ಕಡಿಮೆ ದರದಲ್ಲಿ ಗುಣಮಟ್ಟದ ಮದ್ಯ ನೀಡುವ ಬಗ್ಗೆ ಪರಿಶೀಲನೆ: ಸಚಿವ ನಾಗೇಶ್

ಮದ್ಯದ ದರದಲ್ಲಿ ಗಣನೀಯ ಏರಿಕೆಯಾಗಿ ಬಡ ಜನರಿಗೆ ದುಬಾರಿಯಾಗಿರುವ ಹಿನ್ನೆಲೆಯಲ್ಲಿ ಕಡಿಮೆ ದರದಲ್ಲಿ ಗುಣಮಟ್ಟದ ಮದ್ಯ ನೀಡುವ ಬಗ್ಗೆ ಪರಿಶೀಲನೆ ನಡೆಸುವುದಾಗಿ ಅಬಕಾರಿ ಸಚಿವ ಎಚ್ ನಾಗೇಶ್ ತಿಳಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಮದ್ಯದ ದರದಲ್ಲಿ ಗಣನೀಯ ಏರಿಕೆಯಾಗಿ ಬಡ ಜನರಿಗೆ ದುಬಾರಿಯಾಗಿರುವ ಹಿನ್ನೆಲೆಯಲ್ಲಿ ಕಡಿಮೆ ದರದಲ್ಲಿ ಗುಣಮಟ್ಟದ ಮದ್ಯ ನೀಡುವ ಬಗ್ಗೆ ಪರಿಶೀಲನೆ ನಡೆಸುವುದಾಗಿ ಅಬಕಾರಿ ಸಚಿವ ಎಚ್ ನಾಗೇಶ್ ತಿಳಿಸಿದ್ದಾರೆ.

ವಿಕಾಸಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಮದ್ಯ ಸರಬರಾಜು ಮಾಡುವ ಚಿಂತನೆ ಇದೆ. ಕಡಿಮೆದರದ ಮದ್ಯ ನೀಡುವಂತಿದ್ದರೆ ಗುಣಮಟ್ಟಕೆ ಆದ್ಯತೆ ನೀಡಬೇಕಾಗುತ್ತದೆ ಎಂದು ತಿಳಿಸಿದರು.

ಈ ಹಿಂದೆ ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯ ಸರ್ಕಾರ ಇದ್ದಾಗ ಬಡವರಿಗೆ ಕಡಿಮೆ ದರದಲ್ಲಿ ಮದ್ಯ ನೀಡುವ ಬಗ್ಗೆ ಪ್ರಸ್ತಾಪವಿದ್ದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಪರಿಶೀಲನೆ ನಡೆಸುತ್ತೇವೆ. ಸಬ್ಸಿಡಿ ದರದಲ್ಲಿ ಮದ್ಯ ನೀಡುವ ಬಗ್ಗೆ ಹಣಕಾಸು ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ತೀರ್ಮಾನ ಕೈಗೊಳ್ಳುತ್ತೇವೆ ಎಂದು ತಿಳಿಸಿದರು. ಈಗಾಗಲೇ 765 ಎಂಎಸ್ ಐಎಲ್ ಮದ್ಯ ಮಾರಾಟ ಮಳಿಗೆಗೆ ಅನುಮತಿ ನೀಡಲಾಗಿದೆ. ಈ ಪೈಕಿ 408 ಮಳಿಗೆಗಳು ಇನ್ನೂ ಪ್ರಾರಂಭವಾಗಿಲ್ಲ. ಒಂದು ಕ್ಷೇತ್ರದಲ್ಲಿ ನಾಲ್ಕು ಮಳಿಗೆಗಳನ್ನು ತೆರೆಯುವ ನಿಯಮ ಇದೆ. ಈ ಬಗ್ಗೆ ಸ್ಥಳೀಯ ಶಾಸಕರು ನಿರ್ಧರಿಸುತ್ತಾರೆ. ಇವುಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಪ್ರಾರಂಭಿಸುವ ಬಗ್ಗೆ ಚಿಂತನೆ ಇದೆ ಎಂದು ವಿವರಿಸಿದರು.

ಬಿಯರ್ ಮಾರಾಟವನ್ನು ಕಡಿಮೆ ಮಾಡಿ ಇತರೆ ಮದ್ಯವನ್ನು ಹೆಚ್ಚು ಮಾರಾಟ ಮಾಡುವಂತೆ ಅಬಕಾರಿ ಅಧಿಕಾರಿಗಳು ಮದ್ಯ ಮಾರಾಟಗಾರರ ಮೇಲೆ ಒತ್ತಡ ಹೇರುತ್ತಿರುವ ದೂರುಗಳು ಬಂದಿವೆ. ಈ ಬಗ್ಗೆ ಅಬಕಾರಿ ಆಯುಕ್ತರೊಂದಿಗೆ ಚರ್ಚಿಸಿದ್ದು, ಕರಾವಳಿ ಭಾಗದಲ್ಲಿ ಬಿಯರ್ ಮಾರಾಟ ನಿಯಂತ್ರಿಸದಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ಸರ್ಕಾರ ರಾಜಸ್ವ ಸಂಗ್ರಹಣೆಗಾಗಿ ನಮಗೆ ಗುರಿ ನಿಗದಿ ಮಾಡಿದ್ದು, 20,950 ಕೋಟಿ ರೂ. ರಾಜಸ್ವ ಸಂಗ್ರಹಣೆ ಗುರಿ ಇದೆ. ನವೆಂಬರ್ ವರೆಗೆ ಒಟ್ಟು 14,400 ಕೋಟಿ ರೂ‌. ಆದಾಯ ಸಂಗ್ರಹಿಸಿದ್ದು, ಡಿಸೆಂಬರ್ ತಿಂಗಳಾಂತ್ಯಕ್ಕೆ ಮತ್ತೆ 1700 ಕೋಟಿ ರೂ. ಕ್ರೋಢೀಕರಣವಾಗುವ ನಿರೀಕ್ಷೆಯಿದೆ. ಒಟ್ಟು ಇಲ್ಲಿವರೆಗೆ 16,100 ಕೋಟಿ ರೂ. ರಾಜಸ್ವ ಸಂಗ್ರಹವಾಗುವ ನಿರೀಕ್ಷೆಯಿದೆ. ಇನ್ನು ಮೂರು ತಿಂಗಳೊಳಗೆ ನಿಗದಿ ಮಾಡಿರುವ ಗುರಿ ಮುಟ್ಟುತ್ತೇವೆ ಎಂದು ತಿಳಿಸಿದರು.

ಹೊಸವರ್ಷಾಚರಣೆ ಹಿನ್ನೆಲೆಯಲ್ಲಿ ಇಂದು ಮಧ್ಯರಾತ್ರಿ 2 ಗಂಟೆಯವರಗೆ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ವೈನ್ ಶಾಪ್ ಗಳು ರಾತ್ರಿ 11 ಗಂಟೆ ಹಾಗೂ ಬಾರ್ ಅಂಡ್ ರೆಸ್ಟೋರೆಂಟ್ ಗಳು ಮಧ್ಯರಾತ್ರಿ 1 ಗಂಟೆಯವರೆಗೆ ತೆರೆದಿರುತ್ತವೆ. ಇದನ್ನು ಇನ್ನೂ ಒಂದು ಗಂಟೆ ಹೆಚ್ಚಿಸಿ ಮಧ್ಯರಾತ್ರಿ 2 ಗಂಟೆವರಗೆ ಅವಕಾಶ ಕೊಡಲು ಗೃಹ ಇಲಾಖೆಯೂ ಸಮ್ಮತಿಸಿದೆ ಎಂದು ಸ್ಪಷ್ಟಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com