ಸಿಲಿಕಾನ್ ಸಿಟಿಯಲ್ಲಿ ರೌಡಿ ಶೀಟರ್ ಬರ್ಬರ ಹತ್ಯೆ

ರೌಡಿಶೀಟರ್​ನೋರ್ವನನ್ನು ಬರ್ಬರವಾಗಿ ದುಷ್ಕರ್ಮಿಗಳು ಹತ್ಯೆ ಮಾಡಿರುವ ಘಟನೆ ನಗರದ ಸಂಪಿಗೆಹಳ್ಳಿ ಬಳಿ ಸೋಮವಾರ ರಾತ್ರಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬೆಂಗಳೂರು: ಅಪರಾಧ ಕೃತ್ಯಗಳಿಂದ ಪೊಲೀಸರಿಗೆ ತಲೆನೋವಾಗಿದ್ದ ಕುಖ್ಯಾತ ರೌಡಿಯೊಬ್ಬನನ್ನು ದುಷ್ಕರ್ಮಿಗಳ ಗುಂಪೊಂದು ಅಟ್ಟಾಡಿಸಿಕೊಂಡು ಹೋಗಿ ಮಚ್ಚು ಲಾಂಗ್‌ಗಳಿಂದ ಕೊಚ್ಚಿ ಕೊಲೆ ಮಾಡಿರುವ ದುರ್ಘಟನೆ ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ನಡೆದಿದ್ದು, ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ಕೋಗಿಲುವಿನ ಭರತ್ ಅಲಿಯಾಸ್ ಕೋಗಿಲು ಭರತ್(೨೮)ಕೊಲೆಯಾದ ಕುಖ್ಯಾತ ರೌಡಿ. ಸಂಪಿಗೆಹಳ್ಳಿಯ ಅಗ್ರಹಾರ ಬಡಾವಣೆಯ ಚೌಡೇಶ್ವರಿ ಬಾರ್ ಬಳಿಯಿಂದ ರಾತ್ರಿ ೯.೩೦ರ ವೇಳೆ ಭರತ್‌ನನ್ನು ಅಟ್ಟಾಡಿಸಿಕೊಂಡು ಹೋಗಿ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ.

ನಾಲ್ಕೈದು ಮಂದಿ ದುಷ್ಕರ್ಮಿಗಳು ಕೋಗಿಲು ಭರತ್‌ನನ್ನು ಅಟ್ಟಾಡಿಸಿಕೊಂಡು ಹೋಗಿ ಮಾರಕಾಸ್ತ್ರಗಳಿಂದ ಮುಖ, ತಲೆ, ಹೊಟ್ಟೆ ದೇಹದ ಇತರ ಭಾಗಗಳಿಗೆ ಮಚ್ಚು ಲಾಂಗಿನಿಂದ ಹೊಡೆದು ಕೊಲೆಗೈದು ಪರಾರಿಯಾಗಿದ್ದಾರೆ.

ರೌಡಿ ಭರತ್ ಬಾರ್‌ನಲ್ಲಿ ಕಂಠಪೂರ್ತಿ ಕುಡಿದು ಹೊರಬರುತ್ತಿರುವುದನ್ನು ಹೊಂಚುಹಾಕಿ ಕಾಯುತ್ತಿದ್ದ ದುಷ್ಕರ್ಮಿಗಳು ಕೊಂದಿದ್ದಾರೆ. ಹಳೆ ದ್ವೇಷದ ಹಿನ್ನಲೆಯಲ್ಲಿ ಭರತ್ ಕೊಲೆ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಯಲಹಂಕ ರೌಡಿಶೀಟರ್
ಕೋಗಿಲು ಭರತನ ವಿರುದ್ಧ ಯಲಹಂಕ, ಸಂಪಿಗೆಹಳ್ಳಿ ಸೇರಿದಂತೆ ಇತರೆ ಪೊಲೀಸ್ ಠಾಣೆಗಳಲ್ಲಿ ಕೊಲೆಯತ್ನ, ಸುಲಿಗೆ ಬೆದರಿಕೆ ಇನ್ನಿತರ ಗಂಭೀರ ಪ್ರಕರಣಗಳು ದಾಖಲಾಗಿದ್ದು, ಈತ ಯಲಹಂಕ ಪೊಲೀಸ್ ಠಾಣೆಯ ರೌಡಿಪಟ್ಟಿಯಲ್ಲಿಯೂ ಇದ್ದಾನೆ.

ಸಂಪಿಗೆಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು. ದುಷ್ಕರ್ಮಿಗಳ ಪತ್ತೆಗಾಗಿ ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ಡಿಸಿಪಿ ಡಾ.ಭೀಮಾಶಂಕರ್ ಗುಳೇದ್ ತಿಳಿಸಿದ್ದಾರೆ.

ಈ ನಡುವೆ ಕೊಲೆ ಮಾಡಿದ ದುಷ್ಕರ್ಮಿಗಳ ಸುಳಿವು ಪೊಲೀಸರಿಗೆ ಸಿಕ್ಕಿದ್ದು, ಬಾರ್ ಮುಂಭಾಗದಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮಾರ ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗಿದೆ. ಕೊಲೆ ಮಾಡಿದವರು ಅಗ್ರಹಾರ ಬಡಾವಣೆಯ ಯುವಕರೇ ಎಂದು ತಿಳಿದುಬಂದಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಕಾರಿಗೆ ಬೆಂಕಿಹಚ್ಚಿದ್ದ
ಭರತ್ ಅಲಿಯಾಸ್ ಕೋಗಿಲು ಭರತ್ ಕಳೆದ ವಿಧಾನಸಭಾ ಚುನಾವಣಾ ಸಮಯದಲ್ಲಿ ಮಾಜಿ ಸಚಿವ ಕಾಂಗ್ರೆಸ್ಸಿನ ಕೃಷ್ಣ ಬೈರೇಗೌಡರ ಪರ ಪ್ರಚಾರ ಮಾಡಿದ್ದ. ಆ ಸಮಯದಲ್ಲಿ ತನ್ನ ಕಾರಿಗೆ ತಾನೇ ಬೆಂಕಿ ಹಾಕಿ ಇದನ್ನ ಬಿಜೆಪಿ ಪಕ್ಷದವರು ಮಾಡಿದರು ಎಂದು ಆರೋಪಿಸಿದ್ದ. ಆ ಸಮಯದಲ್ಲಿ ಭರತ್ ತನ್ನ ಕಾರಿಗೆ ಬೆಂಕಿ ಹಚ್ಚುತ್ತಿದ್ದ ಸಿಸಿಟಿವಿ ವಿಡಿಯೋ ಸಿಕ್ಕಿ ತನ್ನ ಅಸಲಿಯತ್ತು ಬಯಲಾಗಿ ಬಂಧಿತನಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com