ಕಾಣೆಯಾದ ಮೀನುಗಾರರ ಪತ್ತೆಗೆ ಇಸ್ರೊ, ಗೂಗಲ್ ಮೊರೆ ಹೋಗಲು ಸರ್ಕಾರ ನಿರ್ಧಾರ

ಕಳೆದ ತಿಂಗಳು ಮಲ್ಪೆ ಮೀನುಗಾರಿಕೆ ಬಂದರಿನಿಂದ ಕಾಣೆಯಾದ 8 ಮೀನುಗಾರರ ಪತ್ತೆಗೆ ಸರ್ಕಾರ ....
ಕಾಣೆಯಾದ ಮೀನುಗಾರರ ಕುಟುಂಬಸ್ಥರೊಂದಿಗೆ ಸಚಿವ ವೆಂಕಟರಾವ್ ನಾಡಗೌಡ
ಕಾಣೆಯಾದ ಮೀನುಗಾರರ ಕುಟುಂಬಸ್ಥರೊಂದಿಗೆ ಸಚಿವ ವೆಂಕಟರಾವ್ ನಾಡಗೌಡ

ಕಾರವಾರ: ಕಳೆದ ತಿಂಗಳು ಮಲ್ಪೆ ಮೀನುಗಾರಿಕೆ ಬಂದರಿನಿಂದ ಕಾಣೆಯಾದ 8 ಮೀನುಗಾರರ ಪತ್ತೆಗೆ ಸರ್ಕಾರ ಇಸ್ರೊ ಮತ್ತು ಗೂಗಲ್ ನ ನೆರವು ಪಡೆಯಲಿದೆ ಎಂದು ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ತಿಳಿಸಿದ್ದಾರೆ.

ಇಸ್ರೊ ಮತ್ತು ಗೂಗಲ್ ನ ಸ್ಯಾಟಲೈಟ್ ಹಾಗೂ ತಂತ್ರಜ್ಞಾನ ಮೂಲಕ ಕಾಣೆಯಾದ ಮೀನುಗಾರರ ಪತ್ತೆಗೆ ನೆರವು ಪಡೆಯಲಾಗುವುದು ಎಂದು ಸಚಿವರು ತಿಳಿಸಿದರು. 8 ಜನ ಮೀನುಗಾರರಲ್ಲಿ ಐವರು ಉತ್ತರ ಕನ್ನಡ ಮೂಲದವರಾಗಿದ್ದು ಕಳೆದ ತಿಂಗಳು 13 ರಂದು ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಮೀನು ಹಿಡಿಯಲು ಇಳಿದವರು ನಾಪತ್ತೆಯಾಗಿದ್ದರು.

ಡಿಸೆಂಬರ್ 15ರವರೆಗೆ ಸಂಪರ್ಕಕ್ಕೆ ಸಿಗುತ್ತಿದ್ದರು. ನಂತರ ಸಂವಹನ ಕಡಿದುಹೋಯಿತು.
ನಾಪತ್ತೆಯಾದವರ ಪತ್ತೆಗೆ ನೆರವು ನೀಡಲು ಗೋವಾ ಮತ್ತು ಮಹಾರಾಷ್ಟ್ರ ಸರ್ಕಾರಗಳಿಗೆ ಪತ್ರ ಬರೆಯಲಾಗಿದೆ. ಇಲ್ಲಿಯವರೆಗೆ ಯಾವುದೇ ಸುಳಿವು ಸಿಕ್ಕಿಲ್ಲ, ಭಾರತೀಯ ತೀರ ಪಡೆ ಮತ್ತು ನೌಕಾಪಡೆಯ ಪ್ರಯತ್ನ ಮುಂದುವರಿದಿದ್ದು ಕಾಣೆಯಾದವರು ಸಿಗಬಹುದು ಎಂದು ಭಾವಿಸಿದ್ದೇವೆ ಎಂದು ಸಚಿವರು ಹೇಳಿದರು.

ದೋಣಿಗಳನ್ನು ಹೈಜಾಕ್ ಮಾಡಿ ಪಾಕಿಸ್ತಾನದತ್ತ ಕರೆದೊಯ್ದಿರಬಹುದು ಎಂಬ ಸುದ್ದಿಯಿದೆ. ಆದರೆ ಆ ಸಾಧ್ಯತೆ ಕಡಿಮೆ. ಪಾಕಿಸ್ತಾನ ತೀರಕ್ಕೆ ಹೋಗುವಷ್ಟು ದೋಣಿಯಲ್ಲಿ ಇಂಧನವಿರಲಿಲ್ಲ. ಕಾಣೆಯಾದವರ ಕುಟುಂಬಸ್ಥರಿಗೆ ಸರ್ಕಾರ ತಲಾ 1 ಲಕ್ಷ ರೂಪಾಯಿ ಪರಿಹಾರ ನೀಡಲಿದೆ ಎಂದರು.

ಈ ಮಧ್ಯೆ ಕಾಣೆಯಾದ ಮೀನುಗಾರರನ್ನು ಪತ್ತೆಹಚ್ಚಲು ನೆರವಾಗುವಂತೆ ಕಂದಾಯ ಸಚಿವ ಆರ್ ವಿ ದೇಶಪಾಂಡೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ. ಇರಾನ್ ನ ಕೃಷ್ ದ್ವೀಪದಿಂದ 18 ಮಂದಿ ಕರ್ನಾಟಕದ ಮೀನುಗಾರರ ಬಿಡುಗಡೆಗೆ ನೆರವಾದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಧನ್ಯವಾದ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com