ಬೆಂಗಳೂರು: ಏರೋ ಇಂಡಿಯಾ ಪಾರ್ಕಿಂಗ್ ಪ್ರದೇಶದಲ್ಲಿ ಬೆಂಕಿ, 300ಕ್ಕೂ ಹೆಚ್ಚು ಕಾರುಗಳು ಸುಟ್ಟು ಕರಕಲು!

ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರ್‌ ಶೋ ವಿಮಾನಗಳ ಹಾರಾಟ ಪ್ರದರ್ಶನದ ಹೊರಗಡೆಯ ವಾಹನ ನಿಲುಗಡೆ ಸ್ಥಳದಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರ್‌ ಶೋ ವಿಮಾನಗಳ ಹಾರಾಟ ಪ್ರದರ್ಶನದ ಹೊರಗಡೆಯ ವಾಹನ ನಿಲುಗಡೆ ಸ್ಥಳದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಇದ್ದಕ್ಕಿದ್ದಂತೆ ದಟ್ಟ ಹೊಗೆ ಆವರಿಸಿತು. ಇದರಿಂದಾಗಿ ಕೆಲಕಾಲ ವೈಮಾನಿಕ ಹಾರಾಟ ಪ್ರದರ್ಶನವನ್ನು ರದ್ದು ಪಡಿಸಲಾಯಿತು, ಕೆಲಕಾಲ ಆತಂಕದ ಸನ್ನಿವೇಶ ನಿರ್ಮಾಣವಾಗಿದೆ.
ಈ ಕುರಿತು ಅಗ್ನಿಶಾಮಕದಳ ಡಿಜಿಪಿ ಎಂಎನ್ ರೆಡ್ಡಿ ಅವರು ಟ್ವೀಟ್ ಮಾಡಿದ್ದಾರೆ.
ಕಾರುಗಳನ್ನು ಪಾರ್ಕ್ ಮಾಡಿದ್ದ ಜಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಸುಮಾರು 300ಕ್ಕೂ ಹೆಚ್ಚು ಕಾರುಗಳು ಸುಟ್ಟು ಕರಕಲಾಗಿದೆ. ಒಣ ಹುಲ್ಲಿಗೆ ಬೆಂಕಿ ತಗುಲಿದ ಪರಿಣಾಮ ಕಾರುಗಳಿಗೆ ಬೆಂಕಿ ಹೊತ್ತಿಕೊಂಡಿದ್ದು 10 ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ.
ಕಳೆದ ಮೂರು ದಿನಗಳಿಂದ ವಾಯುನೆಲೆಯಲ್ಲಿ ಯಾವುದೇ ಅಡೆತಡೆ ಇಲ್ಲದೆ ಹಾರಾಟ ಪ್ರದರ್ಶನ ನಡೆದಿತ್ತು. ಇದಕ್ಕೂ ಮುಂಚೆ ಏರೋ ಇಂಡಿಯಾ ಪ್ರದರ್ಶನ ಆರಂಭವಾಗುವ ಒಂದು ದಿನ ಮೊದಲು ಸೂರ್ಯ ಕಿರಣ ವಿಮಾನಗಳ ತಾಲೀಮು ಸಮಯದಲ್ಲಿ ಡಿಕ್ಕಿ ಹೊಡೆದ ಪರಿಣಾಮ ಒಬ್ಬ ಪೈಲೆಟ್‌ ಮೃತಪಟ್ಟಿದ್ದು, ಇನ್ನಿಬ್ಬರು ಗಾಯಗೊಂಡಿದ್ದರು. 
ಇದಕ್ಕೂ ಮುನ್ನ ಫೆ. 1 ರಂದು ಎಚ್‌ಎಎಲ್‌ ವಿಮಾನ ನಿಲ್ದಾನದಲ್ಲಿ ತಾಲೀಮು ನಡೆಸುತ್ತಿದ್ದ ಮೀರಾಜ್‌ ಯುದ್ಧ ವಿಮಾನ ಅಪಘಾತಕ್ಕೀಡಾಗಿ ಇಬ್ಬರು ಫೈಲೆಟ್‌ಗಳು ದಾರುಣವಾಗಿ ಸಾವನ್ನಪ್ಪಿದ್ದರು. 
ಈ ಎಲ್ಲ ಘಟನೆಗಳು ಏರೋ ಇಂಡಿಯಾ ಪ್ರದರ್ಶನದ ಮೇಲೆ ಆತಂಕದ ಕರಿಮೊಡ ಮೂಡಿಸಿದ್ದವು. ಇದು ಎಲ್ಲಿಯವರೆಗೆ ಹೋಗಿತ್ತು ಎಂದರೆ ಈ ಬಾರಿ ವೈಮಾನಿಕ ಪ್ರದರ್ಶನ ಕೊನೆ ಗಳಿಗೆಯಲ್ಲಿ ರದ್ದಾಗಿ ಬಿಡುತ್ತದ್ದೇನೊ ಎಂಬ ಭಾವನೆ ಜನರಲ್ಲಿ ಮೂಡಿತ್ತು. 
ಪದೇ-ಪದೆ ಅವಗಡ, ಅಡ್ಡಿ-ಆತಂಕ ಎದುರಾದರೂ ಏರೋ ಇಂಡಿಯಾ ಇದೆಲ್ಲವನ್ನು ಮೀರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಪಡೆಯುವ ರೀತಿಯಲ್ಲಿ ನಡೆದಿದೆ. ಆದರೆ, ಕೆಲ ಸಣ್ಣಪುಟ್ಟ ಘಟನೆಗಳು ಆತಂಕವನ್ನು ಹೆಚ್ಚಿಸಿದ್ದು ಸುಳ್ಳಲ್ಲ. ಇಂದು ವೈಮಾನಿಕ ಪ್ರದರ್ಶನದ ಹೊರಗಡೆ ವಾಹನ ನಿಲುಗಡೆ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡು ದಟ್ಟ ಹೊಗೆ ಆವರಿಸಿಕೊಂಡಿತು. ಈ ಹಿನ್ನೆಲೆಯಲ್ಲಿ ಕೆಲಕಾಲ ವೈಮಾನಿಕ ಪ್ರದರ್ಶನ ಸ್ಥಗಿತಗೊಳಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com