ಇನ್ನುಮುಂದೆ ಸಿಇಟಿ ಸೇರಿ ಕೆಇಎ ನಡೆಸುವ ಎಲ್ಲಾ ಪರೀಕ್ಷೆಗಳು ಆನ್ ​ಲೈನ್: ಜಿಟಿ ದೇವೇಗೌಡ

ಇನ್ನು ಮುಂದೆ ಸಿಇಟಿ ಸೇರಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ನಡೆಸುವ ಎಲ್ಲಾ ಪರೀಕ್ಷೆಗಳನ್ನು ಆನ್ ಲೈನ್ ಮೂಲಕ....
ಜಿ ಟಿ ದೇವೇಗೌಡ
ಜಿ ಟಿ ದೇವೇಗೌಡ
ಬೆಂಗಳೂರು: ಇನ್ನು ಮುಂದೆ ಸಿಇಟಿ ಸೇರಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ನಡೆಸುವ ಎಲ್ಲಾ ಪರೀಕ್ಷೆಗಳನ್ನು ಆನ್ ಲೈನ್ ಮೂಲಕ ನಡೆಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಜಿಟಿ ದೇವೇಗೌಡ ಅವರು ಬುಧವಾರ ಹೇಳಿದ್ದಾರೆ.
ಇಂದು ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಉನ್ನತ ಶಿಕ್ಷಣ ಸಚಿವರು, ಕೆಇಎ ನಡೆಸುವ ಎಲ್ಲಾ ನೇಮಕಾತಿ ಹಾಗೂ ಪರೀಕ್ಷೆಗಳನ್ನು ಆನ್ ಲೈನ್ ಮೂಲಕ ನಡೆಸಲು ನಾವು ನಿರ್ಧರಿಸಿದ್ದೇವೆ ಎಂದರು. ಆದರೆ ಸಿಇಟಿ ಆನ್ ಲೈನ್ ಪರೀಕ್ಷೆಯೋ ಅಥವಾ ಬರೀ ಕಂಪ್ಯೂಟರ್ ಆಧಾರಿತವೊ ಎಂಬುದನ್ನು ಮಾತ್ರ ಸಚಿವರು ಸ್ಪಷ್ಟಪಡಿಸಿಲ್ಲ.
ಈ ಸಂಬಂಧ ಜನವರಿ 19ರಂದು ಕೆಇಎ ಅಧಿಕಾರಿಗಳ ಸಭೆ ಕರೆಯಲಾಗಿದ್ದು, ಸಭೆಯಲ್ಲಿ ಆನ್ ಲೈನ್ ಪರೀಕ್ಷೆಗಳನ್ನು 2019 ರಿಂದ ನಡೆಸಬೇಕೋ ಅಥವಾ 2020ರಿಂದ ನಡೆಸಬೇಕೋ ಎಂಬುದರ ಬಗ್ಗೆ ನಿರ್ಧರಿಸಲಾಗುವುದು ಎಂದರು.
ಆನ್ ಲೈನ್ ಪರೀಕ್ಷೆಗೆ ಬೇಕಾದ ಎಲ್ಲಾ ಮೂಲಸೌಕರ್ಯಗಳನ್ನು ಈಗಾಗಲೇ ಸಿದ್ಧತೆ ಳನ್ನು ಮಾಡಿಕೊಳ್ಳಲಾಗಿದೆ. ನಮ್ಮ ವಿಶ್ವವಿದ್ಯಾಲಯ ಮತ್ತುಕಾಲೇಜ್ ಗಳಲ್ಲಿ ಎಲ್ಲಾ ಸೌಕರ್ಯಗಳಿವೆ. ಆನ್ ಲೈನ್ ಪರೀಕ್ಷೆಗಾಗಿ ಸಾಫ್ಟ್ ವೇರ್ ಸಿದ್ಧಪಡಿಸಬೇಕಾಗಿದೆ. ಈ ಕುರಿತು ಚರ್ಚೆ ನಡೆಯುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.
ಎಂಜಿನಿಯರಿಂಗ್, ಕೃಷಿ ಮತ್ತು ಪಶು ವೈದ್ಯ ವಿಜ್ಞಾನ, ಅರ್ಕಿಟೆಕ್ಟರ್ ಮತ್ತಿತರ ಕೋರ್ಸ್ ಗಳಿಗೆ ಸಾಮಾನ್ಯ ಪರೀಕ್ಷೆ ನಡೆಸಲಾಗುತ್ತದೆ. ಆನ್ ಲೈನ್ ನಲ್ಲಿ ಪರೀಕ್ಷೆ ನಡೆಸಲು ರಾಷ್ಟ್ರೀಯ ಮಾಹಿತಿ ಕೇಂದ್ರ ಸಾಪ್ಟ್ ವೇರ್ ಸಿದ್ಧಪಡಿಸುತ್ತಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.
ಆನ್ ಲೈನ್ ಮಾದರಿಯಲ್ಲಿ ಸಿಇಟಿ ಪರೀಕ್ಷೆ ನಡೆಸಲು ಪರೀಕ್ಷಾ ಪ್ರಾಧಿಕಾರ ಕಳೆದ ಎರಡು ವರ್ಷಗಳಿಂದಲೂ ಪ್ರಯತ್ನ ನಡೆಸುತ್ತಾ ಬಂದಿದೆ. ಈ ಮಾದರಿ ಜಾರಿಯಾದಲ್ಲಿ ದಾಖಲಾತಿಗಳ ಪರಿಶೀಲನೆ ಹೊರತುಪಡಿಸಿದರೆ ಉಳಿದೆಲ್ಲಾವೂ ಆನ್ ಲೈನ್ ಮೂಲಕವೇ ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com