ಅತಿ ಹೆಚ್ಚು ಚೆಕ್ ಡ್ಯಾಂ ನಿರ್ಮಿಸುವ ಗ್ರಾಮ ಪಂಚಾಯತಿಗಳಿಗೆ ಬಹುಮಾನ: ಸಚಿವ ಡಿ.ಕೆ. ಶಿವಕುಮಾರ್

ನರೇಗಾ ಯೋಜನೆಯಡಿ ಅತಿ ಹೆಚ್ಚು ಚೆಕ್ ಡ್ಯಾಂ ನಿರ್ಮಿಸುವ ಪ್ರತಿ ಜಿಲ್ಲೆಯ ಎರಡು ಗ್ರಾಮ ಪಂಚಾಯತಿಗಳಿಗೆ ಸರ್ಕಾರದಿಂದ ತಲಾ ಒಂದು ಕೋಟಿ ರೂ. ಬಹುಮಾನ ನೀಡುತ್ತಿದ್ದು,...
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್

ಬೆಂಗಳೂರು: ನರೇಗಾ ಯೋಜನೆಯಡಿ ಅತಿ ಹೆಚ್ಚು ಚೆಕ್ ಡ್ಯಾಂ ನಿರ್ಮಿಸುವ ಪ್ರತಿ ಜಿಲ್ಲೆಯ ಎರಡು ಗ್ರಾಮ ಪಂಚಾಯತಿಗಳಿಗೆ ಸರ್ಕಾರದಿಂದ ತಲಾ ಒಂದು ಕೋಟಿ ರೂ.ಬಹುಮಾನ ನೀಡುತ್ತಿದ್ದು, ಚೆಕ್ ಡ್ಯಾಂ ನಿರ್ಮಾಣಕ್ಕೆ ಉತ್ತೇಜನ ನೀಡಲು ವಾರ್ಷಿಕ 60 ಕೋಟಿ ವೆಚ್ಚಮಾಡುವುದಾಗಿ  ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಘೋಷಿಸಿದ್ದಾರೆ.

ರಾಷ್ಟ್ರೀಯ ಜಲ ಮಿಷನ್ ಹಾಗೂ ರಾಜ್ಯ ಜಲಸಂಪನ್ಮೂಲ ಇಲಾಖೆಗಳಿಂದ ಇಂದು ನಗರದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಡಾ.ಬಾಬು ರಾಜೇಂದ್ರ ಪ್ರಸಾದ್ ಅಂತಾರಾಷ್ಟ್ರೀಯ ಸಮಾವೇಶ ಭವನದಲ್ಲಿ ಹಮ್ಮಿಕೊಂಡಿದ್ದ ಅಂತರ್ಜಲ ಶೋಷಿತ ಪ್ರದೇಶಗಳಲ್ಲಿ ನೀರಿನ ಸಂರಕ್ಷಣೆ ಕುರಿತು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ನರೇಗಾ ಯೋಜನೆಯಡಿ ಹೆಚ್ಚು ಚೆಕ್ ಡ್ಯಾಂ ನಿರ್ಮಿಸುವ ಪ್ರತಿ ಜಿಲ್ಲೆಯ ಎರಡು ಗ್ರಾಮ ಪಂಚಾಯತಿಗಳಿಗೆ ತಲಾ ಒಂದು ಕೋಟಿ ರೂ. ಯಂತೆ ಒಟ್ಟು 60 ಗ್ರಾಮ ಪಂಚಾಯತಿಗಳಿಗೆ 60 ಕೋಟಿ ರೂ. ಪ್ರೋತ್ಸಾಹ ಧನ ನೀಡಲಾಗುವುದು ಎಂದು ತಿಳಿಸಿದರು.

ಪ್ರಸ್ತುತ ಅಂತರ್ಜಲ ಮಟ್ಟ ಕುಸಿದಿದೆ. ರಾಜ್ಯದಲ್ಲಿ ನೀರಿನ ಅವಶ್ಯಕತೆ ಹಾಗೂ ಬಳಕೆ ಬಗ್ಗೆ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಜನರಿಗೆ ಅರಿವಿದೆ. ಈ ಜಿಲ್ಲೆಗಳಲ್ಲಿ  ಸುಮಾರು 2 ಸಾವಿರ ಅಡಿ ಕೊರೆದಾಗ ಸ್ವಲ್ಪ ನೀರು ಕಾಣಿಸಿಕೊಳ್ಳುತ್ತದೆ. ಆದರೂ, ಎರಡು ಜಿಲ್ಲೆಗಳು ಬೆಂಗಳೂರು ಜನತೆಗೆ ಹಾಲು, ರೇಷ್ಮೆ,ತರಕಾರಿ ಪೂರೈಸುವಲ್ಲಿ ಮುಂಚೂಣಿಯಲ್ಲಿವೆ ಎಂದು ಶ್ಲಾಘಿಸಿದರು.

ಭವಿಷ್ಯದಲ್ಲಿ 3ನೇ ಮಹಾಯುದ್ಧ ನಡೆದರೆ ಅದು ಕೇವಲ ನೀರು ಮತ್ತು ಅಧಿಕಾರಕ್ಕಾಗಿ ಮಾತ್ರ ಎಂಬುದನ್ನು ಪುಸ್ತಕದಲ್ಲಿ ಓದಿದ್ದೇನೆ ಎಂದು ಸ್ಮರಿಸಿಕೊಂಡ ಅವರು, ನೀರಿನ ಸಂರಕ್ಷಣೆಯ ಮಹತ್ವದ ಕುರಿತು ಜನರಲ್ಲಿ ಅರಿವು ಮೂಡಿಸಲು ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ತಿಳಿಸಿದರು.

ರಾಜಸ್ತಾನ ಬಿಟ್ಟರೆ, ಕೃಷಿಗೆ ಯೋಗ್ಯವಾದ ಭೂಮಿ ಕರ್ನಾಟಕದಲ್ಲಿದೆ. ರೈತರ ಕೃಷಿ ಪಂಪ್ ಸೆಟ್ ಗಳು, ವಿದ್ಯುತ್ ಸಬ್ಸಿಡಿ ರಾಜ್ಯ ಸರ್ಕಾರ 75 ಸಾವಿರ ಕೋಟಿ ರೂ. ಸರ್ಕಾರ  ಖರ್ಚು ಮಾಡುತ್ತಿದೆ. ಆದರೆ ಇದಕ್ಕೆ ರೈತರು ಸರ್ಕಾರಕ್ಕೆ ತೆರಿಗೆ ಕಟ್ಟುತ್ತಿಲ್ಲ. ರಾಜ್ಯದ ಹಲವೆಡೆ ನದಿ ನೀರು, ನಾಲೆ, ಕಾಲುವೆಗಳಿಗೆ ಅಕ್ರಮವಾಗಿ ಪಂಪ್ ಸೆಟ್ ಅಳವಡಿಸಿ ನೀರು ಎತ್ತಲಾಗುತ್ತಿದೆ. ಇನ್ನ ಕೆಲವೆಡೆ ಕೃತಕ ಕೆರೆಗಳನ್ನು ನಿರ್ಮಿಸಿ ನಾಲೆಗಳಿಂದ ಅಕ್ರಮವಾಗಿ ನೀರು ಪಂಪ್ ಮಾಡಿ ಮಾರಾಟ ಮಾಡಲಾಗುತ್ತಿದೆ. ಇದರಿಂದ ನಾಲೆಯ ಕೊನೆಯ ಭಾಗದ ರೈತರಿಗೆ ನೀರು ತಲುಪುತ್ತಿಲ್ಲ. ಇಂತಹ ಅಕ್ರಮ ನೀರು ಸಂಪರ್ಕಗಳನ್ನು ಪತ್ತೆ ಮಾಡಿ ತಪ್ಪಿತಸ್ಥರ ವಿರುದ್ಧ ಕೈಗೊಳ್ಳಬೇಕಾದ ಕಠಿಣ ಕ್ರಮಗಳ ಬಗ್ಗೆ ನಿರ್ಣಯಿಸಲು ಸಮಿತಿಯೊಂದನ್ನು ರಚಿಸಲಾಗುವುದು ಎಂದು ಸಚಿವರು ತಿಳಿಸಿದರು.

ಎತ್ತಿನಹೊಳೆ ಯೋಜನೆ ನಿರ್ಮಾಣ ಮಾಡುವುದಕ್ಕಾಗಿ ಅಂದಾಜು 18 ಸಾವಿರ ರೂ.ವೆಚ್ಚವಾಗಲಿದೆ. ಈ ಯೋಜನೆಯಿಂದ ಬರಪೀಡಿತ ಜಿಲ್ಲೆಗಳಾದ ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ ಮತ್ತಿತರ ಜಿಲ್ಲೆಗಳಿಗೆ ಅನುಕೂಲವಾಗಲಿದೆ ಎಂದ ಅವರು 27 ಲಕ್ಷ ಅನಧಿಕೃತ ಪಂಪ್ ಸೆಟ್ ಗಳನ್ನು ಅಧಿಕೃತಗೊಳಿಸಲಾಗಿದೆ ಎಂದು ತಿಳಿಸಿದರು.

ರೈತರಿಗೆ ಹಗಲು ಸಮಯದಲ್ಲೂ ಅನುಕೂಲವಾಗಲೆಂದು ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನಲ್ಲಿ 2 ಸಾವಿರ ಮೆಗಾ ವ್ಯಾಟ್ ಸೌರ ವಿದ್ಯುತ್ ಘಟಕ ಆರಂಭಿಸಲಾಗಿದ್ದು, 6 ಸಾವಿರ ಮೆಗಾ ವ್ಯಾಟ್ ಸೌರ ವಿದ್ಯುತ್ ಉತ್ಪಾದಿಸುವ ಯೋಜನೆ ರಾಜ್ಯದಲ್ಲಿ ಬಿಟ್ಟರೇ, ಪ್ರಪಂಚದಲ್ಲಿಯೇ ಇಲ್ಲ ಎಂದು ತಿಳಿಸಿದರು.

ರಾಷ್ಟ್ರೀಯ ಜಲ ಮಿಷನ್ ನಿರ್ದೇಶಕ ನಿತೀಶ್ವರ ಕುಮಾರ್ ಮಾತನಾಡಿ, ಉತ್ತರ ಪ್ರದೇಶದ ಝಾನ್ಸಿಯ ಬುಂದೇಲ್ ಖಂಡದಲ್ಲಿ ಮೊದಲ ಬಾರಿಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ರೈತರಿಗೆ, ಗ್ರಾಮ ಪಂಚಾಯತಿಗಳಿಗೆ ನೀರಿನ ಸಂರಕ್ಷಣೆ ಕುರಿತು ಅರಿವು ಮೂಡಿಸಲು ಕಾರ್ಯಾಗಾರ ಸಹಕಾರಿಯಾಗಲಿದೆ ಎಂದರು.

ಗಾಂಧಿ ಕೃಷಿ ವಿಶ್ವವಿದ್ಯಾಲಯದ ಕುಲಪತಿ ರಾಜೇಂದ್ರ ಪ್ರಸಾದ್ ಮಾತನಾಡಿ, ಪ್ರಸ್ತುತ ಹನಿ ನೀರು ಸಹ ಮುಖ್ಯವಾಗಿದೆ. ಮುಂದಿನ ಪೀಳಿಗೆಗೆ ನೀರನ್ನು ಹೇಗೆ ಉಳಿತಾಯ ಮಾಡ್ಬೇಕು ಎಂಬುದು ಒಂದು ಸವಾಲಾಗಿದೆ. ಆದ್ದರಿಂದ ಪ್ರತಿಯೊಬ್ಬರು ನೀರು ಸಂಗ್ರಹಣೆ ಮಾಡುವಲ್ಲಿ ಒಗ್ಗಟ್ಟಾಗಬೇಕು ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಅವರು 'ತುಂಗಭದ್ರಾ ಉಪ-ಕೊಳ್ಳದ ಸಮಗ್ರ ನೋಟ' ಪುಸ್ತಕ ಬಿಡುಗಡೆಗೊಳಿಸಿದರು. ಕಾರ್ಯಾಗಾರದಲ್ಲಿ ರಾಜ್ಯ ಜಲ ಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್, ಜೇವರ್ಗಿ ಶಾಸಕ ಅಜಯ್ ಸಿಂಗ್, ಐಎಎಸ್ ಶಂಕರ್, ಕೆ.ಜಯಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com