ಹೊಸ ವರ್ಷ ಸಂಭ್ರಮಾಚರಣೆ: ಬೆಂಗಳೂರಿನಾದ್ಯಂತ ಪೊಲೀಸ್ ಹದ್ದಿನ ಕಣ್ಣು

ಹೊಸ ವರ್ಷವನ್ನು ಬರಮಾಡಿಕೊಳ್ಳಲು ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಜನರು ಅದ್ಧೂರಿ ಸಿದ್ಧತೆ ನಡೆಸಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಎಲ್ಲೆಡೆ  ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಹೊಸ ವರ್ಷವನ್ನು ಬರಮಾಡಿಕೊಳ್ಳಲು ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಜನರು ಅದ್ಧೂರಿ ಸಿದ್ಧತೆ ನಡೆಸಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಎಲ್ಲೆಡೆ  ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ.

ಬೆಂಗಳೂರಿನ ಹಲವೆಡೆ ಡ್ರೋನ್ ಕ್ಯಾಮೆರಾ ಮೂಲಕ ಖಾಕಿ ಹದ್ದಿನ ಕಣ್ಣಿಡಲಾಗಿದೆ.

ಯಾವುದೇ ಅಹಿತಕರ  ಘಟನೆಗಳು ನಡೆಯದಂತೆ ಹೊಸ ವರ್ಷವನ್ನು ಸುರಕ್ಷತೆ ಹಾಗೂ ಸಂಭ್ರಮದಿಂದ ಆಚರಿಸಲು ನಗರ  ಪೊಲೀಸರು ಸಿಸಿಟಿವಿ ಕ್ಯಾಮೆರಾ, ಡ್ರೋಣ್ ಕ್ಯಾಮೆರಾ, ಕಾವಲುಗೋಪುರ, ರಕ್ಷಣಾ ದ್ವೀಪ, ಇನ್ನಿತರ  ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅನುಸರಿಸಿ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ.

ಹೊಸ ವರ್ಷದಂದು ರಾತ್ರಿ 10ರಿಂದ ಬೆಳಿಗ್ಗೆ 6 ರವರೆಗೆ ನಗರದ ಎಲ್ಲ 44 ಪ್ಲೈ ಓವರ್ ಗಳ ಮೇಲೆ ರಸ್ತೆ ಸಂಚಾರವನ್ನು ನಿಷೇಧಿಸಲಾಗಿದೆ.

11 ಮಂದಿ ಡಿಸಿಪಿ, 41 ಎಸಿಪಿ, 213 ಇನ್ಸ್ ಸೆಕ್ಟರ್ ಗಳು, 591 ಸಬ್ ಇನ್ಸ್ ಪೆಕ್ಟರ್ ಗಳು  941ಎಎಸ್‌ಐ ಗಳು ಪೇದೆ, ಮುಖ್ಯಪೇದೆ ಸೇರಿ 7869 ಕೆಎಸ್ ಆರ್‌ಪಿ, 94 ತುಕಡಿಗಳು, 1,500 ಗೃಹ ರಕ್ಷಕ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜನೆಗೊಳಿಸಲಾಗಿದೆ. 

ಹೊಸ  ವರ್ಷದ ಸಂಭ್ರಮಗಳಿಗೆ ಸಾವಿರಾರು ಸಂಖ್ಯೆಯಲ್ಲಿ ಸೇರುವ ಎಂ.ಜಿ.ರಸ್ತೆ, ಬ್ರಿಗೇಡ್  ರಸ್ತೆ, ಚರ್ಚ್ ಸ್ಟ್ರೀಟ್, ಕೋರಮಂಗಲ, ಸೇಂಟ್ ಮಾಕ್ಸ್ ರಸ್ತೆ, ಇಂದಿರಾನಗರ, ಇನ್ನಿತರ  ಕಡೆಗಳಲ್ಲಿ ಆಧುನಿಕ ಬಿಗಿ ಭದ್ರತೆ ಕಲ್ಪಿಸಲಾಗಿದೆ.

ಭದ್ರತೆಗೆ ನಿಯೋಜನೆಗೊಳ್ಳುವ ಸಿಬ್ಬಂದಿಯೂ ಇಂದು ಸಂಜೆ 4 ರಿಂದ ರಾತ್ರಿ 2 ಗಂಟೆವರೆಗೆ ರಾತ್ರಿ 2 ರಿಂದ ನಾಳೆ ಬೆಳಿಗ್ಗೆ 8ರವರೆಗೆ 2 ಪಾಳಿಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.  ನಗರದ ಎಲ್ಲಾ ಡಿಸಿಪಿ  ವಿಭಾಗಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು, ಇಬ್ಬರು ಹೆಚ್ಚುವರಿ ಪೊಲೀಸ್ ಆಯುಕ್ತರು ವಲಯವಾರು ಭದ್ರತೆಯ ನಿಗಾವಹಿಸಲಿದ್ದಾರೆ.

ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ವಿರುದ್ಧ ವಿಶೇಷ ಕಾರ್ಯಾಚರಣೆ ಶುಕ್ರವಾರ ರಾತ್ರಿಯಿಂದಲೇ  ಆರಂಭವಾಗಿದ್ದು, ಜ. 2 ರವರೆಗೆ ನಿರಂತರವಾಗಿ ಮುಂದುವರೆಯಲಿದೆ. ಬಾರ್ ಆ್ಯಂಡ್  ರೆಸ್ಟೋರೆಂಟ್ ಗಳು ಪ್ರತಿಷ್ಠಿತ ಹೋಟೆಲ್ ಗಳ ಮುಂಭಾಗವೇ ಸಂಚಾರ ಪೊಲೀಸರಿದ್ದು ಕುಡಿದು ವಾಹನ ಚಾಲನೆ ಮಾಡಿಕೊಂಡು ಹೋಗುವ ಚಾಲಕರನ್ನು ಅಲ್ಲಿಯೇ ಪತ್ತೆ ಹಚ್ಚಿ ಕ್ರಮಕೈಗೊಳ್ಳಲಿದ್ದಾರೆ.

ನಂಬಿಕಸ್ಥ ಮದ್ಯಪಾನ ಮಾಡದ  ಚಾಲಕರನ್ನು ಅಂದು ನಿಯೋಜಿಸಿಕೊಳ್ಳುವುದು ಮುಖ್ಯ. ಗುಂಪಾಗಿ ಪಾರ್ಟಿಗೆ ಹೋಗುವವರು ಅಂದು ಮದ್ಯ ಸೇವಿಸದ ಚಾಲಕನ ವಾಹನವನ್ನು ಪಡೆಯಬೇಕು. ಮಹಿಳೆಯರು, ಯುವತಿಯರು ತಮ್ಮ ನಂಬಿಕಸ್ಥರ ಜೊತೆ ಪಾರ್ಟಿಗೆ ಹೋಗುವಂತೆ ಈಗಾಗಲೇ ಪೊಲೀಸ್ ಇಲಾಖೆ ಸೂಚಿಸಿದೆ.

ನಗರದ ಎಲ್ಲಾ ಉದ್ಯಾನವನಗಳಲ್ಲಿ ಮದ್ಯ ಸೇವಿಸಿ ಹೊಸ ವರ್ಷ ಆಚರಣೆ ಸಂಭ್ರಮ ಮಾಡದಂತೆ ಅಂದು ರಾತ್ರಿ ಎಲ್ಲ ಉದ್ಯಾನವನಗಳಿಗೆ ಬಿಬಿಎಂಪಿ ಸಹಕಾರದೊಂದಿಗೆ ಬೀಗ ಹಾಕಲಾಗುವುದು. ರಸ್ತೆ ಬದಿ ಮದ್ಯ ಸೇವಿಸಿ ಹೊಸ ವರ್ಷ ಆಚರಣೆ ಮಾಡುವವರ ಮೇಲೂ ನಿಗಾವಹಿಸಲಾಗುತ್ತದೆ.

ಮಹಿಳೆಯರು  ಅಪರಿಚಿತರ ಜೊತೆ ಯಾವುದೇ ಕಾರಣಕ್ಕೂ ಮದ್ಯಪಾನ ಮಾಡಬಾರದು, ಹೊಸ ವರ್ಷದ ಮೋಜಿನಲ್ಲೂ  ತೊಡಗಬಾರದು. ಎಲ್ಲರೂ ಹೊಸ ವರ್ಷವನ್ನು ಸಂತಸದಿಂದ ಬರಮಾಡಿಕೊಂಡು ಗೌರವಾನ್ವಿತ ಸಂಭ್ರಮ,  ಮೋಜು ಮಾಡಬೇಕು ಎಂದು ಪೊಲೀಸ್‌ ಇಲಾಖೆ ಮನವಿ ಮಾಡಿದೆ.

ಹೊಸ ವರ್ಷದ ಹಿನ್ನೆಲೆಯಲ್ಲಿ ಮಧ್ಯರಾತ್ರಿ 2 ರವರೆಗೆ  ಬಿಎಂಟಿಸಿ ಹಾಗೂ ಮೆಟ್ರೋ ರೈಲು ಸಂಚರಿಸಲಿವೆ. ಅತಿ ಹೆಚ್ಚು ಜನ ಸೇರಿ ಹೊಸ ವರ್ಷ ಆಚರಣೆ ಮಾಡುವ ಸ್ಥಳಗಳಲ್ಲಿ ರಕ್ಷಣಾ ದ್ವೀಪ ರಚನೆ ಮಾಡಲಾಗುವುದು ಅಲ್ಲಿ ಕುಳಿತುಕೊಳ್ಳಲು ಆಸನ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ದ್ವೀಪದಿಂದಲೇ ಓಲಾ, ಉಬರ್, ಕ್ಯಾಬ್ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳ ಜೊತೆ ಸಭೆ ನಡೆಸಲಾಗಿದೆ. ಅಲ್ಲಿಂದ ತಾವು ತೆರಳಬೇಕಾಗಿರುವ ಸ್ಥಳಗಳಿಗೆ ಕ್ಯಾಬ್ ಮೂಲಕ ಹೋಗಬಹುದು. ಆಟೋಗಳಿಗೂ ಕೂಡ ಪ್ರಯಾಣಿಕರು ಕರೆದ ಸ್ಥಳಗಳಿಗೆ ಹೋಗಬೇಕು. ಇಲ್ಲದಿದ್ದರೇ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಹೊಸ ವರ್ಷದಂದು ಮಧ್ಯರಾತ್ರಿ 1 ರವರೆಗಿನ ಮದ್ಯ ಮಾರಾಟದ ಅವಕಾಶವನ್ನು ಇನ್ನೊಂದು ಗಂಟೆ  ವಿಸ್ತರಿಸಲಾಗಿದೆ. 2 ಗಂಟೆಯೊಳಗೆ ಮದ್ಯ ಮಾರಾಟವನ್ನು ಸಂಪೂರ್ಣ ಸ್ಥಗಿತಗೊಳಿಸುವಂತೆ  ಹೋಟೆಲ್ ಬಾರ್ ಅಂಡ್ ರೆಸ್ಟೋರೆಂಟ್ ಗಳಿಗೆ ಸೂಚಿಸಲಾಗಿದೆ. ಪ್ರಮುಖ  ಹೋಟೆಲ್ ಗಳು ಬಾರ್ ಅಂಡ್ ರೆಸ್ಟೋರೆಂಟ್ ಗಳಲ್ಲಿ ಮಾದಕ ವಸ್ತುಗಳ ತಪಾಸಣೆ ನಡೆಸಲಿದ್ದು, ಇದಕ್ಕೆ ಶ್ವಾನದಳವನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ.

ಹೊಸ  ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದರಿಂದ  ಉಂಟಾಗುವ ಅನಾಹುತಗಳನ್ನು ಗಂಭೀರವಾಗಿ ಪರಿಗಣಿಸಿ ಶುಕ್ರವಾರದಿಂದಲೇ ನಗರದಾದ್ಯಂತ ಪಾನಮತ್ತ ಚಾಲಕರ ಪತ್ತೆಗೆ ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದಾರೆ. ನಗರದ  134 ಕಡೆಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಯುತ್ತಿದ್ದು, ಇಂದು 175 ಕಡೆಗಳಲ್ಲಿ ತಪಾಸಣೆ ನಡೆಯುತ್ತಿದೆ.

ಮದ್ಯಪಾನ  ಮಾಡಿ ಹೊಸ ವರ್ಷದಂದು ವಾಹನ ಚಾಲನೆ ಮಾಡುವ ಚಾಲಕರ ವಿರುದ್ಧ ಸೆಕ್ಷನ್ 279 ಅಡಿ  (ನಿರ್ಲಕ್ಷ್ಯ, ಸಾರ್ವಜನಿಕರ ಜೀವಕ್ಕೆ ಅಪಾಯ)ಪ್ರಕರಣ ದಾಖಲಿಸಲಾಗುವುದೆಂದು ಎಂದು ಜಂಟಿ  ಪೊಲೀಸ್ ಆಯುಕ್ತ (ಸಂಚಾರ)ರವಿಕಾಂತೇಗೌಡ ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.

ಸಂಚಾರ ನಿಷೇಧ
ಇಂದು  ರಾತ್ರಿ 8ರಿಂದ ಮುಂಜಾನೆ 2ರವರೆಗೆ ಅನಿಲ್‌ಕುಂಬ್ಳೆ ವೃತ್ತದಿಂದ ಮೆಯೋಹಾಲ್  ರೆಸಿಡೆನ್ಸಿ ರಸ್ತೆವರೆಗೆ, ಕಾವೇರಿ ಎಂಪೋರಿಯಂನಿಂದ ಅಪೇರಾ ಜಂಕ್ಷನ್‌ವರೆಗೆ, ಬ್ರಿಗೇಡ್  ರಸ್ತೆಯಿಂದ ಮ್ಯುಜಿಯಂರಸ್ತೆ ಜಂಕ್ಷನ್‌ವರೆಗೆ, ಎಂಜಿ ರಸ್ತೆಯಿಂದ ಹಳೆ ಮದ್ರಾಸ್  ಬ್ಯಾಂಕ್ ವೃತ್ತದವರೆಗೆ, ಮ್ಯುಸಿಯಂ ರಸ್ತೆಯಿಂದ ಬ್ರಿಗೇಡ್ ರಸ್ತೆ ಜಂಕ್ಷನ್‌ವರೆಗೆ, ರೆಸಿಡೆನ್ಸಿ ರಸ್ತೆಯಿಂದ ಎಂಜಿ ರಸ್ತೆ ಜಂಕ್ಷನ್‌ವರೆಗೆ ಸಾರ್ವಜನಿಕ ವಾಹನಗಳ ಪ್ರವೇಶ  ಹಾಗೂ ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗಿದೆ.
ಹೊಸೂರು  ಮುಖ್ಯರಸ್ತೆ, ಜಯದೇವ, ಡೈರಿ ವೃತ್ತ, ಆನಂದ್‌ರಾವ್ ವೃತ್ತ, ಮೈಸೂರು ರಸ್ತೆ,  ಕಲ್ಯಾಣನಗರ ಮೇಲ್ಸೇತುವೆ, ನ್ಯಾಷನಲ್ ಕಾಲೇಜ್, ಹೊರ ವರ್ತುಲ ರಸ್ತೆ, ನಾಗವಾರ  ಮೇಲ್ಸೇತುವೆ ಸೇರಿದಂತೆ ನಗರದ ಎಲ್ಲ 44 ಫ್ಲೇವರ್‌ಗಳಲ್ಲಿ ಸಂಚಾರವನ್ನು ಸಂಪೂರ್ಣ  ನಿಷೇಧಿಸಲಾಗುತ್ತದೆ.

ಎಂಜಿ ರಸ್ತೆಯಲ್ಲಿ ನಡೆಯುವ ಹೊಸ ವರ್ಷದ  ಸಂಭ್ರಮದಲ್ಲಿ ಪಾಲ್ಗೊಳ್ಳುವವರು ವಾಹನ ನಿಲುಗಡೆಗೆ ಮಾಣಿಕ್‌ಷಾ ಪರೇಡ್ ಮೈದಾನ ಹಾಗೂ  ಶಿವಾಜಿನಗರದ ಮಲ್ಟಿಲೆವಲ್ ವಾಹನ ನಿಲುಗಡೆ ಪ್ರದೇಶದಲ್ಲಿ ಅವಕಾಶ ಮಾಡಿಕೊಡಲಾಗಿದೆ.
ರಸ್ತೆಗಳಲ್ಲಿ  ಅತಿ ವೇಗದ ಚಾಲನೆ, ವ್ಹೀಲಿಂಗ್, ಡ್ರಾಗ್ ರೇಸ್ ಇನ್ನಿತರ ಕೃತ್ಯಗಳಿಂದ ಸಾರ್ವಜನಿಕರಿಗೆ  ತೊಂದರೆ ಮಾಡುವ ದ್ವಿಚಕ್ರ ವಾಹನ ಸವಾರರನ್ನು ಬಂಧಿಸಿ ಕಠಿಣ ಕ್ರಮಕೈಗೊಳ್ಳಲಾಗುವುದು.  ಅಂತಹದು ಕಂಡು ಬಂದರೆ ಸಾರ್ವಜನಿಕರು ಡಯಲ್ 100ಕ್ಕೆ ಕರೆ ಮಾಡಬಹುದು. 

ರಾಕಿಂಗ್ ಸ್ಟಾರ್ ಸಂದೇಶ
ಹೊಸ  ವರ್ಷದ ಸಂಭ್ರಮದ ವೇಳೆ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದರ ವಿರುದ್ಧ ಜಾಗೃತಿ  ಮೂಡಿಸಲು ನಗರ ಸಂಚಾರ ಪೊಲೀಸರು ಖ್ಯಾತ ನಟ ರಾಕಿಂಗ್ ಸ್ಟಾರ್ ಯಶ್ ವಿಡಿಯೋ ಮೂಲಕ  ಸಂದೇಶವನ್ನು ನೀಡಿದ್ದಾರೆ.

ಸಂಚಾರ ಪೊಲೀಸರ ಜೊತೆ ಕೈ ಜೋಡಿಸಿರುವ ರಾಕಿಂಗ್ ಸ್ಟಾರ್ ಯಶ್ ವಿಡಿಯೋ ಮೂಲಕ ಸಾರ್ವಜನಿಕರಿಗೆ ಅಭಿಮಾನಿಗಳಿಗೆ ಸಂದೇಶವನ್ನು ನೀಡಿದ್ದಾರೆ.

ಯಶ್, ಹೊಸ ವರ್ಷಕ್ಕೆ ಪೊಲೀಸರ ಜೊತೆ ಕೈಗೂಡಿಸಿ, ಮದ್ಯಪಾನ ಮಾಡಿ ವಾಹನ ಓಡಿಸುವವರ ವಿರುದ್ಧ  ಅಭಿಯಾನ ಆರಂಭಿಸಿದ್ದಾರೆ. ಮದ್ಯಪಾನ ಮಾಡಿ ವಾಹನ ಓಡಿಸಬಾರದು, ತಮ್ಮ ಕುಟುಂಬದವರು  ಪ್ರೀತಿ ಪಾತ್ರರು ನಿಮಗೊಸ್ಕರ ಕಾಯುತ್ತಿರುತ್ತಾರೆ ಎಂದು ಮನವಿ ಮಾಡಿದ್ದಾರೆ.

ಹೊಸ  ವರ್ಷದ ಸಂಭ್ರಮದಲ್ಲಿ ಮದ್ಯ ಪಾನ ವಾಹನ ಚಲಾಯಿಸುವ ಸಂದರ್ಭದಲ್ಲಿ ಮನೆಯಲ್ಲಿ ತಮಗಾಗಿ  ತಂದೆತಾಯಿ, ಅಕ್ಕತಂಗಿ, ಪತ್ನಿ, ಮಕ್ಕಳು,ಪ್ರೀತಿ ಪಾತ್ರರು ಕಾಯುತ್ತಿರುತ್ತಾರೆ ಎಂಬುದನ್ನು ಸ್ಮರಿಸಿಕೊಳ್ಳುವಂತೆ ಯಶ್ ಮನವಿ ಮಾಡಿದ್ದಾರೆ.

ಹೊಸ  ವರ್ಷ ಪ್ರತಿ ವರ್ಷ ಬರುತ್ತದೆ. ಅದರ ಜೊತೆಗೆ ಹೊಸ ಆಸೆ, ಕನಸು, ಗುರಿ ಹೀಗೆ  ಪ್ರತಿಯೊಬ್ಬರು ತಮ್ಮ ಜೀವನವನ್ನು ರೀ-ಸೆಟ್ ಮಾಡಿ ರೀ-ಸ್ಟಾರ್ಟ್ ಮಾಡುವ ಜೋಶ್‌ನಲ್ಲಿ ಇರುತ್ತಾರೆ. ಇದು ಹೊಸತನ ಬರ ಮಾಡಿಕೊಳ್ಳುವ ಸಮಯ ನಿಜ. ಹಾಗಂತ ಎಚ್ಚರ ತಪ್ಪಿ ಕುಡಿದು  ವಾಹನ ಓಡಿಸಿದರೆ, ಪಡೆದುಕೊಳ್ಳುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು. ಒಂದು ದಿನ  ಪಾರ್ಟಿ ಮಾಡಿ ಸ್ನೇಹಿತರ ಜೊತೆ ಖುಷಿಯಾಗಿರುವ ಜೋಶ್‌ನಲ್ಲಿ ಮೈ ಮರೆತು ನೀವು ವಾಹನ  ಓಡಿಸಿದರೆ, ಅನಾಹುತವಾಗುತ್ತದೆ.
ನಿಮಗೇನಾದರೂ ಹೆಚ್ಚು ಕಡಿಮೆ ಆದರೆ ನಿಮ್ಮನ್ನು ನಂಬಿಕೊಂಡು ಇರುವವರು ಅಥವಾ ನಿಮ್ಮನ್ನು ಪ್ರೀತಿಸುವವರು ಜೀವನಪರ್ಯಂತ  ನೋವು ಅನುಭವಿಸಬೇಕಾಗುತ್ತದೆ. ಇದಕ್ಕೆ ಪರಿಹಾರ ಏನೆಂದರೆ, ಸಾರ್ವಜನಿಕ ವಾಹನ ಬಳಸಿ,  ಕುಡಿದಾಗ ಕ್ಯಾಬ್ ಬುಕ್ ಮಾಡಿ, ಇಲ್ಲವೆಂದರೆ ಕುಡಿದೆ ಇರುವವರಿಗೆ ವಾಹನ ಚಲಾಯಿಸಲು ಕೊಡಿ. ಸ್ಮಾರ್ಟ್ ಆಗಿರಿ. ರಸ್ತೆ ಸುರಕ್ಷಿತೆಗಾಗಿ ಬೆಂಗಳೂರು ಪೊಲೀಸರೊಂದಿಗೆ ಕೈ  ಜೋಡಿಸೋಣ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಸೇಫ್ ಆಗಿರಿ ಎಂದು ಸಂದೇಶ  ರವಾನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com