ರಾಯಚೂರು, ಯಾದಗಿರಿ ಜಿಲ್ಲೆಗಳ ಅಭ್ಯುದಯಕ್ಕಾಗಿ ಸರ್ಕಾರಿ-ಖಾಸಗಿ ಕಂಪನಿಗಳ ಸಹಭಾಗಿತ್ವ: ಶಾಲಿನಿ ರಜನೀಶ್

ರಾಜ್ಯದ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ತೀವ್ರ ಕುಸಿತಗೊಂಡಿರುವ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರದ ಯೋಜನೆಗಳ ಜೊತೆ ಖಾಸಗಿ ಕಂಪನಿಗಳು ಸಹ ಕೈಜೋಡಿಸಿದಲ್ಲಿ ಉತ್ತಮ ಸಾಧನೆ...
ಶಾಲಿನಿ ರಜನೀಶ್
ಶಾಲಿನಿ ರಜನೀಶ್

ಬೆಂಗಳೂರು: ರಾಜ್ಯದ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ತೀವ್ರ ಕುಸಿತಗೊಂಡಿರುವ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರದ ಯೋಜನೆಗಳ ಜೊತೆ ಖಾಸಗಿ ಕಂಪನಿಗಳು ಸಹ ಕೈಜೋಡಿಸಿದಲ್ಲಿ ಉತ್ತಮ ಸಾಧನೆ ಮಾಡಬಹುದು ಎಂದು ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಹೇಳಿದ್ದಾರೆ. 

ವಿಕಾಸಸೌಧದಲ್ಲಿ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ಪ್ರಗತಿ ಉದ್ದೇಶದಿಂದ ಸಮಗ್ರ ಅಭಿವೃದ್ಧಿ ಪ್ರಾಧಿಕಾರ, ಸರ್ಕಾರಿ ಮತ್ತು ಖಾಸಗಿ ಒಡೆತನದ ಕಂಪನಿಗಳ ಸಭೆ ಉದ್ದೇಶಿಸಿ  ಮಾತನಾಡಿದ ಅವರು, ಸದರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಸಾಧಿಸಲು ಖಾಸಗಿ ಕಂಪನಿಗಳ ತಂತ್ರಜ್ಞಾನ, ವಿಜ್ಞಾನ ಹಾಗೂ ಸಹಭಾಗಿತ್ವ ಅಗತ್ಯವಾಗಿದೆ. ಪ್ರಸ್ತುತ ಇರುವ ಸರ್ಕಾರಿ ಯೋಜನೆಗಳ ಜೊತೆ ಕೈಜೋಡಿಸಿದಾಗ ಅತ್ಯಂತ ವೇಗವಾಗಿ ಮತ್ತು ಗುಣಮಟ್ಟದ ಅಭಿವೃದ್ಧಿ ಸಾಧಿಸಬಹುದು ಎಂದರು.

ಖಾಸಗಿ ಕಂಪನಿಗಳ ಸಾಮಾಜಿಕ ಜವಾಬ್ದಾರಿ ಕಾರ್ಯಕ್ರಮದಡಿ ತಮ್ಮಲ್ಲಿರುವ ಮಾನವ ಹಾಗೂ ಆರ್ಥಿಕ ಸಂಪನ್ಮೂಲ ಕ್ರೋಢಿಕರಿಸಿ ತಮಗೆ ತಮಗೆ ಸಂಬಂಧಿಸಿದ ಇಲಾಖೆಗಳ ಕೆಲಸಗಳಲ್ಲಿ ಕೈಜೋಡಿಸಬಹುದು. ಮಾನವ ಅಭಿವೃದ್ಧಿ ಸೂಚ್ಯಂಕದಡಿ ಅಗತ್ಯವಿರುವ ಅಂಶಗಳನ್ನು ಪಟ್ಟಿಮಾಡಿ, ಎಲ್ಲರ ಸಹಭಾಗಿತ್ವದಡಿ ಅಭಿವೃದ್ಧಿ ಸಾಧಿಸಬಹುದು ಎಂದು ಹೇಳಿದರು.

ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಕುಮಾರ್ ನಾಯಕ್ ಮಾತನಾಡಿ, ಈ ಹಿಂದೆ ಅವರು ರಾಯಚೂರು ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದಾಗ ಇದ್ದ ರಾಯಚೂರು ಜಿಲ್ಲೆಗೂ ಈಗ ತಾವೇ ಉಸ್ತುವಾರಿ ಹೊಂದಿರುವ ರಾಯಚೂರು ಜಿಲ್ಲೆಗೂ ಯಾವುದೇ ವ್ಯತ್ಯಾಸವಿಲ್ಲ. ಅಲ್ಲಿನ ಪರಿಸ್ಥಿತಿ ಈಗಲೂ ಅತ್ಯಂತ ಶೋಚನೀಯವಾಗಿದೆ. ಜಿಲ್ಲೆಯಲ್ಲಿ ಕೃಷ್ಣಾ ಮತ್ತು ತುಂಗಭದ್ರಾ ನದಿಗಳು ಹರಿಯುತ್ತಿದ್ದರೂ ಸಹ ಕೃಷಿಯಲ್ಲಿ ಅಭಿವೃದ್ಧಿ ಕಾಣದಿರುವುದಕ್ಕೆ ಕಾರಣಗಳನ್ನು ಹುಡುಕುವ ಅವಶ್ಯಕತೆ ಇದೆ ಎಂದು ಹೇಳಿದರು.

ಸಭೆಯಲ್ಲಿ ಸುಸ್ಥಿರ ಅಭಿವೃದ್ಧಿಯ ಗುರಿಗಳಲ್ಲಿ ಮುಖ್ಯವಾಗಿ ಬಡತನ ನಿರ್ಮೂಲನೆ, ಹಸಿವು ಮುಕ್ತ, ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮ, ಗುಣಮಟ್ಟದ ಶಿಕ್ಷಣ, ಲಿಂಗ ಸಮಾನತೆ, ಸ್ವಚ್ಚ ನೀರು ಮತ್ತು ನೈರ್ಮಲ್ಯ, ಅಗ್ಗದಿಂದ ಕೂಡಿದ ಶುದ್ಧಶಕ್ತಿ,  ಗೌರವಯುತ ಕೆಲಸ ಮತ್ತು ಆರ್ಥಿಕ ಬೆಳವಣಿಗೆ, ಉದ್ಯಮ ಅವಿಷ್ಕಾರ ಮತ್ತು ಮೂಲಸೌಕರ್ಯಗಳು, ಅಸಮಾನತೆಗಳ ಇಳಿಕೆ, ಸುಸ್ಥಿರ ನಗರಗಳು ಮತ್ತು ಸಮುದಾಯಗಳು, ಜವಾಬ್ದಾರಿಯುತ ಬಳಕೆ ಮತ್ತು ಉತ್ಪಾದನೆ, ಹವಾಮಾನದ ಬಗ್ಗೆ ಕ್ರಮ, ಜಲದ ಜೀವರಾಶಿ, ಭೂಮಿ ಮೇಲಿನ ಜೀವರಾಶಿ, ಶಾಂತಿ, ನ್ಯಾಯ ಮತ್ತು ಸದೃಡ ಸಂಸ್ಥೆಗಳು ಕುರಿತಂತೆ ಗುರಿಮುಟ್ಟಲು ಅವಶ್ಯವಿರುವ ಅಂಶಗಳು ಮತ್ತು ಸಹಭಾಗಿತ್ವದ ಬಗ್ಗೆ ಚರ್ಚಿಸಲಾಯಿತು.  

ಸರ್ಕಾರದ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು, ರಾಯಚೂರು ಮತ್ತು ಯಾದಗಿರಿ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಅಧಿಕಾರಿಗಳು ಸೇರಿದಂತೆ 50 ಕ್ಕೂ ಹೆಚ್ಚಿನ ಖಾಸಗಿ ಕಂಪನಿಗಳು ಮತ್ತು ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com