ಧ್ವನಿ ಬದಲಿಸುವ ಆ್ಯಪ್ ಬಳಸಿ ವಂಚನೆ: ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ತುಮಕೂರು ವ್ಯಕ್ತಿ ಬಂಧನ

ಯುವತಿಯರ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಖಾತೆ ತೆರೆದು, ಧ್ವನಿ ಬದಲಾಯಿಸುವ ಆ್ಯಪ್ ಬಳಸಿ ಹೆಣ್ಣಿನ ಧ್ವನಿಯಲ್ಲೇ ಮಾತನಾಡಿ ಯುವಕರನ್ನು ಪುಸಲಾಯಿಸಿ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಯುವತಿಯರ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಖಾತೆ ತೆರೆದು, ಧ್ವನಿ ಬದಲಾಯಿಸುವ ಆ್ಯಪ್ ಬಳಸಿ ಹೆಣ್ಣಿನ ಧ್ವನಿಯಲ್ಲೇ ಮಾತನಾಡಿ ಯುವಕರನ್ನು ಪುಸಲಾಯಿಸಿ ನಂತರ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ವಂಚಕನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. 
ತುಮಕೂರು ಟೌನ್‌ನ ಶಿರಾ ಗೇಟ್‌ ಬಳಿಯ ಕೆಎಚ್‌ಬಿ ಕಾಲೊನಿ ನಿವಾಸಿಯಾದ ಪ್ರಖ್ಯಾತ್‌ (32) ಬಂಧಿತ ಆರೋಪಿ. ಗಂಡಿನ ಧ್ವನಿಯನ್ನು ಹೆಣ್ಣಿನ ಧ್ವನಿಯಾಗಿ ಪರಿವರ್ತಿಸುವ ಆ್ಯಪ್‌ ಮೂಲಕ ಈತ ತನ್ನ ಧ್ವನಿಯನ್ನು ಬದಲಾಯಿಸಿ ಯುವಕರಿಗೆ ವಂಚಿಸುತ್ತಿದ್ದ. 
ಆರೋಪಿ ಪ್ರಖ್ಯಾತ್‌, ವಿನುತ, ವಿಜೇತಾ  ಸೇರಿದಂತೆ ಹೆಣ್ಣುಮಕ್ಕಳ ಹೆಸರು ಬಳಸಿ ನಕಲಿ ಫೇಸ್‌ಬುಕ್‌ ಖಾತೆಗಳನ್ನು ತೆರೆದಿದ್ದ. ಆಕರ್ಷಕ ಯುವತಿಯರ ಫೋಟೋಗಳನ್ನೇ ಪ್ರೊಫೈಲ್‌ನಲ್ಲಿ ಹಾಕಿರುತ್ತಿದ್ದ. ನಂತರ ತನ್ನ ಸ್ನೇಹಿತರೂ ಸೇರಿ ಹಲವರಿಗೆ ಫ್ರೆಂಡ್‌ ರಿಕ್ವೆಸ್ಟ್‌ ಕಳುಹಿಸುತ್ತಿದ್ದ. ಫ್ರೆಂಡ್‌ ಒಪ್ಪಿಗೆ ಸಿಕ್ಕ ಬಳಿಕ ಮೊದಲಿಗೆ ಚಾಟ್‌ ಮೂಲಕ ಮಾತುಕತೆ ನಡೆಸುತ್ತಿದ್ದ.ನಂತರ ತನ್ನ ಫೋನ್ ನಂಬರ್ ನೀಡಿ, ಅವರು ಕರೆ ಮಾಡಿದಾಗ ಹೆಣ್ಣಿನ ಧ್ವನಿಯಲ್ಲಿ ಮಾತನಾಡುತ್ತಿದ್ದ.
ಒಂದು ಕಡೆ ಖಾಸಗಿ ಚಾಟಿಂಗ್‌ನ ಸ್ಕ್ರೀನ್‌ಶಾಟ್‌ ತೆಗೆದು ಅದನ್ನು ನಿಮ್ಮ ಮತ್ತು ನಿಮ್ಮ ಕುಟುಂಬದವರ ಫೇಸ್‌ಬುಕ್‌ ಖಾತೆಗೆ ಅಪ್‌ಲೋಡ್‌ ಮಾಡುವುದಾಗಿ ಬ್ಲ್ಯಾಕ್‌ಮೇಲ್‌ ಮಾಡಿ ತನ್ನ ನಾನಾ ಖಾತೆಗಳಿಗೆ ಹಣ ಹಾಕಿಸಿಕೊಳ್ಳುತ್ತಿದ್ದ. 
ಮೊದಲು ಕೋಳಿ ಅಂಗಡಿ ನಡೆಸುತ್ತಿದ್ದ ಪ್ರಖ್ಯಾತ್‌ಗೆ ಕುದುರೆ ಜೂಜು ಆಡುವ ಕೆಟ್ಟ ಹವ್ಯಾಸವೂ ಇತ್ತು. ಜೂಜಿನಲ್ಲಿ ದುಡಿದ ಹಣವನ್ನೆಲ್ಲಾ ಕಳೆದುಕೊಂಡಿದ್ದ. ಮನೆ ನಡೆಸಲೂ ಹಣವಿಲ್ಲದಂತಾದಾಗ ಕೆಟ್ಟ ದಾರಿ ಹಿಡಿಯಲು ತೀರ್ಮಾನಿಸಿದ್ದ. ಹೀಗಾಗಿ ಬ್ಲ್ಯಾಕ್‌ಮೇಲ್‌ ಆರಂಭಿಸಿದ ಎಂದು ಪೊಲೀಸರು ಹೇಳಿದ್ದಾರೆ ತನಿಖೆ ನಡೆಸಿದಾಗ ಸುಮಾರು ಐದು ಮಂದಿಗೆ ವಂಚಿಸಿರುವುದು ತಿಳಿದು ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com