ಆನೆಗೊಂದಿ ಉತ್ಸವದ ಸಿದ್ಧತೆ: ಸ್ವಚ್ಛತಾ ಕಾರ್ಯಕ್ಕೆ ಮುಂದಾದ ಅಧಿಕಾರಿಗಳು!

2020ರ ಜ.9, 10 ರಂದು ನಡೆಯುವ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಐತಿಹಾಸಿಕ ಆನೆಗೊಂದಿ ಉತ್ಸವ ನಿಮಿತ್ತ ಸೋಮವಾರ ಮುಂಜಾನೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಆನೆಗೊಂದಿ ಸುತ್ತಮುತ್ತಲೂ ಬೃಹತ್‌ ಸ್ವಚ್ಛತಾ ಕಾರ್ಯವನ್ನು ನಡೆಸಲಾಯಿತು. ವಿಶೇಷವೆಂದರೆ ಸರಕಾರಿ ಅಧಿಕಾರಿಗಳೇ ಸ್ವಚ್ಛತಾ ಸಾಮಗ್ರಿಗಳೊಂದಿಗೆ ಹಾಜರಾಗಿದ್ದಾಗಿತ್ತು..
ಆನೆಗೊಂದಿ ಉತ್ಸವದ ಸಿದ್ಧತೆ: ಸ್ವಚ್ಛತಾ ಕಾರ್ಯಕ್ಕೆ ಮುಂದಾದ ಅಧಿಕಾರಿಗಳು!
ಆನೆಗೊಂದಿ ಉತ್ಸವದ ಸಿದ್ಧತೆ: ಸ್ವಚ್ಛತಾ ಕಾರ್ಯಕ್ಕೆ ಮುಂದಾದ ಅಧಿಕಾರಿಗಳು!

ಕೊಪ್ಪಳ: ಸರಕಾರದಿಂದ ನಡೆಯುವ ಉತ್ಸವ ಅಂದ್ರೆ ಯಾರಿಗೆ ತಾನೇ ಉತ್ಸಾಹ ಇರಲ್ಲ ಹೇಳಿ? ಸ್ಥಳೀಯ ಕಲಾವಿದರಿಗೆ ಅವಕಾಶ ಸಿಗುತ್ತದೆ ಎನ್ನುವ ನಿರೀಕ್ಷೆಯಲ್ಲಿ ತಾಲೀಮು ನಡೆಸುವ ಉತ್ಸಾಹ. ಊರಿನವರಿಗೆ ಸೆಲೆಬ್ರೆಟಿಗಳನ್ನು ಹತ್ತಿರದಿಂದ ಕಣ್ತುಂಬಿಕೊಳ್ಳುವ ಉತ್ಸಾಹ. ಹಾಗೆಯೇ ಅಧಿಕಾರಿಗಳಿಗೆ ಉತ್ಸವವನ್ನ ಅಚ್ಚುಕಟ್ಟಾಗಿ ನಡೆಸಿ ಸರಕಾರದಿಂದ ಭೇಷ್ ಎನಿಸಿಕೊಳ್ಳುವ ಉತ್ಸಾಹ.

2020ರ ಜ.9, 10 ರಂದು ನಡೆಯುವ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಐತಿಹಾಸಿಕ ಆನೆಗೊಂದಿ ಉತ್ಸವ ನಿಮಿತ್ತ ಸೋಮವಾರ ಮುಂಜಾನೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಆನೆಗೊಂದಿ ಸುತ್ತಮುತ್ತಲೂ ಬೃಹತ್‌ ಸ್ವಚ್ಛತಾ ಕಾರ್ಯವನ್ನು ನಡೆಸಲಾಯಿತು. ವಿಶೇಷವೆಂದರೆ ಸರಕಾರಿ ಅಧಿಕಾರಿಗಳೇ ಸ್ವಚ್ಛತಾ ಸಾಮಗ್ರಿಗಳೊಂದಿಗೆ ಹಾಜರಾಗಿದ್ದಾಗಿತ್ತು..

ಸ್ವಚ್ಛತಾ ಕಾರ್ಯಕ್ಕೆ ಕೊಪ್ಪಳ ಸಹಾಯಕ ಆಯುಕ್ತರಾದ ಸಿ.ಡಿ.ಗೀತಾ ಚಾಲನೆ ನೀಡಿದರು. ವಿವಿಧ ಇಲಾಖೆಗಳ‌ ಅಧಿಕಾರಿಗಳ ಜೊತೆಗೆ ಸ್ಥಳೀಯರು, ಕಾರ್ಮಿಕರು‌‌ ಕೈ ಜೋಡಿಸಿದರು.

ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಎಸಿ ಸಿ.ಡಿ.ಗೀತಾ ಅವರು, ಉತ್ಸವದ ನಿಮಿತ್ತ ಆನೆಗೊಂದಿ ಸುತ್ತಮುತ್ತಲಿನ ಪರಿಸರ ಹಾಗೂ ಸ್ಮಾರಕಗಳನ್ನು ಶ್ರಮದಾನ ಮಾಡುವ ಮೂಲಕ ಸ್ವಚ್ಛಗೊಳಿಸುವ ಕಾರ್ಯಕ್ರಮವನ್ನು ನಡೆಸುತ್ತಿದ್ದೇವೆ. ಈ ಶ್ರಮದಾನದಲ್ಲಿ ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಭಾಗವಹಿಸಿದ್ದು, ಸುಮಾರು 14 ತಂಡಗಳಾಗಿ ಆನೆಗೊಂದಿ ಸುತ್ತಮುತ್ತಲಿನ ಸ್ಥಳಗಳು, ಸ್ಮಾರಕಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ ಎಂದರು.

ಇನ್ನು, ಶ್ರಮದಾನದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳಷ್ಟೇ ಅಲ್ಲದೆ, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಎನ್.ಸಿ.ಸಿ, ಸ್ಕೌಟ್ಸ್‌ & ಗೈಡ್ಸ್‌, ಸೇವಾದಳ, ಕೂಲಿಕಾರರು, ಚಾರಣ ಬಳಗ ಸೇರಿದಂತೆ ಒಟ್ಟು 450 ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು.

ಎಲ್ಲೆಲ್ಲಿ ಸ್ವಚ್ಛತೆ: 
ಮೊದಲಿಗೆ ಆನೆಗೊಂದಿಯ ಪ್ರವೇಶದ್ವಾರ ಕಡೆಬಾಗಿಲು ಮೂಲಕ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಒಟ್ಟು 14 ತಂಡಗಳಾಗಿ ಆನೆಗೊಂದಿಯ ಸುತ್ತಮುತ್ತಲಿನ 14 ಪ್ರಮುಖ ಸ್ಥಳಗಳಾದ ಸಣ್ಣ ಕಲ್ಲು ಬಾಗಿಲು, ಗರುಡಗಂಬ ಹಾಗೂ ಮಂಟಪ, ಆಂಜನೇಯ ದೇವಸ್ಥಾನ, ನಾಗದೇವತೆ, ಮಲ್ಲದೇವರ ದೇವಸ್ಥಾನ, ವೀರಭದ್ರೇಶ್ವರ ದೇವಸ್ಥಾನ, ಕೃಷ್ಣದೇವರಾಯ ಪುತ್ಥಳಿ, ತಳವಾರ ಘಟ್ಟ ಮಂಟಪ, ದುರ್ಗಾದೇವಿ ದೇವಸ್ಥಾನ, ಉತ್ಸವದ ವೇದಿಕೆ ಸ್ಥಳ, ಆನೆಗೊಂದಿ ಸುತ್ತಲಿನ ಕೋಟೆಯನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಮಾಡಲಾಯಿತು.

ಈ ವೇಳೆ ತಹಶೀಲ್ದಾರ್‌ ಎಲ್.ಡಿ.ಚಂದ್ರಕಾಂತ್‌, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಿ.ಮೋಹನ್‌, ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಗೌಡ, ಕಂದಾಯ ನಿರೀಕ್ಷಕ ಮಂಜುನಾಥ ಹಿರೇಮಠ, ಚಾರಣ ಬಳಗದ ಡಾ.ಶಿವಕುಮಾರ್‌ ಮಾಲೀಪಾಟೀಲ್‌, ಮಂಜುನಾಥ ಗುಡ್ಲಾನೂರು, ಪಿಡಿಓಗಳು ಹಾಗೂ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಇದ್ದರು.

-ಬಸವರಾಜ ಕರುಗಲ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com