ಸಿಎಎ, ಎನ್‌ಆರ್‌ಸಿ: ನ್ಯಾಯಾಂಗದಿಂದ ನ್ಯಾಯ ದೊರೆಯುವ ವಿಶ್ವಾಸ ಕಾಣುತ್ತಿಲ್ಲ: ಪ್ರೊ.ರವಿವರ್ಮ ಕುಮಾರ್

ಪೌರತ್ವ ತಿದ್ದುಪಡಿ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ ಸಿ) ವಿಚಾರವಾಗಿ ನ್ಯಾಯಾಂಗದಿಂದಲೂ ನ್ಯಾಯ ದೊರೆಯುವ ವಿಶ್ವಾಸ ಕಾಣುತ್ತಿಲ್ಲ ಎಂದು ಪ್ರೊ.ರವಿವರ್ಮ ಕುಮಾರ್ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಪೌರತ್ವ ತಿದ್ದುಪಡಿ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ ಸಿ) ವಿಚಾರವಾಗಿ ನ್ಯಾಯಾಂಗದಿಂದಲೂ ನ್ಯಾಯ ದೊರೆಯುವ ವಿಶ್ವಾಸ ಕಾಣುತ್ತಿಲ್ಲ ಎಂದು ಪ್ರೊ.ರವಿವರ್ಮ ಕುಮಾರ್ ಹೇಳಿದ್ದಾರೆ.

'ವಿಷನ್ ಕರ್ನಾಟಕ' ಸಂಸ್ಥೆ ವತಿಯಿಂದ ನಗರದ ಅಂಬೇಡ್ಕರ್ ಭವನದಲ್ಲಿಂದು ಏರ್ಪಡಿಸಿದ್ದ ಎನ್‌ಆರ್‌ಸಿ ಮತ್ತು ಸಿಎಎ ದುಷ್ಪರಿಣಾಮಗಳು ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಅಡ್ವೊಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್ ಅವರು, 'ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಈ ದೇಶಕ್ಕೆ ತುರ್ತುಪರಿಸ್ಥಿತಿ ಹೇರಿದಾಗ ಇಲ್ಲಿನ ನ್ಯಾಯಾಂಗ ವ್ಯವಸ್ಥೆ ಅದರ ವಿರುದ್ಧ ಯಾವುದೇ ತೀರ್ಪು ನೀಡಿ ಇಲ್ಲಿನ ಜನರನ್ನು ರಕ್ಷಿಸಿಲ್ಲ. ಆಗ ನಮ್ಮ ಜನರೇ ಸೆಟೆದು ನಿಂತು ಆ ಕರಾಳ ಕಾನೂನನ್ನು ತೆಗೆದುಹಾಕಿದರು. ಅದೇ ರೀತಿ ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧವೂ ನಾವೇ ತೀವ್ರ ಹೋರಾಟ ನಡೆಸಿ ಅವುಗಳನ್ನು ರದ್ದುಪಡಿಸಬೇಕಾದ ಅಗತ್ಯವಿದೆ ಎಂದು ಹೇಳಿದ್ದಾರೆ.

'ಇತ್ತೀಚೆಗೆ ನಮ್ಮ ನ್ಯಾಯಾಂಗದಿಂದ ಹೊರ ಬರುವ ಒಂದೊಂದು ತೀರ್ಪನ್ನು ಗಮನಿಸುವಾಗ ಎನ್‌ಆರ್‌ಸಿ ವಿಷಯದಲ್ಲಿ ಯಾವುದೇ ನ್ಯಾಯ ದೊರೆಯುವ ವಿಶ್ವಾಸ ಕಾಣುತ್ತಿಲ್ಲ. ಜನರೇ ಇದರ ವಿರುದ್ಧ ಹೋರಾಟಮಾಡಬೇಕಿದೆ. ಸಂವಿಧಾನದಲ್ಲಿ ಅಡಕವಾಗಿರುವ ಧರ್ಮ ನಿರಪೇಕ್ಷತೆ ನಮ್ಮ ಸಂವಿಧಾನದ ಅತ್ಯಂತ ಶ್ರೀಮಂತಿಕೆಯ ಅಂಶವಾಗಿದೆ. ಯಾವುದೇ ಧರ್ಮವನ್ನು ಪೋಷಿಸುವ ಅಥವಾ ವಿರೋಧಿಸುವ ಅಥವಾ ಮೇಲೆತ್ತುವ ಅಥವಾ ತುಳಿಯುವುದನ್ನು ನಮ್ಮ ಸಂವಿಧಾನ ಸ್ಪಷ್ಟವಾಗಿ ವಿರೋಧಿಸುತ್ತದೆ. ಜಾತ್ಯತೀತತೆಯ ವಿರುದ್ಧವಾಗಿ ಧರ್ಮದ ಆಧಾರದಲ್ಲಿ ಪೌರತ್ವ ನೀಡುವುದನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಜಗತ್ತಿನ ಹಲವು ದೇಶಗಳಲ್ಲಿ ವಿವಿಧ ರೀತಿಯ ಕಿರುಕುಳಗಳು ನಡೆಯುತ್ತಿವೆ. ಆದರೆ ಅವೆಲ್ಲವನ್ನೂ ಕಡೆಗಣಿಸಿ ಕೇವಲ ಧರ್ಮಾಧಾರಿತ ಕಿರುಕುಳಕ್ಕೊಳಗಾದವರಿಗೆ ಪೌರತ್ವ ನೀಡಲು ಮುಂದಾಗಿರುವುದು ಬೂಟಾಟಿಕೆಯಾಗಿದೆ ಎಂದು ರವಿಮರ್ಮಾ ಕುಮಾರ್ ಟೀಕಿಸಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com