ಉಗ್ರರಿಗೆ ತಕ್ಕ ಶಿಕ್ಷೆ ನೀಡಿದರೆ ನನ್ನ ಪತಿಯ ಆತ್ಮಕ್ಕೆ ಶಾಂತಿ ಸಿಗಬಹುದು: ಹುತಾತ್ಮ ಯೋಧ ಗುರು ಪತ್ನಿ ಕಲಾವತಿ

ಸಿಆರ್ ಪಿಎಫ್ ಯೋಧರು ಸಂಚರಿಸುತ್ತಿದ್ದ ಯೋಧರ ವಾಹನದ ಮೇಲೆ ಆತ್ಮಾಹುತಿ ದಾಳಿ ನಡೆಸಿ 40...
ಹುತಾತ್ಮ ಯೋಧ ಗುರುವಿನ ದುಃಖತಪ್ತ ಪತ್ನಿ ಕಲಾವತಿ ಮತ್ತು ಕುಟುಂಬಸ್ಥರು
ಹುತಾತ್ಮ ಯೋಧ ಗುರುವಿನ ದುಃಖತಪ್ತ ಪತ್ನಿ ಕಲಾವತಿ ಮತ್ತು ಕುಟುಂಬಸ್ಥರು

ಕೆ ಎಂ ದೊಡ್ಡಿ(ಮಂಡ್ಯ): ಸಿಆರ್ ಪಿಎಫ್ ಯೋಧರು ಸಂಚರಿಸುತ್ತಿದ್ದ ವಾಹನದ ಮೇಲೆ ಆತ್ಮಾಹುತಿ ದಾಳಿ ನಡೆಸಿ 40 ಯೋಧರ ಸಾವಿಗೆ ಕಾರಣವಾದ ಪುಲ್ವಾಮಾ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಸರ್ಕಾರ ಕಠಿಣ ನಿರ್ಧಾರ ಕೈಗೊಂಡು ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ನೀಡಬೇಕೆಂದು ಹುತಾತ್ಮ ಗುರುವಿನ ಪತ್ನಿ ಕಲಾವತಿ ಒತ್ತಾಯಿಸಿದ್ದಾರೆ.

ನಿನ್ನೆ ಹುತಾತ್ಮ ಗುರುವಿನ ಮನೆಗೆ ಭೇಟಿ ನೀಡಿದ ಪ್ರತಿಯೊಬ್ಬ ಅಧಿಕಾರಿ ಮತ್ತು ರಾಜಕೀಯ ನಾಯಕರಲ್ಲಿ ಕಲಾವತಿ ಮಾಡುತ್ತಿದ್ದ ಮನವಿಯೊಂದೆ, ನನ್ನ ಪತಿಯನ್ನು ಅಥವಾ ದೇಶ ಕಾಯುವ ವೀರಯೋಧರನ್ನು ಕೊಂದು ಅವರಿಗೇನು ಸಿಕ್ಕಿತು? ಉಗ್ರರಿಗೆ ಕಠಿಣ ಶಿಕ್ಷೆಯಾಗಬೇಕು, ಆಗ ಮಾತ್ರ ನನ್ನ ಪತಿಯ ಆತ್ಮಕ್ಕೆ ಶಾಂತಿ ಸಿಗಲು ಸಾಧ್ಯ ಎಂದು ಹೇಳಿದ್ದಾರೆ.

22 ವರ್ಷದ ಕಲಾವತಿ ಮತ್ತು 33 ವರ್ಷದ ಯೋಧ ಗುರುವಿಗೆ 7 ತಿಂಗಳ ಹಿಂದಷ್ಟೇ ವಿವಾಹವಾಗಿತ್ತು. ಉಗ್ರರು ಗುರುವನ್ನು ಕೊಲ್ಲುವ ಮೂಲಕ ಯುವತಿ ಕಲಾವತಿಯ ಎಲ್ಲಾ ಕನಸುಗಳು ನುಚ್ಚು ನೂರಾಗಿವೆ.

ಕಳೆದ ಗುರುವಾರ ಸಾಯಂಕಾಲ ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಾಳಿಗೆ ತಮ್ಮ ಪತಿ ಹುತಾತ್ಮರಾಗಿದ್ದಾರೆ ಎಂಬ ಸುದ್ದಿ ಬಂದಾಗ ಆರಂಭದಲ್ಲಿ ಕಲಾವತಿ ನಂಬಿರಲಿಲ್ಲವಂತೆ. ಆಕೆಯ ಸಂಬಂಧಿಕರು ಮತ್ತು ಸ್ನೇಹಿತರು ದೂರವಾಣಿ ಕರೆ ಮಾಡಿ ಹೇಳಿದರೂ ಕೂಡ ನಂಬುವ ಸ್ಥಿತಿಯಲ್ಲಿರಲಿಲ್ಲವಂತೆ. ಆಕೆ ಮತ್ತು ಗುರುವಿನ ತಾಯಿ ಚಿಕ್ಕತಾಯಮ್ಮ ತಮ್ಮ ಮನೆ ದೇವರು ಮಹದೇಶ್ವರನಿಗೆ ದೀಪ ಹಚ್ಚಿ ಎಲ್ಲಾ ಯೋಧರು ಸುರಕ್ಷಿತವಾಗಿರಲಿ ಎಂದು ಬೇಡಿಕೊಂಡಿದ್ದರಂತೆ.

ಗುರುವಿನ ಸ್ನೇಹಿತ ಯೋಗೇಶ್ ಗುರುವಾರ ಸಂಜೆ ಕರೆ ಮಾಡಿ ರಜೆ ಮುಗಿಸಿಕೊಂಡು ಜಮ್ಮುವಿಗೆ ಕೆಲಸಕ್ಕೆ ಹೋಗಿ ಸೇರಿದ ಗುರು ಮತ್ತು ಇತರ ಯೋಧರ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ ಎಂದು ಕಲಾವತಿಗೆ ಹೇಳಿದ್ದರಂತೆ. ಆದರೆ ಕಲಾವತಿ ನಂಬಿರಲಿಲ್ಲ, ತನ್ನ ಪತಿಗೆ ಏನೂ ಆಗಿರಲಿಕ್ಕಿಲ್ಲ ಎಂಬ ವಿಶ್ವಾಸ, ಕೊನೆಗೆ ನಿನ್ನೆ ನಸುಕಿನ ಜಾವ ರಕ್ಷಣಾ ಸಚಿವಾಲಯ ದಾಳಿಯಲ್ಲಿ ಹುತಾತ್ಮರಾದ ಯೋಧರ ಹೆಸರನ್ನು ಬಿಡುಗಡೆ ಮಾಡಿದಾಗಲೇ ಕಲಾವತಿ ಮತ್ತು ಮನೆಯವರಿಗೆ ಗುರು ಹುತಾತ್ಮರಾಗಿದ್ದಾರೆ ಎಂದು ಖಚಿತವಾದದ್ದು.

ನಿನ್ನೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಮಂಡ್ಯದಲ್ಲಿ ಗುರುವಿನ ಮನೆಗೆ ಹೋಗಿ ಕುಟುಂಬದವರಿಗೆ ಸಾಂತ್ವನ ಹೇಳಿ ವೈಯಕ್ತಿಕವಾಗಿ ಹಣಕಾಸು ನೆರವು ನೀಡಲು ಮುಂದಾದರು. ಆಗ ಕಲಾವತಿ ಹಣ ಸ್ವೀಕರಿಸಲು ನಿರಾಕರಿಸಿ, ನನಗೆ ಯಾವುದೇ ಸಹಾಯ ಬೇಡ, ನನಗೆ ನನ್ನ ಗಂಡನ ಮುಖ ನೋಡಿದರೆ ಸಾಕು. ನನ್ನ ಪತಿಯನ್ನು ಕೊಂದವರನ್ನು ಸುಮ್ಮನೆ ಬಿಡಬಾರದು ಎಂದರು.

ಆಗ ಸಮಾಧಾನ ಮಾಡಲು ಯತ್ನಿಸಿದ ಯಡಿಯೂರಪ್ಪ, ಗುರು ಈ ದೇಶಕ್ಕಾಗಿ ತಮ್ಮ ಪ್ರಾಣತ್ಯಾಗ ಮಾಡಿದ್ದಾರೆ. ಭಯೋತ್ಪಾದಕರಿಗೆ ಸರ್ಕಾರ ಕಠಿಣ ಶಿಕ್ಷೆ ನೀಡಲಿದೆ ಎಂದು ಹೇಳಿದ್ದರು.

ಇತ್ತೀಚೆಗಷ್ಟೆ ರಜೆ ಮುಗಿಸಿಕೊಂಡು ಹೋಗಿದ್ದ ಗುರು ಏಪ್ರಿಲ್ ನಲ್ಲಿ ತನ್ನ ಮೊದಲ ವಿವಾಹ ವಾರ್ಷಿಕೋತ್ಸವದ ವೇಳೆ ಊರಿಗೆ ಬರುವುದಾಗಿ ಹೆಂಡತಿ ಮತ್ತು ಮನೆಯವರಿಗೆ ಹೇಳಿ ಹೋಗಿದ್ದರು.

ಕೆ ಎಂ ದೊಡ್ಡಿ ಸಮೀಪ ಗುಡಿಗೆರೆಯಲ್ಲಿ 10ನೇ ತರಗತಿಯವರೆಗೆ ಓದಿದ್ದ ಹುತಾತ್ಮ ಯೋಧ ಗುರು 2011ರಲ್ಲಿ ಸೇನೆಗೆ ಸೇರಿದ್ದರು. ಮುಂದಿನ 10 ವರ್ಷಗಳವರೆಗೆ ಸಿಆರ್ ಪಿಎಫ್ ನಲ್ಲಿ ಕೆಲಸ ಮಾಡುವ ಆಸಕ್ತಿ ಕೂಡ ಹೊಂದಿದ್ದರು. ಊರಿನಲ್ಲಿ ಮನೆಯವರಿಗೆಂದು ಹೊಸ ಮನೆ ಕಟ್ಟಿಸಿ ಅದರ ಗೃಹ ಪ್ರವೇಶ ಕೆಲ ತಿಂಗಳ ಹಿಂದೆ ಆಗಿತ್ತು.

ಗುಡಿಗೆರೆ ಗ್ರಾಮಸ್ಥರಿಗೆ ಗುರು ಒಂದು ರೀತಿಯಲ್ಲಿ ಆದರ್ಶ ವ್ಯಕ್ತಿ ಇದ್ದಂತೆ. ಹಲವರಿಗೆ ಸೈನ್ಯ ಸೇರುವಂತೆ ಪ್ರೋತ್ಸಾಹ ಮಾಡುತ್ತಿದ್ದರು. ಮೂವರು ಗಂಡು ಮಕ್ಕಳನ್ನು ಹೊಂದಿರುವ ಹೊನ್ನಯ್ಯ ಮತ್ತು ಚಿಕ್ಕತಾಯಮ್ಮ ದಂಪತಿ ಕುಟುಂಬಕ್ಕೆ ಸ್ಥಿರ ಆದಾಯ ಇದ್ದುದು ಗುರು ಮಾತ್ರ. ಅವರ ಇಬ್ಬರು ಸಹೋದರರು ಗುತ್ತಿಗೆ ನೌಕರರಾಗಿ ಕೆಲಸ ಮಾಡುತ್ತಿದ್ದಾರೆ. ಕುಟುಂಬಕ್ಕೆ ಬೇರೆ ಯಾವುದೇ ಆಸ್ತಿಪಾಸ್ತಿ, ಜಮೀನು ಕೂಡ ಇಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com