ಶೀಘ್ರದಲ್ಲೇ ಸಬ್ ಅರ್ಬನ್ ರೈಲು ಯೋಜನೆ ಕಾಮಗಾರಿಗೆ ಪ್ರಧಾನಿ ಶಿಲಾನ್ಯಾಸ: ಪಿಯೂಷ್ ಗೋಯಲ್

ಸಬ್ ಅರ್ಬನ್ ರೈಲು ಯೋಜನೆ ಜಾರಿಗೆ ರಾಜ್ಯ ಸರ್ಕಾರ 19 ಷರತ್ತುಗಳನ್ನು ವಿಧಿಸಿತ್ತು. ಇಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜೊತೆ ಚರ್ಚೆ ನಡೆಸಿ...
ಪಿಯೂಷ್ ಗೋಯಲ್
ಪಿಯೂಷ್ ಗೋಯಲ್
ಬೆಂಗಳೂರು: ಸಬ್ ಅರ್ಬನ್ ರೈಲು ಯೋಜನೆ ಜಾರಿಗೆ ರಾಜ್ಯ ಸರ್ಕಾರ 19 ಷರತ್ತುಗಳನ್ನು ವಿಧಿಸಿತ್ತು. ಇಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜೊತೆ ಚರ್ಚೆ ನಡೆಸಿ ಎಲ್ಲಾ ಷರತ್ತುಗಳನ್ನು ಕೈಬಿಟ್ಟು ಯೋಜನೆ ಜಾರಿಗೆ ತೀರ್ಮಾನಿಸಲಾಗಿದೆ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಶುಕ್ರವಾರ ಹೇಳಿದ್ದಾರೆ.
ಪಿಯೂಷ್ ಗೋಯಲ್ ಅವರು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ, ಉಪನಗರ ರೈಲ್ವೆ ಯೋಜನೆ ಜಾರಿಗೆ ಇದ್ದ ಅಡೆತಡಗಳನ್ನು ತಕ್ಷಣ ಪರಿಹರಿಸಿ ಯೋಜನೆ ಜಾರಿಗೆ ಪರಸ್ಪರ ಸಮ್ಮತಿಸಿದ್ದಾರೆ.
ಬಳಿಕ ಜಂಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಪಿಯೂಷ್ ಗೋಯೆಲ್, ರಾಜ್ಯ ಸರ್ಕಾರ ಯೋಜನೆ ಜಾರಿಗೆ ವಿಧಿಸಿದ್ದ 19 ಷರತ್ತುಗಳನ್ನು ಕೈಬಿಟ್ಟಿದೆ. ಯೋಜನೆಗೆ ಅಗತ್ಯವಿರುವ 6000 ಕೋಟಿ ರೂ. ಮೌಲ್ಯದ ಭೂಮಿಯನ್ನು 1 ರೂ. ಗುತ್ತಿಗೆ ದರ ವಿಧಿಸಿ ರಾಜ್ಯ ಸರ್ಕಾರಕ್ಕೆ ಇಲಾಖೆಯ ಭೂಮಿಯನ್ನು ನೀಡಲು ರೈಲ್ವೆ ಇಲಾಖೆ ಒಪ್ಪಿಗೆ ಸೂಚಿಸಿದೆ ಎಂದರು.
ಬೆಂಗಳೂರು ನಗರದಲ್ಲಿ ಭೂಸ್ವಾಧೀನ ಕಷ್ಟಸಾಧ್ಯವಾದ ಕಾರಣಕ್ಕಾಗಿ 70 ಕಿ.ಮೀ ಎತ್ತರಿಸಿದ ಮಾರ್ಗ (ಎಲಿವೇಟೆಡ್) 90 ಕಿ.ಮೀ ಸಾಮಾನ್ಯ ಮಾರ್ಗ ನಿರ್ಮಿಸಲು ತೀರ್ಮಾನಿಸಲಾಗಿದೆ. ಒಟ್ಟು 80 ನಿಲ್ದಾಣಗಳು ಹಾಗು 100ಕ್ಕೂ ಹೆಚ್ಚು ಲೆವೆಲ್ ಕ್ರಾಸಿಂಗ್ ಗಳು ಬರಲಿವೆ. ಸ್ವಯಂ ಚಾಲಿತ ಗೇಟ್ ಅಳವಡಿಸಲಾಗುವುದು. ಒಟ್ಟು166 ಕಿ.ಮೀ ಉದ್ದದ ಯೋಜನೆ ಇದಾಗಿದ್ದು, ಪ್ರಯಾಣಿಕರು ಅಗತ್ಯತೆಗೆ ತಕ್ಕಂತೆ ಮುಂದಿನ ದಿನಗಳಲ್ಲಿ ಮತ್ತಷ್ಟು ವಿಸ್ತರಣೆಗೂ ಅವಕಾಶವಿದೆ ಎಂದರು.  
ಒಟ್ಟು 23000 ಕೋಟಿ ರೂ. ಮೊತ್ತದ ಕಾಮಗಾರಿ ಇದಾಗಿದ್ದು, ರಾಜ್ಯ ಸರ್ಕಾರ 2100 ಕೋಟಿ ರೂ ಭೂಸ್ವಾಧೀನ ಹಣವನ್ನು ಭರಿಸುವ ಹಿನ್ನಲೆಯಲ್ಲಿ ಯೋಜನೆಯ ಮೊತ್ತ 20 ಸಾವಿರ ಕೋಟಿ ರೂ.ಗೆ ಇಳಿಕೆಯಾಗಬಹುದು ಎಂದರು. 
ಕೇಂದ್ರ ಮತ್ತು ರಾಜ್ಯ ಸರ್ಕಾರ ಶೇ 50:50ರ ಅನುಪಾತದಲ್ಲಿ ವೆಚ್ಚ ಭರಿಸಲಿವೆ.ಕೇಂದ್ರ ಸರ್ಕಾರ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಯೋಜನೆಗೆ ಅನುಮೋದನೆ ನೀಡುವ ಭರವಸೆ ನೀಡಿದೆ. ಅಂತೆಯೇ ರಾಜ್ಯ ಸರ್ಕಾರದ ಸಂಪುಟ ತೀರ್ಮಾನದ ಬಳಿಕ ಕೇಂದ್ರ ಸಚಿವ ಸಂಪುಟದ ಮುಂದೆ ತಂದು ಯೋಜನೆಗೆ ಅನುಮೋದನೆ ನೀಡಲಾಗುವುದು ಎಂದರು.
ರಾಜ್ಯ ಸರ್ಕಾರದ ಅನುಮೋದನೆ ನೀಡಿದರೆ ಕೆಲವೇ ವಾರಗಳಲ್ಲಿ ಯೋಜನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶಿಲಾನ್ಯಾಸ ನೆರವೇರಿಸಲಿದ್ದಾರೆ. ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ಅವರ ಕನಸಿನ ಕೂಸಾದ ಸಬ್ ಅರ್ಬನ್ ಯೋಜನೆಯನ್ನು ಜಾರಿಗೊಳಿಸುವುದು ನಮ್ಮ ಆದ್ಯತೆ ಮತ್ತು ಕರ್ತವ್ಯವಾಗಿದೆ ಎಂದರು.
ಉಪ ನಗರ ರೈಲ್ವೆ ಯೋಜನೆಯಲ್ಲಿ ಪ್ರಯಾಣಿಕರಿಗೆ ಉತ್ತಮ ಸೌಲಭ್ಯ ಕಲ್ಪಿಸಲಾಗುವುದು. ಎಸಿ ವ್ಯವಸ್ಥೆ, ವೈಫೈ ಸೌಲಭ್ಯ ಸೇರಿದಂತೆ ವಿಮಾನ ನಿಲ್ದಾಣ, ಮೆಟ್ರೋ, ಬಸ್ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸಲಾಗುವುದು ಎಂದರು. ಗ್ರೇಟರ್ ಮುಂಬೈಯಲ್ಲಿರುವಂತೆ ರಾಜ್ಯದಲ್ಲೂ ಸಹ ಒಂದೇ ಟಿಕೆಟ್ ಪಡೆದು ರೈಲು, ಮೆಟ್ರೋ, ಬಸ್ ನಲ್ಲಿ ಪ್ರಯಾಣಿಸಲು ಅನುಕೂಲವಾಗುವಂತೆ ವ್ಯವಸ್ಥೆ ರೂಪಿಸಲಾಗಿದೆ. ರಾಜ್ಯ ಸರ್ಕಾರ ಹೊಸ ಯೋಜನೆಗೆ ಕೈಜೋಡಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವ ಗೋಯೆಲ್, ಕೋಲಾರದಲ್ಲಿ ಮೊದಲು ಕೋಚ್ ವರ್ಕ್ ಶಾಪ್ ಪ್ರಾರಂಭಿಸಲು ಉದ್ದೇಶಿಸಿದ್ದೇವೆ. ಬೇಡಿಕೆ ಹೆಚ್ಚಾದಲ್ಲಿ ಅದನ್ನು ಮೇಲ್ದರ್ಜೆಗೇರಿಸಿ ಕೋಚ್ ಪ್ಯಾಕ್ಟರಿಯಾಗಿ ಪರಿವರ್ತಿಸಲಾಗುತ್ತದೆ ಎನ್ನುವ ಮೂಲಕ , 2017-18 ನೇ ಸಾಲಿನ ಕೇಂದ್ರ ಬಜೆಟ್ ಘೋಷಣೆ ಜಾರಿಗೊಳಿಸಲು ರಾಜ್ಯ ಸರ್ಕಾರದ ಶೇ. 50 ಅನುದಾನ ಹಾಗೂ ಭೂಮಿಯನ್ನು ನೀಡಬೇಕೆಂಬ ಷರತ್ತು ಅವರು ಮುಂದಿಟ್ಟರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಡಬ್ಬಲ್ ಎಂಜಿನ್ ರೈಲಿನಂತೆ  ಕಾರ್ಯನಿರ್ವಹಿಸಬೇಕು. ಕರ್ನಾಟಕದ ಜನ ಬಿಜೆಪಿಗೆ 104 ಸ್ಥಾನಗಳಿಗಿಂತ ಹೆಚ್ಚು ಸ್ಥಾನ  ನೀಡಿದ್ದರೆ ಡಬ್ಬಲ್ ಎಂಜಿನ್ ಮತ್ತಷ್ಟು ಚೆನ್ನಾಗಿ ಕಾರ್ಯನಿರ್ವಹಿಸುತ್ತಿತ್ತು ಎಂದು  ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದರೆ ಉತ್ತಮವಾಗಿತ್ತು ಎಂದು ಮುಖ್ಯಮಂತ್ರಿ  ಕುಮಾರಸ್ವಾಮಿಗೆ ಕೇಂದ್ರ ಸಚಿವ ಸುದ್ದಿಗೋಷ್ಟಿಯಲ್ಲಿಯೇ ಟಾಂಗ್ ಕೊಟ್ಟರು.
ಇದಕ್ಕೂ ಮುನ್ನ ಮಾತನಾಡಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, 1995 ರಲ್ಲಿ ದೇವೇಗೌಡರು ಮುಖ್ಯಮಂತ್ರಿ ಆಗಿದ್ದಾಗ ಉಪನಗರ ರೈಲ್ವೇ ಯೋಜನೆಗೆ ಪ್ರಸ್ತಾಪಿಸಲಾಗಿತ್ತು. ಬಳಿಕ ಕೇಂದ್ರ ಸಚಿವ ಅನಂತ್ ಕುಮಾರ್ ಯೋಜನೆ ಜಾರಿಗೆ ಸಾಕಷ್ಟು ಶ್ರಮವಹಿಸಿದರು. ರಾಜ್ಯ ಸರ್ಕಾರ ಮತ್ತು ರೈಲ್ವೆ ಇಲಾಖೆ ಅಧಿಕಾರಿಗಳ ಜೊತೆ ಚೆರ್ಚೆ ನಡೆಸಿ ಯೋಜನೆಗೆ ಇದ್ದ ಅಡೆತಡೆಗಳನ್ನು ಬಗೆಹರಿಸಿದ್ದೇವೆ ಎಂದರು. 
ಉಪನಗರ ರೈಲ್ವೆ ಯೋಜನೆಯನ್ನು ಹಿಂದಿನ ವರ್ಷ ಬಜೆಟ್ ನಲ್ಲಿ ಘೋಷಿಸಲಾಯಿತು. ರಾಜ್ಯ ಸರ್ಕಾರ ಯೋಜನೆ ಜಾರಿಗೆ 400 ಕೋಟಿ ರೂ ಅನುದಾನ ನೀಡಿದೆ ಎಂದರು. ಆದಷ್ಟು ಶೀಘ್ರದಲ್ಲಿ ಪ್ರಧಾನ ಮಂತ್ರಿಗಳ ಸಮಾಯಾವಕಾಶ ಪಡೆದು ಉಪನಗರ ಯೋಜನೆ ಶಿಲಾನ್ಯಾಸ ಮಾಡಿಸುವಂತೆ ಕುಮಾರಸ್ವಾಮಿ ಕೇಂದ್ರ ಸಚಿವರಿಗೆ ಮನವಿ ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com