ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಶಾಲಾ ಪ್ರವಾಸ ಭಾಗ್ಯ: ಸಚಿವ ಸಿ.ಟಿ.ರವಿ

ಈ ಹಿಂದೆ‌ ಪ.ಜಾತಿ ಹಾಗೂ ಪ.ಪಂಗಡ ವಿದ್ಯಾರ್ಥಿಗಳಿಗೆ ಶಾಲಾ ಶೈಕ್ಷಣಿಕ ಪ್ರವಾಸ ಏರ್ಪಡಿಸಲಾಗುತ್ತಿತ್ತು. ಮುಂದಿನ ವರ್ಷದಿಂದ ಅದನ್ನು ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ವಿಸ್ತರಿಸಲು ತೀರ್ಮಾನಿಸಲಾಗಿದೆ.
ಸಿ.ಟಿ ರವಿ
ಸಿ.ಟಿ ರವಿ

ಬೆಂಗಳೂರು: ಈ ಹಿಂದೆ‌ ಪ.ಜಾತಿ ಹಾಗೂ ಪ.ಪಂಗಡ ವಿದ್ಯಾರ್ಥಿಗಳಿಗೆ ಶಾಲಾ ಶೈಕ್ಷಣಿಕ ಪ್ರವಾಸ ಏರ್ಪಡಿಸಲಾಗುತ್ತಿತ್ತು. ಮುಂದಿನ ವರ್ಷದಿಂದ ಅದನ್ನು ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ವಿಸ್ತರಿಸಲು ತೀರ್ಮಾನಿಸಲಾಗಿದೆ. ಮಕ್ಕಳನ್ನು ಜಾತಿ ಆಧಾರದಲ್ಲಿ ಪ್ರವಾಸಕ್ಕೆ ಕಳುಹಿಸಬಾರದು‌. ಮಕ್ಕಳಲ್ಲಿ ಜಾತಿಯ ವಿಷ ಬೀಜ ಬಿತ್ತಬಾರದು‌ ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಅವರು ಹೇಳಿದ್ದಾರೆ. 

ಇಂದು ವಿಧಾನ ಸೌಧದಲ್ಲಿ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಸಕ್ಕರೆ ಇಲಾಖೆಗಳ ನೂರು ದಿನಗಳು ನೂರಾರು ಹೆಜ್ಜೆಗಳು ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಶತದಿನದ ಸಂಕ್ರಮಣ ಇದಾಗಿದೆ. ನನ್ನ ಇಲಾಖೆಗಳ ರಿಪೋರ್ಟ್ ಕಾರ್ಡ್ ಜನರ ಮುಂದೆ ಇಡುತ್ತಿದ್ದೇನೆ. ಮೂವತ್ತು ಜಿಲ್ಲೆಗೆ ಹೋಗಿ ಇಲಾಖೆಗಳ ಪ್ರಗತಿ ಪರಿಶೀಲನೆ‌ ಮಾಡಿದ್ದೇನೆ. ಕೆಳ‌ಹಂತದ ಪರಿಸ್ಥಿತಿಯ ನಿಜಸ್ಥಿತಿ ಗೊತ್ತಾಗಿದೆ ಎಂದರು.

ಪ್ರವಾಸೋದ್ಯಮ ಇಲಾಖೆಯ ಗೋಲ್ಡನ್‌ ಚಾರಿಯೇಟ್ ರೈಲು ಸೇವೆಯನ್ನು ಪುನರಾರಂಭಿಸುತ್ತಿದ್ದು, ಈ ಬಾರಿ ನಷ್ಟದ ಪ್ರಶ್ನೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು. 

ಇನ್ನು ಬಾದಾಮಿ, ಬೇಲೂರು, ಹಂಪಿ, ವಿಜಯಪುರದಲ್ಲಿ ತ್ರಿ ಸ್ಟಾರ್ ಹೊಟೇಲ್ ನಿರ್ಮಿಸಲು ಡಿಪಿಆರ್ ಸಿದ್ಧಪಡಿಸಲಾಗುತ್ತಿದೆ. ಜತೆಗೆ ಮೈಸೂರಿನಲ್ಲಿ ಅತ್ಯಾಧುನಿಕ ಮೈಸೂರು ಹಾತ್ ಗೆ ಸಮಗ್ರ ಯೋಜನಾ ವರದಿ ತಯಾರಿಸಲಾಗುತ್ತಿದೆ ಎಂದು ತಿಳಿಸಿದರು.

ಸಾಹಿತಿಗಳು ತಮ್ಮ ಅನುಭವದ ಆಧಾರದಲ್ಲಿ ವಿಸ್ತಾರವಾಗಿ ಒಂದು ವಿಚಾರದ ಬಗ್ಗೆ ಮಾತನಾಡುತ್ತಾರೆ. ನಾವು ಅದನ್ನು ಎರಡು ನಿಮಿಷದಲ್ಲಿ ಹೇಳಿದರೆ ಅವರು ಅದನ್ನು ಇಪ್ಪತ್ತು ನಿಮಿಷದಲ್ಲಿ ಹೇಳುತ್ತಾರೆ. ಇದರಿಂದ ನನ್ನ ತಾಳ್ಮೆ ಹಾಗೂ ಜ್ಞಾನ ಹೆಚ್ಚಾಗಿದೆ. ಹೀಗಾಗಿ ನನಗೆ ತಾಳ್ಮೆ, ಸಮಾಧಾನ ಬೆಳೆದಿದೆ. ಅವರಂತೆಯೇ ಹೇಳೋಕೆ ತಾಳ್ಮೆ ಬೆಳೆಸಿಕೊಳ್ತಿದ್ದೇನೆ ಎಂದು ಲೇವಡಿ ಮಾಡಿದರು.

ಜನವರಿಯೊಳಗೆ ರಾಜ್ಯದ ಎಲ್ಲ ಗ್ರಾಮಗಳ ಇತಿಹಾಸ, ಸಂಸ್ಕೃತಿಯನ್ನು ದಾಖಲಿಸಿ ವಿಕಿಪೀಡಿಯ ಮಾದರಿಯಲ್ಲಿ ಮುಕ್ತವಾಗಿ ಸಾರ್ವಜನಿಕರಿಗೆ ಒದಗಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.

ಮಹಾತ್ಮರ ಜಯಂತಿಗಳನ್ನು ಜಾತಿ ಕೇಂದ್ರಿತವಾಗಿ ಆಚರಿಸಲಾಗುತ್ತಿದೆ. ಜಾತಿ ಬಲ ಇರುವ ಜಯಂತಿಗಳು ಅದ್ಧೂರಿಯಾಗಿ ನಡೆದರೆ, ಜಾತಿ ಬಲ ಇಲ್ಲದವರು ಸರಳವಾಗಿ ನಡೆಸಲಾಗುತ್ತದೆ ಎಂಬ ದೂರು ಬಂದಿತ್ತು. ಹೀಗಾಗಿ ಮಹಾತ್ಮರ ಜಯಂತಿಗಳನ್ನು ಅರ್ಥಪೂರ್ಣವಾಗಿ ಆಚರಿಸಲು, ಈ ಬಗ್ಗೆ ರೂಪುರೇಷೆ ರಚಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಬಳಿಕ ತಜ್ಞರು, ರಾಜಕೀಯ ಪಕ್ಷಗಳ ಜತೆ ಚರ್ಚಿಸಲಾಗುತ್ತದೆ. ಮುಂದಿನ ವರ್ಷದಿಂದ ಹೊಸ ರೂಪದಲ್ಲಿ ಜಯಂತಿ ಆಚರಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಜಯಂತಿಗಳನ್ನು ರದ್ದುಪಡಿಸಿದರೆ ರಾಜಕಾರಣ ಮಾಡುತ್ತಾರೆ. ಹಾಗಾಗಿ ಸಹಮತ ಮೂಡಿಸಿ ತೀರ್ಮಾನ ಮಾಡಲಾಗುತ್ತದೆ ಎಂದು ಹೇಳಿದರು.

ರಾಜ್ಯದಲ್ಲಿ 18 ಸಕ್ಕರೆ ಕಾರ್ಖಾನೆಗಳಿವೆ. ಮೈಷುಗರ್ ಮಂಡ್ಯ ಕಾರ್ಖಾನೆ ಪುನಶ್ಚೇತನಕ್ಕೆ 504 ಕೋಟಿ ರೂ. ವ್ಯಯಿಸಲಾಗಿದೆ. ಆದರೂ ಅದರ ಪುನಶ್ಚೇತನ ಸಾಧ್ಯವಾಗಿಲ್ಲ. ಹೀಗಾಗಿ ಖಾಸಗಿ ಸಹಭಾಗಿತ್ವದಲ್ಲಿ ಪುನರಾರಂಭಿಸಲು ಅಧ್ಯಯನ ನಡೆಸಲಾಗುತ್ತಿದೆ ಎಂದರು.

ಆನೆಗೆ ಆಹಾರ ನೀಡಿದರೆ ಲದ್ದಿಯಾದರೂ ಹಾಕುತ್ತದೆ. ಮೈ ಶುಗರ್ ಗೆ ಈಗಾಗಲೇ ಸಾಕಷ್ಟು ತಿನ್ನಿಸಿಯಾಗಿದೆ. ಇದಕ್ಕೆ ತಿನ್ನಿಸಿದ್ರೆ ಲದ್ದಿಯಲ್ಲ ಏನೂ ಇಲ್ಲ. ಹೀಗಾಗಿ ಮತ್ತೆ ತಿನ್ನಿಸೋಕೆ ನಾವು ಹೋಗಲ್ಲ ಎಂದು ಸ್ಪಷ್ಟಪಡಿಸಿದರು.

ಸಕ್ಕರೆ ಕಾರ್ಖಾನೆಗಳು ರೈತರಿಗೆ ಪಾವತಿಸಲು ಬಾಕಿ ಉಳಿಸಿಕೊಂಡಿದ್ದ ಹಿಂದಿನ ಸಾಲುಗಳ ಒಟ್ಟು ಮೊತ್ತ 11948 ಕೋಟಿ ರೂ. ಪೈಕಿ 11,921 ಕೋಟಿ ರೂ. ಪಾವತಿಸಿದ್ದೇವೆ. ಸದ್ಯ ಕೇವಲ 37 ಕೋಟಿ ರೂ. ಮಾತ್ರ ಪಾವತಿ ಬಾಕಿ ಇದೆ ಎಂದು ಸಚಿವರು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com