ರೈತರಿಗೆ ಸಮಾಜದಲ್ಲಿ ಗೌರವಾದಾರ ದೊರೆಯದ ಕಾರಣ ಕೃಷಿಯಿಂದ ವಿಮುಖ: ಅಂತರಾಷ್ಟೀಯ ಕೃಷಿ ವಿಜ್ಙಾನಿ

ರೈತರಿಗೆ ಸಮಾಜದಲ್ಲಿ ಉತ್ತಮ ಗೌರವಾದರಗಳು ಸಿಗುತ್ತಿಲ್ಲವಾದ್ದರಿಂದ ಅವರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ ಎಂದು ಅಂತರಾಷ್ಟೀಯ ಕೃಷಿ ವಿಜ್ಙಾನಿ ಡಾ. ಎಸ್ ಅಯ್ಯಪ್ಪನ್ ಅವರು ಗುರುವಾರ ಹೇಳಿದ್ದಾರೆ.
ಅಯ್ಯಪ್ಪನ್
ಅಯ್ಯಪ್ಪನ್

ಚಾಮರಾಜನಗರ: ರೈತರಿಗೆ ಸಮಾಜದಲ್ಲಿ ಉತ್ತಮ ಗೌರವಾದರಗಳು ಸಿಗುತ್ತಿಲ್ಲವಾದ್ದರಿಂದ ಅವರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ ಎಂದು ಅಂತರಾಷ್ಟೀಯ ಕೃಷಿ ವಿಜ್ಙಾನಿ ಡಾ. ಎಸ್ ಅಯ್ಯಪ್ಪನ್ ಅವರು ಗುರುವಾರ ಹೇಳಿದ್ದಾರೆ.

ಇಂದು ಕೊಳ್ಳೇಗಾಲ ಪಟ್ಟಣದಲ್ಲಿ ಜೆಎಸ್‌ಬಿ ಪ್ರತಿಷ್ಠಾನ ವಿಶ್ವ ಮಣ್ಣಿನ ಸಂರಕ್ಷಣಾ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಸಮಗ್ರ ಸುಸ್ಥಿರ ಕೃಷಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರೈತರು ಪ್ರಸ್ತುತ ಕೃಷಿಯ ಜತೆಗೆ ಕೃಷಿ ಪೂರಕ ಉದ್ದಿಮೆಗಳಿಗೆ ಹೆಚ್ಚು ಆಧ್ಯತೆ ನೀಡಬೇಕು. ಕೃಷಿ ಲಾಭದಾಯಕವಲ್ಲ. ಕೃಷಿಕರಿಗೆ ವೃತ್ತಿ ಗೌರವ ಇಲ್ಲದ ಕಾರಣ ಕೃಷಿ ಅವಲಂಭನೆ ಕಡಿಮೆಯಾಗುತ್ತಿದೆ ಎಂದರು.

ಬೆಳೆ ನಷ್ಟದಿಂದ ಸಾಲದ ಸುಳಿಗೆ ಸಿಲುಕಿ ರೈತರು ಆತ್ಮಹತ್ಯೆಗೆ ವಿಧಿಯಿಲ್ಲದೆ ಮೊರೆ ಹೋಗುತ್ತಿದ್ದಾರೆ. ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ, ಕೃಷಿ ಪದ್ದತಿಯಲ್ಲಿ ಬದಲಾವಣೆ ಅಗತ್ಯ. ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯ ಮಣ್ಣಿರುತ್ತದೆ. ಅಲ್ಲಿನ ಮಳೆ ಪ್ರಮಾಣ ಹವಾಗುಣಕ್ಕೆ ತಕ್ಕ ಬೆಳೆಯನ್ನು ಬೆಳೆಯುವ ಮೂಲಕ ಬೆಲೆ ಕುಸಿತದ ಆತಂಕ ದೂರ ಮಾಡಿಕೊಳ್ಳಬೇಕು. ರೈತರು ಬರಿ ಏಕ ಬೆಳೆ ಪದ್ದತಿ ಅನುಸರಿಸದೆ, ಬಹುಬೆಳೆ ಪದ್ದತಿಗಳನ್ನು ಅಳವಡಿಸಿಕೋಳ್ಳುವುದು ಸೂಕ್ತ. ಭತ್ತ, ಜೋಳ ಬೆಳೆಯುವ ಜತೆಗೆ ಸಿರಿಧಾನ್ಯಗಳು, ಹಣ್ಣು ಮತ್ತು ತರಕಾರಿ ಸೇರಿದಂತೆ ವಿವಿಧ ಬೆಳಗಳನ್ನು ಬೆಳೆಯುವುದು ಸೂಕ್ತ. ನಾವು ಬಳಸುವ ಆಹಾರದ ಶೇ.೯೦ ಭಾಗ ಕೃಷಿಯಿಂದಲೆ ಉತ್ಪತ್ತಿಯಾಗಬೇಕು. ಮುಂದಿನ ದಿನಗಳಲ್ಲಿ ಚಿನ್ನ ಸಿಗಬಹುದು ಆದರೆ, ಅನ್ನ ಸಿಗುವುದು ಕಷ್ಟವಾಗಲಿದೆ. ಅದ್ದರಿಂದ ರೈತರ ಆದಾಯ ಧ್ವಿಗುಣಗೊಳಿಸುವ ಬಗ್ಗೆ ಸರಕಾರಗಳು ಬರಿ ಹೇಳಿಕೆ ನೀಡದೆ, ಅದನ್ನು ಸಾಕಾರಗೊಳಿಸಲು ಸೂಕ್ತ ಕಾರ್ಯಕ್ರಮಗಳನ್ನು ರೂಪಿಸಬೇಕಿದೆ ಎಂದರು.

ಮಣ್ಣಿನ ರಕ್ಷಣೆ ಮಾಡಿ. ಮಣ್ಣನ್ನು ದೇವರು ಎಂದು ಪೂಜಿಸುತ್ತೇವೆ. ಬರಿ ಪೂಜೆ ಮಾಡುವುದರಿಂದ ಪ್ರಯೋಜನ ಇಲ್ಲ. ಮಣ್ಣು ಸವಕಳಿಯನ್ನು ತಪ್ಪಿಸುವ ಕಾರ್ಯ ಮಾಡಬೇಕು. ಅಂತರ್ಜಲ ವೃದ್ದಿಯಾಗಲು ಜಲ ಸಂರಕ್ಷಣೆ ಕ್ರಮಗಳನ್ನು ಕೈಗೊಳ್ಳಬೇಕು. ಜೈವಿಕ ವಿಧಾನಗಳನ್ನು ಅನುಸರಿಸುವ ಮೂಲಕ ಮಣ್ಣಿನ ಫಲವತ್ತತೆ ಕಾಪಾಡಬೇಕಿದೆ. ರಾಸಾಯನಿಕ ಗೊಬ್ಬರ ಹಾಗೂ ಕ್ರಿಮಿನಾಶಕಗಳನ್ನು ಕಡಿಮೆ ಪ್ರಮಾಣದಲ್ಲಿ ಬಳಕೆ ಮಾಡಬೇಕು. ಸಾಧ್ಯವಾದರೆ ಬಳಕೆಯನ್ನು ನಿಲ್ಲಿಸಬೇಕು. ಮಣ್ಣಿನಲ್ಲಿರುವ ಸೂಕ್ಷಾಣು ಜೀವಿಗಳು ಹಾಗೂ ಉಪಯುಕ್ತ ಜೀವಿಗಳನ್ನು ಉಳಿಸಿಕೊಳ್ಳಬೇಕು. ಜೈವಿಕ ಹಾಗೂ ಅಜೈವಿಕ ಸೇರಿದಂತೆ ಮಣ್ಣು ಒಂದು ಕಾರ್ಖಾನೆಯಾಗಿದೆ. ಮುಂದಿನ ೧೦ ವರ್ಷದಲ್ಲಿ ಆಹಾರ ಉತ್ಪಾದನೆ ಕಡಿಮೆಯಾಗುವ ಸಾಧ್ಯತೆ ಇದೆ. ರೈತರಲ್ಲಿ ಆತ್ಮ ವಿಶ್ವಾಸ ಮೂಡಿಸುವ ಮೂಲಕ ಕೃಷಿ ಅವಲಂಬನೆ ಹೆಚ್ಚುವಂತೆ ಮಾಡಬೇಕಿದೆ. ಇತ್ತೀಚಗೆ ಇಂಜನಿಯರ್ ಪದವಿದರರು ಕೃಷಿಯತ್ತ ಮುಖ ಮಾಡುತ್ತಿದ್ದಾರೆ. ಕೃಷಿಗೆ ಪೂರಕವಾದ ಉಪಕರಗಳನ್ನು ಸಿದ್ದಪಡಿಸುವ ಮೂಲಕ ಕೆಲಸವನ್ನು ಸುಲಭ ಮಾಡುವ ಕಾರ್ಯ ಮಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.

ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಎಸ್ ಜೆ ಕೃಷ್ಣರವರು ಕಾರ್ಯಗಾರ ಉದ್ಘಾಟಿಸಿ ಮಾತನಾಡಿ, ಮಣ್ಣು ಅಮೂಲ್ಯವಾದ ಪ್ರಾಕೃತಿಕ ಸಂಪತ್ತು. ಮಣ್ಣಿನ ಮಹತ್ವ ಅರಿತು ಅದನ್ನು ಸಂರಕ್ಷಿಸುವ ಕಾರ್ಯ ಮಾಡಬೇಕಿದೆ. ಮನುಷ್ಯನ ಅತಿ ಆಸೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಭೂಮಿ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿದೆ. ಮಣ್ಣೇ ಇಲ್ಲದೆ ನಾವಿಲ್ಲ ಎಂಬ ಅರಿವಿದ್ದರು. ಮಣ್ಣಿನ ಸಂರಕ್ಷಣೆ ಮಾಡಬೇಕು ಎಂಬ ಪ್ರಜ್ಞೆ ಇಲ್ಲದಿರುವುದು ವಿಪರ್ಯಾಸ, ಜೆಎಸ್‌ಬಿ ಪ್ರತಿಷ್ಠಾನದ ಎಸ್ ಶಶಿಕುಮಾರ್ ಸಮಾಜಕ್ಕೆ ಉಪಯುಕ್ತವಾದ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಕನ್ನಡ ಮಾಸಾಚರಣೆ ಕಾರ್ಯಕ್ರಮವನ್ನು ಗಡಿ ಭಾಗದಲ್ಲಿ ಅತ್ಯಂತ ಯಶಸ್ವಿಯಾಗಿ ಮಾಡಿ ಕನ್ನಡ ಪ್ರೇಮ ಮೆರೆದಿದ್ದಾರೆ. ಒಳ್ಳೆಯ ಸೇವೆ ಮಾಡುವವರನ್ನು ಪ್ರೋತ್ಸಹಿಸುವುದು ನಮ್ಮ ಜವಬ್ದಾರಿ. ಕೈಲಾಸ ಮೂರ್ತಿಯವರ ಕೃಷಿ ಪದ್ದತಿಯ ಬಗ್ಗೆ ಕೇಳಿದಾಗ ಆಶ್ಚರ್ಯವಾಯಿತು. ಡಾ.ಅಯ್ಯಪ್ಪನ್ ಈ ನೆಲದವರಾಗಿರುವುದು ನಮ್ಮ ಹೆಮ್ಮೆ, ಅವರ ಸಲಹೆ ಮಾರ್ಗದರ್ಶನ ನಮ್ಮ ಕೃಷಿಕರಿಗೆ ಅಗತ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಜೆಎಸ್‌ಬಿ ಪ್ರತಿಷ್ಟಾನದ ಅಧ್ಯಕ್ಷ ಶಶಿಕುಮಾರ್ ಮಾತನಾಡಿ, ಸರಿ ಸುಮಾರು ೪೮ ದೇಶಗಳಲ್ಲಿ ಉಪನ್ಯಾಸ ನೀಡಿರುವ ನಮ್ಮ ಮಣ್ಣಿನ ಹೆಮ್ಮೆಯ ಮಗ, ಅಂತರಾಷ್ಟೀಯ ಕೃಷಿ ವಿಜ್ಞಾನಿಗಳಾದ ಅಯ್ಯಪ್ಪನ್ ರವರು ನಮ್ಮ ಊರಿಗೆ ಬಂದು ಕಾರ್ಯಾಗಾರ ನಡೆಸುತ್ತಿರುವಾಗ, ದೂರದ ಊರಿನಿಂದ ರೈತರು ಬಂದು ಕಾರ್ಯಕ್ರಮದ ಸದುಪಯೋಗಪಡಿಸಿಕೊಳ್ಳುತ್ತಿರುವಾಗ ನಮ್ಮ ಸ್ಥಳೀಯ ರೈತರುಗಳಾಗಲಿ, ರೈತ ಮುಖಂಡರೆನಿಸಿದವರಾಗಲಿ ಕಾರ್ಯಾಗಾರಕ್ಕೆ ಬರದಿರುವುದು ತುಂಬಾ ವಿಷಾದನೀಯ ಎಂದರು.

ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಟಿ, ಶ್ರೀಕಾಂತ್, ಅಪರ ಸಿವಿಲ್ ನ್ಯಾಯಾಧೀಶರಾದ ಸಂತೋಷ್ ಕೊಠಾರಿ. ಹಿರಿಯ ವಕೀಲ ಡಿ.ವೆಂಕಟಾಚಲ, ವಿಷಕಂಠಪ್ಪ, ನೈಸರ್ಗಿಕ ಕೃಷಿಕ ಕೈಲಾಸಮೂರ್ತಿ, ಸಾವಯವ ಕೃಷಿಕ ದೊಡ್ಡರಾಯಪೇಟಿ ಮಹದೇವಸ್ವಾಮಿ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಶ್ಯಾಗ್ಯ ಪ್ರಸಾದ್, ಆಹಾರ ತಜ್ಞೆ ರಾಜೇಶ್ವರಿ, ಸಿಲಕಲ್‌ಪುರ ರಾಜೇಶ್, ಜನಾರ್ಧನ್, ಬೆಂಗಳೂರು, ತುಮಕೂರು, ಕೋಲಾರ, ಮೈಸೂರು ಸೇರಿದಂತೆ ಇತರೆಡೆಗಳಿಂದ ರೈತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
- ಗೂಳಿಪುರ ನಂದೀಶ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com