ಮಂಡ್ಯ ಯೋಧ ಹುತಾತ್ಮ: ಮಗನ ಜೀವಕ್ಕೆ ಅಪಾಯದ ಬಗ್ಗೆ ತಾಯಿಗೆ ಗೊತ್ತಿತ್ತಾ?

ಮಗನ ಜೀವಕ್ಕೆ ಅಪಾಯ ಕಾದಿದೆ ಎಂಬ ಕರುಳಿನ ಸಂಕಟ ಆ ತಾಯಿಗೆ ಮೊದಲೇ ಅರಿವಾಗಿತ್ತೇ? ಕಣ್ಣರಿಯದೇ ಇರುವುದನ್ನು ಕರುಳು...
ಗುರು
ಗುರು
ಮಂಡ್ಯ: ಮಗನ ಜೀವಕ್ಕೆ ಅಪಾಯ ಕಾದಿದೆ ಎಂಬ ಕರುಳಿನ ಸಂಕಟ ಆ ತಾಯಿಗೆ ಮೊದಲೇ ಅರಿವಾಗಿತ್ತೇ? ಕಣ್ಣರಿಯದೇ ಇರುವುದನ್ನು ಕರುಳು ಅರಿಯುತ್ತದೆ ಎಂದು ಹೇಳುವುದು ಇದಕ್ಕೇನಾ?
ಕೇವಲ 4 ದಿನಗಳ ಹಿಂದೆಯಷ್ಟೇ ದೇಶಸೇವೆಗಾಗಿ ಶ್ರೀನಗರಕ್ಕೆ ತೆರಳಿದ್ದ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಎಚ್‌.ಗುರು  ಭಯೋತ್ಪಾದಕರ ದಾಳಿಗೆ ತುತ್ತಾಗಿ ವೀರ ಮರಣವನ್ನಪ್ಪಿರುವುದರಿಂದ ಹುಟ್ಟೂರು ಗೌಡಗೆರೆಯಲ್ಲಿ ನೀರವ ಮೌನ ಆವರಿಸಿಕೊಂಡಿದೆ. 
ಹೊರಡುವ ಮುನ್ನ ತಾಯಿ ಮಗನ ನಡುವೆ ನಡೆದ ಸಂಭಾಷಣೆಯನ್ನು ಗಮನಿಸಿದರೆ, ಮುಂದೆ ಏನೋ ಅಪಾಯ ಕಾದಿದೆ ಎಂಬ ಸಂಕಟ ತಾಯಿಯ ಕರುಳನ್ನು ಸುತ್ತಿಕೊಂಡಿರುವುದು ಸ್ಪಷ್ಟವಾಗಿದೆ. “ಏಕೋ ಏನೋ ಇತ್ತೀಚಿನ ವಿದ್ಯಮಾನಗಳು ಒಳ್ಳೆಯದಾಗಿ ಕಾಣುತ್ತಿಲ್ಲ. ಕೆಲಸ ಬಿಟ್ಟುಬಿಡು. ನಮ್ಮ ಜೊತೆ ಇಲ್ಲೇ ಇದ್ದು ಬಿಡು” ಎಂದು ಯೋಧನ ತಾಯಿ, ಮಗನಿಗೆ ಒಂದು ರೀತಿ ಬುದ್ಧಿ ಮಾತು ಹೇಳಿದ್ದರು.
“ನಾನು ದೇಶ ಸೇವೆ ಮಾಡುತ್ತಿದ್ದೇನೆ. ಹೆದರಬೇಡ, ಕೆಟ್ಟ ಯೋಚನೆ ಮಾಡಬೇಡ. ನನಗೆ ಏನೂ ಆಗುವುದಿಲ್ಲ” ಎಂದು ಮಗ ತಾಯಿಗೆ ಹೇಳಿದ್ದ. ಈ ಎಲ್ಲ ಘಟನೆಗಳು ನಡೆದು ನಾಲ್ಕು ದಿನಗಳ ನಂತರ ಮಗನ ಸಾವಿನ ಸುದ್ದಿ ತಾಯಿಗೆ ಬರಸಿಡಿಲಿನಂತಾಗಿದೆ. 
ಮಗನ ಸಾವಿನ ಸುದ್ದಿ ಕೇಳಿ ತಂದೆ ಹಾಸಿಗೆ ಹಿಡಿದಿದ್ದಾರೆ. ಇಡೀ ಗ್ರಾಮ ಒಂದು ರೀತಿ ಕತ್ತಲಲ್ಲಿ ಮುಳುಗಿದೆ. ಹಾಗೆ ನೋಡಿದರೆ ಗುರುವಿನ ಸಂಸಾರದಲ್ಲಿ ಕಳೆದ ಒಂದು ವರ್ಷದಿಂದಲೂ ಶುಭ ಕಾರ್ಯ, ಶುಭ ಘಟನೆಗಳು ನಿರಂತರವಾಗಿ ನಡೆದು ಸಂಭ್ರಮವೇ ಆವರಿಸಿಕೊಂಡಿತ್ತು. ಈಗ ಅದೇ ಮನೆ ಸೂತಕದ ಮನೆಯಾಗಿ ಮಾರ್ಪಟ್ಟಿದೆ. ಅಲ್ಲಿ ಬಂಧು ಬಳಗದವರ ಆಕ್ರಂದನ ಮುಗಿಲು ಮುಟ್ಟಿದೆ.
ಒಂದು ವರ್ಷದ ಹಿಂದೆ ತನ್ನ ಇಬ್ಬರು ಸಹೋದರರ ಸಹಾಯದಿಂದ ಗುರು ಹೊಸ ಮನೆ ಕಟ್ಟಿಸಿದ್ದ. ಮತ್ತೆ ಅದೇ ಖುಷಿಯಲ್ಲಿ ಬಂಧು ಬಳಗದವರನ್ನು ಕರೆಸಿ ಗೃಹಪ್ರವೇಶ ಮಾಡಿದ್ದ. ಆ ಮನೆಯಲ್ಲಿ ಸಡಗರ ಸಂಭ್ರಮ ತುಂಬಿಕೊಂಡಿತ್ತು. ಅದಾದ ಎಂಟು ತಿಂಗಳೊಳಗೆ ಗುರು, ಕಲಾವತಿ ಜೊತೆ ಮದುವೆಯನ್ನು ಮಾಡಿಕೊಂಡಿದ್ದ. ಹೊಸ ಮನೆ, ಹೊಸ ಬದುಕು, ಹೊಸ ಸಂಸಾರ.. ಎಲ್ಲವೂ ಆ ಮನೆಯ ಸಂತೋಷ, ಸಂಭ್ರಮವನ್ನು ಇಮ್ಮಡಿಗೊಳಿಸಿತ್ತು.
ನಾಲ್ಕು ದಿನಗಳ ಹಿಂದೆಯಷ್ಟೇ ಹೆಂಡತಿಯೊಂದಿಗೆ ಮಂಡ್ಯ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಸುತ್ತಾಡಿದ್ದ. ಆದರೆ, ವಿಧಿ ಗುರುವನ್ನು ಇಷ್ಟು ಬೇಗ ಕರೆದುಕೊಂಡು ಹೋಗುತ್ತದೆ ಎಂದು ಯಾರೊಬ್ಬರೂ ಭಾವಿಸಿರಲಿಲ್ಲ. ನೆಡಯಬಾರದ ಅನಿರೀಕ್ಷಿತ ಕಹಿ ಘಟನೆ, ನಡೆದು ಹೋಗಿದೆ. ಇಡೀ ಕುಟುಂಬ ದುಃಖ ಸಾಗರದಲ್ಲಿ ಮುಳುಗಿದೆ.
ಪತ್ನಿಗೆ ಸರ್ಕಾರಿ ಕೆಲಸ
ಈ ನಡುವೆ ಹುತಾತ್ಮ ಯೋಧನ ಪತ್ನಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. ಸುದ್ದಿ ತಿಳಿದ ನಂತರ ಕುಟುಂಬದ ಸದಸ್ಯರೊಂದಿಗೆ ಮಾತನಾಡಿ ಸಾಂತ್ವನ ಹೇಳಿದ್ದಾರೆ. ಸರ್ಕಾರದ ವತಿಯಿಂದ ಸೂಕ್ತ ಪರಿಹಾರ ಕೊಡಿಸುವ ಬಗ್ಗೆಯೂ ಭರವಸೆ ನೀಡಿದ್ದಾರೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಮೃತರ ಅಂತ್ಯಕ್ರಿಯೆ ನೆರವೇರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್‌.ಪುಟ್ಟರಾಜು ಅವರಿಗೆ ಸೂಚನೆ ನೀಡಿದ್ದಾರೆ.
ಹುಟ್ಟೂರಿಗೆ ಪಾರ್ಥಿವ ಶರೀರ
ಗುರು ಅವರ ಪಾರ್ಥಿವ ಶರೀರ, ದೆಹಲಿ ಮೂಲಕ ನಾಳೆ ಹುಟ್ಟೂರಿಗೆ ಬರಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸಾವಿನ ಸುದ್ದಿ ಕೇಳುತ್ತಿದ್ದಂತೆಯೇ ಅಕ್ಕ ಪಕ್ಕದ ಗ್ರಾಮದ ಜನ ಗುರು ಅವರ ಮನೆಗೆ ತಂಡೋಪ ತಂಡವಾಗಿ ಬಂದು ಕಂಬನಿ ಮಿಡಿಯುತ್ತಿದ್ದಾರೆ. ಪಕ್ಷಾತೀತವಾಗಿ ರಾಜಕೀಯ ನಾಯಕರು ಸಹ ಗುರು ಅವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com