ಕೆಂಪೇಗೌಡ ಅಧ್ಯಯನ ಕೇಂದ್ರ ಸ್ಥಾಪನೆ ಆದೇಶ ರದ್ದು: ಯಡಿಯೂರಪ್ಪ ಸರ್ಕಾರದ ವಿರುದ್ಧ ಕೆಂಡಕಾರಿದ ಡಿಕೆಶಿ

ನಾಡಪ್ರಭು ಕೆಂಪೇಗೌಡ ಅಧ್ಯಯನ ಕೇಂದ್ರ ಸ್ಥಾಪಿಸಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಹೊರಡಿಸಿದ್ದ ಆದೇಶವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಸರ್ಕಾರ ಹಿಂಪಡೆದಿರುವ ನಿರ್ಧಾರವನ್ನು ಮಾಜಿ ಸಚಿವ ಡಿ.ಕೆ .ಶಿವಕುಮಾರ್ ತೀವ್ರವಾಗಿ ಖಂಡಿಸಿದ್ದಾರೆ.
ಡಿ.ಕೆ.ಶಿವಕುಮಾರ್
ಡಿ.ಕೆ.ಶಿವಕುಮಾರ್

ನವದೆಹಲಿ: ನಾಡಪ್ರಭು ಕೆಂಪೇಗೌಡ ಅಧ್ಯಯನ ಕೇಂದ್ರ ಸ್ಥಾಪಿಸಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಹೊರಡಿಸಿದ್ದ ಆದೇಶವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಸರ್ಕಾರ ಹಿಂಪಡೆದಿರುವ ನಿರ್ಧಾರವನ್ನು ಮಾಜಿ ಸಚಿವ ಡಿ.ಕೆ .ಶಿವಕುಮಾರ್ ತೀವ್ರವಾಗಿ ಖಂಡಿಸಿದ್ದಾರೆ.

ಈ ವಿಚಾರವಾಗಿ ಬುಧವಾರ ರಾತ್ರಿ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಡಿ.ಕೆ ಶಿವಕುಮಾರ್, 'ಕೆಂಪೇಗೌಡ ಅವರ ಹೆಸರಲ್ಲಿ ಅಧ್ಯಯನ ಕೇಂದ್ರ ಸ್ಥಾಪನೆ ನಾಡನ್ನು ಕಟ್ಟಿದ ಮಹಾನ್ ವ್ಯಕ್ತಿಗೆ ಸಲ್ಲಿಸುವ ಗೌರವ. ಈ ವಿಚಾರದಲ್ಲೂ ಯಡಿಯೂರಪ್ಪ ನವರ ಸರಕಾರ ರಾಜಕೀಯ ಮಾಡುತ್ತಿರುವುದು ನಾಚಿಕೆಗೇಡಿನ ವಿಚಾರ ' ಎಂದು ಹರಿಹಾಯ್ದರು.

'ವಿಶ್ವಮಾನ್ಯ ಬೆಂಗಳೂರು ನಗರವನ್ನು ಕಟ್ಟಿ ಜಾಗತಿಕ ಭೂಪಟದಲ್ಲಿ ಗುರುತಿಸುವಂತಹ ಕೆಲಸ ಮಾಡಿದ ನಾಡಪ್ರಭು ಕೆಂಪೇಗೌಡರ ಹೆಸರಲ್ಲಿ ನಮ್ಮ ಸರ್ಕಾರ, ನಾನು ಹಿಂದೆ ಕನ್ನಡ ಮತ್ತು ಸಂಸ್ಕೃತಿ ಸಚಿವನಾಗಿದ್ದಾಗ ಅಧ್ಯಯನ ಕೇಂದ್ರ ರಚನೆ ಮಾಡಿ ಆದೇಶ ಹೊರಡಿಸಿತ್ತು. ಅಲ್ಲದೆ ಅದಕ್ಕೆ ಅಗತ್ಯ ಹಣಕಾಸನ್ನು ಕೂಡ ಬಿಡುಗಡೆ ಮಾಡಿತ್ತು.ಆದರೆ ಇದೀಗ ರಾಜ್ಯ ಸರ್ಕಾರ ಹಣದ ಕೊರತೆ ನೆಪ ಹೇಳಿ ಟೆಂಡರ್ ರದ್ದು ಮಾಡಿದೆ.ಇದು ಕೆಂಪೇಗೌಡರ ಬುಡಕ್ಕೇ ಕೈ ಹಾಕಿದಂತೆ, ಆದರೆ ಈ ನಿರ್ಧಾರದ ಹಿಂದೆ ಯಾರೊಬ್ಬ ವ್ಯಕ್ತಿಯ ಕೈವಾಡವಿದೆ ಎಂದು ನಾನು ಆರೋಪಿಸಲಾರೆ ಬದಲಿಗೆ ಇಡೀ ಸರ್ಕಾರವೇ ಇದರ ಜವಾಬ್ದಾರಿ ಹೊರಬೇಕು ಎಂದು ಶಿವಕುಮಾರ್ ಹೇಳಿದ್ದಾರೆ.

ಇನ್ನು ಕೆಂಪೇಗೌಡ ಅಧ್ಯಯನ ಪೀಠ ರದ್ದತಿ ವಿಚಾರ ಖಂಡಿಸಿ ಹೋರಾಟಕ್ಕೆ ಸಹ ಚಿಂತನೆ ನಡೆಸಿರುವುದಾಗಿ ಡಿಕೆಶಿ ಹೇಳಿದ್ದಾರೆ."ಹಿಂದಿನ ಸರ್ಕಾರದ ಆದೇಶವನ್ನು ಯಡಿಯೂರಪ್ಪ ಸರ್ಕಾರ  ರದ್ದು ಮಾಡಿದೆ.ಇದು ಖಂಡನೀಯ ಹಾಗೂ ಕೆಂಪೇಗೌಡರಿಗೆ ಮಾಡಿದ ಅಪಮಾನ. ಸರ್ಕಾರದ ಈ ನಿರ್ಧಾರ ಕೇವಲ ಒಂದು ಸಮುದಾಯದ ವಿರುದ್ಧ ಮಾಡಿರುವ ಪ್ರಹಾರ ಮಾತ್ರವಲ್ಲ. ಇಡೀ ನಾಡಿಗೇ ಮಾಡಿರುವ ಅವಮರ್ಯಾದೆ ಎಂದು ಅವರು ಕಿಡಿ ಕಾರಿದ್ದಾರೆ.

ಇನ್ನು ಬಿಜೆಪಿ ಸರ್ಕಾರ ಕಾಂಗ್ರೆಸ್-ಜೆಡಿಎಸ್ ಸರ್ಕಾರದ ಯಾವೆಲ್ಲಾ ಯೋಜನೆಗಳನ್ನು ರದ್ದುಗೊಳಿಸಿದೆ ಎನ್ನುವ ಕುರಿತು ಮಾಹಿತಿ ಪಡೆಯುತ್ತಿದ್ದೇನೆ ಎಂದಿರುವ ಡಿಕೆ ಶಿವಕುಮಾರ್ ಈ ಸಂಬಂಧ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಎಲ್ಲ ಶಾಸಕರಿಗೆ ಪತ್ರ ಬರೆಯಲಾಗಿದೆ. ಅವರಿಂದ ಮಾಹಿತಿ ಬಂದ ನಂತರ ರಾಜ್ಯ ಸರ್ಕಾರದ ವಿರುದ್ಧ ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ ಎಂದರು.

ಕಾಂಗ್ರೆಸ್ ಧುರೀಣ ಮಲ್ಲಿಕಾರ್ಜುನ ಖರ್ಗೆಯವರನ್ನು ಸಿಎಂ ಮಾಡುವ ಬಗ್ಗೆ ಯಾವ ಮಾಹಿತಿ ಇಲ್ಲ ಎಂದ ಮಾಜಿ ಸಚಿವರು ಚುನಾವಣೆಗಾಗಿ ಪಕ್ಷವು ವಹಿಸಿದ್ದ ಕೆಲಸವನ್ನು ಎಲ್ಲಾ ನಾಯಕರೂ ಕ್ರಮಬದ್ದವಾಗಿ ಮಾಡುತ್ತಿದ್ದೇವೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com