ಶಿಕ್ಷಣ ಸಚಿವರ ವಾಸ್ತವ್ಯದ ಎಫೆಕ್ಟ್: ಗೋಪಿನಾಥಂ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಮಾಧ್ಯಮ ಪ್ರಾರಂಭಕ್ಕೆ ಅನುಮತಿ

ಚಾಮರಾಜನಗರ ಜಿಲ್ಲೆಯ ಗೋಪಿನಾಥಂ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಮಾಧ್ಯಮ ಪ್ರಾರಂಭಕ್ಕೆ ಸರ್ಕಾರ ಅನುಮತಿ ನೀಡಿದೆ.
ಗೋಪಿನಾಥಂ ಪ್ರಾಥಮಿಕ ಶಾಲೆ
ಗೋಪಿನಾಥಂ ಪ್ರಾಥಮಿಕ ಶಾಲೆ

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಗೋಪಿನಾಥಂ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಮಾಧ್ಯಮ ಪ್ರಾರಂಭಕ್ಕೆ ಸರ್ಕಾರ ಅನುಮತಿ ನೀಡಿದೆ.

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಗೋಪಿನಾಥಂ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 4ನೇ ತರಗತಿಯವರೆಗೆ ಕನ್ನಡ ಮಾಧ್ಯಮವನ್ನು ಆರಂಭಿಸಬೇಕೆಂಬ ಅಲ್ಲಿನ ವಿದ್ಯಾರ್ಥಿಗಳು, ಪೋಷಕರು, ಗ್ರಾಮಸ್ಥರ ಬಹುದಿನಗಳ ಬೇಡಿಕೆಯನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಸುರೇಶ್‍ಕುಮಾರ್ ಅವರು ಈಡೇರಿಸಿದ್ದಾರೆ. ಶಿಕ್ಷಣ ಸಚಿವರ ಸೂಚನೆಯಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಾಥಮಿಕ ಶಿಕ್ಷಣ ನಿರ್ದೇಶಕರು 2020-21ನೇ ಸಾಲಿನಿಂದ ಗೋಪಿನಾಥಂ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಮಾಧ್ಯಮ ಪ್ರಾರಂಭಿಸಲು ಅನುಮತಿ ನೀಡಿದ್ದಾರೆ.

 ಕಳೆದ ನವೆಂಬರ್ 18ರಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಸುರೇಶ್‍ಕುಮಾರ್ ರವರು ಗೋಪಿನಾಥಂ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾಸ್ತವ್ಯ ಹೂಡಿದ್ದರು. ಈ ವೇಳೆ ವಿದ್ಯಾರ್ಥಿಗಳು, ಪೋಷಕರು, ಗ್ರಾಮಸ್ಥರ ಜೊತೆ ಸಂವಾದ ನಡೆಸಿದ ಸಂದರ್ಭದಲ್ಲಿ ಪ್ರಸ್ತುತ 1ರಿಂದ 4ನೇ ತರಗತಿವರೆಗೆ ತಮಿಳು ಮಾಧ್ಯಮದಲ್ಲಿ ಕಲಿಯಲು ಅವಕಾಶವಿದೆ. 1ರಿಂದ 4ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿಯಲು ಅವಕಾಶ ಕಲ್ಪಿಸುವಂತೆ ಸಚಿವರಿಗೆ ಮನವಿ ಮಾಡಿದ್ದರು. 

ಈ ಹಿನ್ನಲೆಯಲ್ಲಿ ಸದರಿ ಶಾಲೆಯಲ್ಲಿ 2020-21ನೇ ಸಾಲಿಗೆ 1ರಿಂದ 4ನೇ ತರಗತಿವರೆಗೆ ಕನ್ನಡ ಮಾಧ್ಯಮ ಆರಂಭಿಸಲು ಅನುಮತಿ ನೀಡಿ ಸಾರ್ವಜನಿಕ ಶಿಕ್ಷಣ ಇಲಾಖೆಯು ಆದೇಶಿಸಿದೆ. 

ಶಾಲೆಯಲ್ಲಿ ಮೂಲಭೂತ ಸೌಕರ್ಯಗಳೊಂದಿಗೆ ಅಗತ್ಯಕ್ಕೆ ತಕ್ಕಂತೆ ತರಗತಿ ಕೊಠಡಿಗಳನ್ನು ವ್ಯವಸ್ಥೆಗೊಳಿಸಿಕೊಳ್ಳುವುದು, ಕನ್ನಡ ಮಾಧ್ಯಮದಲ್ಲಿ ಬೋಧಿಸಲು ಅರ್ಹ ಶಿಕ್ಷಕರು ಇರುವಂತೆ ಅಗತ್ಯವಿದ್ದಲ್ಲಿ ನಿಯೋಜನೆಗೆ ಕ್ರಮ, ಸದರಿ ಶಾಲೆಯಲ್ಲಿ ಈಗಾಗಲೇ ನಡೆಯುತ್ತಿರುವ ತರಗತಿಗಳ ಕೊಠಡಿ, ಕಟ್ಟಡ ಮೂಲಸೌಕರ್ಯಗಳಲ್ಲಿಯೆ ಕನ್ನಡ ಮಾಧ್ಯಮ 1ರಿಂದ 4ನೇ ತರಗತಿಗಳ ವಿಭಾಗಗಳನ್ನು ನಡೆಸುವುದು, ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಕನ್ನಡ ಮಾಧ್ಯಮ ಪಠ್ಯಪುಸ್ತಕಗಳ ಬೇಡಿಕೆ ಪಟ್ಟಿಯನ್ನು ಸಕಾಲದಲ್ಲಿ ಪಠ್ಯಪುಸ್ತಕ ಸೊಸೈಟಿಗೆ ಸಲ್ಲಿಕೆ, ಸಮುದಾಯದ ಯಾವುದೇ ಮಗು ಶಾಲೆಯಿಂದ ಹೊರಗುಳಿಯದಂತೆ ಕ್ರಮ ವಹಿಸಿ ಎಲ್ಲಾ ಅರ್ಹ ವಯಸ್ಸಿನ ಮಕ್ಕಳನ್ನು ಶಾಲೆಗೆ ದಾಖಲಿಸಿಕೊಂಡು ಬೋಧಿಸಲು ಎಲ್ಲಾ ಅಗತ್ಯ ಕ್ರಮ ವಹಿಸಬೇಕು. ಈ ಎಲ್ಲಾ ಅರ್ಹತಾ ಅಂಶಗಳನ್ನು ಪೂರೈಸಿರುವುದನ್ನು ಖಾತರಿಪಡಿಸಿಕೊಂಡು 1ರಿಂದ 4ನೇ ತರಗತಿವರೆಗೆ ಕನ್ನಡ ಮಾಧ್ಯಮವನ್ನು ಪ್ರಾರಂಭಿಸಲು ಅನುಮತಿ ನೀಡಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆದೇಶದಲ್ಲಿ ತಿಳಿಸಲಾಗಿದೆ.

-ಗೂಳಿಪುರ ನಂದೀಶ ಎಂ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com