೨೦೨೦: ನಿರೀಕ್ಷೆಗಳು ಅಪಾರ, ಈಡೇರಿಕೆಗೆ ಮನಸ್ಸು ಮಾಡಬೇಕಿದೆ ಸರ್ಕಾರ

ಹೊಸ ವರ್ಷ ೨೦೨೦ರ ಅದ್ಧೂರಿ ಸ್ವಾಗತಕ್ಕೆ ಎಲ್ಲೆಡೆ ಭಾರಿ ಸಿದ್ದತೆಗಳು ನಡೆದಿರುವಾಗಲೇ ಹತ್ತು ಹಲವು ನಿರೀಕ್ಷೆಗಳು ಚಿಗುರೊಡೆದಿವೆ. ಅವುಗಳು ಸಾಕಾರಗೊಳ್ಳುತ್ತವೋ ಹೇಗೆ ಎನ್ನುವ ಕಾತರದಲ್ಲಿ ಜನತೆ ಇದ್ದಾರೆ.
ಸ್ಥಳಾಂತರಗೊಳ್ಳಬೇಕಿರುವ ಪ್ರವಾಸಿ ತಾಣ ಐಹೊಳೆ ಗ್ರಾಮ
ಸ್ಥಳಾಂತರಗೊಳ್ಳಬೇಕಿರುವ ಪ್ರವಾಸಿ ತಾಣ ಐಹೊಳೆ ಗ್ರಾಮ

ಬಾಗಲಕೋಟೆ: ಹೊಸ ವರ್ಷ ೨೦೨೦ರ ಅದ್ಧೂರಿ ಸ್ವಾಗತಕ್ಕೆ ಎಲ್ಲೆಡೆ ಭಾರಿ ಸಿದ್ದತೆಗಳು ನಡೆದಿರುವಾಗಲೇ ಹತ್ತು ಹಲವು ನಿರೀಕ್ಷೆಗಳು ಚಿಗುರೊಡೆದಿವೆ. ಅವುಗಳು ಸಾಕಾರಗೊಳ್ಳುತ್ತವೋ ಹೇಗೆ ಎನ್ನುವ ಕಾತರದಲ್ಲಿ ಜನತೆ ಇದ್ದಾರೆ.

ಪ್ರವಾಹದಿಂದ ಬದುಕನ್ನೆ ಕಳೆದುಕೊಂಡಿರುವ ಜನತೆ ೨೦೨೦ ರಲ್ಲಾದರೂ ಸರ್ಕಾರ ತಮ್ಮ ಬದುಕಿಗೆ ಶಾಶ್ವತ ನೆಲೆ ಕಲ್ಪಿಸಲಿದೆ. ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಲಿದೆ ಎನ್ನುವ ಕನಸು ಕಾಣುತ್ತಿದ್ದಾರೆ.

ಜಿಲ್ಲೆಯಲ್ಲಿ ಹರಿಯುವ ಕೃಷ್ಣಾ, ಘಟಪ್ರಭಾ ಮತ್ತ ಮಲಪ್ರಭಾ ನದಿಗಳಲ್ಲಿ ಉಂಟಾದ ಪ್ರವಾಹದಿಂದ ನದಿ ತೀರದ ಗ್ರಾಮಗಳ ಜನತೆ ಬದುಕು ಕೊಚ್ಚಿಕೊಂಡು ಹೋಗಿದೆ. ಈಗಲು ನೆರೆ ಸಂತ್ರಸ್ತ ಗ್ರಾಮಗಳ ಜನತೆ ಬದುಕು ಹಳಿಗೆ ಬಂದಿಲ್ಲ. ಅವರುಗಳ ಬದುಕು ಹಸನಾಗುತ್ತಿಲ್ಲ.

ನೆರೆ ಗ್ರಾಮಗಳ ಸ್ಥಳಾಂತರ
ಸರ್ಕಾರ ೨೦೨೦ ರಲ್ಲಾದರೂ ಅವರ ಬದುಕಿಗೆ ಹೊಸ ಹುಮ್ಮಸ್ಸು ತುಂಬುವ ಕೆಲಸ ಮಾಡಬೇಕಿದೆ. ಮುಖ್ಯವಾಗಿ ಗ್ರಾಮಗಳ ಸ್ಥಳಾಂತರ ಆಗಬೇಕಿದೆ. ಕೆಲವೇ ಕೆಲವರು ಸ್ಥಳಾಂತರಕ್ಕೆ ವಿರೋಧ ಮಾಡುತ್ತಿದ್ದಾರೆ ಎನ್ನುವ ಕಾರಣವನ್ನೇ ನೆಪವಾಗಿಟ್ಟುಕೊಂಡು ಇಡೀ ಸ್ಥಳಾಂತರ ಪ್ರಕ್ರಿಯೆ ನಿಲ್ಲಿಸುವ ಬದಲಿಗೆ, ಜನತೆಯ ಮನವೊಲಿಕೆ ಮೂಲಕ ಗ್ರಾಮ ಸ್ಥಳಾಂತರಕ್ಕೆ ಸರ್ಕಾರ ಗಟ್ಟಿ ಮನಸ್ಸು ಮಾಡಬೇಕಿದೆ.

ಅಧಿಸೂಚನೆ
ಇವೆಲ್ಲಕ್ಕೂ ಮಿಗಿಲಾಗಿ ಕೃಷ್ಣಾ ಹಾಗೂ ಮಹಾದಾಯಿ ನ್ಯಾಯಾಧೀಕರಣ ಸಮಿತಿಯ ವರದಿಯ ಅಧೀಸೂಚನೆಗಳನ್ನು ಕೇಂದ್ರ ಸರ್ಕಾರ ಹೊರಡಿಸಬೇಕು ಎನ್ನುವ ಮಹಾದಾಸೆ ಉತ್ತರ ಕರ್ನಾಟಕದ ಜನತೆಯ ಮಹದಾಸೆಯಾಗಿದೆ. ಹೆಚ್ಚು ಕಡಿಮೆ ಆಲಮಟ್ಟಿ ಜಲಾಶಯ ನಿರ್ಮಾಣ ಹಾಗೂ ನೀರಾವರಿ ಯೋಜನೆಗಳ ಅನುಷ್ಠಾನ ಕಾರ್ಯ ಮುರ‍್ನಾಲ್ಕು ದಶಕಗಳಿಂದ ನಡೆಯುತ್ತಿದ್ದರೂ ವರ್ಷದಿಂದ ವರ್ಷಕ್ಕೆ ಯೋಜನಾ ವೆಚ್ಚ ಹೆಚ್ಚುತ್ತಲೇ ಇದೆ. ಬ್ರಿಜೇಶ್ ಕುಮಾರ ಅವರು ಕೃಷ್ಣಾ ನ್ಯಾಯಾಧೀಕರಣ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಿ ಹತ್ತು ವರ್ಷಗಳೇ ಆಗುತ್ತಿವೆ. ಇದುವರೆಗೂ ಕೇಂದ್ರ ಸರ್ಕಾರ ಅಧೀಸೂಚನೆ ಹೊರಡಿಸುತ್ತಿಲ್ಲ. 

ಮಲಪ್ರಭಾ ನದಿಗೆ ಮಹಾದಾಯಿ, ಕಳಸಾ-ಬಂಡೂರಿ ನಾಲಾ ಜೋಡಣೆ ಮೂಲಕ ನೀರು ಬಳಕೆಗಾಗಿ ಅರ್ಧ ಶತಮಾನದಿಂದ ಹೋರಾಟ ನಡೆಯುತ್ತಿದೆ. ಮಹಾದಾಯಿ ನದಿ ನೀರು ಹಂಚಿಕೆ ಕುರಿತು ವಿವಾದ ಬಗೆ ಹರಿಸಲು ಕೇಂದ್ರ ಮಹಾದಾಯಿ ನ್ಯಾಯಾಧೀಕರಣ ಸಮಿತಿ ರಚಿಸಿ, ನ್ಯಾಯಾಧೀಕರಣ ಸಮಿತಿ ನೀರು ಹಂಚಿಕೆ ಮಾಡಿ ಆಗಿದೆ. ಹಂಚಿಕೆ ನೀರಿನ ಬಳಕೆಗಾಗಿ ಅಧಿಸೂಚನೆ ಹೊರಡಿಸುತ್ತಿಲ್ಲ. ಅಧಿಸೂಚನೆ ವಿಳಂಬ ಹಿನ್ನೆಲೆಯಲ್ಲಿ ಕೃಷ್ಣಾ ಮತ್ತು ಮಹಾದಾಯಿ ನೀರು ಬಳಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ರಾಜ್ಯದ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ಪರಿಣಾಮ ಯೋಜನೆಗಳ ಕಾರ್ಯಾನುಷ್ಠಾನ ವಿಳಂಬವಾಗಿ ಜನತೆ ಕುಡಿವ ನೀರು ಮತ್ತು ನೀರಾವರಿ ಯೋಜನೆಗಳಿಂದ ವಂಚಿತರಾಗುತ್ತಿದ್ದಾರೆ.

ನೀರಾವರಿ ಯೋಜನೆಗೆ ವಿಶೇಷ ಪ್ಯಾಕೇಜ್
ಏತನ್ಮಧ್ಯೆ ರಾಜ್ಯ ಸರ್ಕಾರ ಮುಂದಿನ ಮೂರು ವರ್ಷಗಳಲ್ಲಿ ಯುಕೆಪಿ ಯೋಜನೆಯಡಿ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವುದು, ಅಗತ್ಯ ಭೂಮಿಸ್ವಾಧೀನ, ಪುನರ್ ವಸತಿ, ಪುನರ್ ನಿರ್ಮಾಣ ಮತ್ತು ಸಂತ್ರಸ್ತರಿಗೆ ಪರಿಹಾರ ಹಂಚಿಕೆ ಮಾಡುವ ಭರವಸೆ ನೀಡಿದೆ. ಬಿಜೆಪಿ ಸರ್ಕಾರದ ಮೊದಲ ಬಜೆಟ್‌ನಲ್ಲಿ ಯುಕೆಪಿಯಡಿ ನೀರಾವರಿ ಯೋಜನೆ ಅನುಷ್ಠಾನ, ಸಂತ್ರಸ್ತರಿಗೆ ಪರಿಹಾರ, ಪುನರ್ ವಸತಿಗಾಗಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವುದೋ ಹೇಗೆ ಎನ್ನುವ ನಿರೀಕ್ಷೆ ಹೊಂದಿದ್ದಾರೆ. ೨೦೨೦ ರ ಮಾರ್ಚ್ ನಲ್ಲಿ ಮಂಡನೆ ಆಗಲಿರುವ ಬಜೆಟ್‌ನಲ್ಲಿ ಯುಕೆಪಿಗಾಗಿ ವಿಶೇಷ ಪ್ಯಾಕೇಜ್ ಬರಲಿದೆ ಎನ್ನುವ ಆಶಯದಲ್ಲಿದ್ದಾರೆ.

ಕುಡಚಿ ರೈಲ್ವೆ
ಬಾಗಲಕೋಟೆ ಜಿಲ್ಲೆಯ ಕೃಷಿ, ಕೈಗಾರಿಕೆ, ಪ್ರವಾಸೋದ್ಯಮ ಮತ್ತು ಔದ್ಯೋಗಿಕ ಕ್ರಾಂತಿಗಾಗಿ ಸಹಕಾರಿ ಆಗಲಿದೆ ಎಂದೇ ಹೇಳಲಾಗುತ್ತಿರುವ ಕುಡಚಿ-ಬಾಗಲಕೋಟೆ ರೈಲ್ವೆ ಮಾರ್ಗ ರಚನೆ ಇಂದಿಗೂ ಸಾಧ್ಯವಾಗುತ್ತಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ಮಾರ್ಗ ರಚನೆ ಪೂರ್ಣಗೊಳ್ಳುತ್ತಿಲ್ಲ. ಎರಡೂ ಸರ್ಕಾರಗಳು ಮಾರ್ಗ ರಚನೆಗೆ ಇರುವ ತಾಂತ್ರಿಕ ಅಡಚಣೆಗಳನ್ನು ನಿವಾರಿಸುವ ಮೂಲಕ ೨೦೨೦ ರ ಬಜೆಟ್‌ನಲ್ಲಿ ಅಗತ್ಯ ಹಣಕಾಸು ಬಿಡುಗಡೆ ಮಾಡಿ ಯೋಜನೆ ಪೂರ್ಣಗೊಳಿಸಲಿ ಎನ್ನುವ ಸದಾಶಯ ಹೊಂದಿದ್ದಾರೆ.

ರಾಜ್ಯದ ಧಾರ್ಮಿ ಶ್ರದ್ದಾಕೇಂದ್ರ ಕೂಡಲ ಸಂಗಮವನ್ನು ದೆಹಲಿಯ ಅಕ್ಷರಧಾಮ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದರೂ ಕಾಮಗಾರಿ ಮಾತ್ರ ಇನ್ನೂ ಆರಂಭಗೊಂಡಿಲ್ಲ. ಪ್ರಸಕ್ತ ವರ್ಷವಾದರೂ ಕಾಮಗಾರಿ ಆರಂಭಕ್ಕೆ ಸರ್ಕಾರ ಹಸಿರು ನಿಶಾನೆ ತೋರಬೇಕಿದೆ.

ಐಹೊಳೆ ಸ್ಥಳಾಂತರ
ಕಳೆದ ಮುರ‍್ನಾಲ್ಕು ದಶಕಗಳಿಂದ ನನೆಗುದಿಗೆ ಬಿದ್ದಿರುವ ಪ್ರವಾಸಿ ತಾಣ ಐಹೊಳೆ ಗ್ರಾಮ ಸ್ಥಳಾಂತರ, ಬಾದಾಮಿ ಪ್ರವಾಸಿ ತಾಣಗಳ ಸುತ್ತಲಿನ ಅತಿಕ್ರಮಣ ತೆರವಿಗೆ ಕೂಡ ೨೦೨೦ ರಲ್ಲಿ ಚಾಲನೆ ಸಿಗಬೇಕಿದೆ. ಪ್ರವಾಸಿ ತಾಣಗಳ ಜಿಲ್ಲೆಯಾಗಿರುವ ಬಾಗಲಕೋಟೆ ಜಿಲ್ಲೆಯ ಬದಾಮಿ ಬನಶಂಕರಿಯಲ್ಲಿ ಪ್ರವಾಸೋದ್ಯಮ ನಿಗಮ ನಿರ್ಮಿಸಲು ಉದ್ದೇಶಿಸಿರುವ ತ್ರಿಸ್ಟಾರ್ ಹೋಟೆಲ್ ನಿರ್ಮಾಣ ಕಾರ್ಯ ಆರಂಭಗೊಳ್ಳಬೇಕು. ಆ ಮೂಲಕ ವಿದೇಶಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ವಾಸಿಸಲು ಅನುಕೂಲವಾಗಬೇಕು ಎನ್ನುವುದು ಪ್ರವಾಸಿ ಪ್ರೀಯರ ಆಶಯವಾಗಿದೆ.

ಸಭಾಪತಿ ನೇಮಕ
ಕಳೆದ ಎರಡು ವರ್ಷಗಳಿಂದ ಬಾಗಲಕೋಟೆ ನವನಗರ ಪುನರ್ ವಸತಿ ಕೇಂದ್ರ ಸಮರ್ಪಕ ಅಭಿವೃದ್ಧಿ ಕಾಣದೇ ಕಳಾ ಹೀನವಾಗುತ್ತಿದೆ. ನವನಗರ ಪುನರ್ ವಸತಿ ಕೇಂದ್ರಗಳಲ್ಲಿನ ಉದ್ಯಾನಗಳು, ರಸ್ತೆಗಳು ಗಬ್ಬೆದ್ದು ಹೋಗಿವೆ. ಮೂಲ ಸೌಕರ್ಯ ಕೂಡ ಅಷ್ಟಕ್ಕಷ್ಟೆ ಎನ್ನುವಂತಾಗಿದೆ.
 
ನವನಗರ ಪುನರ್ ವಸತಿ ಕೇಂದ್ರದ ಸಮಗ್ರ ಅಭಿವೃದ್ಧಿಗಾಗಿ ೨೦೨೦ ರ ಆರಂಭದಲ್ಲೇ ಪಟ್ಟಣ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಭಾಪತಿಯನ್ನು ನೇಮಕ ಮಾಡಬೇಕಿದೆ. ಸಭಾಪತಿ ಸ್ಥಾನಕ್ಕಾಗಿ ಸಾಕಷ್ಟು ಜನ ಕಾರ್ಯಕರ್ತರು, ಮುಖಂಡರು ಕಣ್ಣಿಟ್ಟಿದ್ದರೂ ಶಾಸಕರ ನಿರ್ಧಾರವೇ ಅಂತಿಮವಾಗಿದ್ದು, ಸರ್ಕಾರ ಅದಷ್ಟು ಬೇಗ ಬಿಟಿಡಿಎ ಸಭಾಪತಿ ನೇಮಕ ಆದೇಶ ಹೊರಡಿಸಬೇಕಿದೆ. ಹಾಗೆ ಜಿಲ್ಲೆಯಲ್ಲಿನ ನಗರ ಯೋಜನಾ ಪ್ರಾಧಿಕಾರಗಳ ಅಧ್ಯಕ್ಷರ ನೇಮಕ ಮಾಡಬೇಕಿದೆ. ಆಡಳಿತಕ್ಕೆ ಚುರುಕು ನೀಡುವ ಹಿನ್ನೆಲೆಯಲ್ಲಿ ವರ್ಷಾರಂಭದಲ್ಲೇ ಈ ಕಾರ್ಯ ಆಗಬೇಕಿದೆ.

ಹೀಗೆ ಜಿಲ್ಲೆಯ ಜನತೆ ಹೊಸ ವರ್ಷ ೨೦೨೦ ರ ಬಗ್ಗೆ ಅಪಾರ ಕನಸು ಕಾಣುತ್ತಿದ್ದಾರೆ. ಅವರ ಕನಸುಗಳಿಗೆ ಸರ್ಕಾರ ಸ್ಪಂದಿಸಿ, ನೀರೆರೆದು ಪೋಷಿಸುವ ಮೂಲಕ ಜಿಲ್ಲೆ ಅಭಿವೃದ್ಧಿಗೆ ೨೦೨೦ ರಲ್ಲಿ ಹೊಸ ಭಾಷ್ಯ ಬರೆಯಬೇಕಿದೆ.
-ವಿಠ್ಠಲ ಆರ್. ಬಲಕುಂದಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com