ಸಿಲಿಕಾನ್ ಸಿಟಿಯಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಆರ್ಭಟ: ಪೇದೆಗೆ ಚಾಕು ಇರಿದಿದ್ದ ಆರೋಪಿಗೆ ಗುಂಡೇಟು

ಸಿಲಿಕಾನ್ ಸಿಟಿಯಲ್ಲಿ ಮತ್ತೆ ಪೊಲೀಸರ ಗನ್ ಆರ್ಭಟಿಸಿದ್ದು, ಎರಡು ದಿನಗಳ ಹಿಂದೆ ಪೊಲೀಸ್ ಸಿಬ್ಬಂದಿಗೆ ಚಾಕು ಹಾಕಿದ್ದ ದುಷ್ಕರ್ಮಿಗೆ ಖಾಕಿ ಪಡೆ ಗುಂಡಿಕ್ಕಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಪೊಲೀಸರ ಗನ್ ಆರ್ಭಟಿಸಿದ್ದು, ಎರಡು ದಿನಗಳ ಹಿಂದೆ ಪೊಲೀಸ್ ಸಿಬ್ಬಂದಿಗೆ ಚಾಕು ಹಾಕಿದ್ದ ದುಷ್ಕರ್ಮಿಗೆ ಖಾಕಿ ಪಡೆ ಗುಂಡಿಕ್ಕಿದೆ.

ಇತ್ತೀಚೆಗಷ್ಟೇ ಪೇದೆ ನಾಗರಾಜ್ ಮೇಲೆ ಚಾಕು ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೋರ್ವನ ಮೇಲೆ ಪೊಲೀಸರು ಗುಂಡು ಹಾರಿಸಿ ಬಂಧಿಸಿರುವ ಘಟನೆ ಆರ್ ಟಿ ನಗರದ ಈರುಳ್ಳಿ ಮೈದಾನದಲ್ಲಿ ನಡೆದಿದೆ. ಆರೋಪಿ ಮರ್ದಾನ್ ಖಾನ್ ಅಲಿಯಾಸ್ ಮರ್ಧನ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ ಎಂದು ತಿಳಿದುಬಂದಿದೆ.

ಗುಂಡೇಟು ತಿಂದ ಆರೋಪಿಯನ್ನು ಮರ್ಧಾನ್ ಖಾನ್ ಎಂದು ಗುರುತಿಸಲಾಗಿದೆ. ಈತ ಎರಡು ದಿನಗಳ ಹಿಂದೆ ನಗರದಲ್ಲಿ ಗಲಾಟೆ ಮಾಡಿದ್ದನು. ಪುಂಡ ಯುವಕರನ್ನ ಹಿಡಿಯಲು ಹೋದಾಗ ಪಿಸಿ ನಾಗರಾಜುಗೆ ಚಾಕು ಹಾಕಿ ಈತ ಪರಾರಿಯಾಗಿದ್ದನು. ಈ ಪ್ರಕರಣ ಸಂಬಂಧ ಪೊಲೀಸರು ಆರೋಪಿ ಬೆನ್ನು ಹತ್ತಿದ್ದರು. ಮುಂಜಾನೆ 4 ಗಂಟೆ ಸುಮಾರಿಗೆ ಆರೋಪಿಯನ್ನು ಹಿಡಿಯಲು ಪೊಲೀಸರು ಹೋದಾಗ ಮತ್ತೆ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದನು. ಈ ವೇಳೆ ಇನ್ಸ್‌ ಪೆಕ್ಟರ್ ಒಂದು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿದರು. ಆದರೂ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆರ್.ಟಿ ನಗರ ಇನ್ಸ್‌ ಪೆಕ್ಟರ್ ಮಿಥುನ್ ಶಿಲ್ಪಿ ಅವರು ಫೈರಿಂಗ್ ಮಾಡಿದ್ದಾರೆ. ಈ ವೇಳೆ ಆರೋಪಿ ಕಾಲಿಗೆ ಎರಡು ಗುಂಡು ಬಿದ್ದಿದ್ದು, ಸದ್ಯ ಆರೋಪಿಯನ್ನು ಬಂಧಿಸಿದ ಪೊಲೀಸರು ಆತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ಆರ್ ಟಿ ನಗರದ ಚಾಮುಂಡಿ ನಗರದಲ್ಲಿ ಪುಂಡರ ಗುಂಪೊಂದು ಗಲಾಟೆ ಮಾಡುತ್ತಿದ್ದಾರೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಪೇದೆ ನಾಗರಾಜ್ ಪುಂಡರನ್ನು ಪ್ರಶ್ನಿಸಿದ್ದಾರೆ. ಈ ಸಂದರ್ಭದಲ್ಲಿ ಅರೋಪಿ ಮರ್ದಾನ್ ಖಾನ್ ಪೇದೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದನು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com