ಹೊಸ ವರ್ಷಾಚರಣೆಗೆ ಭದ್ರತೆ: ಹೊಸ ವರ್ಷ ಪಾರ್ಟಿ ಮಾಡುವವರಿಗೆ ನಟ ಯಶ್ ವಿಡಿಯೋ ಸಂದೇಶ

ಹೊಸ ವರ್ಷವನ್ನು ಮೋಜುಮಸ್ತಿ, ಮದ್ಯಪಾನ‌ ಗಾನಬಜಾನ ನೃತ್ಯ ಮೂಲಕ ಯುವಜನತೆ ಇತ್ತೀಚೆಗೆ ಬರಮಾಡಿಕೊಳ್ಳುವುದು ಸಹಜವೇ ಆಗಿದೆ‌. ಅಲ್ಲದೇ ಡಿ. 31ರ ಮಧ್ಯರಾತ್ರಿ ಮದ್ಯಪಾನ ಮಾಡಿ ವಾಹನ ಚಲಾಯಿಸುವುದು ಕೆಲವೊಮ್ಮೆ ಅಪಘಾತಕ್ಕೆ ಈಡಾಗುವುದು, ಮದ್ಯಪಾನದ ಮತ್ತಿನಲ್ಲಿ ಪೊಲೀಸರೊಂದಿಗೆ ಸಂಘರ್ಷಕ್ಕೆ ಇಳಿಯುವುದು ಸಾಮಾನ್ಯವಾಗಿದೆ.
ಯಶ್
ಯಶ್

ಬೆಂಗಳೂರು: ಹೊಸ ವರ್ಷವನ್ನು ಮೋಜುಮಸ್ತಿ, ಮದ್ಯಪಾನ‌ ಗಾನಬಜಾನ ನೃತ್ಯ ಮೂಲಕ ಯುವಜನತೆ ಇತ್ತೀಚೆಗೆ ಬರಮಾಡಿಕೊಳ್ಳುವುದು ಸಹಜವೇ ಆಗಿದೆ‌. ಅಲ್ಲದೇ ಡಿ. 31ರ ಮಧ್ಯರಾತ್ರಿ ಮದ್ಯಪಾನ ಮಾಡಿ ವಾಹನ ಚಲಾಯಿಸುವುದು ಕೆಲವೊಮ್ಮೆ ಅಪಘಾತಕ್ಕೆ ಈಡಾಗುವುದು, ಮದ್ಯಪಾನದ ಮತ್ತಿನಲ್ಲಿ ಪೊಲೀಸರೊಂದಿಗೆ ಸಂಘರ್ಷಕ್ಕೆ ಇಳಿಯುವುದು ಸಾಮಾನ್ಯವಾಗಿದೆ. ಹೀಗಾಗಿ ಈ ಬಾರಿ ಹೊಸ ವರ್ಷದ ಸಂಭ್ರಮಾಚರಣೆಗೆ ಮದ್ಯಪಾನ ಹಾಗೂ ಮದ್ಯಪಾನ ಮಾಡಿ ವಾಹನ ಚಲಾಯಿಸುವುದರ ಬಗ್ಗೆ ಅರಿವು ಮೂಡಿಸಲು ಬೆಂಗಳೂರು ನಗರ ಪೊಲೀಸರು ವಿನೂತನ ಯೋಜನೆ ರೂಪಿಸಿದ್ದಾರೆ.

ಸ್ಯಾಂಡಲ್‌ವುಡ್ ಚಿತ್ರನಟ ರಾಕಿ ಬಾಯ್ ಯಶ್ ಜೊತೆ ನಗರ ಪೊಲೀಸರು ಮದ್ಯಪಾನ ಅರಿವು ಮೂಡಿಸಲು ಮುಂದಾಗಿದ್ದಾರೆ. ಪ್ರತಿವರ್ಷದ ಮುನ್ನ ದಿನದ ಸಂಭ್ರಮಾಚರಣೆ ಪೊಲೀಸ್ ಇಲಾಖೆಗೆ ಸವಾಲೇ ಆಗಿದೆ. ಸಂಭ್ರಮಾಚರಣೆ ಅಹಿಕತರ ಆಗಬಾರದೆಂಬ ಉದ್ದೇಶದಿಂದ ಮದ್ಯಪಾನ ಮಾಡಿ ವಾಹನ ಚಲಾಯಿಸದಂತೆ ನಗರ ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಮನವಿ ಮಾಡಿದೆ. ಇವರೊಂದಿಗೆ ಚಿತ್ರನಟ ಯಶ್ ಕೂಡ ಕೈ ಜೋಡಿಸಿರುವುದು ವಿಶೇಷವಾಗಿದೆ. ಸಾರ್ವಜನಿಕ ವಾಹನ, ಟ್ಯಾಕ್ಸಿ ಬಳಸಬೇಕು. ವೈಯಕ್ತಿಕ ವಾಹನ ಬಳಸುವುದು ಬೇಡ ಎಂದು ಕಿವಿ ಮಾತು ಹೇಳಿದ್ದಾರೆ.

'ಬೀಸೇಫ್' ಎನ್ನುವುದು ಸಂಚಾರಿ ಪೊಲೀಸರ ನಿರಂತರ ಜಾಗೃತಿ ಕಾರ್ಯಕ್ರಮವಾಗಿದ್ದು, ಆಗಾಗ ಸಾಮಾಜಿಕ ಜಾಲತಾಣಗಳು ಮಾಧ್ಯಮಗಳ ಮೂಲಕ ಇದನ್ನು ಪ್ರಚುರಪಡಿಸುತ್ತಲೇ‌ ಇದ್ದಾರೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಸಂಚಾರಿ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ನೇತೃತ್ವದಲ್ಲಿ ಮದ್ಯಪಾನ‌ ಮಾಡಿ ವಾಹನ ಓಡಿಸದಿರಿ ಜಾಗೃತಿ ಅಭಿಯಾನ ನಡೆಯಲಿದೆ‌.

ಈ ಸಂಬಂಧ ನಗರ ಪೊಲೀಸ್ ಆಯುಕ್ತ ಭಾಸ್ಕರ್‌ರಾವ್ ಸುದ್ದಿಗೋಷ್ಠಿ ನಡೆಸಿ ಸಾರ್ವಜನಿಕರಿಗೆ ಎಚ್ಚರಿಕೆ ಕ್ರಮಗಳು ಹಾಗೂ ಇಲಾಖೆ ಕೈಗೊಂಡ‌ ಮುನ್ನೆಚ್ಚರಿಕೆ ಬಿಗಿಬಂದೋಬಸ್ತ್ ಬಗ್ಗೆ ವಿವರಿಸಿದರು. 2018 ರಲ್ಲಿ ಕುಡಿದು ವಾಹನ ಓಡಿಸುವವರ ಸಂಬಂಧ 53,092 ಪ್ರಕರಣಗಳು ದಾಖಲಾಗಿದ್ದು, 2019 ರ‌ ನವೆಂಬರ್‌ನಲ್ಲಿ 37,654 ಕ್ಕೆ ಇಳಿಮುಖವಾಗಿದೆ. ಇದಕ್ಕೆಲ್ಲ ಜಾಗೃತಿ ಅಭಿಯಾನವೇ ಕಾರಣ ಎಂದರು. ಪ್ರತಿವರ್ಷದಂತೆ  ಈ ವರ್ಷವು ಸಹ‌ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ರೆಸ್ಟ್ ಹೌಸ್ ರೋಡ್,‌ ಮ್ಯೂಸಿಯಂ ರಸ್ತೆ ಮೇಲ್ಸೇತುವೆಗಳಲ್ಲಿ ರಾತ್ರಿ ಕುಡಿದು ಚಲಾಯಿಸುವುದು, ವ್ಹೀಲಿಂಗ್ ಮಾಡಿ ವಾಹನ ಚಲಾಯಿಸುತ್ತಾರೆ ಹೀಗಾಗಿ  ರಸ್ತೆಗಳಲ್ಲಿ ಸಂಚಾರ ದಟ್ಟವಾಗಲಿದ್ದು, ಸಾರ್ವಜನಿಕರ ರಕ್ಷಣೆಗಾಗಿ ರಸ್ತೆ ಸಂಚಾರ ನಿಷೇಧಿಸಲಾಗಿದೆ ಎಂದು ಭಾಸ್ಕರ್ ರಾವ್ ವಿವರಿಸಿದರು.

ಎಲ್ಲೆಲ್ಲಿ ವಾಹನ ಸಂಚಾರ ನಿಷೇಧ:
ಡಿ 31 ರ ರಾತ್ರಿ 2 ಗಂಟೆಯಿಂದ ಜ 1 ರ ರಾತ್ರಿ 2 ರವರೆಗೆ ಎಂ.ಜಿ.ರಸ್ತೆಯ ಅನಿಲ್ ಕುಂಬ್ಳೆ ವೃತ್ತದಿಂದ ಮೇಯೋಹಾಲ್ ಜಂಕ್ಷನ್‌ವರೆಗೆ, ಬ್ರಿಗೇಡ್ ರಸ್ತೆಯ ಕಾವೇರಿ ಎಂಪೋರಿಯಂ ಜಂಕ್ಷನ್‌ನಿಂದ ಒಪೆರಾ ಜಂಕ್ಷನ್‌ವರೆಗೆ, ಮ್ಯೂಸಿಯಂ ರಸ್ತೆಯ ಎಂ.ಜಿ.ರೋಡ್ ಜಂಕ್ಷನ್ ನಿಂದ ಹಳೆ ಮದ್ರಾಸ್ ರೋಡ್ ವರೆಗೆ, ರೆಸ್ಟ್ ಹೌಸ್ ರೋಡ್‌ನಿಂದ ಬ್ರಿಗೇಡ್ ರಸ್ತೆಯವರೆಗೆ,ರೆಸಿಡೆನ್ಸಿ ಕ್ರಾಸ್ ರಸ್ತೆಯಲ್ಲಿ ಶಂಕರ್ ನಾಗ್ ರಸ್ತೆವರೆಗೆ ವಾಹನ ಸಂಚಾರ ನಿಷೇಧಿಸಲಾಗಿದೆ.
ಮಡಿವಾಳ, ಎಲೆಕ್ಟ್ರಾನಿಕ್ ಸಿಟಿ, ಹೆಚ್.ಎಸ್.ಆರ್ ಲೇಔಟ್,ವಿಮಾನ ನಿಲ್ದಾಣ,ಕೆ.ಆರ್.ಪುರಂ ಸೇರಿದಂತೆ ವಿವಿಧೆಡೆ ಮೇಲ್ಸೇತುವೆಗಳಲ್ಲಿ ರಸ್ತೆ ನಿರ್ಬಂಧಿಸಲಾಗಿದೆ. ಪೊಲೀಸ್ ಸಿಬ್ಬಂದಿ ವಾಹನಗಳಿಗೆ ಮಾಣಿಕ್ ಷಾ ಪೆರೇಡ್ ಮೈದಾನ, ಸಾರ್ವಜನಿಕರ ವಾಹನಗಳಿಗೆ ಬಿ.ಆರ್.ವಿ ಮೈದಾನ ಹಾಗೂ ಮಾಧ್ಯಮಗಳ ವಾಹನಗಳಿಗೆ ಕಾವೇರಿ ಎಂಪೋರಿಯಂ ಬಳಿ ಸ್ಥಳ ನಿಲುಗಡೆಗೆ ಕಾಯ್ದಿರಿಸಲಾಗಿದೆ.

ರಸ್ತೆ ಬದಿ ಮದ್ಯ ಸೇವಿಸಿ ಹೊಸ ವರ್ಷ ಆಚರಣೆ ಮಾಡುವವರ ಮೇಲೂ  ನಿಗಾವಹಿಸಲಾಗುವುದು ಎಂದರು. ಮಧ್ಯಪಾನ ಮಾಡಿದ ವಾಹನ ಚಾಲನೆ ಮಾಡುವವರ ವಿರುದ್ಧ  ವಿಶೇಷ ಕಾರ್ಯಾಚರಣೆ ನಿನ್ನೆ ರಾತ್ರಿಯಿಂದಲೇ ಆರಂಭವಾಗಿದ್ದು ಜ. 2 ರವರೆಗೆ ನಿರಂತರವಾಗಿ  ಮುಂದುವರೆಯಲಿದೆ.

ಬಾರ್ ಅಂಡ್ ರೆಸ್ಟೋರೆಂಟ್ ಗಳು ಪ್ರತಿಷ್ಠಿತ ಹೋಟೆಲ್ ಗಳ  ಮುಂಭಾಗವೇ ಸಂಚಾರ ಪೊಲೀಸರಿದ್ದು ಕುಡಿದು ವಾಹನ ಚಾಲನೆ ಮಾಡಿಕೊಂಡು ಹೋಗುವ ಚಾಲಕರನ್ನು  ಅಲ್ಲಿಯೇ ಪತ್ತೆ ಹಚ್ಚಿ ಕ್ರಮಕೈಗೊಳ್ಳಲಿದ್ದಾರೆ. ನಂಬಿಕಸ್ಥ ಮದ್ಯಪಾನ ಮಾಡದ ಚಾಲಕರನ್ನು  ಅಂದು ನಿಯೋಜಿಸಿಕೊಳ್ಳುವುದು ಮುಖ್ಯ. ಗುಂಪಾಗಿ ಪಾರ್ಟಿಗೆ ಹೋಗುವವರು ಅಂದು ಮದ್ಯ  ಸೇವಿಸದ ಚಾಲಕನ ವಾಹನವನ್ನು ಪಡೆಯಬೇಕು. ಮಹಿಳೆಯರು, ಯುವತಿಯರು ತಮ್ಮ ನಂಬಿಕಸ್ಥರ ಜೊತೆ  ಪಾರ್ಟಿಗೆ ಹೋಗಬೇಕು ಎಂದು ಹೇಳಿದರು.

ಮಹಿಳೆಯರು ಅಪರಿಚಿತರ  ಜೊತೆ ಯಾವುದೇ ಕಾರಣಕ್ಕೂ ಮದ್ಯಪಾನ ಮಾಡಬಾರದು, ಹೊಸ ವರ್ಷದ ಮೋಜಿನಲ್ಲೂ ತೊಡಗಬಾರದು.  ಎಲ್ಲರೂ ಹೊಸ ವರ್ಷವನ್ನು ಸಂತಸದಿಂದ ಬರಮಾಡಿಕೊಂಡು ಗೌರವಾನ್ವಿತ ಸಂಭ್ರಮ, ಮೋಜು  ಮಾಡಬೇಕು ಎಂದು ಮನವಿ ಮಾಡಿದರು.

ಡಿ.31ರ ಸಂಭ್ರಮದ ವೇಳೆ ಮಧ್ಯರಾತ್ರಿ ೨ ರವರೆಗೆ  ಸಂಚರಿಸುವಂತೆ ಬಿಎಂಟಿಸಿ ಹಾಗೂ ಮೆಟ್ರೋ ರೈಲು ಅಧಿಕಾರಿಗಳಿಗೆ ಮನವಿ ಮಾಡಲಾಗಿದ್ದು ಅವರೂ  ಒಪ್ಪಿಕೊಂಡಿದ್ದಾರೆ. ಅತಿ ಹೆಚ್ಚು ಜನ ಸೇರಿ ಹೊಸ ವರ್ಷ ಆಚರಣೆ ಮಾಡುವ ಸ್ಥಳಗಳಲ್ಲಿ  ರಕ್ಷಣಾ ದ್ವೀಪ ರಚನೆಮಾಡಲಾಗುವುದು ಅಲ್ಲಿ ಕುಳಿತುಕೊಳ್ಳಲು ಆಸನ, ಕುಡಿಯುವ ನೀರಿನ  ವ್ಯವಸ್ಥೆ ಮಾಡಲಾಗುವುದು.

ದ್ವೀಪದಿಂದಲೇ ಓಲಾ, ಉಬರ್, ಕ್ಯಾಬ್ ವ್ಯವಸ್ಥೆ  ಮಾಡುವಂತೆ ಅಧಿಕಾರಿಗಳ ಜೊತೆ ಸಭೆ ನಡೆಸಲಾಗಿದೆ. ಅಲ್ಲಿಂದ ತಾವು ತೆರಳಬೇಕಾಗಿರುವ  ಸ್ಥಳಗಳಿಗೆ ಕ್ಯಾಬ್ ಮೂಲಕ ಹೋಗಬಹುದು. ಆಟೋಗಳಿಗೂ ಕೂಡ ಪ್ರಯಾಣಿಕರು ಕರೆದ ಸ್ಥಳಗಳಿಗೆ  ಹೋಗಬೇಕು. ಇಲ್ಲದಿದ್ದರೇ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಹೊಸ  ವರ್ಷದಂದು ಮಧ್ಯರಾತ್ರಿ 1 ರವರೆಗಿನ ಮದ್ಯ ಮಾರಾಟದ ಅವಕಾಶವನ್ನು ಇನ್ನೊಂದು ಗಂಟೆ  ವಿಸ್ತರಿಸಲಾಗಿದೆ. 2 ಗಂಟೆಯೊಳಗೆ ಮದ್ಯ ಮಾರಾಟವನ್ನು ಸಂಪೂರ್ಣ ಸ್ಥಗಿತಗೊಳಿಸುವಂತೆ  ಹೋಟೆಲ್ ಬಾರ್ ಅಂಡ್ ರೆಸ್ಟೋರೆಂಟ್ ಗಳಿಗೆ ಸೂಚನೆ ನೀಡಲಾಗಿದೆ ಪ್ರಮುಖ ಹೋಟೆಲ್ ಗಳು  ಬಾರ್ ಅಂಡ್ ರೆಸ್ಟೋರೆಂಟ್ ಗಳಲ್ಲಿ ಮಾದಕ ವಸ್ತುಗಳ ತಪಾಸಣೆ ನಡೆಸಲಿದ್ದು ಇದಕ್ಕೆ  ಶ್ವಾನದಳವನ್ನು ಬಳಸಿಕೊಳ್ಳಲಾಗುವುದು ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com