ಪೌರತ್ವ ಮಸೂದೆ ಜಾರಿಯಾದರೆ ರಾಯಚೂರಿನಲ್ಲಿ ನೆಲೆಸಿರುವ 10 ಸಾವಿರ ಬಾಂಗ್ಲಾ ವಲಸಿಗರಿಗೆ ಲಾಭ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಈಗಾಗಲೇ ಲೋಕಸಭೆಯಲ್ಲಿ ಅಂಗೀಕಾರವಾಗಿರುವ ವಿವಾದಾತ್ಮಕ ಪೌರತ್ವ ತಿದ್ದುಪಡಿ ಮಸೂದೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು....
ಪೌರತ್ವ ತಿದ್ದುಪಡಿ ಮಸೂದೆ ವಿರೋಧಿ ಪ್ರತಿಭಟನೆ
ಪೌರತ್ವ ತಿದ್ದುಪಡಿ ಮಸೂದೆ ವಿರೋಧಿ ಪ್ರತಿಭಟನೆ

ರಾಯಚೂರು: ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಈಗಾಗಲೇ ಲೋಕಸಭೆಯಲ್ಲಿ ಅಂಗೀಕಾರವಾಗಿರುವ ವಿವಾದಾತ್ಮಕ ಪೌರತ್ವ ತಿದ್ದುಪಡಿ ಮಸೂದೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬುಧವಾರ ರಾಜ್ಯಸಭೆಯಲ್ಲಿ ಮಂಡಿಸಿದ್ದು, ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಮತ್ತೊಂದೆಡೆ ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಅಸ್ಸಾಂ, ತ್ರಿಪುರ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಹಿಂಸಾತ್ಮಕ ಪ್ರತಿಭಟನೆ ನಡೆಯುತ್ತಿದೆ.

ಈ ಮಧ್ಯೆ, ಕರ್ನಾಟಕ ರಾಯಚೂರು ಜಿಲ್ಲೆಯಲ್ಲಿ ಕಳೆದ 34 ವರ್ಷಗಳಿಂದ ವಾಸವಾಗಿದ್ದರೂ ಭಾರತದ ಪೌರತ್ವ ಸಿಗದೇ ಪರದಾಡುತ್ತಿರುವ ಸುಮಾರು 20 ಸಾವಿರ ಬಾಂಗ್ಲಾದೇಶದ ವಲಸಿಗರು ರಾಜ್ಯಸಭೆಯಲ್ಲೂ ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರವಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.

ಈ ಪೌರತ್ವ ತಿದ್ದುಪಡಿ ಮಸೂದೆಯಿಂದ ತಾಂತ್ರಿಕವಾಗಿ ರಾಯಚೂರಿನ ಸಿಂಧನೂರು ತಾಲೂಕಿನ 4 ಕ್ಯಾಂಪ್ ಗಳಲ್ಲಿ ವಾಸವಾಗಿರುವ ಸುಮಾರು 10 ಸಾವಿರ ಬಾಂಗ್ಲಾ ವಲಸಿಗರಿಗೆ ಲಾಭವಾಗಲಿದೆ ಮತ್ತು ಅವರಿಗೆ ಪೌರತ್ವ ಪ್ರಮಾಣಪತ್ರ ಸಿಗುವ ಸಾಧ್ಯತೆ ಇದೆ.

1971ರಲ್ಲಿ ಪಾಕಿಸ್ತಾನದಿಂದ ಬಾಂಗ್ಲಾದೇಶ ವಿಭಜನೆಯಾದ ವೇಳೆ ಸುಮಾರು ಜನ ಹಿಂದೂಗಳು ರಾಯಚೂರಿನ ಸಿಂಧನೂರು ತಾಲೂಕಿಗೆ ಬಂದು ನೆಲೆಸಿದ್ದಾರೆ. ಸರ್ಕಾರ ಇವರಿಗೆಲ್ಲಾ ಪುನರ್ವಸತಿ ಕಲ್ಪಿಸಿತು. ಪುನಃ 1983 ರಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ಹೆಚ್ಚಾಗಿ ಮತ್ತಷ್ಟು ಜನ ಮನೆ ಮಠ ತೊರೆದು ಬಾಂಗ್ಲಾದೇಶದಿಂದ ಭಾರತ ಸರ್ಕಾರ ಗುರುತಿಸಿದಂತೆ ಸಿಂಧನೂರು ತಾಲೂಕಿಗೆ ಬಂದು ನೆಲೆಸಿದರು. ಹೀಗೆ ಬಂದ ಸುಮಾರು 20 ಸಾವಿರಕ್ಕೂ ಹೆಚ್ಚು ಜನ ರಾಯಚೂರು ಜಿಲ್ಲೆಯಲ್ಲಿ ನೆಲೆಸಿದ್ದು, ಅವರಿಗೆ ಇನ್ನೂ ಪೌರತ್ವ ಸಿಕ್ಕಿಲ್ಲ.

ಇಲ್ಲಿನ ಬಾಂಗ್ರಾ ವಲಸಿಗರಿಗೆ ಸರ್ಕಾರ ಭೂಮಿ ನೀಡಿದ್ದರೂ ಅದರ ಮೇಲೆ ಯಾವುದೇ ಅಧಿಕಾರವಿಲ್ಲದೆ ರೈತರು ಒದ್ದಾಡುತ್ತಿದ್ದಾರೆ. ಬಾಂಗ್ಲಾದೇಶದಿಂದ ವಲಸೆ ಬಂದ ಜನರು ಇನ್ನೂ ಭಾರತೀಯರಾಗಿಲ್ಲ.

ಒಟ್ಟನಲ್ಲಿ ದೇಶಬಿಟ್ಟು ದೇಶಕ್ಕೆ ಬಂದ ಜನ ಇಲ್ಲಿ ನೆಲೆ ಕಂಡುಕೊಂಡಿದ್ದಾರಾದ್ರೂ ಕೆಲ ಭಾರತೀಯ ನಾಗರೀಕ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಸೌಲಭ್ಯಗಳಿಗಾಗಿ ಹಲವಾರು ವರ್ಷಗಳಿಂದ ಹೋರಾಟ ನಡೆಸಿದ್ದರೂ ಇನ್ನೂ ಸಂಪೂರ್ಣ ಯಶಸ್ಸು ಸಿಕ್ಕಿಲ್ಲ. ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಮಸೂದೆ ಜಾರಿಯಾದರೆ ಸುಮಾರು 10 ಸಾವಿರ ಜನ ಭಾರತೀಯ ನಾಗರೀಕರಾಗಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com