ಪೇಜಾವರ ಮಠದ ಹಿರಿಯ ಯತಿ ಶ್ರೀ ಇನ್ನಿಲ್ಲ: ಕೃಷ್ಣೈಕ್ಯರಾದ ವಿಶ್ವೇಶ ತೀರ್ಥ ಸ್ವಾಮೀಜಿಗಳು

ತೀವ್ರ ಉಸಿರಾಟದ ಸಮಸ್ಯೆ ಹಾಗೂ ನ್ಯೂಮೋನಿಯಾದಿಂದ ಬಳಲುತ್ತಿದ್ದ ಪೇಜಾವರ ಮಠದ ಹಿರಿಯ ಯತಿ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಗಳು ಕೃಷ್ಣೈಕ್ಯರಾಗಿದ್ದಾರೆ. 
ವಿಶ್ವೇಶ ತೀರ್ಥ ಸ್ವಾಮೀಜಿ
ವಿಶ್ವೇಶ ತೀರ್ಥ ಸ್ವಾಮೀಜಿ

ಉಡುಪಿ: ತೀವ್ರ ಉಸಿರಾಟದ ಸಮಸ್ಯೆ ಹಾಗೂ ನ್ಯೂಮೋನಿಯಾದಿಂದ ಬಳಲುತ್ತಿದ್ದ ಪೇಜಾವರ ಮಠದ ಹಿರಿಯ ಯತಿ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಗಳು ಕೃಷ್ಣೈಕ್ಯರಾಗಿದ್ದಾರೆ. 

8 ದಿನಗಳ ಹಿಂದಷ್ಟೇ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಪೇಜಾವರ ಶ್ರೀಗಳು ಡಿ.20ರಂದು ಮುಂಜಾನೆ 5ಕ್ಕೆ ಮಣಿಪಾಲ ಆಸ್ಪತ್ರೆಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ದಾಖಲಾಗಿದ್ದರು. ಅಂದಿನಿಂದ ಪ್ರಜ್ಞೆ ಮರಳಿ ಬಂದಿರಲಿಲ್ಲ. ನ್ಯೂಮೋನಿಯಾ ನಿಯಂತ್ರಣಕ್ಕೆ ಬಂದರೂ, ದಿನದಿಂದ ದಿನಕ್ಕೆ ಅವರ ಆರೋಗ್ಯ ಸ್ಥಿತಿ ಹದಗೆಟ್ಟು, ಅವರನ್ನು ಪ್ರಜ್ಞೆ ಮರಳಿಸುವ ಪ್ರಯತ್ನಗಳೆಲ್ಲವೂ ವಿಫಲಗೊಂಡಿವೆ. ಆರೋಗ್ಯ ತೀವ್ರ ಕುಸಿದಿದ್ದು, ಮೆದುಳು ಕಾರ್ಯ ಕುಂಠಿತಗೊಂಡಿತ್ತು. 

ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಲಕ್ಷಣಗಳು ಕಂಡು ಬರದ ಹಿನ್ನಲೆಯಲ್ಲಿ ಇಂದು ಬೆಳಿಗ್ಗೆ 6.55ರ ಸುಮಾರಿಗೆ ಪೇಜಾವರ ಮಠಕ್ಕೆ ಸ್ಥಳಾಂತರ ಮಾಡಲಾಗಿತ್ತು. ಆಸ್ಪತ್ರೆಯಿಂದ ಉಡುಪಿಯ ಪೇಜಾವರ ಮಠಕ್ಕೆ ಆ್ಯಂಬುಲೆನ್ಸ್ ಮೂಲಕ ಶ್ರೀಗಳನ್ನು ಶಿಫ್ಟ್ ಮಾಡಲಾಗಿತ್ತು. ಅಲ್ಲದೆ, ಮಠದ ಕೊಠಡಿಯಲ್ಲಿಯೇ ಐಸಿಯುನಂತಹ ವಾತಾವರಣದಲ್ಲಿ ಚಿಕಿತ್ಸೆ ನೀಡಲು ಆರಂಭಿಸಲಾಗಿತ್ತು. ಆದರೂ, ಚಿಕಿತ್ಸೆ ಫಲಕಾರಿಯಾಗದೆ ಶ್ರೀಗಳು ಇಂದು ಕೊನೆಯುಸಿರೆಳೆದಿದ್ದಾರೆ. 

ಕೃತಕ ಉಸಿರಾಟದಲ್ಲಿದ್ದ ಅವರ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡುಬಾರದ ಹಿನ್ನೆಲೆಯಲ್ಲಿ ಅವರ ಕೊನೆಯ ಆಸೆಯಂತೆ ಉಡುಪಿ ಮಠಕ್ಕೆ ಕರೆದೊಯ್ಯಲಾಗಿತ್ತು. ಅಲ್ಲಿ ಅವರ ನಿಧನ ಸುದ್ದಿಯನ್ನು ಅಧಿಕೃತವಾಗಿ ಪ್ರಕಟಿಸಲಾಯಿತು.

ಪೇಜಾವರ ಶ್ರೀಗಳು ಆರೋಗ್ಯವಂತರಾಗಿ ಆಸ್ಪತ್ರೆಯಿಂದ ಹೊರಬರಲಿ ಎಂದು ಅವರ ಅಭಿಮಾನಿಗಳು, ಉಡುಪಿ ಮಠದ ಭಕ್ತರು ಪೂಜೆ, ಪ್ರಾರ್ಥನೆಗಳನ್ನು ಸಲ್ಲಿಸಿದ್ದರು. ಆದರೆ ಅವರ ಪ್ರಾರ್ಥನೆ ಕೈಗೂಡಲಿಲ್ಲ.

ಪೇಜಾವರ ಶ್ರೀಗಳ ಆರೋಗ್ಯದಲ್ಲಿ ತೀವ್ರ ಏರುಪೇರು ಕಂಡುಬಂದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಅನೇಕ ಗಣ್ಯರು ಆಸ್ಪತ್ರೆಗೆ ಭೇಟಿ ನೀಡಿದ್ದರು. ಇದರಿಂದ ಅವರ ಚಿಕಿತ್ಸೆಗೆ ತೊಂದರೆಯಾಗುತ್ತಿದೆ ಎಂದು ಆಸ್ಪತ್ರೆಯು ಅವರನ್ನು ನೋಡಲು ಬರುವವರಿಗೆ ನಿರ್ಬಂಧ ವಿಧಿಸಿತ್ತು.

1931ರ ಏಪ್ರಿಲ್ 27ರಂದು ಉಡುಪಿಯಿಂದ ಸುಮಾರು 120 ಕಿ.ಮೀ. ದೂರದ ಸುಬ್ರಮಣ್ಯ ಸಮೀಪದ ರಾಮಕುಂಜ ಎಂಬ ಹಳ್ಳಿಯಲ್ಲಿ ಜನಿಸಿದ ವಿಶ್ವೇಶ ತೀರ್ಥ ಸ್ವಾಮೀಜಿ, ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಪೇಜಾವರ ಮಠದ 33ನೇ ಮಠಾಧೀಶರಾಗಿ ಸೇವೆ ಸಲ್ಲಿಸಿದ್ದರು.

ನಾರಾಯಣಾಚಾರ್ಯ ಮತ್ತು ಕಮಲಮ್ಮ ದಂಪತಿಯ ಎರಡನೆಯ ಮಗನಾದ ವಿಶ್ವೇಶ ತೀರ್ಥ ಸ್ವಾಮೀಜಿ ಅವರ ಮೂಲ ಹೆಸರು ವೆಂಕಟರಮಣ. ಆರು ವರ್ಷದ ಬಾಲಕನಿದ್ದಾಗ ಅವರ ಪೋಷಕರು ಉಡುಪಿ ಪೇಜಾವರ ಮಠದ ಪರ್ಯಾಯಕ್ಕೆ ಕರೆದೊಯ್ದಿದ್ದರು. ಆಗಿನ ಪೇಜಾವರ ಮಠಾಧೀಶರಾದ ವಿಶ್ವಮಾನ್ಯ ತೀರ್ಥರಿಂದ ಪ್ರಭಾವಿತರಾಗಿ ತಮ್ಮ ಎಂಟನೇ ವಯಸ್ಸಿನಲ್ಲಿ ಹಂಪಿಯಲ್ಲಿ ದೀಕ್ಷೆ ಪಡೆದರು. ಅಧೋಕ್ಷಜ ತೀರ್ಥರ ಸಂಸ್ಥಾನದ ಉತ್ತರಾಧಿಕಾರಿಯಾಗಿ ವಿಶ್ವೇಶ ತೀರ್ಥ ಎಂಬ ಹೆಸರಿನೊಂದಿಗೆ ವೇದಾಂತ ಪೀಠವನ್ನೇರಿದ್ದರು. 1954ರಲ್ಲಿ ವಿಶ್ವೇಶ ತೀರ್ಥರು ಮೊದಲ ಪರ್ಯಾಯ ನಡೆಸಿದ್ದರು. ಸೋದೆ ಮಠದ ಶ್ರೀ ವಾದಿರಾಜ ಸ್ವಾಮೀಜಿಗಳ ಬಳಿಕ ಐದು ಪರ್ಯಾಯಗಳನ್ನು ನಡೆಸಿದ ಏಕೈಕ ಸ್ವಾಮೀಜಿ ಎನಿಸಿದ್ದಾರೆ.

ಉಡುಪಿಯ ಎಂಟು ಮಠಗಳ ಮಠಾಧೀಶರಲ್ಲಿಯೇ ಅತ್ಯಂತ ಪ್ರಭಾವಶಾಲಿಯಾಗಿದ್ದ ವಿಶ್ವೇಶ ತೀರ್ಥರು, ಜಾಗತಿಕ ಮನ್ನಣೆ ಗಳಿಸಿದ್ದರು. ರಾಜಕೀಯ, ಸಾಮಾಜಿಕ ವಿಚಾರಗಳಲ್ಲಿಯೂ ಅವರು ತೊಡಗಿಸಿಕೊಂಡಿದ್ದರು. ರಾಮಕುಂಜ ಸಂಸ್ಕೃತ ಎಲಿಮೆಂಟರಿ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು ಸ್ವಾಮೀಜಿ ಪೂರೈಸಿದ್ದರು.

ಮಧ್ಯಾಹ್ನ ಒಂದು ಗಂಟೆವರೆಗೆ ಉಡುಪಿಯ ಅಜ್ಜರಕಾಡು ಮೈದಾನದಲ್ಲಿ ಶ್ರೀಗಳ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು ಬಳಿಕ ಶ್ರೀಗಳನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಗುವುದು ಎಂದು ಮಠದ ಮೂಲಗಳು ಸ್ಪಷ್ಟಪಡಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com