ಕೆಎಂಎಫ್ ನಲ್ಲಿ ಕೊನೆಗೂ ಹೆಚ್.ಡಿ.ರೇವಣ್ಣ ದರ್ಬಾರ್ ಅಂತ್ಯ!

ಸುಮಾರು 15 ವರ್ಷಗಳ ಕಾಲ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ದಲ್ಲಿ ಅಧ್ಯಕ್ಷರಾಗಿದ್ದ ಹೆಚ್ ಡಿ ರೇವಣ್ಣ ಅವರ ಪಾರುಪತ್ಯ ಅಂತ್ಯಗೊಂಡಿದ್ದು, ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವಿರೋಧ ಆಯ್ಕೆಯಾಗಿದ್ದಾರೆ.
ಕೆಎಂಎಫ್ ನಲ್ಲಿ ಕೊನೆಗೂ ಹೆಚ್.ಡಿ.ರೇವಣ್ಣ ದರ್ಬಾರ್ ಅಂತ್ಯ!

ಬೆಂಗಳೂರು: ಸುಮಾರು 15 ವರ್ಷಗಳ ಕಾಲ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ದಲ್ಲಿ ಅಧ್ಯಕ್ಷರಾಗಿದ್ದ ಹೆಚ್ ಡಿ ರೇವಣ್ಣ ಅವರ ಪಾರುಪತ್ಯ ಅಂತ್ಯಗೊಂಡಿದ್ದು, ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವಿರೋಧ ಆಯ್ಕೆಯಾಗಿದ್ದಾರೆ.

ಮಾಜಿ ಸಚಿವ, ಜೆಡಿಎಸ್ ಮುಖಂಡ ಹೆಚ್ ಡಿ ರೇವಣ್ಣ ಅವರಿಗೆ ಕೊನೆಗೂ ಬಿಜೆಪಿ ಸರ್ಕಾರ ತಕ್ಕ ಹೊಡೆತ ನೀಡಿ, ಪ್ರಾಬಲ್ಯ ಮುರಿದಿದೆ. ಈ ಮೂಲಕ  ಕೆಎಂಎಫ್ ನಲ್ಲಿ ರೇವಣ್ಣ ಅವರ ನಿರಂತರ ಪ್ರಭಾವ ಕೊನೆಗೊಂಡಂತಾಗಿದೆ. ಅಧ್ಯಕ್ಷ ಸ್ಥಾನ ತಪ್ಪಿರುವುದಕ್ಕೆ ಬೇಸರವಿಲ್ಲ,  ರೈತರಿಗೆ ಅನುಕೂಲವಾಗುವುದು ಮುಖ್ಯವೇ ಹೊರತು ಅಧಿಕಾರವಲ್ಲ ಎಂದು ಮಾಜಿ ಸಚಿವ ಹೆಚ್ ಡಿ ರೇವಣ್ಣ  ಚುನಾವಣೆಯ ಬಳಿಕ ಪ್ರತಿಕ್ರಿಯೆ ನೀಡಿದ್ದಾರೆ. ಮೈತ್ರಿ ಸರ್ಕಾರದಲ್ಲಿ   ರೇವಣ್ಣ ಕೆಎಂಎಫ್ ಅಧ್ಯಕ್ಷಸ್ಥಾನದ ಮೇಲೆ ಕಣ್ಣಿಟ್ಟಿದ್ದರು. ಆದರೆ, ಕಾಂಗ್ರೆಸ್​ನಿಂದ ಭೀಮಾ ನಾಯಕ್ ಕೆಎಂಎಫ್​  ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ನಿರ್ಧರಿಸಿದ್ದರಿಂದ ಮೈತ್ರಿ ಪಕ್ಷಗಳ ನಾಯಕರಲ್ಲಿ  ಈ ವಿಷಯಕ್ಕಾಗಿ ಕಿತ್ತಾಟ ಶುರುವಾಗಿತ್ತು. ಆದರೆ ಶನಿವಾರ ನಡೆದ ಕೆಎಂಎಫ್ ಚುನಾವಣೆಯಲ್ಲಿ ಬಿಜೆಪಿಯಿಂದ ಬಾಲಚಂದ್ರ ಜಾರಕಿಹೊಳಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲು ನಿರ್ಧರಿಸಿದ್ದರಿಂದ ರೇವಣ್ಣ ಚುನಾವಣಾ ಕಣದಿಂದ ದೂರ ಸರಿದು, ಅಂತರ ಕಾಯ್ದುಕೊಂಡಿದ್ದರು.

ಕೆಲವು ದಿನಗಳ ಹಿಂದೆಯೇ ಹೆಚ್ ಡಿ ರೇವಣ್ಣ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರಾದರೂ ಶನಿವಾರ ರೇವಣ್ಣ ನಾಮಪತ್ರದ ಸೂಚಕರೊಬ್ಬರು ನಾಮಪತ್ರ ಹಿಂಪಡೆದರು. ಸುದ್ದಿಗಾರರೊಂದಿಗೆ ಮಾತನಾಡಿದ ರೇವಣ್ಣ,  ಬಾಲಚಂದ್ರ ಜಾರಕಿಹೊಳಿ ಜೆಡಿಎಸ್ ಪಕ್ಷದಲ್ಲಿ ಇದ್ದವರು. ತಮ್ಮೊಂದಿಗೆ ಮಾತುಕತೆ ನಡೆಸಿ ಚುನಾವಣೆಗೆ ಬೆಂಬಲ ಕೋರಿದ್ದರು. ಇದಕ್ಕೆ ಒಪ್ಪಿಕೊಂಡಿದ್ದೇನೆ. ನನ್ನಿಂದ ಗೌಡರ ಕುಟುಂಬಕ್ಕೆ ತೊಂದರೆಯಾಗಬಾರದು. ನಾಯಕ ಸಮಾಜದವರು ಕೆಎಂಎಫ್ ಗೆ ಅಧ್ಯಕ್ಷರಾಗಿದ್ದಾರೆ ಆಗಲಿ ಬಿಡಿ ಎಂದರು. ಕಾಂಗ್ರೆಸ್‍ ನ ಭೀಮಾನಾಯಕ್ ಸಹ ತಮಗೆ ಬೆಂಬಲ ಸೂಚಿಸಲು ಬಂದಿದ್ದರು. ಆದರೆ ಪ್ರಸಕ್ತ ಸನ್ನಿವೇಶದಲ್ಲಿ ಇದು ಬೇಡ ಎಂದು ಹೇಳಿದೆ. ರೇವಣ್ಣನನ್ನು ರಾಜಕೀಯವಾಗಿ ಮುಗಿಸಲೇಬೇಕೆಂದು ಯಡಿಯೂರಪ್ಪ ಹೊರಟಿದ್ದಾರೆ. ಇಂತಹದ್ದೆಲ್ಲವನ್ನು ಬಹಳಷ್ಟು ಬಾರಿ ಅನುಭವಿಸಿರುವ ತಮ್ಮನ್ನು ರಾಜಕೀಯವಾಗಿ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ರೇವಣ್ಣ ಸವಾಲು ಹಾಕಿದರು.

ಮುಖ್ಯಮಂತ್ರಿ ಯಡಿಯೂರಪ್ಪ, ಚಿಕ್ಕಮಗಳೂರು ಹಾಗೂ ಹಾಸನ ಎರಡೂ ಜಿಲ್ಲೆಗಳಿಗೆ ಸೇರಿ  ಒಂದೇ ಹಾಲು ಒಕ್ಕೂಟ ರಚನೆ ಮಾಡುವ ನಿರ್ಧಾರವನ್ನು ಕೈಗೊಂಡಿರುವುದಕ್ಕೆ ರೇವಣ್ಣ, ಯಾರೂ  ಏನೇ ಮಾಡಿದರೂ ಏನನ್ನೇ ವಿಭಾಗ ಮಾಡಿದರೂ ನನಗೇನು ಎನ್ನುವ ಮೂಲಕ ಹತಾಶೆ  ವ್ಯಕ್ತಪಡಿಸಿದರು.

ಹಾಸನ ಹಾಲು ಒಕ್ಕೂಟದಲ್ಲಿ  ಅತಿಹೆಚ್ಚಿನ ಪ್ರಭಾವ ಹೊಂದಿರುವ ರೇವಣ್ಣ ವರ್ಚಸ್ಸನ್ನು ತಗ್ಗಿಸುವ ಪ್ರಯತ್ನಕ್ಕೆ  ಬಿಜೆಪಿ ಮುಂದಾಗಿದ್ದು, ಈ ಮೂಲಕ ಹಾಸನದಲ್ಲಿ ಜೆಡಿಎಸ್​ ಪ್ರಭಾವ ತಗ್ಗಿಸುವ ಯೋಜನೆ  ರೂಪಿಸಲಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಇಬ್ಬರು ಬಿಜೆಪಿ ನಾಯಕರಿದ್ದು, ಹಾಸನದಲ್ಲಿ  ಹಂತಹಂತವಾಗಿ ರೇವಣ್ಣ ಹಿಡಿತ ತಪ್ಪಿಸಲು ಯಡಿಯೂರಪ್ಪ ಮುಂದಾಗಿದ್ದಾರೆ. ಇದೇ ಕಾರಣಕ್ಕೆ ಈ  ಬಾರಿ ಅವರ ಕಣ್ಣು ಹಾಸನ ಹಾಲು ಒಕ್ಕೂಟದ ಮೇಲೆ ಬಿದ್ದಿದೆ ಎನ್ನಲಾಗಿದೆ. ಹಾಸನ ಹಾಲು ಒಕ್ಕೂಟ ಅತಿ ಹೆಚ್ಚು ಲಾಭವನ್ನು ತರುತ್ತಿರುವ ಹಿನ್ನೆಲೆಯಲ್ಲಿ ಹೆಚ್. ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದಲ್ಲಿ ಹಾಸನದಲ್ಲಿ ಮೆಗಾ ಡೈರಿ ಸ್ಥಾಪನೆಗೆ 500 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com