ಮಂಗಳೂರು ಗಲಭೆಗೆ ಸಿಎಂ ಮತ್ತು ಗೃಹ ಸಚಿವರೇ ನೇರ ಕಾರಣ, ನನ್ನ ಹಕ್ಕನ್ನು ಕಸಿಯಲಾಗಿದೆ:ಸಿದ್ದರಾಮಯ್ಯ ಆರೋಪ 

ಮಂಗಳೂರಿನಲ್ಲಿನ ಪರಿಸ್ಥಿತಿ ಅರಿಯಲು ಅಲ್ಲಿಗೆ ಹೋಗಲು ಯತ್ನಿಸಿದರೆ ರಾಜ್ಯ ಸರ್ಕಾರ ಅನುಮತಿ ನಿರಾಕರಿಸಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ವಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ. 
ಮಂಗಳೂರು ಗಲಭೆಗೆ ಸಿಎಂ ಮತ್ತು ಗೃಹ ಸಚಿವರೇ ನೇರ ಕಾರಣ, ನನ್ನ ಹಕ್ಕನ್ನು ಕಸಿಯಲಾಗಿದೆ:ಸಿದ್ದರಾಮಯ್ಯ ಆರೋಪ 

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ಸಂಬಂಧ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ ಪೊಲೀಸರು ನಡೆಸಿದ ಗೋಲಿಬಾರ್ ನಲ್ಲಿ ಇಬ್ಬರು ಮೃತಪಟ್ಟಿರುವ ಘಟನೆ ನಂತರ ಮಂಗಳೂರಿನಲ್ಲಿನ ಪರಿಸ್ಥಿತಿ ಅರಿಯಲು ಅಲ್ಲಿಗೆ ಹೋಗಲು ಯತ್ನಿಸಿದರೆ ರಾಜ್ಯ ಸರ್ಕಾರ ಅನುಮತಿ ನಿರಾಕರಿಸಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ವಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.


ಇಂದು ಬೆಂಗಳೂರಿನ ತಮ್ಮ ನಿವಾಸ ಕಾವೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ವಿಪಕ್ಷ ನಾಯಕ ಶ್ಯಾಡೊ ಚೀಫ್ ಮಿನಿಸ್ಟರ್ ಇದ್ದಂತೆ ನನ್ನ ಹಕ್ಕನ್ನು ಕಸಿದುಕೊಳ್ಳುವ ಯತ್ನ ನಡೆದಿದೆ.ಆಡಳಿತ ಪಕ್ಷದ ನಾಯಕರು ಮಂಗಳೂರಿಗೆ ಹೋಗಲು ಸಾಧ್ಯವಾದರೆ ವಿರೋಧ ಪಕ್ಷದ ನಾಯಕರನ್ನೇಕೆ ಬಿಡುತ್ತಿಲ್ಲ, ವಿಪಕ್ಷ ಇರುವುದಾದರೂ ತಪ್ಪು, ಅನ್ಯಾಯ ಆಗುತ್ತಿದ್ದರೆ ಅದನ್ನು ಗಮನಕ್ಕೆ ತಂದು ಸರಿಪಡಿಸಲು ಅಲ್ಲವೇ ಎಂದು ಆರೋಪಿಸಿದರು.


ಇವತ್ತು ದೇಶದೆಲ್ಲೆಡೆ ಹಿಂಸಾಚಾರ ನಡೆಯುತ್ತಿದ್ದರೆ ಅದಕ್ಕೆ ನೇರವಾಗಿ ನರೇಂದ್ರ ಮೋದಿ, ಅಮಿತ್ ಶಾ ಕಾರಣ, ಉತ್ತರ ಪ್ರದೇಶದಲ್ಲಿ 11 ಮಂದಿ ಪೊಲೀಸ್ ಗೋಲಿಬಾರ್ ನಲ್ಲಿ ಮೃತಪಟ್ಟಿದ್ದಾರೆ. 50ಕ್ಕೂ ಹೆಚ್ಚು ಮಂದಿ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ, ಹಿಂದೆ ತುರ್ತು ಪರಿಸ್ಥಿತಿ ಸಮಯದಲ್ಲಿ ಕೂಡ ಹೀಗೆ ಆಗಿರಲಿಲ್ಲ. ಬಿಜೆಪಿಯವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದವರಲ್ಲ. ದೇಶಕ್ಕೋಸ್ಕರ ತ್ಯಾಗ, ಬಲಿದಾನ ಮಾಡಿದವರಲ್ಲ, ಬರೀ ಬೆಂಕಿ ಹಚ್ಚುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದವರು ಎಂದು ಆರೋಪಿಸಿದರು.


ಸರ್ಕಾರದಲ್ಲಿ ಗೃಹ ಸಚಿವರು ಇಲ್ಲ ಎಂದು ನನಗೆ ಅನಿಸುತ್ತಿದೆ, ಪೊಲೀಸರೇ ಲಾಠಿಚಾರ್ಜ್ ಮಾಡಿದ್ದಾರೆ, ಗೋಲಿಬಾರ್ ಮಾಡಿದ್ದಾರೆ ಎಂದರೆ ಗೃಹ ಸಚಿವರು ಯಾಕೆ ಇರಬೇಕು, ಗೃಹ ಸಚಿವ ಬಸವರಾಜ ಬೊಮ್ಮಾಯಿಯವರ ಹೇಳಿಕೆ ನೋಡಿದರೆ ಹಾಗೆಯೇ ಅನಿಸುತ್ತಿದೆ. ಈ ಘಟನೆ ಬಗ್ಗೆ ವಿಧಾನಸಭೆಯಲ್ಲಿ ಉತ್ತರ ನೀಡಲು ಪೊಲೀಸನವರು ಬರುತ್ತಾರೆಯೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.


ಮಂಗಳೂರಿನ ಗಲಭೆಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿಯವರೇ ನೇರ ಕಾರಣ. ಈ ಘಟನೆ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು, ಹೈಕೋರ್ಟ್ ನ ಹಾಲಿ ನ್ಯಾಯಾಧೀಶರ ಮೂಲಕವೇ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.


ರಾಜ್ಯದಲ್ಲಿ 144 ಸೆಕ್ಷನ್ ಹಾಕುವ ಅಗತ್ಯವೇ ಇರಲಿಲ್ಲ. ಅದರಿಂದಾಗಿಯೇ ಇಷ್ಟೆಲ್ಲಾ ಆಗಿರುವುದು. ಸೆಕ್ಷನ್ 144 ಹಾಕುವ ಪರಿಸ್ಥಿತಿ ಕರ್ನಾಟಕದಲ್ಲಿ ಇರಲಿಲ್ಲ. ಜನರ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಹೀಗೆ ಮಾಡಲಾಗಿದೆ ಎಂದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com