ಬೆಂಗಳೂರು: ಇಸ್ಪೀಟ್ ಆಡಲು ಹಣ ನೀಡದ್ದಕ್ಕೆ ತಂದೆಗೆ ಇರಿದ ಮಗ

: ಮನೆಯ ಮೌಲ್ಯಯುತ ವಸ್ತುಗಳನ್ನು ಅಡವಿಟ್ಟು ಇಸ್ಪೀಟ್ ಆಡದಂತೆ ಬುದ್ದಿ ಹೇಳಿದ ತಂದೆಗೆ ಪೆನ್-ಚಾಕುವಿನಿಂದ ಇರಿದಿರುವ ಘಟನೆ ಗಿರಿನಗರ ಪೊಲೀಸ್ ಠಾಣೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಮನೆಯ ಮೌಲ್ಯಯುತ ವಸ್ತುಗಳನ್ನು ಅಡವಿಟ್ಟು ಇಸ್ಪೀಟ್ ಆಡದಂತೆ ಬುದ್ದಿ ಹೇಳಿದ ತಂದೆಗೆ ಪೆನ್-ಚಾಕುವಿನಿಂದ ಇರಿದಿರುವ ಘಟನೆ ಗಿರಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ  ನಡೆದಿದೆ.
ದ್ವಾರಕಾನಗರದ ನಿವಾಸಿ,ಸಂತೋಷ್ (37) ತಂದೆಗೆ ಚಾಕು ಇರಿದು ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಇರಿತಕ್ಕೊಳಗಾದ ತಂದೆ ರಾಮಪ್ಪ ಪ್ರಜ್ಞಾಹೀನರಾಗಿದ್ದು (64) ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 
ಆಟೋ ಓಡಿಸಿಕೊಂಡು ಕುಟುಂಬವನ್ನು ಸಾಕಿದ್ದ ರಾಮಪ್ಪ ಅವರಿಗೆ ವಯಸ್ಸಾಗಿದ್ದು, ನಿಶಕ್ತರಾಗಿದ್ದರಿಂದ ಆಟೋವನ್ನು ಮಗ ಸಂತೋಷ್‌ಗೆ ಒಪ್ಪಿಸಿದ್ದರು. ಮಗ ಮಾತ್ರ ಆಟೋ ಓಡಿಸಿದ ಹಣವನ್ನು ಇಸ್ಪೀಟ್‌ ಆಟದಲ್ಲಿ ಕಳೆದುಕೊಳ್ಳುವ ಚಟ ಬೆಳೆಸಿಕೊಂಡಿದ್ದ. ತಿಂಗಳುಗಟ್ಟಲೆ ಆಟೋದಲ್ಲಿ ಸಂಪಾದಿಸಿದ ಹಣವನ್ನೆಲ್ಲಾ ಜೂಜಿನಲ್ಲೇ ಕಳೆದು ಬರಿಗೈಲಿ ಮನೆಗೆ ಬರುವುದು ಮಾಮೂಲಾಗಿತ್ತು.
ಶನಿವಾರ ಮಧ್ಯಾಹ್ನ 3.30ಕ್ಕೆ ಮನೆಗೆ ಬಂದ ಸಂತೋಷ್  5 ಸಾವಿರ ಹಣ ನೀಡುವಂತೆ ಒತ್ತಾಯಿಸಿದ್ದಾನೆ, ಆದರೆ ಹಣ ನೀಡದ ಕಾರಣ  ತಂದೆ- ಮಗನ ನಡುವೆ ಜಗಳವಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದರು. 
ಇಸ್ಪೀಟ್ ಆಡದಂತೆ ಮಗನಿಗೆ ಬುದ್ದಿವಾದ ಹೇಳಿದ್ದರು, ಇದರಿಂದ ಕುಪಿತಗೊಂಡ ಸಂತೋಷ್ ತನ್ನ ಆಟೋರಿಕ್ಷಾ ಕೈ ಚೈನ್ ಜೊತೆಗಿದ್ದ ಪೆನ್ ಚಾಕುವಿನಿಂದ ತಂದೆಗೆ ಇರಿದಿದ್ದಾನೆ,
ರಾಮಪ್ಪ ಅವರ ಕಿರುಚಾಟ ಕೇಳಿ ಸ್ಥಳಕ್ಕೆ ಧಾವಿಸಿದ ಅಕ್ಕ ಪಕ್ಕದವರು ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ರಾಮಪ್ಪ ಪ್ರಾಣಾಪಾಯದಿಂದ ಪಾರಾಗಿದ್ದು, ಆರೋಪಿ ಮಗನ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
ತಪ್ಪಿಸಿಕೊಳ್ಳಲು ಓಡಿಹೋಗುತ್ತಿದ್ದ ಸಂತೋಷ್ ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ, ರಾಜಪ್ಪ ಪತ್ನಿ ಲಲಿತಾ ಅವರ ಬಳಿ ಹೇಳಿಕೆ ಪಡೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com