ಪೌರತ್ವ ಮಸೂದೆಗೆ ಮೊದಲು ಮುಸ್ಲಿಮರು, ನಂತರ ಇತರರು ಬಲಿ: ಪ್ರೊ. ರವಿವರ್ಮ ಕುಮಾರ್ ಎಚ್ಚರಿಕೆ

ಪೌರತ್ವ ತಿದ್ದುಪಡಿ ಮಸೂದೆ ಸಂವಿಧಾನ ವಿರೋಧಿಯಾಗಿದ್ದು, ಇದರಿಂದ ಕೇವಲ ಮುಸ್ಲಿಮರಿಗೆ ಮಾತ್ರವಲ್ಲ ಮುಂದಿನ ದಿನಗಳಲ್ಲಿ ಇತರರೂ ಸಹ ಇದರ ದುಷ್ಪರಿಣಾಮಕ್ಕೆ ತುತ್ತಾಗಬೇಕಾಗುತ್ತದೆ.
ರವಿವರ್ಮ ಕುಮಾರ್
ರವಿವರ್ಮ ಕುಮಾರ್

ಬೆಂಗಳೂರು: ಪೌರತ್ವ ತಿದ್ದುಪಡಿ ಮಸೂದೆ ಸಂವಿಧಾನ ವಿರೋಧಿಯಾಗಿದ್ದು, ಇದರಿಂದ ಕೇವಲ ಮುಸ್ಲಿಮರಿಗೆ ಮಾತ್ರವಲ್ಲ ಮುಂದಿನ ದಿನಗಳಲ್ಲಿ ಇತರರೂ ಸಹ ಇದರ ದುಷ್ಪರಿಣಾಮಕ್ಕೆ ತುತ್ತಾಗಬೇಕಾಗುತ್ತದೆ. ನಾವು ಈಗಲೇ ಇದರ ವಿರುದ್ಧ ಎಚ್ಚೆತ್ತುಕೊಂಡು ಪ್ರತಿಭಟಿಸದಿದ್ದರೆ, ಹಿಟ್ಲರ್‌ನ ಸೆರೆವಾಸದಿಂದ ಬಿಡುಗಡೆಗೊಂಡ ಮಾರ್ಟಿನ್ ನಿಯೋಮುಲ್ಲರ್ ಅವರಿಗಾದ ಗತಿಯೂ ನಮಗಾಗಲಿದೆ ಎಂದು ಹಿರಿಯ ನ್ಯಾಯವಾದಿ ಹಾಗೂ ಮಾಜಿ ಅಡ್ವೊಕೇಟ್ ಜನರಲ್ ಪ್ರೊ.ರವಿವರ್ಮಕುಮಾರ್ ಅವರು ಎಚ್ಚರಿಸಿದ್ದಾರೆ.

ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಒ) ನಗರದ ಸ್ಕೌಟ್ಸ್ ಆಂಡ್ ಗೈಡ್ಸ್‌ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ "2019ರ ಆರ್ಥಿಕ ಬಿಕ್ಕಟ್ಟು -ಯುವ ಜನ" ಕುರಿತ ರಾಜ್ಯಮಟ್ಟದ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆಯಡಿ ಪಾಕಿಸ್ತಾನ, ಬಾಂಗ್ಲಾ ಮತ್ತು ಅಫ್ಘಾನಿಸ್ತಾನದ ಹಿಂದೂಗಳು, ಕ್ರೈಸ್ತರು, ಬೌದ್ಧರು, ಪಾರ್ಸಿ, ಜೈನರಿಗೆ ಭಾರತದ ಪೌರತ್ವ ನೀಡಲಾಗುತ್ತದೆ. ಆದರೆ ಇಲ್ಲಿ ದೌರ್ಜನ್ಯಕ್ಕೊಳಗಾಗುವ ಮುಸ್ಲಿಮರನ್ನು ಹೊರಗಿಡಲಾಗಿದೆ. ನೇಪಾಳ, ಬರ್ಮಾ, ಶ್ರೀಲಂಕಾದಲ್ಲಿ ಲಕ್ಷಾಂತರ ಮಂದಿ ದೌರ್ಜನ್ಯಕ್ಕೊಳಗಾದವರು ಇದ್ದಾರೆ. ಅವರ ಬಗ್ಗೆ ಇದು ಮೌನವಹಿಸುತ್ತದೆ. ಧರ್ಮದ ಆಧಾರದಲ್ಲಿ ರೂಪಿತವಾಗಿರುವ ಈ ಮಸೂದೆಯು ಸಂವಿಧಾನದ ತತ್ವಗಳಿಗೆ ವಿರುದ್ಧವಾಗಿದ್ದು, ಇದು ದೇಶವಿಭಜನೆಗೆ ಕಾರಣವಾಗಲಿದೆ. ಹಿಟ್ಲರ್ ಕೂಡ ಇದೇ ರೀತಿಯ ಕೆಲಸ  ಮಾಡಿದ್ದ, ಯಹೂದಿಯರನ್ನು ಬಂಧಿಸಿಡಲು ಪ್ರತ್ಯೇಕ ಜೈಲುಗಳನ್ನು ಸ್ಥಾಪಿಸಿದ್ದ. ಅದೇ ಮಾದರಿಯ ಜೈಲುಗಳನ್ನು ಬೆಂಗಳೂರಿನ ನೆಲಮಂಗಲ ಬಳಿ ನಿರ್ಮಿಸಲಾಗುತ್ತಿದೆ. ಮೊದಲು ಅಕ್ರಮ ವಲಸಿಗರನ್ನು ಇಟ್ಟ ಬಳಿಕ ಅವರು ಇತರ ಧರ್ಮ, ಜಾತಿಯವರನ್ನು ಗುರಿಯಾಗಿಸುತ್ತಾರೆ ಎಂದು ಅವರು ಎಚ್ಚರಿಸಿದರು.

ಹಿಟ್ಲರ್‌ ನಿರ್ಮಿಸಿದ್ದ ಜೈಲಿನಲ್ಲಿ 60 ಲಕ್ಷ ಜನರನ್ನು ಹತ್ಯೆ ಮಾಡಲಾಗಿತ್ತು. ಹಿಟ್ಲರ್‌ನ ಸಾವಿನ ಬಳಿಕ ಜೈಲಿನಲ್ಲಿ ಉಳಿದವರನ್ನು ಬಿಡುಗಡೆ ಮಾಡಲಾಯಿತು. ಹೀಗೇ ಕೊನೆಯ ತಂಡದಲ್ಲಿ ಬಿಡುಗಡೆಗೊಂಡ ಮಾರ್ಟಿನ್ ನಿಯೋಮುಲ್ಲರ್ ನನ್ನು ಅಮೆರಿಕದ ಸಂಸತ್‌ ಗೌರವಿಸಿತು. ಈ ವೇಳೆ ಮಾತನಾಡಿದ ಮಾರ್ಟಿನ್, "ಅವರು ಮೊದಲು ಯಹೂದಿಯರನ್ನು ಹಿಡಿದು ಜೈಲಿಗೆ ಹಾಕಿದರು, ನಾನು ಯಹೂದಿಯಲ್ಲದ್ದರಿಂದ ನಾನು ಮೌನವಾಗಿದ್ದೆ, ಅವರು ಬಳಿಕ ಕಮ್ಯುನಿಸ್ಟರನ್ನು ಹಿಡಿದು ಜೈಲಿಗಟ್ಟಿದರು. ನಾನು ಕಮ್ಯುನಿಸ್ಟನಾಗಿರಲಿಲ್ಲ. ಆದ್ದರಿಂದ ತಟಸ್ಥನಾಗಿದ್ದೆ. ಮತ್ತೆ ಅವರು ಕೆಥೋಲಿಕ್‌ನವರನ್ನು ಬಂಧಿಸಿ ಜೈಲಿಗಟ್ಟಿದರು. ನಾನು ಪ್ರೊಟೆಸ್ಟೆಂಟ್ ಆಗಿದ್ದುದರಿಂದ ಪ್ರತಿಭಟಿಸಲಿಲ್ಲ. ಕೊನೆಗೆ ಅವರು ನನ್ನನ್ನು ಬಂಧಿಸಿದಾಗ ನನ್ನ ಬಗ್ಗೆ ಮಾತನಾಡಲು ಯಾರೂ ಇರಲಿಲ್ಲ." ಎಂದಿದ್ದರು. ಇದೇ ರೀತಿ ನಾವು ಪೌರತ್ವ ತಿದ್ದುಪಡಿ ಮಸೂದೆ ಬಗ್ಗೆ ನಾವು ಈಗ ಮೌನವಹಿಸಿದರೆ ಮುಂದೆ ನಾವು ದುಃಖಿಸಬೇಕಾದ ಸನ್ನಿವೇಶ ಸೃಷ್ಟಿಯಾಗಬಹುದು ಎಂದು ಪ್ರೊ.ರವಿವರ್ಮ ಕುಮಾರ್ ಹೇಳಿದ್ದಾರೆ.

ದೇಶದಲ್ಲಿ ಕೈಗಾರಿಕೆಗಳು ಮತ್ತು ಶಾಲೆಗಳಿಗಿಂತ ವೇಗದಲ್ಲಿ ಪೂಜಾಸ್ಥಳಗಳ ನಿರ್ಮಾಣವಾಗುತ್ತಿವೆ. ಹೆಚ್ಚಿನ ಪೂಜಾಸ್ಥಳಗಳು ಸರ್ಕಾರಿ ಜಮೀನಿನನ್ನು ಅತಿಕ್ರಮಿಸಿ ನಿರ್ಮಿಸಲಾಗುತ್ತಿದೆ. 2011ರ ಜನಗಣತಿ ಪ್ರಕಾರ ದೇಶದಲ್ಲಿ 33 ಕೋಟಿ ಪೂಜಾ ಸ್ಥಳಗಳಿದ್ದು, ಎಲ್ಲಾ ಧರ್ಮಗಳು ಪೈಪೋಟಿಗೆ ಬಿದ್ದಂತೆ ದೇವಸ್ಥಾನ, ಮಸೀದಿ, ಚರ್ಚ್‌ಗಳನ್ನು ನಿರ್ಮಿಸುತ್ತಿವೆ. ಪ್ರತಿ 400 ಜನರಿಗೆ ಒಂದು ಪೂಜಾ ಸ್ಥಳವಿದೆ. ಆದರೆ ಪ್ರತಿ 400 ಜನರಿಗೆ ಆಸ್ಪತ್ರೆ ಮತ್ತು ಶಾಲೆಗಳು ಇಲ್ಲ ಎಂದು ಅವರು ವಿಷಾದಿಸಿದರು.

ದೇಶವು ಪುರೋಹಿತ ಕೈಗೆ ಹೋಗುತ್ತಿದ್ದು, ದೇಶದ ಮುಂದಿನ ಭವಿಷ್ಯ ಬಹಳ ಕರಾಳವಾಗಿರಲಿದೆ. ಸಿಎಬಿ ದೇಶದ ಸಂವಿಧಾನದ ಮೂಲತತ್ವಗಳಾದ ಸಮಾನತೆಯ ವಿರುದ್ಧವಾಗಿದ್ದು, ಇದು ದೇಶದ ಭದ್ರತೆ ಮತ್ತು ಒಕ್ಕೂಟ ವ್ಯವಸ್ಥೆಯನ್ನು ಛಿದ್ರ ಮಾಡಲಿದೆ ಎಂದರು.

ಹೈದರಾಬಾದ್‌ನಲ್ಲಿ ಅತ್ಯಾಚಾರ ಆರೋಪಿಗಳನ್ನು ಪೊಲೀಸರು ಗುಂಡಿಟ್ಟು ಹತ್ಯೆ ಮಾಡಿದ ಘಟನೆಯನ್ನು ಖಂಡಿಸಿದ ಅವರು, ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ. ನ್ಯಾಯಾಂಗ ಮತ್ತು ನ್ಯಾಯಾಧೀಶರ ಕೆಲಸವನ್ನು ಪೊಲೀಸರು ಕೈಗೆತ್ತಿಕೊಳ್ಳುವುದು ಆತಂಕಕಾರಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎಐಡಿವೈಒ ಅಖಿಲ ಭಾರತ ಸಮಿತಿ ಅಧ್ಯಕ್ಷ ರಾಮಾಂಜನಪ್ಪ ಆಲ್ದಳ್ಳಿ ಮಾತನಾಡಿ, ದೇಶದ ಜಿಡಿಪಿ ದರ ದಿನೇ ದಿನೇ ಕುಸಿಯುತ್ತಿದ್ದು, ಯಾವುದೇ ವಲಯಗಳಲ್ಲೂ ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಇದರ ಬಗ್ಗೆ ಗಮನಹರಿಸಬೇಕಾದ ಸರ್ಕಾರ ಜನರ ಮನಸ್ಸನ್ನು ಬೇರೆಡೆ ತಿರುಗಿಸುವ ಪ್ರಯತ್ನ ನಡೆಸುತ್ತಿದೆ ಎಂದು ಆರೋಪಿಸಿದರು.

ಕಾರ್ಯಕ್ರಮದಲ್ಲಿ ಎಐಡಿವೈಒ ರಾಜ್ಯಾಧ್ಯಕ್ಷೆ ಎಂ.ಉಮಾದೇವಿ, ಕಾರ್ಯದರ್ಶಿ ಡಾ.ಜಿ.ಎಸ್. ಕುಮಾರ್, ಅಂಕಣಕಾರ ಕೆ.ಸಿ.ರಘು, ಶಶಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com