ಉಪ ಸಮರ: ಹೊಸಕೋಟೆಯಲ್ಲಿ ಅತಿಹೆಚ್ಚು, ಕೆಆರ್ ಪುರದಲ್ಲಿ ಕಡಿಮೆ ಮತದಾನ, ಎಲ್ಲೆಲ್ಲಿ ಎಷ್ಟೆಷ್ಟು ಮತಚಲಾವಣೆ-ಇಲ್ಲಿದೆ ವಿವರ

ರಾಜ್ಯ ರಾಜಕೀಯದಲ್ಲಿ ಹಲವು ಮಹತ್ವದ ತಿರುವುಗಳನ್ನು ನೀಡುವ ನಿರೀಕ್ಷೆ ಹೊಂದಿರುವ 15 ವಿಧಾನಸಭಾ ಕ್ಷೇತ್ರಗಳಿಗೆ ಮತದಾರರು ಉತ್ಸಾಹಭರಿತವಾಗಿ ಮತ ಚಲಾಯಿಸಿದ್ದು, ಒಟ್ಟಾರೆ ಶೇ 66.25ಕ್ಕೂ ಹೆಚ್ಚು ಮತದಾನವಾಗಿದೆ
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಹಲವು ಮಹತ್ವದ ತಿರುವುಗಳನ್ನು ನೀಡುವ ನಿರೀಕ್ಷೆ ಹೊಂದಿರುವ 15 ವಿಧಾನಸಭಾ ಕ್ಷೇತ್ರಗಳಿಗೆ ಮತದಾರರು ಉತ್ಸಾಹಭರಿತವಾಗಿ ಮತ ಚಲಾಯಿಸಿದ್ದು, ಒಟ್ಟಾರೆ ಶೇ 66.25ಕ್ಕೂ ಹೆಚ್ಚು ಮತದಾನವಾಗಿದೆ.

ಕೆಲವು ಸಣ್ಣಪುಟ್ಟ ಅಹಿತಕರ ಘಟನೆಗಳನ್ನು ಹೊರತುಪಡಿಸಿದರೆ ಮತದಾನ ಬಹುತೇಕ ಶಾಂತಿಯುತವಾಗಿತ್ತು. ಬಹುತೇಕ ಎಲ್ಲಾ ಕ್ಷೇತ್ರಗಳಲ್ಲೂ ರಾಜಕೀಯ ಕಣ ತೀವ್ರ ಜಿದ್ದಾಜಿದ್ದಿನಿಂದ ಕೂಡಿರುವುದು ಮತದಾನದ ವೇಳೆ ಕಂಡು ಬಂತು.

ಚುನಾವಣಾ ಆಯೋಗದ ವರದಿಗಳಂತೆ ಹೊಸಕೋಟೆಯಲ್ಲಿ ಅತಿ ಹೆಚ್ಚು ಅಂದರೆ ಶೇ 86.77, ಬೆಂಗಳೂರಿನ ಕೆ.ಆರ್. ಪುರದಲ್ಲಿ ಶೇ 43.25 ರಷ್ಟು ಮತದಾನವಾಗಿದೆ. ರಾಜಧಾನಿ ಬೆಂಗಳೂರಿನ ಮಹಾಲಕ್ಷ್ಮಿ ಬಡಾವಣೆಯಲ್ಲಿ ಶೇ 50.21 ರಷ್ಟು, ಶಿವಾಜಿನಗರದಲ್ಲಿ ಶೇ 44.60 ರಷ್ಟು ಮತ ಸಂಗ್ರಹವಾಗಿದೆ.

ಉಳಿದಂತೆ ಅಥಣಿಯಲ್ಲಿ ಶೇ 75.23, ಕಾಗವಾಡ ಶೇ 76.27, ಗೋಕಾಕ್ ಶೇ 73.08, ಯಲ್ಲಾಪುರದಲ್ಲಿ ಶೇ 77.52, ಹಿರೆಕೇರೂರ್ ಶೇ 78.63, ರಾಣೆ ಬೆನ್ನೂರು ಶೇ 73.53 ರಷ್ಟು, ವಿಜಯನಗರ ಶೇ 64.95 ಯಶವಂತಪುರ ಶೇ 54, ಚಿಕ್ಕಬಳ್ಳಾಪುರದಲ್ಲಿ ಶೇ 86.19 ರಷ್ಟು ಮತದಾನವಾಗಿದ್ದು,ಕೆ.ಆರ್. ಪೇಟೆಯಲ್ಲಿ ಶೇ 80.00 ರಷ್ಟು ಹಾಗೂ ಹುಣಸೂರಿನಲ್ಲಿ ಶೇ 80.62 ರಷ್ಟು ಮತದಾನವಾಗಿತ್ತು.

ಹಿಂದಿನ ಎಚ್.ಡಿ.ಕುಮಾರ ಸ್ವಾಮಿ ನೇತೃತ್ವದ ಜೆಡಿಎಸ್ - ಕಾಂಗ್ರೆಸ್ ನೇತೃತ್ವದ ಮೈತ್ರಿ ಸರ್ಕಾರದ ವಿರುದ್ಧ ಬಂಡಾಯ ಎದ್ದು 17 ಶಾಸಕರು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ 15 ಕ್ಷೇತ್ರಗಳಿಗೆ ಉಪ ಚುನಾವಣೆ ಎದುರಾಗಿತ್ತು. ಮೇ ೨೦೧೮ರಲ್ಲಿ ನಡೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ರಾಯಚೂರು ಜಿಲ್ಲೆಯ ಮಸ್ಕಿ ಮತ್ತು ಬೆಂಗಳೂರಿನ ರಾಜರಾಜೇಶ್ವರಿನಗರ ಕ್ಷೇತ್ರದ ಫಲಿತಾಂಶ ಕುರಿತು ರಾಜ್ಯ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ಈ ಎರಡು ಕ್ಷೇತ್ರಗಳ ಶಾಸಕರು ಅನರ್ಹರಾಗಿದ್ದರೂ ಆಯೋಗ ಉಪಚುನಾವಣೆ ಆಯೋಗ ತಡೆ ಹಿಡಿದಿದೆ.

ಶಾಸಕರ ರಾಜೀನಾಮೆಯಿಂದ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಸಹಕಾರಿಯಾಯಿತು. ಇದೀಗ ಯಡಿಯೂರಪ್ಪ ತಮ್ಮ ಸರ್ಕಾರ ಉಳಿಸಿಕೊಳ್ಳಲು ಕನಿಷ್ಠ ಆರು ಕ್ಷೇತ್ರಗಳಲ್ಲಿ ಗೆಲ್ಲಲೇಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ. ಹೀಗಾಗಿ ಈ ಉಪ ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ.

ಹಾಲಿ ವಿಧಾನಸಭೆಯಲ್ಲಿ ಕಾಂಗ್ರೆಸ್ ಸದಸ್ಯರ ಸಂಖ್ಯೆ ೬೬ ಇದ್ದು, ಜೆಡಿಎಸ್ ೩೪ ಸದಸ್ಯರನ್ನು ಹೊಂದಿದೆ. ಈ ಎಲ್ಲ ಕ್ಷೇತ್ರಗಳ ಮತ ಎಣಿಕೆ ಬರುವ ಸೋಮವಾರ ೯ ರಂದು ನಡೆಯಲಿದ್ದು ಅಂದೇ ಬಿಜೆಪಿ ಸರ್ಕಾರದ ಭವಿಷ್ಯ ನಿರ್ಧಾರವಾಗಲಿದೆ.

ಉಪಚುನಾಣೆ ನಡೆದ ಕ್ಷೇತ್ರಗಳ ಪೈಕಿ ಹಲವು ಕಡೆಗಳಲ್ಲಿ ಮತದಾರರು ಬೆಳಗ್ಗೆಯಿಂದಲೇ ಸರದಿ ಸಾಲಿನಲ್ಲಿ ನಿಂತಿದ್ದು ಕಂಡುಬಂದಿತು. ಮಹಿಳಾ ಮತದಾರರು ಹೆಚ್ಚಾಗಿರುವ ಪ್ರದೇಶಗಳಲ್ಲಿ ’ಸಖಿ ಮತಗಟ್ಟೆ’ ಗಳನ್ನು ಸ್ಥಾಪಿಸಲಾಗಿದ್ದು, ಹದಿನೈದು ಕ್ಷೇತ್ರಗಳ ಉಪಚುನಾವಣೆಯಲ್ಲಿ ೧೨೬ ಪಕ್ಷೇತರರು ಸೇರಿದಂತೆ ೧೬೫ ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದು, ಇವರಲ್ಲಿ ೯ ಮಹಿಳಾ ಅಭ್ಯರ್ಥಿಗಳು ಸೇರಿದ್ದಾರೆ.

ಭುವನಹಳ್ಳಿ ಗ್ರಾಮದ ಮತಗಟ್ಟೆಯಲ್ಲಿ ಮತಯಂತ್ರದಲ್ಲಿನ ತಾಂತ್ರಿಕ ತೊಂದರೆಯಿಂದ ಮತದಾನ ಆರಂಭಕ್ಕೆ ಸ್ವಲ್ಪ ವಿಳಂಬವಾಯಿತು. ಮೂಲಭೂತ ಸೌಲಭ್ಯಕ್ಕೆ ಒತ್ತಾಯಿಸಿ ಹೊಸಪೇಟೆ ಸಮೀಪದ ಮುದ್ಲಾಪುರದ ಗ್ರಾಮಸ್ಥರು ಬೆಳಗ್ಗೆ ಸ್ವಲ್ಪ ಹೊತ್ತು ಮತದಾನದಲ್ಲಿ ಪಾಲ್ಗೊಳ್ಳಲಿಲ್ಲ, ಅಧಿಕಾರಿಗಳು ಮನವೊಲಿಸಿದ ನಂತರ ಮತದಾನ ಚಲಾವಣೆಗೆ ಮುಂದಾದರು. ಮೈಸೂರು ಜಿಲ್ಲೆಯ ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಬೆಳಗ್ಗೆಯಿಂದಲೇ ಬಿರುಸಿನ ಮತದಾನ ನಡೆಯಿತು.

ಬೆಳಗಾವಿ ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರು ಉತ್ಸಾಹಭರಿತರಾಗಿ ಮತ ಚಲಾಯಿಸಿದರು. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಮಂದಗತಿಯಲ್ಲಿ ಆರಂಭವಾಗಿ ನಂತರ ಅತಿಹೆಚ್ಚು ಮತದಾನ ನಡೆಯಿತು. ನಗರದ ತೋಟಗಾರಿಕೆ ಇಲಾಖೆ ಕಚೇರಿಯಲ್ಲಿ ದಿವ್ಯಾಂಗರೇ ನಿರ್ವಹಿಸುವ ಪ್ರತ್ಯೇಕ ಮತಗಟ್ಟೆ ಸ್ಥಾಪಿಸಲಾಗಿತ್ತು. ಗೋಕಾಕ್ ವಿಧಾನಸಭಾ ಕ್ಷೇತ್ರದ ೨೩೧ನೇ ಮತಗಟ್ಟೆಯಲ್ಲಿ ಚುನಾವಣಾ ಕರ್ತವ್ಯಕ್ಕೆ ಪಾನಮತ್ತರಾಗಿ ಹಾಜರಾದ ಮತಗಟ್ಟೆ ಅಧಿಕಾರಿಯನ್ನು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಎಸ್.ಪಿ.ಬೊಮ್ಮನಹಳ್ಳಿ ಅಮಾನತುಗೊಳಿಸಿದ್ದಾರೆ.

ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ಎಲ್ಲಾ ೧೫ ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದು, ಪ್ರತಿಪಕ್ಷ ಜೆಡಿಎಸ್ ೧೨ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಅನರ್ಹಗೊಂಡ ಶಾಸಕರು ಉಪಚುನಾವಣೆಯಲ್ಲಿ ಸ್ಪರ್ಧಿಸಬಹುದೆಂದು ಸುಪ್ರೀಂ ಕೋರ್ಟ್ ಅನುಮತಿ ನೀಡಿದ ನಂತರ ಕಾಂಗ್ರೆಸ್‌ನ ೧೧ ಮಂದಿ ಹಾಗೂ ಜೆಡಿಎಸ್‌ನ ಮೂವರು ಬಂಡಾಯ ನಾಯಕರು ಆಡಳಿತಾರೂಢ ಬಿಜೆಪಿ ಸೇರ್ಪಡೆಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com