ಕೆಪಿಎಸ್ ಸಿಯ ಎ ಮತ್ತು ಬಿ ದರ್ಜೆಯ ಆಯ್ದ ಹುದ್ದೆಗಳಿಗೆ ಸಂದರ್ಶನ ಇಲ್ಲ: ಸಚಿವ ಮಾಧುಸ್ವಾಮಿ

ಎ ಮತ್ತು ಬಿ ದರ್ಜೆಯ ವೈದ್ಯ ಹಾಗೂ ಇಂಜಿನಿಯರ್ ನಂತಹ ಆಯ್ದ ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ ಸಿ) ನಡೆಸುತ್ತಿದ್ದ ಸಂದರ್ಶನವನ್ನು ರದ್ದುಪಡಿಸಲು ಸಚಿವ ಸಂಪುಟ ತೀರ್ಮಾನಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಎ ಮತ್ತು ಬಿ ದರ್ಜೆಯ ವೈದ್ಯ ಹಾಗೂ ಇಂಜಿನಿಯರ್ ನಂತಹ ಆಯ್ದ ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ ಸಿ) ನಡೆಸುತ್ತಿದ್ದ ಸಂದರ್ಶನವನ್ನು ರದ್ದುಪಡಿಸಲು ಸಚಿವ ಸಂಪುಟ ತೀರ್ಮಾನಿಸಿದೆ. ಇನ್ನು ಮುಂದೆ ಲಿಖಿತ ಪರೀಕ್ಷೆಯ ಮೂಲಕ ಆ ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು ಎಂದು ಕಾನೂನು ಸಚಿವ ಜೆಸಿ ಮಾಧುಸ್ವಾಮಿ ಅವರು ಸೋಮವಾರ ಹೇಳಿದ್ದಾರೆ.

ಇಂದು ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಎಸ್ ಸಿಯ ಎ ಮತ್ತು ಬಿ ದರ್ಜೆಯ ಕೆಲವು ಹುದ್ದೆಗಳಿಗೆ ಇನ್ನುಮುಂದೆ ಸಂದರ್ಶನ ಇರುವುದಿಲ್ಲ ಎಂದರು.

ಬೆಂಗಳೂರಿನ ನ್ಯಾಷನಲ್ ಲಾ ಕಾಲೇಜಿನಲ್ಲಿ ಕರ್ನಾಟಕ ವಿದ್ಯಾರ್ಥಿಗಳಿಗೆ ಮೀಸಲಾತಿ ನೀಡುವ ಸಂಬಂಧ ತಿದ್ದುಪಡಿ ಮಸೂದೆಯನ್ನು ಅಧಿವೇಶನದಲ್ಲಿ ಮಂಡಿಸಲು ಸರ್ಕಾರ ನಿರ್ಧರಿಸಿದೆ. ಇಲ್ಲಿವರೆಗೆ ಕರ್ನಾಟಕ ವಿದ್ಯಾರ್ಥಿಗಳಿಗೆ ಕಾನೂನು ಕಾಲೇಜಿನಲ್ಲಿ ಮೀಸಲಾತಿ ಸೌಲಭ್ಯ ದೊರಕಿರಲಿಲ್ಲ. ಹಿಂದಿನ ಸರ್ಕಾರ ಶೇ. 50 ರಷ್ಟು ಮೀಸಲು ನೀಡಬೇಕು ಎಂದು ವಿಧಾನ ಮಂಡಲದಲ್ಲಿ ಅನುಮೋದನೆಯ ರಾಜ್ಯಪಾಲರ ಅಂಕಿತಕ್ಕಾಗಿ ಕಳುಹಿಸಿತ್ತು. ಆದರೆ ರಾಜ್ಯಪಾಲರು ಸರ್ಕಾರ ರೂಪಿಸಿದ್ದ ಕಾನೂನನ್ನು ತಿರಸ್ಕರಿಸಿದ್ದರು.

ಈಗ ರಾಜ್ಯದಲ್ಲಿ 10 ವರ್ಷ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳಿಗೆ ನ್ಯಾಷನಲ್ ಲಾ ಸ್ಕೂಲ್ ನಲ್ಲಿ 100 ರಲ್ಲಿ 25 ಮಕ್ಕಳಿಗೆ ಅಂದರೆ ಶೇ.25 ಮೀಸಲು ಕಲ್ಪಿಸುವ ತಿದ್ದುಪಡಿ ಮಾಡಲು ಸಚಿವ ಸಂಪುಟ ಅನುಮೋದನೆ ನೀಡಿದೆ. ಮುಂಬರುವ ಜಂಟಿ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸಲು ನಿರ್ಧರಿಸಲಾಗಿದೆ ಎಂದು ವಿವರಿಸಿದರು.

ಬೆಂಗಳೂರಿನಲ್ಲಿ ನವಂಬರ್ 2020ರಂದು ಮೂರು ದಿನಗಳು ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ.ನವೆಂಬರ್ 3 ರಿಂದ 5ರವರೆಗೆ ಮೂರು ದಿನಗಳ ಜಾಗತಿಕ ಹೂಡಿಕೆದಾರರ ಸಭೆ ನಡೆಸಲಾಗುವುದು.ಈ ಸಂಬಂಧ ಈಗಾಗಲೇ ಕೈಗಾರಿಕಾ ಸಚಿವರು ವಿವಿಧ ರಾಜ್ಯಗಳಲ್ಲಿ ಬಂಡವಾಳ ಆಕರ್ಷಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ ಎಂದರು.

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಅಧ್ಯಕ್ಷಗಿರಿಯನ್ನು ಆಯಾ ಭಾಗದ ಸಚಿವರು ಆಗಬೇಕೆಂಬ ಕಾನೂನಿಗೆ ತಿದ್ದುಪಡಿ ತಂದು ಸ್ಥಳೀಯ ಶಾಸಕರು,ವಿಧಾನ ಪರಿಷತ್ ಸದಸ್ಯರನ್ನು ನೇಮಕ ನೇಮಕ ಮಾಡಲು ಅವಕಾಶ ಕಲ್ಪಿಸಲು ನಿರ್ಧಾರ ಮಾಡಲಾಗಿದೆ. ಈ ಹಿಂದೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರನ್ನು ಕಲ್ಯಾಣ ಕರ್ನಾಟಕ ಮಂಡಲಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಆದರೆ ಸ್ಥಳೀಯ ಶಾಸಕರ ವಿರೋಧಧ ಹಿನ್ನಲೆಯಲ್ಲಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ.ಮಂಡಲಿ ಅಧ್ಯಕ್ಷರಿಗೆ ಕ್ಯಾಬಿನೆಟ್ ಸ್ಥಾನ ಮಾನ ನೀಡಲಾಗುವುದು ಎಂದು ಅವರು ತಿಳಿಸಿದರು.

ವಾಜಪೇಯಿ ಹಾಗೂ ಅಂಬೇಡ್ಕರ್ ವಸತಿ ಯೋಜನೆಯಡಿ ಬೆಂಗಳೂರಿನಲ್ಲಿ ಒಂದು ಲಕ್ಷ ಮನೆ ನಿರ್ಮಾಣ ಯೋಜನೆ ನಿಯಮ ತಿದ್ದುಪಡಿ ತರಲಾಗಿದ್ದು, ಫಲಾನುಭವಿಗಳ ಆರ್ಥಿಕ ಆದಾಯ ಮಿತಿ 87,500 ರೂ ನಿಂದ 3 ಲಕ್ಷಕ್ಕೆ ಹೆಚ್ಚಳ ಮಾಡಲಾಗಿದೆ. ಮಹಡಿಯ ಎತ್ತರವನ್ನು ಜಿ+3 ಗೆ ಮಿತಿಗೊಳಿಸಲು ಮಾಡಲು ಸಚಿವ ಸಂಪುಟ ಸಭೆ ತೀರ್ಮಾನ ಮಾಡಿದೆ. ಈವರೆಗೆ 28,754 ಮನೆಗಳು ನಿರ್ಮಾಣವಾಗಿದೆ. ಟೆಂಡರ್ ಕರೆಯದೇ ಇರುವ ಮನೆಗಳಿಗೆ ಈ ತಿದ್ದುಪಡಿ ನಿಯಮಾವಳಿ ಅನ್ವಯವಾಗಲಿದೆ. ಹಿಂದಿನ ಸರ್ಕಾರ 13+1 ಮಹಡಿ ಯೋಜನೆ ರೂಪಿಸಿತ್ತು.ಹೆಚ್ಚಿನ ಅಂತಸ್ತು ಕಟ್ಟ ನಿರ್ಮಾಣ ಮಾಡಿದರೆ ಸರ್ಕಾರವೇ ನಿರ್ವಹಣಾ ಮತ್ತು ಕಟ್ಟಡವನ್ನು ಉಸ್ತುವಾರಿ ನೋಡಿಕೊಳ್ಳಬೇಕಾಗುತ್ತದೆ. ಇದು ಜನರಿಗೆ ಹೊರೆಯಾಗುವ ಹಿನ್ನಲೆಯಲ್ಲಿ ಬದಲಾವಣೆ ತರಲಾಗಿದೆ ಎಂದು ಸಚಿವರು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com