ಸರ್ಕಾರ ಸ್ಥಿರವಾಗಿದೆ, ಇನ್ನು ಗೊಂದಲವಿಲ್ಲದೆ ಕೆಲಸ ಮಾಡಿ: ಅಧಿಕಾರಿಗಳಿಗೆ ಸಿಎಂ ಯಡಿಯೂರಪ್ಪ

ಉಪಚುನಾವಣೆ ಫಲಿತಾಂಶ ಹೊರಬಿದ್ದಿದ್ದು ಸರ್ಕಾರ ಸುಭದ್ರವಾದ ಬೆನ್ನಲ್ಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಆಡಳಿತ ಯಂತ್ರ ಚುರುಕುಗೊಳಿಸಲು ಮುಂದಾಗಿದ್ದಾರೆ. 
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಬೆಂಗಳೂರು: ಉಪಚುನಾವಣೆ ಫಲಿತಾಂಶ ಹೊರಬಿದ್ದಿದ್ದು ಸರ್ಕಾರ ಸುಭದ್ರವಾದ ಬೆನ್ನಲ್ಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಆಡಳಿತ ಯಂತ್ರ ಚುರುಕುಗೊಳಿಸಲು ಮುಂದಾಗಿದ್ದಾರೆ. 

ಶುಕ್ರವಾರ ಸರ್ಕಾರದ ವಿವಿಧ ಇಲಾಖೆಗಳ ಮುಖ್ಯಸ್ಥರಾದ ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳ ಸುದೀರ್ಘ ಸಭೆ ನಡೆಸಿದ ಯಡಿಯೂರಪ್ಪ ಅವರು, ಸರ್ಕಾರ ಸ್ಥಿರವಾಗಿದ್ದು, ಇನ್ನು ಮುಂದೆ ಯಾವುದೇ ಗೊಂದಲಗಳನ್ನು ಇಟ್ಟುಕೊಳ್ಳದೆ ಅಭಿವೃದ್ಧಿ ಮತ್ತು ಜನರ ಸಮಸ್ಯೆಗಳತ್ತ ಹೆಚ್ಚಿನ ಗಮನ ಹರಿಸಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. 

ಪ್ರವಾಹ ಸಂತ್ರಸ್ತರಿಗೆ ಸಮರ್ಪಕವಾಗಿ ಪರಿಹಾರ ವಿತರಣೆಯಾಗದಿರುವುದಕ್ಕೆ ಮತ್ತು ಮನೆಗಳ ನಿರ್ಮಾಣಕ್ಕಾಗಿ ಅಡಿಪಾಯ ಹಾಕರು ಪ್ರತಿ ಮನೆಗೆ ರೂ.1 ಲಕ್ಷ ಬಿಡುಗಡೆಯಾದರೂ ಸರಿಯಾಗಿ ಅಡಿಪಾಯ ಹಾಕದಿರುವ ಬಗ್ಗೆ ಪರಿಶೀಲನೆ ಮಾಡದಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. 

ಸಭೆ ಆರಂಭವಾಗುತ್ತಿದ್ದಂತೆಯೇ ಅಧಿಕಾರಿ ವರ್ಗಕ್ಕೆ ಸರ್ಕಾರದ ಸ್ಥಿರತೆಯ ಬಗ್ಗೆ ಆಶ್ವಾಸನೆ ಮೂಡಿಸಿದರು. ಸರ್ಕಾರದ ಸ್ಥಿರತೆ ಬಗ್ಗೆ ಗೊಂದಲಗಳಿದ್ದವು. ಆದರೆ, ಉಪಚುನಾವಣೆ ಬಳಿಕ ಎಲ್ಲಾ ಗೊಂದಲಗಳು ಬಗೆಹರಿದಿವೆ. ಸರ್ಕಾರವು ಸ್ಥಿರವಾಗಿದ್ದು, ಆಡಳಿತದಲ್ಲಿ ಬಿಗಿ ತರಬೇಕು. ಇನ್ನು ಮುಂದೆ ಯಾವುದೇ ಗೊಂದಲಗಳನ್ನು ಇಟ್ಟುಕೊಳ್ಳದೆ ಅಭಿವೃದ್ಧಿ ಮತ್ತು ಜನರ ಸಮಸ್ಯೆಗಳತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ನಿರ್ದೇಶನ ನೀಡಿದರು. 

ಇದೇ ರೀತಿ ವಿಧಾನಸಭೆ ಅಧಿವೇಶನಕ್ಕೂ ಮುನ್ನ ಜನವರಿ 20ರೊಳಗಾಗಿ ಮತ್ತೊಮ್ಮೆ ಸಭೆಯನ್ನು ಕರೆಯುತ್ತೇನೆ. ಅಷ್ಟರೊಳಗಾಗಿ ಎಲ್ಲಾ ಅಭಿವೃದ್ಧಿ ಕಾರ್ಯಗಳು, ಪ್ರಮುಖವಾಗಿ ಪ್ರವಾಹ ಪೀಡಿತ ಪ್ರದೇಶಗಳ ಅಭಿವೃದ್ಧಿ ಕಾರ್ಯಗಳು ಪೂರ್ಣಗೊಳ್ಳಬೇಕು. ಈ ಕಾರ್ಯಗಳ ವರದಿಯನ್ನು ಸಲ್ಲಿಸಬೇಕೆಂದು ಯಡಿಯೂರಪ್ಪ ಅವರು ಅಧಿಕಾರಿಗಳಿಗೆ ಆದೇಶಿಸಿದ್ದಾರೆ. 

ವಿವಿಧ ಇಲಾಖೆಯ ಕಾರ್ಯದರ್ಶಿಗಳು 15 ದಿನಗಳಿಗೊಮ್ಮೆ ಜಿಲ್ಲೆಗಳಿಗೆ ಭೇಟಿ ನೀಡಬೇಕು. ಅಧಿಕಾರಿಗಳ ಸಭೆ ನಡೆಸಿ ವಿವಿಧ ಯೋಜನೆಗಳ ಅನುಷ್ಠಾನದ ಕುರಿತು ಖುದ್ದು ಪರಿಶೀಲನೆ ನಡೆಸಬೇಕು. ನಿಯಮಿತವಾಗಿ ಮಾಸಿಗ ಪ್ರಗತಿ ಪರಿಶೀಲನಾ ನಡೆಸಿ, ವರದಿಗಳನ್ನು ಸಂಬಂಧಪಟ್ಟ ಇಲಾಖೆಯ ಸಚಿವರಿಗೆ ಸಲ್ಲಿಸಬೇಕು. ಅಲ್ಲದೇ, ಮುಖ್ಯ ಕಾರ್ಯದರ್ಶಿಗೂ ವರದಿ ಸಲ್ಲಿಸಬೇಕು. ಇದರಿಂದ ಸಮಸ್ಯೆಗಳ ಕುರಿತು ತಿಳಿದುಕೊಂಡು ಬಗೆಹರಿಸಲು ಸಾಧ್ಯವಾಗಲಿದೆ. ಸಕಾಲ ಯೋಜನೆಯಡಿ ಕಡತ ವಿಲೇವಾರಿ ತ್ವರಿತವಾಗಿ ಆಗಬೇಕು. ಇತರೆ ಕಡತಗಳನ್ನು ಒಂದು ವಾರಕ್ಕಿಂತ ಹೆಚ್ಚಿನ ಅವಧಿಗೆ ಬಾಕಿ ಉಳಿಸಬಾರದು ಎಂದು ಯಡಿಯೂರಪ್ಪ ಅವರು ಸೂಚಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com