೆ ಕಡಿಮೆ ದರದಲ್ಲಿ ಆಹಾರ ವಿತರಿಸುತ್ತಿರುವ  ಇಂದಿರಾ ಕ್ಯಾಂಟೀನ್‌ ಸ್ಥಗಿತಗೊಳಿಸಬಾರದು. ಅದರ ಹೆಸರನ್ನೂ ಬದಲಾಯಿಸಬಾರದು. ಇಂದಿರಾ ಕ್ಯಾಂಟೀನ್‌ಗೆ ಹಣದ ಕೊರತೆ ಎದುರಾದರೆ ಪಾಲಿಕೆಯ ಕಲ್ಯಾಣ ಕಾರ್ಯಕ್ರಮಗಳ ಹಣವನ್ನಾದರೂ ಬಳಸಿ ಅದನ್ನು ಮುಂದುವರಿಸಬೇಕು ಎಂದು ಒತ್ತಾಯಿಸಿದರು.
  
ಕಾಂಗ್ರೆಸ್‌ ಸದಸ್ಯ ಸಂಪತ್‌ ರಾಜ್‌, ಬಿಜೆಪಿಯವರು ಬೇಕಿದ್ದರೆ ವಾಜಪೇಯಿ ಕ್ಯಾಂಟೀನ್‌ ಆರಂಭಿಸಿ ಇದಕ್ಕಿಂತ ಉತ್ತಮ ಆಹಾರ ನೀಡಲಿ. ಆದರೆ ಈಗಿರುವ ಕ್ಯಾಂಟೀನ್‌ ನಿಲ್ಲಿಸಬಾರದು ಎಂದು ಕೋರಿದರು.
  
ಮಧ್ಯಪ್ರವೇಶಿಸಿದ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ, ಸಮ್ಮಿಶ್ರ ಸರ್ಕಾರ ಇಂದಿರಾ ಕ್ಯಾಂಟೀನ್ ಗೆ ಅನುದಾನ ನೀಡದಿರುವುದೇ ಈ ಎಲ್ಲಾ ಸಮಸ್ಯೆಗೆ ಕಾರಣವಾಗಿದೆ. ಅಲ್ಲಿ ಅವ್ಯವಹಾರದ ಆರೋಪಗಳು ಕೇಳಿ ಬಂದಿರುವುದರಿಂದ ತನಿಖೆಗೆ ಆದೇಶಿಸಲಾಗಿದೆ. ಸುಮ್ಮನೆ ಸರ್ಕಾರದ ಮೇಲೆ ಗೂಬೆ ಕೂರಿಸುವ ಅಗತ್ಯವಿಲ್ಲ ಎಂದು ಕಿಡಿಕಾರಿದರು. 
  
ಈ ನಡುವೆ, ವರ್ಗಾವಣೆಗೊಂಡಿರುವ ಆಯುಕ್ತ ಮಂಜುನಾಥ್ ಪ್ರಸಾದ್ ಅವರನ್ನು ಪ್ರಸಕ್ತ ಸದಸ್ಯರ ಅವಧಿ ಪೂರ್ಣಗೊಳ್ಳುವರೆಗೆ ಮುಂದುವರಿಸುವಂತೆ ಸರ್ಕಾರವನ್ನು ಒತ್ತಾಯಿಸಲು ನಿರ್ಣಯ ಕೈಗೊಳ್ಳಲಾಯಿತು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com