ಪೌರತ್ವ ಕಾಯ್ದೆಯಿಂದ ಭಾರತೀಯ ಮುಸ್ಲಿಮರಿಗೆ ತೊಂದರೆಯಾಗದು: ಪೇಜಾವರ ಶ್ರೀ

ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಪ್ಘಾನಿಸ್ತಾನದ ಮುಸ್ಲೀಂ ಸಮುದಾಯ ಹೊರತುಪಡಿಸಿ ವಲಸೆ ಬಂದಿರುವ ಆರು ಧಾರ್ಮಿಕ ಅಲ್ಪ ಸಂಖ್ಯಾತರಿಗೆ ಪೌರತ್ವ ನೀಡುವ ಸಂಬಂಧ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಅನಗತ್ಯ ಗೊಂದಲ ಸರಿಯಲ್ಲ ಎಂದು ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.
ವಿಶ್ವೇಶ್ವರ ತೀರ್ಥ ಸ್ವಾಮೀಜಿ
ವಿಶ್ವೇಶ್ವರ ತೀರ್ಥ ಸ್ವಾಮೀಜಿ

ರಾಯಚೂರು: ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಪ್ಘಾನಿಸ್ತಾನದ ಮುಸ್ಲೀಂ ಸಮುದಾಯ ಹೊರತುಪಡಿಸಿ ವಲಸೆ ಬಂದಿರುವ ಆರು ಧಾರ್ಮಿಕ ಅಲ್ಪ ಸಂಖ್ಯಾತರಿಗೆ ಪೌರತ್ವ ನೀಡುವ ಸಂಬಂಧ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಅನಗತ್ಯ ಗೊಂದಲ ಸರಿಯಲ್ಲ ಎಂದು ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ದೇಶದ ಮುಸ್ಲೀಂ ಸಮುದಾಯದವರಿಗೆ ಈ ತಿದ್ದುಪಡಿ ಕಾಯ್ದೆಯಿಂದ ಯಾವುದೇ ತೊಂದರೆ ಎದುರಾಗದು. ಬಾಂಗ್ಲಾದಿಂದ ವಲಸೆ ಬಂದಿರುವವ ಧಾರ್ಮಿಕ ಅಲ್ಪ ಸಂಖ್ಯಾತರ ಮೇಲಿನ ಅಭಿಮಾನದಿಂದ ಪೌರತ್ವ ನೀಡಲಾಗುತ್ತಿದೆ. ದೇಶದಲ್ಲಿ ಅನೇಕ ದಶಕಗಳಿಂದ ವಾಸವಾಗಿರುವವರಿಗೆ ಯಾವುದೇ ಆತಂಕಬೇಡ. ಪೌರತ್ವ ಕಾಯಿದೆ ಬಗ್ಗೆ ವಿನಾಕಾರಣ ಗೊಂದಲ ಸೃಷ್ಟಿಸಲಾಗುತ್ತಿದೆ ಎಂದರು.

ಈಶಾನ್ಯ ರಾಜ್ಯಗಳ ನಿವಾಸಿಗಳಿಗೆ ಅವರ ಪ್ರಾದೇಶಿಕ ಅಸ್ಮಿತೆಗೆ ಧಕ್ಕೆ ಬರುತ್ತದೆ ಎಂಬ ಆತಂಕವಿದೆ. ಹಾಗಾಗಿಯೇ ಅಲ್ಲಿ ಹೋರಾಟ ನಡೆಯುತ್ತಿದೆ. ಕೇಂದ್ರ ಸರ್ಕಾರ ಸೇನೆ ಬಳಸಿ ನಿಯಂತ್ರಿಸುವ ಬದಲು ಮನವರಿಕೆ ಮಾಡಿಕೊಟ್ಟು ಶಾಂತಿ ನೆಲೆಸುವಂತೆ ಮಾಡಬೇಕು ಎಂದು ಕಿವಿ ಮಾತು ಹೇಳಿದರು.

ಹಿಂದೂಗಳಿಗೆ ಅವರದ್ದೇ ಆದ ದೇಶ ಎಂದರೆ ಅದು ಭಾರತ. ಹಾಗಾಗಿ ವಲಸೆ ಬಂದಿರುವ ಹಿಂದೂಗಳಿಗೆ ಆಶ್ರಯ ನೀಡುವ ಕೇಂದ್ರದ ಉದ್ದೇಶ ಸರಿಯಾಗಿದೆ. ಬಾಂಗ್ಲಾದಿಂದ ವಲಸೆ ಬಂದಿರುವವರಿಗೆ ಅನ್ಯ ರಾಜ್ಯಗಳಲ್ಲಿ ಆಶ್ರಯ ನೀಡದೇ ಪಶ್ಚಿಮ ಬಂಗಾಳದಲ್ಲೇ ಇರುವಂತೆ ನಿಯಂತ್ರಿಸಬೇಕು ಎಂದರು.

ಪೌರತ್ವ ಕಾಯಿದೆ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ದೇಶದ ಮುಸ್ಲಿಂರನ್ನು ದೇಶದಿಂದ ಹೊರಗೆ ಕಳುಹಿಸಲು ಈ ಕಾಯ್ದೆಗೆ ಅನುಕೂಲವಾಗಲಿದೆ. ಹೀಗಾಗಿ ಸ್ಥಳೀಯ ಮುಸ್ಲೀಂ ಸಮುದಾಯದವರು ಆತಂಕ ಪಡುವ ಅಗತ್ಯವಿಲ್ಲ ಎಂದರು.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಟ್ರಸ್ಟ್ ರಚನೆ ಪ್ರಕ್ರಿಯೆಗೆ ಕೇಂದ್ರ ಚಾಲನೆ ನೀಡಿದ್ದು, ಸುಪ್ರೀಂಕೋರ್ಟ್ ಸೂಚನೆಯಂತೆ ಕಾಲಮಿತಿಯೊಳಗೆ ಟ್ರಸ್ಟ್ ರಚನೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com