ರಂಗಭೂಮಿಯ ಅಕ್ಷಯಪಾತ್ರೆ ಬನಶಂಕರಿ: ಇಲ್ಲಿ ಸ್ವಚ್ಛತೆಯದ್ದೇ ಸಮಸ್ಯೆ

ನಾಡಿನ ಜನತೆಯ ಆರಾಧ್ಯ ದೈವಗಳಲ್ಲೊಂದಾಗಿರುವ ಬಾದಾಮಿ ಬನಶಂಕರಿ ದೇವಿ ಜಾತ್ರೆ ಬನದ ಹುಣ್ಣಿಮೆಯಂದು ನಡೆಯುತ್ತದೆಯಾದರೂ ಜಾತ್ರಾ ಪೂರ್ವ ಸಿದ್ಧತಾ ಚಟುವಟಿಕೆಗಳು ಇನ್ನೆರಡು ದಿನಗಳಲ್ಲಿ ಆರಂಭಗೊಳ್ಳುತ್ತವೆ. 
ಬನಶಂಕರಿ ಜಾತ್ರೆಯಲ್ಲಿ ಸ್ವಚ್ಛತೆ ಸಮಸ್ಯೆ
ಬನಶಂಕರಿ ಜಾತ್ರೆಯಲ್ಲಿ ಸ್ವಚ್ಛತೆ ಸಮಸ್ಯೆ

ಬಾಗಲಕೋಟೆ: ನಾಡಿನ ಜನತೆಯ ಆರಾಧ್ಯ ದೈವಗಳಲ್ಲೊಂದಾಗಿರುವ ಬಾದಾಮಿ ಬನಶಂಕರಿ ದೇವಿ ಜಾತ್ರೆ ಬನದ ಹುಣ್ಣಿಮೆಯಂದು ನಡೆಯುತ್ತದೆಯಾದರೂ ಜಾತ್ರಾ ಪೂರ್ವ ಸಿದ್ಧತಾ ಚಟುವಟಿಕೆಗಳು ಇನ್ನೆರಡು ದಿನಗಳಲ್ಲಿ ಆರಂಭಗೊಳ್ಳುತ್ತವೆ. 

ಎಳ್ಳು ಅಮವಾಸ್ಯೆ ಮುಗಿಯುತ್ತಿದ್ದಂತೆ ಬನಶಂಕರಿಯಲ್ಲಿ ಸಣ್ಣಪುಟ್ಟ ವ್ಯಾಪಾರಸ್ಥರಿಂದ ಹಿಡಿದು ದೊಡ್ಡ ವ್ಯಾಪರಸ್ಥರೆಲ್ಲ ಟೆಂಟ್‌ಗಳನ್ನು ಹಾಕಲು ಆರಂಭಿಸುತ್ತಾರೆ. ಜಾತ್ರೆ ಇನ್ನೂ ಎರಡು ದಿನ ಇರುವಾಗಲೇ ನಾಟಕ ಕಂಪನಿಗಳು ನಾಟಕ ಪ್ರದರ್ಶನ ಆರಂಭಿಸುತ್ತವೆ. ರಂಗಭೂಮಿ ಪಾಲಿಗೆ ಈ ಜಾತ್ರೆಯನ್ನು ವರ್ಷದ ಅನ್ನದ ಜಾತ್ರೆ, ಕಂಪನಿ ಮಾಲೀಕರ ಪಾಲಿಗೆ ಅಕ್ಷಯ ಪಾತ್ರೆ ಎಂದೇ ಬಿಂಬಿತವಾಗಿದೆ.

ಅಗತ್ಯ ಮೂಲ ಸೌಕರ್ಯಗಳ ಮಧ್ಯೆಯೂ ಬನಶಂಕರಿದೇವಿ ಜಾತ್ರೆ ತಿಂಗಳು ಕಾಲ ನಡೆಯುತ್ತದೆ. ಹಾಗಾಗಿಯೇ ನಾಡಿನ ವಿವಿಧ ಪ್ರದೇಶಗಳಲ್ಲಿರುವ ಪ್ರಸಿದ್ದ ನಾಟಕ ಕಂಪನಿಗಳು ಜಾತ್ರೆಯಲ್ಲಿ ಠಿಕಾಣಿ ಹೂಡುತ್ತವೆ ಜಾತ್ರೆಯಲ್ಲಿ ಕನಿಷ್ಠ ೮-೧೦ ನಾಟಕ ಕಂಪನಿಗಳು ಜನತೆಗೆ ವಿಭಿನ್ನ ನಾಟಕಗಳ ಪ್ರದರ್ಶನ ನೀಡುತ್ತವೆ. 

ಜಾತ್ರೆಯ ಮುನ್ನಾ ದಿನದಿಂದಲೇ ನಾಟಕಗಳ ಪ್ರದರ್ಶನ ಆರಂಭಗೊಳ್ಳುತ್ತದೆ. ಒಂದೊಂದು ನಾಟಕ ಕಂಪನಿಗಳು ನೂರಾರು ಪ್ರದರ್ಶನ ನೀಡುತ್ತವೆ. ಇಲ್ಲಿಗೆ ಬರುವ ಪ್ರತಿ ನಾಟಕ ಕಂಪನಿ ಪಾಲಿಗೆ ಬನಶಂಕರಿ ಅಕ್ಷಯಾಂಬರ ವಿದ್ಧಂತೆ ಎನ್ನುವ ಪ್ರತೀತಿ ಇದೆ.

ಇದಕ್ಕೆ ಕಾರಣವೂ ಇಲ್ಲದಿಲ್ಲ. ಬನಶಂಕರಿ ಜಾತ್ರೆಯಲ್ಲಿ ಕಂಪನಿ ನಾಟಕ ಪ್ರದರ್ಶನ ಆರಂಭಿಸಿದಲ್ಲಿ ಅದರಿಂದ ಬರುವ ಆದಾಯ “ವರ್ಷದ ಅನ್ನ” ಎನ್ನುವುದು ಕಲಾವಿದರು ಹಾಗೂ ಕಂಪನಿ ಮಾಲೀಕರ ಅಂಬೋಣವಾಗಿದೆ.  ಹೊರ ರಾಜ್ಯಗಳಾದ ಮಹಾರಾಷ್ಟ್ರ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ  ಸೇರಿದಂತೆ ನಾಡಿನಾದ್ಯಂತ ಹರಡಿರುವ ಬನಶಂಕರಿ ದೇವಿ ಭಕ್ತರು ಜಾತ್ರೆಗೆ ವಾರಕಾಲ ಮೊದಲೇ ಬರಲಾಂಭಿಸುತ್ತಾರೆ. 

ತಿಂಗಳು ಕಾಲ ನಡೆಯುವ ಈ ಜಾತ್ರೆಯಲ್ಲಿ ಮೂಲ ಸೌಕರ್ಯ ಹಾಗೂ ಸ್ವಚ್ಛತೆ ಸಮಸ್ಯೆಗೆ ಇದುವರೆಗೂ ಪರಿಹಾರ ಸಿಕ್ಕುತ್ತಿಲ್ಲ. ಜಾತ್ರೆಯ ಸುತ್ತಲಿನ ಪ್ರದೇಶದಲ್ಲಿ ಎಲ್ಲಂದರಲ್ಲಿ ಗಲೀಜು ವಾತಾವರಣ, ಹೆಜ್ಜೆ ಇಡಲೂ ಆಗದ ಸ್ಥಿತಿ ನಿರ್ಮಾಣವಾಗುತ್ತದೆ. ಇದನ್ನು ತಡೆಯಲು ಜಿಲ್ಲಾಡಳಿತ ಕಠಿಣ ಕ್ರಮಕ್ಕೆ ಮುಂದಾಗಬೇಕಿದೆ. ಸ್ವಚ್ಛತೆಗೆ ಆದ್ಯತೆ ನೀಡಬೇಕಿದೆ.
ಪ್ರತಿವರ್ಷ ಬತ್ತಿ ಬರಿದಾಗುತ್ತಿದ್ದ ಬನಶಂಕರಿ ದೇವಸ್ಥಾನದ ಮುಂದಿನ ಹರಿದ್ರಾ ತೀರ್ಥ ಈ ಬಾರಿ ನೀರಿನಿಂದ ಭರ್ತಿಯಾಗಿದೆ. ಇದು ಹೀಗೆ ಜಾತ್ರೆ ಮುಗಿಯುವವರೆಗೂ ಇರುವಂತೆ ಸ್ಥಳೀಯ ಆಡಳಿತ ನೋಡಿಕೊಳ್ಳಬೇಕಿದೆ.

ನಾಡಿದ ಧಾರ್ಮಿಕ ಶ್ರದ್ಧಾಕೇಂದ್ರವಾಗಿರುವ ಬನಶಂಕರಿಯಲ್ಲಿ ಜಾತ್ರೆ ವೇಳೆ ಮಾಂಸಾಹಾರ ಮಾರಾಟ ನಿಷೇಧಿಸುವ ಜತೆಗೆ, ಅಲ್ಲಲ್ಲಿ ಕದ್ದು ಮುಚ್ಚಿ ನಡೆಯುವ ವ್ಯಾಪಾರಕ್ಕೆ ಸಂಪೂರ್ಣ ಬ್ರೇಕ್ ಹಾಕಬೇಕಿದೆಜತೆಗೆ ಅಶ್ಲೀಲ ನಾಟಕ, ನೃತ್ಯ ಪ್ರದರ್ಶನಕ್ಕೂ ಕಡಿವಾಣ ಹಾಕುವ ಕೆಲಸ ಆಗಬೇಕಿದೆ.

ಜಾತ್ರೆಗೆ ಬರುವ ಭಕ್ತರಿಗೆ ಸಮರ್ಪಕ ಶುದ್ಧ ಕುಡಿವ ನೀರಿನ ವ್ಯವಸ್ಥೆ ಮಾಡುವ ಜತೆಗೆ ಜಾತ್ರಾ ಪ್ರದೇಶದಲ್ಲಿ ಸ್ವಚ್ಛೆ ಕಾಪಾಡಲು ಹೆಚ್ಚಿನ ಮುತುವರ್ಜಿ ವಹಿಸಬೇಕಿದೆ. ಲಕ್ಷಾಂತರ ಜನ ಭಕ್ತರು ಭಾಗವಹಿಸುವ ಜಾತ್ರೆಯಲ್ಲಿ ಸ್ವಚ್ಛತೆ ಹಾಗೂ ಕುಡಿವ ನೀರಿನ ಸಮಸ್ಯೆ ಆದರೆ ಅದು ಸಾಂಕ್ರಾಮಿಕ ರೋಗಗಳ ಹರಡುವಿಕೆಗೆ ದಾರಿ ಮಾಡಿಕೊಟ್ಟಂತಾಗುತ್ತದೆ. ಇದನ್ನು ತಪ್ಪಿಸಲು ಸ್ಥಳೀಯ ಆಡಳಿತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಿದೆ.

ಪೀತಾಂಬರ ಸಮರ್ಪಣೆ:
ಜಾತ್ರೆಯ ಹಿನ್ನೆಲೆಯಲ್ಲಿ ಬನಶಂಕರಿ ದೇವಿಗೆ ಜಾತ್ರೆಯ ದಿನದಂದು ಹಂಪಿ ಹೇಮಕೂಟದ ಗಾಯತ್ರಿಪೀಠ ಮಹಾಸಂಸ್ಥಾನ ಪೀತಾಂಬರ ಸಮರ್ಪಣೆ ಕಾರ್ಯಕ್ರಮವನ್ನು ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಸುತ್ತದೆ. ದೇವಿಗೆ ಅರ್ಪಿತವಾಗುವ ಪೀತಾಂಬರವನ್ನು ಹಂಪಿಯ ಗಾಯತ್ರಿ ಪೀಠ ಮಹಾಸಂಸ್ಥಾನದಿಂದ ಪಲ್ಲಕ್ಕಿಯಲ್ಲಿ ಪಾದಯಾತ್ರೆ ಮೂಲಕ ತರಲಾಗುತ್ತದೆ. ಗಾಯತ್ರಿಪೀಠ ಮಹಾಸಂಸ್ಥಾನದ ಶ್ರೀ ದಯಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ನಡೆಯುವ ಪಾದಯಾತ್ರೆಯಲ್ಲಿ ನಾಡಿನ ಮೂಲೆ ಮೂಲೆಗಳಿಂದ ನೇಕಾರರು ಆಗಮಿಸಿ ಭಾಗವಹಿಸುತ್ತಾರೆ. ಇದು ಜಾತ್ರೆಯ ವಿಶೇಷತೆಗಳಲ್ಲೊಂದಾಗಿದೆ. ಇವುಗಳೆಲ್ಲ ಅಚ್ಚುಕಟ್ಟಾಗಿ ನಡೆಯುವಂತಾಗಲು ಸ್ಥಳೀಯಾಡಳಿತ ಸ್ವಚ್ಛತೆಗೆ ಆದ್ಯತೆ ನೀಡಲು ಮುಂದಾಗಬೇಕಿದೆ. ಈಗಲೇ ಅದಕ್ಕಾಗಿ ಅಗತ್ಯ ಕ್ರಮಗಳಿಗೆ ಮುಂದಾಗಬೇಕಿದೆ.

ವರದಿ: ವಿಠ್ಠಲ ಆರ್. ಬಲಕುಂದಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com