ಕೆಆರ್ ಪೇಟೆಯಲ್ಲಿ ಬಿರುಸಿನ ಮತದಾನ: ಕೈ ಅಭ್ಯರ್ಥಿ ಪತ್ನಿಯನ್ನು ವಾಪಸ್ ಕಳುಹಿಸಿದ ಅಧಿಕಾರಿಗಳು!

ಉಪಚುನಾವಣೆ ಎದುರಿಸುತ್ತಿರುವ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಪೈಕಿ ಇರುವ ಕೆಆರ್ ಪೇಟೆಯಲ್ಲಿ ಮತದಾನ ಬಿರುಸಿನಿಂದ ನಡೆಯುತ್ತಿದ್ದು, ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಅಭ್ಯರ್ಥಿಗಳು ಮತದಾನ ಮಾಡಿದ್ದಾರೆ. 
ಕೆಆರ್ ಪೇಟೆಯಲ್ಲಿ ಬಿರುಸಿನ ಮತದಾನ: ಕೈ ಅಭ್ಯರ್ಥಿ ಪತ್ನಿಯನ್ನು ವಾಪಸ್ ಕಳುಹಿಸಿದ ಅಧಿಕಾರಿಗಳು!
ಕೆಆರ್ ಪೇಟೆಯಲ್ಲಿ ಬಿರುಸಿನ ಮತದಾನ: ಕೈ ಅಭ್ಯರ್ಥಿ ಪತ್ನಿಯನ್ನು ವಾಪಸ್ ಕಳುಹಿಸಿದ ಅಧಿಕಾರಿಗಳು!

ಮಂಡ್ಯ: ಉಪಚುನಾವಣೆ ಎದುರಿಸುತ್ತಿರುವ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಪೈಕಿ ಇರುವ ಕೆಆರ್ ಪೇಟೆಯಲ್ಲಿ ಮತದಾನ ಬಿರುಸಿನಿಂದ ನಡೆಯುತ್ತಿದ್ದು, ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಅಭ್ಯರ್ಥಿಗಳು ಮತದಾನ ಮಾಡಿದ್ದಾರೆ. 

ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಪತ್ನಿ ದೇವಕಿ ಪುತ್ರಿ ನೇಹಾ ಅವರೊಂದಿಗೆ ಪಟ್ಟಣದ ಬಾಲಕಿಯರ ಸರ್ಕಾರಿ ಸ್ವತಂತ್ರ ಪದವಿಪೂರ್ವ ಕಾಲೇಜಿನ ಮತಗಟ್ಟೆ 134ರಲ್ಲಿ ಮತದಾನ ಮಾಡಿದರು. 

ತಮ್ಮ ಗೆಲುವು ನಿಶ್ಚಿತವಾಗಿದೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕೈಬಲಪಡಿಸಲು ತಾಲೂಕಿನ ಜನತೆ ತಮ್ಮನ್ನು ಆಶೀರ್ವದಿಸಿ ಕೈಹಿಡಿಯುತ್ತಾರೆ. ತಾಲೂಕಿನ ಅಭಿವೃದ್ಧಿಯ ಪರವಾಗಿ ಮತದಾರರು ಮತ ನೀಡುತ್ತಾರೆ. ನನ್ನ ಹ್ಯಾಟ್ರಿಕ್ ಗೆಲುವು ಶತಸಿದ್ಧ ಎಂದು ನಾರಾಯಣಗೌಡ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದ ಬಾಲಕಿಯರ ಸರ್ಕಾರಿ ಸ್ವತಂತ್ರ ಪದವಿಪೂರ್ವ ಕಾಲೇಜು ಮತಗಟ್ಟೆ 134ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್ ತಮ್ಮ ಪತ್ನಿ ರಮಾಮಣಿ ಅವರೊಂದಿಗೆ ಆಗಮಿಸಿ ಮತ ಚಲಾಯಿಸಿದರು.  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವೀಂದ್ರಬಾಬು, ಪುರಸಭೆಯ ಸದಸ್ಯ ಡಿ.ಪ್ರೇಮಕುಮಾರ್, ಚಂದ್ರಶೇಖರ್ ಪುತ್ರಿ ಅಂಶು ಚಂದ್ರಶೇಖರ್ ಅವರಿಗೆ ಸಾಥ್ ನೀಡಿದರು. ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಜನಪರವಾದ ಕಾರ್ಯಕ್ರಮಗಳು ತಮ್ಮ ಕೈಹಿಡಿಯಲಿವೆ. ಜನತೆ ಬಿಜೆಪಿ ಮತ್ತು ಜೆಡಿಎಸ್ ತಿರಸ್ಕರಿಸಿ ತಮ್ಮನ್ನು ಗೆಲ್ಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜೆಡಿಎಸ್ ಅಭ್ಯರ್ಥಿ ಬಿ.ಎಲ್.ದೇವರಾಜು ತಮ್ಮ ಪತ್ನಿ ಸರ್ವಮಂಗಳಾ ಅವರೊಂದಿಗೆ ತಮ್ಮ ಹುಟ್ಟೂರು ಬಂಡಿಹೊಳೆಯಲ್ಲಿ ಮತ ಚಲಾಯಿಸಿದರು. ತಾಲ್ಲೂಕಿನಲ್ಲಿ ಜೆಡಿಎಸ್ ಪರವಾದ ಅಲೆಯಿದೆ. ಕೆ.ಆರ್.ಪೇಟೆ ಜೆಡಿಎಸ್ ಭದ್ರಕೋಟೆ ಎನ್ನುವುದು ಈ ಉಪಚುನಾವಣೆಯಲ್ಲಿ ಸಾಭೀತಾಗುತ್ತದೆ. ನಾನು ಶಾಸಕನಾಗಬೇಕೆಂಬ ಕನಸು ನನಸಾಗಲಿದೆ. ನನ್ನ ಗೆಲುವು ನಿಶ್ಚಿತವಾಗಿದೆ ಎಂದು ದೇವರಾಜು ವಿಶ್ವಾಸ ವ್ಯಕ್ತಪಡಿಸಿದರು. 

ಕಾಂಗ್ರೆಸ್ ಅಭ್ಯರ್ಥಿ ಪತ್ನಿ ವಾಪಸ್ ಕಳುಹಿಸಿದ ಅಧಿಕಾರಿಗಳು:

ಮತದಾನದ ಸಂದರ್ಭದಲ್ಲಿ ಗುರುತಿನ ಪತ್ರ ತರದ ಹಿನ್ನೆಲೆ ಕಾಂಗ್ರೆಸ್ ಅಭ್ಯರ್ಥಿ ಪತ್ನಿಗೆ ಮತದಾನ ಮಾಡಲು ಚುನಾವಣಾ ಸಿಬ್ಬಂದಿ ಅವಕಾಶ ನೀಡದೆ ವಾಪಸ್ ಕಳುಹಿಸಿದ ಘಟನೆಯೂ ಜರುಗಿತು . ಕೊನೆಗೆ ಗುರುತಿನ ಚೀಟಿ ತಂದು ಅಭ್ಯರ್ಥಿ ಪತ್ನಿ ಹಕ್ಕನ್ನು ಚಲಾಯಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com