ಪುಸ್ತಕ ಪ್ರಾಧಿಕಾರದ 2018ನೇ ಸಾಲಿನ ವಾರ್ಷಿಕ ಪ್ರಶಸ್ತಿ : ಎಂಎಂ ಕಲಬುರಗಿ ಪ್ರಶಸ್ತಿಗೆ ಚಿದಾನಂದಮೂರ್ತಿ ಆಯ್ಕೆ

ಕನ್ನಡ ಪುಸ್ತಕ ಪ್ರಾಧಿಕಾರದ 2018ನೇ ಸಾಲಿನ ಹಿರಿಯ ಸಾಹಿತಿ ಡಾ. ಎಂ.ಎಂ. ಕಲಬುರಗಿ ಮಾನವಿಕ ಅಧ್ಯಯನ ಪ್ರಶಸ್ತಿಗೆ ಸಂಶೋಧಕ ಡಾ. ಎಂ. ಚಿದಾನಂದ ಮೂರ್ತಿ ಅವರನ್ನು ಆಯ್ಕೆ ಮಾಡಲಾಗಿದೆ. 

Published: 18th December 2019 07:18 PM  |   Last Updated: 18th December 2019 07:18 PM   |  A+A-


Chidananda Murthy

ಚಿದಾನಂದ ಮೂರ್ತಿ

Posted By : Vishwanath S
Source : UNI

ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರದ 2018ನೇ ಸಾಲಿನ ಹಿರಿಯ ಸಾಹಿತಿ ಡಾ. ಎಂ.ಎಂ. ಕಲಬುರಗಿ ಮಾನವಿಕ ಅಧ್ಯಯನ ಪ್ರಶಸ್ತಿಗೆ ಸಂಶೋಧಕ ಡಾ. ಎಂ. ಚಿದಾನಂದ ಮೂರ್ತಿ ಅವರನ್ನು ಆಯ್ಕೆ ಮಾಡಲಾಗಿದೆ. 

ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಎಂ.ಎನ್. ನಂದೀಶ್ ಹಂಚೆ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಡಾ. ಚಿಮೂ ಅವರಿಗೆ 75 ಸಾವಿರ ರೂ ನಗದು ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು. ಅಭಿನವ ಪ್ರಕಾಶನಕ್ಕೆ ಅತ್ಯುತ್ತಮ ಪ್ರಕಾಶನ ಪ್ರಶಸ್ತಿ ದೊರೆತಿದ್ದು, ಒಂದು ಲಕ್ಷ ರೂ ನಗದು ಬಹುಮಾನ ಒಳಗೊಂಡಿದೆ ಎಂದರು. 

ಡಾ. ಜಿ.ಪಿ. ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿಗೆ [50 ಸಾವಿರ ನಗದು] ಕಾರ್ಕಳದ ಪ್ರೊ. ಎಂ. ರಾಮಚಂದ್ರ, ಡಾ|| ಅನುಪಮಾ ನಿರಂಜನ ವೈದ್ಯಕೀಯ ಹಾಗೂ ವಿಜ್ಞಾನ ಸಾಹಿತ್ಯ ಪ್ರಶಸ್ತಿಗೆ [25 ಸಾವಿರ ರೂ ನಗದು] ಡಾ|| ವಿಜಯಲಕ್ಷ್ಮಿ ಬಾಳೇಕುಂದ್ರಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು. 

ಪ್ರಾಧಿಕಾರದಿಂದ ನೀಡಲಾಗುವ ಪುಸ್ತಕ ಸೊಗಸು ಹಾಗೂ ಮುದ್ರಣ ಸೊಗಸು ಬಹುಮಾನಗಳಿಗೆ ಕೂಡ ಆಯ್ಕೆ ಮಾಡಲಾಗಿದ್ದು, ಮೊದಲನೇ ಬಹುಮಾನವನ್ನು  ಬಿ. ಜಯರಾಮ ಅವರ ಸಮಕಾಲೀನ ದೃಶ್ಯಕಲೆಯ ಸಾಕ್ಷಿ ಪ್ರಜ್ಞೆ ಪುಸ್ತಕ ಪಡೆದುಕೊಂಡಿದೆ [25 ಸಾವಿರ ರೂ ನಗದು] ಇದನ್ನು ಬೆಂಗಳೂರು ಆರ್ಟ್ ಪೌಂಡೇಷನ್ ಪ್ರಕಟಿಸಿದೆ. ಎರಡನೇ ಬಹುಮಾನವನ್ನು ಬಳ್ಳಾರಿಯ ಪಲ್ಲವ ಪ್ರಕಾಶನದ ಪ್ರಕಟಣೆ [20ಸಾವಿರ ರೂ ] ಕಾಡುಜೇಡ ಮತ್ತು ಬಾತುಕೋಳಿ ಹೂ ಕೃತಿ ಪಡೆದುಕೊಂಡಿದೆ. ಮೂರನೇ ಬಹುಮಾನವನ್ನು ಯಾಜಿ ಪ್ರಕಾಶನದ [10 ಸಾವಿರ ರೂ ನಗದು] ಜಾಡಮಾಲಿಯ ಜೀವಕೇಳುವುದಿಲ್ಲ ಕೃತಿಗೆ ಸಂದಿದೆ.

ಮಕ್ಕಳ ಸೊಗಸು ಬಹುಮಾನಕ್ಕೆ ಹೊನ್ನಾವರದ ಪ್ರಣತಿ ಪ್ರಕಾಶನದ [8 ಸಾವಿರ ರೂ] ಉಪನಿಷತ್ತು ಕೃತಿ ಆಯ್ಕೆಯಾಗಿದೆ. ಮುಖಪುಟ ಚಿತ್ರಕ್ಕಾಗಿ [10 ಸಾವಿರ ರೂ ] ಚಂದ್ರನಾಥ ಆಚಾರ್ಯ, ಮುಖಪುಟ ವಿನ್ಯಾಸಕ್ಕಾಗಿ [8 ಸಾವಿರ ರೂ] ಎಂ.ಎಸ್. ಪ್ರಕಾಶ್ ಬಾಬು, ಅತ್ಯುತ್ತಮ ಮುದ್ರಣಕ್ಕಾಗಿ ನೀಡಲಾಗುವ ಪ್ರಶಸ್ತಿಗಾಗಿ ಬೆಂಗಳೂರಿನ ಲಕ್ಷ್ಮೀ ಮುದ್ರಣಾಲಯ [8 ಸಾವಿರ ರೂ] ವನ್ನು ಆಯ್ಕೆ ಮಾಡಲಾಗಿದೆ. 

ಈ ಎಲ್ಲಾ ಪ್ರಶಸ್ತಿಗಳನ್ನು ಜನವರಿ 8ರಂದು ಬೆಂಗಳೂರಿನ ನಯನ ರಂಗಮಂದಿರದಲ್ಲಿ ನಡೆಯುವ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿತರಿಸಲಾಗುವುದೆಂದು ಡಾ. ಎಂ.ಎನ್. ನಂದೀಶ್ ಹಂಚೆ ಹೇಳಿದ್ದಾರೆ.

Stay up to date on all the latest ರಾಜ್ಯ news with The Kannadaprabha App. Download now
facebook twitter whatsapp