ಪ್ರತಿಭಟನಾಕಾರರ ಮೇಲೆ ಗೋಲಿಬಾರ್, ಆಸ್ಪತ್ರೆಯಲ್ಲಿ ದಾಂಧಲೆ: ಸ್ಪಷ್ಟನೆ ನೀಡಿದ ಮಂಗಳೂರು ಪೊಲೀಸರು

ಹಿಂಸಾಚಾರದ ವೇಳೆ ಪ್ರತಿಭಟನಾಕಾರರ ಮೇಲಿನ ಗೋಲಿಬಾರ್ ಹಾಗೂ ಆಸ್ಪತ್ರೆಯಲ್ಲಿ ಪೊಲೀಸರ ದಾಂಧಲೆ ಕುರಿತಂತೆ ಮಂಗಳೂರು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. 
ಮಂಗಳೂರು ಪೊಲೀಸರು
ಮಂಗಳೂರು ಪೊಲೀಸರು

ಮಂಗಳೂರು: ಹಿಂಸಾಚಾರದ ವೇಳೆ ಪ್ರತಿಭಟನಾಕಾರರ ಮೇಲಿನ ಗೋಲಿಬಾರ್ ಹಾಗೂ ಆಸ್ಪತ್ರೆಯಲ್ಲಿ ಪೊಲೀಸರ ದಾಂಧಲೆ ಕುರಿತಂತೆ ಮಂಗಳೂರು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. 

ಪೊಲೀಸರ ವರ್ತನೆ ಕುರಿತ ವಿಡಿಯೋ ನನ್ನ ಗಮನಕ್ಕೆ ಇನ್ನೂ ಬಂದಿಲ್ಲ. ಈ ಬಗ್ಗೆ ತನಿಖೆ ನಡೆಸುವ ಭರವಸೆ ನೀಡುತ್ತೇನೆಂದು ಪೊಲೀಸ್ ಆಯುಕ್ತ ಹರ್ಷ ಅವರು ಹೇಳಿದ್ದಾರೆ. 

ಇದೇ ವೇಳೆ ಪೊಲೀಸರ ವರ್ತನೆಯನ್ನೂ ಆಯುಕ್ತರು ಸಮರ್ಥಿಸಿಕೊಂಡಿದ್ದಾರೆ. ನಮಗೆ ಬೇರಾವುದೇ ಆಯ್ಕೆಗಳಿರಲಿಲ್ಲ. ಪ್ರತಿಭಟನಾಕಾರರು ಠಾಣೆಯೊಳಗೆ ನುಗ್ಗಿ ಪೊಲೀಸರ ಮೇಲೆ ದಾಳಿ ನಡೆಸಲು ಮುಂದಾಗಿದ್ದರು. ಹೀಗಾಗಿ ಉದ್ರಿಕ್ತ ಗುಂಪಿನ ಮೇಲೆ ಗುಂಡು ಹಾರಿಸಲೇಬೇಕಿತ್ತು. 6,000 ದಿಂದ 7,000 ಪ್ರತಿಭಟನಾಕಾರರು ಸ್ಥಳದಲ್ಲಿದ್ದರು ಎಂದು ಆಯುಕ್ತರು ಹೇಳಿದ್ದಾರೆ. 

ಪ್ರತಿಭಟನಾಕಾರರ ದಾಳಿಗೆ ಡಿಸಿಪಿ ಅರುಣಂಗ್ಶು ಗಿರಿಯವರ ಕೈ ಬಹುತೇಕ ಕತ್ತರಿಸಿ ಹೋಗಿತ್ತು. ಅಲ್ಲದೆ, ಘಟನೆಯಲ್ಲಿ 33 ಮಂದಿ ಪೊಲೀಸರು ಗಾಯಗೊಂಡಿದ್ದರು ಎಂದು ತಿಳಿಸಿದ್ದಾರೆ. 

ಶುಕ್ರವಾರ ಟಿವಿ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದ ಆಯುಕ್ತರು, ಗೋಲಿಬಾರ್ ನಲ್ಲಿ ಗಾಯಗೊಂಡಿದ್ದರವನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಸ್ಪತ್ರೆಗೆ ಸುಮಾರು 50 ಮಂದಿ ಪತ್ರಕರ್ತರು ಬಂದಿದ್ದರು. ಈ ವೇಳೆ ಅವರ ಕೈಯಲ್ಲಿ ಶಸ್ತ್ರಾಸ್ತ್ರಗಳಿದ್ದವು ಎಂದು ಹೇಳಿದ್ದರು. 

ಇದಾದ ಕೆಲ ಗಂಟೆಗಳ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಅವರು, ಪತ್ರಕರ್ತರು ನಗರಕ್ಕೆ ಅಪರಿಚಿತ ವ್ಯಕ್ತಿಗಳಾಗಿದ್ದರಿಂದ ವರದಿ ಮಾಡಲು ಅವರಿಗೆ ಅವಕಾಶ ನೀಡಿರಲಿಲ್ಲ ಎಂದಿದ್ದರು .

ವರದಿಗಳ ಪ್ರಕಾರ ಆಸ್ಪತ್ರೆಗೆ ಬಂದಿದ್ದು 50 ಪತ್ರಕರ್ತರಲ್ಲ 8 ಮಂದಿ ಪತ್ರಕರ್ತರು ಎಂದು ಹೇಳಲಾಗುತ್ತಿದೆ. ಪತ್ರಕರ್ತು ಶಸ್ತ್ರಾಸ್ತ್ರಗಳು ಹಿಡಿದು ಬಂದಿದ್ದರು ಎಂಬುದಕ್ಕೆ ಯಾವುದೇ ಸಾಕ್ಷ್ಯಗಳು ಪತ್ತೆಯಾಗಿಲ್ಲ ಈ ಬಗ್ಗೆ ಹರ್ಷ ಅವರೂ ಕೂಡ ಸ್ಪಷ್ಟನೆಗಳನ್ನು ನೀಡಿಲ್ಲ. ಆದರೆ, ಯಾವ ಕಾರಣಕ್ಕೆ ಮಾಧ್ಯಮಗಳನ್ನು ತಪ್ಪು ಹಾದಿಗೆಳೆದರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಗೋಲಿಬಾರ್ ವೇಳೆ ಕೇವಲ 5 ಮಂದಿ ಗಾಯಗೊಂಡಿದ್ದಾರೆಂದು ಆಯುಕ್ತರು ಹೇಳಿದ್ದರು. ಆದರೆ, ಆಸ್ಪತ್ರೆಗಳಲ್ಲಿ 25ಕ್ಕೂ ಹೆಚ್ಚು ಮಂದಿ ಚಿಕಿತ್ಸೆ ಪಡೆದಿರುವುದು ವರದಿಗಳಿಂದ ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com