ಕಾಂಗ್ರೆಸ್‌ಗೆ ವೋಟ್‌ ಬ್ಯಾಂಕ್ ಚಿಂತೆ, ಬಿಜೆಪಿಗೆ ಅಭಿವೃದ್ಧಿ ಚಿಂತೆ: ಕಾರಜೋಳ

ಸ್ವಾತಂತ್ರ್ಯ ನಂತರ ಕಳೆದ ೭೦ ವರ್ಷಗಳ ಅವಧಿಯಲ್ಲಿ ಕಾಂಗ್ರೆಸ್ ಬರೀ ವೋಟ್‌ ಬ್ಯಾಂಕ್ ರಾಜಕಾರಣ ಮಾಡುತ್ತ ಬಂದಿದ್ದು, ಈಗಲೂ ಅದನ್ನೇ ಮುಂದುವರಿಸಲು ವಿನಾಕಾರಣ ಮುಸ್ಲೀಂರಲ್ಲಿ ಪೌರತ್ವ ಕಾನೂನಿನ ಬಗ್ಗೆ ತಪ್ಪು ಕಲ್ಪನೆ ಮೂಡಿಸಲು ದೇಶದಾದ್ಯಂತ ಬೊಬ್ಬೆ ಹಾಕುವ ಕೆಲಸ ಮಾಡುತ್ತಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ಗೋವಿಂದ ಕಾರಜೋಳ
ಗೋವಿಂದ ಕಾರಜೋಳ

ಬಾಗಲಕೋಟೆ: ಸ್ವಾತಂತ್ರ್ಯ ನಂತರ ಕಳೆದ ೭೦ ವರ್ಷಗಳ ಅವಧಿಯಲ್ಲಿ ಕಾಂಗ್ರೆಸ್ ಬರೀ ವೋಟ್‌ ಬ್ಯಾಂಕ್ ರಾಜಕಾರಣ ಮಾಡುತ್ತ ಬಂದಿದ್ದು, ಈಗಲೂ ಅದನ್ನೇ ಮುಂದುವರಿಸಲು ವಿನಾಕಾರಣ ಮುಸ್ಲೀಂರಲ್ಲಿ ಪೌರತ್ವ ಕಾನೂನಿನ ಬಗ್ಗೆ ತಪ್ಪು ಕಲ್ಪನೆ ಮೂಡಿಸಲು ದೇಶದಾದ್ಯಂತ ಬೊಬ್ಬೆ ಹಾಕುವ ಕೆಲಸ ಮಾಡುತ್ತಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪೌರತ್ವ ಕಾನೂನು ಸಮರ್ಪಕ ಜಾರಿಗೆ ಬಾರದ ಹಿನ್ನೆಲೆಯಲ್ಲಿ ಭಯೋತ್ಪಾದಕ ಚಟವಟಿಕೆಗಳಿಂದ ದೇಶಕ್ಕೆ ಅಪಾರ ನಷ್ಟ ಉಂಟಾಗಿದೆ. ಇದನ್ನು ತಡೆಯಲು ಕಾನೂನು ಜಾರಿಗೆ ತಂದರೆ ಅದನ್ನು ಕಾಂಗ್ರೆಸ್ ಏಕೆ ವಿರೋಧಿಸುತ್ತಿದೆ ಎಂದು ಪ್ರಶ್ನಿಸಿದ ಅವರು ದೇಶದ ೭೦ ವರ್ಷಗಳ ಇತಿಹಾಸದಲ್ಲಿ ಕಾಂಗ್ರೆಸ್ ಮುಸ್ಲೀಂರನ್ನು, ಹರಿಜನ ಗಿರಿಜನರನ್ನು ದುರ್ಬಳಕೆ ಮಾಡಿಕೊಂಡು ವೋಟ್‌ ಬ್ಯಾಂಕ್ ಆಗಿ ಮಾಡಿಕೊಂಡು ಬಂದಿದೆ. ಎಂದು ಆರೋಪಿಸಿದರು.

ವಿನಾಕಾರಣ ಮುಸಲ್ಮಾನರಿಗೆ ಈ ಕಾನೂನಿಂದ ಅನ್ಯಾಯ ಆಗಲಿದೆ ಎಂದು ಕಾಂಗ್ರೆಸ್ ಮುಸ್ಲಿಂರನ್ನು ಭಾವನಾತ್ಮಕವಾಗಿ ಕೆರಳಿಸುವ ಕೆಲಸ ಮಾಡುತ್ತಿದೆ. ಪೌರತ್ವ ಕಾನೂನು ಜಾರಿಯಿಂದ ಯಾರಿಗೂ ಅನ್ಯಾಯ ಆಗುವ ಪ್ರಶ್ನೆಯೇ ಇಲ್ಲ ಎಂದರು.

ವೈರಿ ದೇಶಗಳಿಂದ ಇಲ್ಲಿಗೆ ಬಂದು ಅಕ್ರಮವಾಗಿ ನೆಲೆಸಿದವರನ್ನು ಗುರುತಿಸಿ ಹೊರ ಹಾಕಲು ಈ ಕಾನೂನು ಸಹಕಾರಿ ಆಗಲಿದೆ. ಭಯೋತ್ಪಾದಕ ಶಕ್ತಿಗಳ ನಿಗ್ರಹಕ್ಕೆ ಸಹಕಾರಿ ಆಗಲಿದೆ ಎಂದು ಅವರು ಸ್ಪಷ್ಟ ಪಡಿಸಿದರು.

ಕಿಚಡಿ ಸರ್ಕಾರ: 
ಮಹಾರಾಷ್ಟದಲ್ಲಿನ ಮೂರು ಪಕ್ಷಗಳ ಕಿಚಡಿ ಸರ್ಕಾರದ ಮುಖ್ಯಮಂತ್ರಿ ಉದ್ಧವ ಠಾಕ್ರೆ ಅವರು ಜನರ ಚಿತ್ತವನ್ನು ಬೇರೆಡೆ ಸೆಳೆಯುವ ಹಿನ್ನೆಲೆಯಲ್ಲಿ  ಗಡಿ ಸಮಸ್ಯೆ ಕುರಿತ ಹೇಳಿಕೆ ನೀಡಿದ್ದಾರೆ. ಮಹಾದಲ್ಲಿನ ಅಪವಿತ್ರ ಮೈತ್ರಿ ಆಗಿದೆ. ಆ ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ ಕೂಡ ಪಾಲುದಾರ ಪಕ್ಷವಾಗಿದೆ. ಹಾಗಾಗಿ ಉದ್ಧವ ಹೇಳಿಕೆ ಬಗ್ಗೆ ಬೆಳಗಾವಿಯಲ್ಲಿನ ಕಾಂಗ್ರೆಸ್ ಮುಖಂಡರು ಮೌನಕ್ಕೆ ಶರಣಾಗಿದ್ದಾರೆ. ಗಡಿಸಮಸ್ಯೆ ಕುರಿತು ಉದ್ಧವ ಹೇಳಿಕೆಯಲ್ಲಿ ಯಾವುದೇ ಪ್ರಾಮಾಣಿಕ ಕಾಳಜಿ, ಕಳಕಳಿ ಇಲ್ಲ ಎಂದು ಅವರು ಹೇಳಿದರು.

ಭಾಷಾವಾರು ಪ್ರಾಂತಗಳ ಆಧಾರದ ಮೇಲೆ ರಾಜ್ಯಗಳ ಪುನರ್ ವಿಂಗಡಣೆ ಆಗಿದೆ. ಹಾಗಾಗಿ ಬೆಳಗಾವಿ ಹಾಗೂ ಸುತ್ತಲಿನ ಗ್ರಾಮಗಳು ರಾಜ್ಯದಲ್ಲೇ ಉಳಿಯಲಿವೆ ಎಂದರು.

ಯುಕೆಪಿ ಯೋಜನೆ ಪೂರ್ಣ:
ಕೃಷ್ಣಾ ಮೇಲ್ದಂಡೆ ಯೋಜನೆ ಕಾಮಗಾರಿ ಕುರಿತು ಪ್ರಸ್ತಾಪಿಸಿದ ಅವರು ಕಳೆದ ಆರು ವರ್ಷಗಳ ಕಾಲ ಕಾಂಗ್ರೆಸ್ ಸರ್ಕಾರ ಇತ್ತು. ಅವರು ಯುಕೆಪಿ ಯೋಜನೆ ಪೂರ್ಣಗೊಳಿಸಲಿಲ್ಲ. ಮುಂದಿನ ಮೂರುವರೆ ವರ್ಷಗಳ ಅವಧಿಯಲ್ಲಿ ಯುಕೆಪಿ ಎಲ್ಲ ಕಾಮಗಾರಿ ಪೂರ್ಣಗೊಳಿಸುವ ವಿಶ್ವಾಸವನ್ನು ಅವರು ವ್ಯಕ್ತ ಪಡಿಸಿದರು.


ಈಗಾಗಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ನೀರಾವರಿಗೆ ಪ್ರಥಮ ಆಧ್ಯತೆ ಎಂದು ಹೇಳಿದ್ದಾರೆ. ಮುಂದಿನ ಬಜೆಟ್‌ನಲ್ಲಿ ಅಗತ್ಯ ಹಣಕಾಸನ್ನು ಮೀಸಲಿಟ್ಟು, ನೀರಾವರಿ, ಪುನರ್ವಸತಿ, ಪರಿಹಾರ ಹಂಚಿಕೆ, ಭೂಸ್ವಾದೀನ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದರು.

ನ್ಯಾಯಮೂರ್ತಿ ಬ್ರಿಜೇಶ್‌ಕುಮಾರ ಅವರ ಆದೇಶದ ಪ್ರಕಾರ ರಾಜ್ಯಕ್ಕೆ ಹಂಚಿಕೆ ಆಗಿರುವ ನೀರನ್ನು ಪೂರ್ಣಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಪ್ರಪಂಚದ ಎಲ್ಲ ರಾಷ್ಟçಗಳಲ್ಲೂ ಪೌರತ್ವ ಕಾಯ್ದೆ ಜಾರಿಯಲ್ಲಿದೆ. ಪ್ರತಿಯೊಂದು ದೇಶ ಕೂಡ ತನ್ನ ಸುರಕ್ಷತೆ, ಅಭಿವೃದ್ಧಿ ದೃಷ್ಟಿಯಿಂದ ಅಲ್ಲಿನ ಸನ್ನಿವೇಶಕ್ಕೆ ತಕ್ಕಂತೆ ಕಾನೂನು ರೂಪಿಸಿಕೊಂಡಿವೆ. ಹಾಗೆ ನಮ್ಮ ದೇಶ ಕೂಡ ಅಭಿವೃದ್ಧಿ ಹಾಗೂ ಸುರಕ್ಷತೆ ಕಾರಣಕ್ಕಾಗಿ ಪೌರತ್ವ ತಿದ್ದುಪಡಿ ಕಾನೂನು ಜಾರಿಗೆ ತಂದಿದೆ ಎನ್ನುವುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com