ತೃತೀಯ ಲಿಂಗಿಗಳಿಗೆ ಧಾರವಾಡ ವಿ.ವಿಯಲ್ಲಿ ಉಚಿತ ಶಿಕ್ಷಣ?

ತೃತೀಯ ಲಿಂಗಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ...
ಧಾರವಾಡದ ಕರ್ನಾಟಕ ವಿ.ವಿ
ಧಾರವಾಡದ ಕರ್ನಾಟಕ ವಿ.ವಿ

ಧಾರವಾಡ: ತೃತೀಯ ಲಿಂಗಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಉತ್ತಮ ಹೆಜ್ಜೆ ಇರಿಸಿದೆ.

ಸಮಾಜದಲ್ಲಿ ತೃತೀಯ ಲಿಂಗಿಗಳು ಗೌರವದ ಜೀವನ ನಡೆಸಲು ಸರಿಯಾದ ಸೌಕರ್ಯ ಸಿಗುತ್ತಿಲ್ಲ, ಅವರನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಮನಗಂಡು ವಿಶ್ವವಿದ್ಯಾಲಯದ ಆಡಳಿತವರ್ಗ ಮುಂದಿನ ಶೈಕ್ಷಣಿಕ ವರ್ಷದಿಂದ ಅವರಿಗೆ ಉಚಿತ ಶಿಕ್ಷಣ ನೀಡಲು ಮುಂದಾಗಿದೆ.

ಇದಕ್ಕೆ ಸಂಬಂಧಪಟ್ಟಂತೆ ಪ್ರಸ್ತಾವನೆಯನ್ನು ಸಿಂಡಿಕೇಟ್ ಮುಂದಿಡಲು ನಿರ್ಧರಿಸಲಾಗಿದ್ದು ಅನುಮೋದನೆ ಸಿಕ್ಕಿದ ನಂತರ ಹಣಕಾಸು ಇಲಾಖೆಗೆ ಕಳುಹಿಸಿಕೊಡಲಾಗುತ್ತದೆ. ತೃತೀಯ ಲಿಂಗಿಗಳಿಗೆ ಉನ್ನತ ಶಿಕ್ಷಣ ದೊರಕಿದರೆ ಅವರ ಜೀವನ ಮಟ್ಟ ಸುಧಾರಿಸಬಹುದು ಎಂಬುದು ವಿಶ್ವವಿದ್ಯಾಲಯದ ಅಧಿಕಾರಿಗಳ ಲೆಕ್ಕಾಚಾರವಾಗಿದೆ.

ಇತ್ತೀಚೆಗೆ ಕೆಲ ತೃತೀಯ ಲಿಂಗಿಗಳು ವಿಶ್ವವಿದ್ಯಾಲಯದ ಅಧಿಕಾರಿವರ್ಗದವರನ್ನು ಭೇಟಿ ಮಾಡಿ ಉನ್ನತ ಶಿಕ್ಷಣಕ್ಕೆ ಅವಕಾಶ ಕೋರಿದ್ದರಂತೆ. ನಂತರ ಸಮಾಜಶಾಸ್ತ್ರ ವಿಭಾಗದ ಸಂಶೋಧಕ ಮೆಹಬೂಬ್ ಸಾಬ್ ಹುಸೇನ್ ಸಾಬ್ ಹೆಬ್ಬಾಳ್ ಉತ್ತರ ಕರ್ನಾಟಕದಲ್ಲಿ ತೃತೀಯ ಲಿಂಗಿಗಳು ಎಂಬ ವಿಷಯದ ಮೇಲೆ ಪ್ರಬಂಧ ಮಂಡಿಸಿದ್ದರು. ಇದರ ನಂತರ ತೃತೀಯ ಲಿಂಗಿಗಳಿಗೆ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣಕ್ಕೆ ಅವಕಾಶ ನೀಡುವ ಬಗ್ಗೆ ಚರ್ಚಿಸಲಾಯಿತು. ವಿಶ್ವವಿದ್ಯಾಲಯ ಹಳ್ಳಿಗಳನ್ನು ದತ್ತು ತೆಗೆದುಕೊಂಡು ಅಲ್ಲಿನ ವಿದ್ಯಾರ್ಥಿಗಳಿಗೆ ಶಿಕ್ಷಣ ಒದಗಿಸುವ ಇನ್ನೂ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ನಿರತವಾಗಿದೆ ಎನ್ನುತ್ತಾರೆ ವಿಶ್ವವಿದ್ಯಾಲಯದ ಅಧಿಕಾರಿಯೊಬ್ಬರು.

ವಿಶ್ವವಿದ್ಯಾಲಯದ ಕ್ರಮವನ್ನು ಶಿಕ್ಷಣತಜ್ಞರು ಸ್ವಾಗತಿಸಿದ್ದಾರೆ. ವಿವಿ ಅಧಿಕಾರಿಗಳು ಇದನ್ನು ಸರಿಯಾಗಿ ನಿರ್ವಹಿಸಬೇಕಷ್ಟೆ. ಕರ್ನಾಟಕ ವಿಶ್ವವಿದ್ಯಾಲಯದಡಿಯಲ್ಲಿ ಬರುವ ಎಲ್ಲಾ ಕಾಲೇಜುಗಳು ತೃತೀಯ ಲಿಂಗಿಗಳಿಗೆ ಪ್ರತ್ಯೇಕ ಹಾಸ್ಟೆಲ್ ಮತ್ತು ಇತರ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕಾಗುತ್ತದೆ ಎಂದರು.

ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಕೆ ಎಂ ಹೊಸ್ಮನಿ, ಉಚಿತ ಶಿಕ್ಷಣ ಒದಗಿಸುವ ಕುರಿತು ಮಾತುಕತೆಗಳು ನಡೆಯುತ್ತಿದ್ದು ಸದ್ಯದಲ್ಲಿಯೇ ಈ ಬಗ್ಗೆ ನೀಲನಕ್ಷೆ ತಯಾರಿಸಲಾಗುವುದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com