'ನಿಮ್ಮ ಧೈರ್ಯಕ್ಕೆ ಸಲಾಂ'; ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಪ್ರಧಾನಿ ಮೋದಿಗೆ ಗಂಗಾವತಿ ಪ್ರಾಣೇಶ್ ಪತ್ರ!

ಪೌರತ್ವ ತಿದ್ದುಪಡಿ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ ಸಿ) ವಿಚಾರವಾಗಿ ದೇಶಾದ್ಯಂತ ಪ್ರತಿಭಟನೆಗಳು ಮುಂದುವರೆದಿರುವಂತೆಯೇ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದ ಪ್ರಧಾನಿ ಮೋದಿ ಅವರಿಗೆ ಖ್ಯಾತ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ಅವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಪ್ರಧಾನಿ ಮೋದಿ-ಗಂಗಾವತಿ ಪ್ರಾಣೇಶ್
ಪ್ರಧಾನಿ ಮೋದಿ-ಗಂಗಾವತಿ ಪ್ರಾಣೇಶ್

ಬೆಂಗಳೂರು: ಪೌರತ್ವ ತಿದ್ದುಪಡಿ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ ಸಿ) ವಿಚಾರವಾಗಿ ದೇಶಾದ್ಯಂತ ಪ್ರತಿಭಟನೆಗಳು ಮುಂದುವರೆದಿರುವಂತೆಯೇ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದ ಪ್ರಧಾನಿ ಮೋದಿ ಅವರಿಗೆ ಖ್ಯಾತ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ಅವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಈ ಕುರಿತಂತೆ ಮಾಧ್ಯಮವೊಂದು ವರದಿ ಮಾಡಿದ್ದು, ಪ್ರಾಣೇಶ್ ಅವರ ಬರೆದಿದ್ದಾರೆ ಎನ್ನಲಾದ ಪತ್ರವೊಂದನ್ನು ಪ್ರಕಟಿಸಲಾಗಿದೆ. ಪ್ರಾಣೇಶ್ ಅವರ ಲೆಟರ್ ಹೆಡ್ ನಲ್ಲಿ ಈ ಪತ್ರ ಬರೆಯಲಾಗಿದ್ದು, ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಉಲ್ಲೇಖಿಸಿ ಪತ್ರದ ಮೂಲಕ ಪ್ರಧಾನಿ ಮೋದಿಗೆ ಅಭಿನಂದನೆಯನ್ನು ತಿಳಿಸಲಾಗಿದೆ.

'ನಮ್ಮ ನಾಡು ನಮ್ಮ ದೇಶ ಮಹಾತ್ಮರ, ಸಂತರ, ಯೋಗಿಗಳ ತಪೋಭೂಮಿ ಆಗಿದ್ದು ಇಂತಹ ಪುಣ್ಯಭೂಮಿಯ ಭದ್ರತೆ ಮತ್ತು ಬೆಳವಣಿಗೆಗೆ ಸ್ವಾರ್ಥ ದುರಾಸೆಗಳಿಲ್ಲದೆ ರಾಷ್ಟ್ರ ರಕ್ಷಣೆಗೆ ಪಣ ತೊಟ್ಟು ದೇಶದ ಐಕ್ಯತೆಗೆ ಭದ್ರತೆಗೆ ಪೌರತ್ವ ತಿದ್ದುಪಡಿ ಕಾಯ್ದೆ 2019 ನ್ನು ಜಾರಿಗೆ ತಂದಿರುವ ನಿಮಗೆ ಅಭಿನಂದನೆಗಳು. ಕೋಟ್ಯಂತರ ಜನರ ಭಾವನೆಗಳ ಆರಾಧ್ಯ ದೈವವಾಗಿದ್ದ ರಾಮಮಂದಿರ ನಿರ್ಮಾಣ ಕೂಡ ನಿಮ್ಮ ಸರ್ಕಾರದ ಅವಧಿಯಲ್ಲಿ ಆಗುತ್ತಿರುವುದು ಸಂತಸದ ವಿಚಾರವಾಗಿದೆ ಎಂದು ಪತ್ರದಲ್ಲಿ ಬರೆಯಲಾಗಿದೆ.

ಅಲ್ಲದೆ 'ಅಖಂಡ ಭಾರತದ ಪರಿಕಲ್ಪನೆಗೆ ನಿಮ್ಮ ಪೌರತ್ವ ತಿದ್ದುಪಡಿ ಕಾಯ್ದೆ ಸಾಕ್ಷಿಯಾಗಲಿದ್ದು, ನಮ್ಮ ದೇಶದ ಎಲ್ಲಾ ಕ್ಷೇತ್ರಗಳಲ್ಲಿಯೂ ಸಂಪದ್ಭರಿತವಾಗಿದ್ದರೂ ಸಹ ರಾಜಕೀಯ ದುರುದ್ದೇಶ, ಮತಾಂಧತೆ, ಭಯೋತ್ಪಾದನೆ ಮೂಲಕ ರಾಷ್ಟ್ರದ ಶಾಂತಿಗೆ ಭಂಗ ತರಲು ಯತ್ನಿಸಿದ ನೆರೆಹೊರೆಯ ರಾಷ್ಟ್ರಗಳ ಕಿರುಕುಳಗಳಿಗೆ ತಾವುಗಳು ಪೌರತ್ವ ಕಾಯ್ದೆ ತಿದ್ದುಪಡಿ ಮೂಲಕ ತಕ್ಕ ಉತ್ತರ ನೀಡಿದ್ದೀರಿ. ದೇಶಕ್ಕೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದ ಉಗ್ರಗಾಮಿಗಳು, ಭಯೋತ್ಪಾದಕರ ಎದೆ ನಡುಗುವಂತೆ ಕಾನೂನುಗಳನ್ನು ಜಾರಿಗೆ ತಂದಿರುವುದು ದೇಶಪ್ರೇಮವನ್ನು ಎತ್ತಿಹಿಡಿದಂತಾಗಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.

ಒಟ್ಟಾರೆ ಪೌರತ್ವ ತಿದ್ದುಪಡಿ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ ಸಿ) ವಿಚಾರವಾಗಿ ದೇಶಾದ್ಯಂತ ಪರ-ವಿರೋಧ ಟೀಕೆ ಟಿಪ್ಪಣಿಗಳು ಕೇಳಿ ಬರುತ್ತಿರುವ ಈ ಹೊತ್ತಿನಲ್ಲಿ ಪ್ರಾಣೇಶ್ ಅವರದ್ದು ಎನ್ನಲಾದ ಈ ಪತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಆದರೆ ಈ ವೈರಲ್ ಪತ್ರದ ಕುರಿತು ಈ ವರೆಗೂ ಪ್ರಾಣೇಶ್ ಅವರು ಮಾಧ್ಯಮಗಳಿಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com